ಕನ್ನಡಪ್ರಭ ವಾರ್ತೆ ಕಾರವಾರ
ನಗರದ ರವೀಂದ್ರನಾಥ ಟ್ಯಾಗೋರ್ ಕಡಲ ತೀರದಲ್ಲಿ ಶನಿವಾರ ನಡೆದ ಗ್ಯಾರಂಟಿ ಯೋಜನೆ ಫಲಾನುಭವಿಗಳ ಸಮಾವೇಶದಲ್ಲಿ ಗ್ಯಾರಂಟಿಗಳನ್ನು ನೀಡಿದ ತಮ್ಮ ಕಾಂಗ್ರೆಸ್ ಸರ್ಕಾರದ ಸಾಧನೆಯನ್ನು ಬಣ್ಣಿಸುತ್ತ ಸಚಿವ ಮಂಕಾಳು ವೈದ್ಯ, ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಪಂಚ ಗ್ಯಾರಂಟಿ ಯೋಜನೆ ಘೋಷಣೆ ಮಾಡಿದ ಈ ವೇಳೆ ಬೇರೆ ಬೇರೆ ರೀತಿಯಲ್ಲಿ ನಮ್ಮ ಪಕ್ಷದ ಯೋಜನೆಯನ್ನು ಟೀಕಿಸಿದರು. ಅಧಿಕಾರಕ್ಕೆ ಬಂದ ಮೇಲೆ ಬಡವರ ಕಾಳಜಿ ಇರುವುದಿಲ್ಲ ಎನ್ನುತ್ತಿದ್ದರು.
ಆದರೆ, ಕಾಂಗ್ರೆಸ್‌ನವರು ಮಾತಿಗೆ ತಪ್ಪಿಲ್ಲ. ನುಡಿದಂತೆ ನಡೆಯಬೇಕು ಎನ್ನುವ ಉದ್ದೇಶ ಇಟ್ಟುಕೊಂಡು ಗ್ಯಾರಂಟಿ ಯೋಜನೆ ತಲುಪಿಸಿದ್ದೇವೆ. ನೀವು ನಮಗೆ ಆಶೀರ್ವಾದ ಮಾಡಿದ್ದೀರಿ.
ನಿಮಗೆ ಸ್ಪಂದಿಸುತ್ತಿದ್ದೇವೆ. ೫ ಗ್ಯಾರಂಟಿಯನ್ನು ಶೇ. ೯೦ ಮುಟ್ಟಿಸಿದ್ದೇವೆ. ನೂರಕ್ಕೆ ೧೦೦ ಮುಟ್ಟಿಸಿದಾಗ ಸಮಾಧಾನ ಆಗುತ್ತದೆ. ತೃಪ್ತಿ ಸಿಗುತ್ತದೆ.
ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಯೋಜನೆ ತಲುಪಬೇಕು ಎನ್ನುವ ಉದ್ದೇಶದಿಂದ ಗ್ಯಾರಂಟಿ ಪ್ರಾಧಿಕಾರ, ಜಿಲ್ಲಾ, ತಾಲೂಕು ಸಮಿತಿ ಮಾಡಿ ಎಲ್ಲರಿಗೂ ತಲುಪಿಸುತ್ತೇವೆ ಎಂದು ಭರವಸೆ ನೀಡಿದರು.
ನಮ್ಮ ಗ್ಯಾರಂಟಿ ಕಾಪಿ ಮಾಡುತ್ತಿದ್ದಾರೆ. ನಿಮಗೆ ತಲುಪಿಸಿದರೆ ಸಂತೋಷವಾಗುತ್ತದೆ. ಆದರೆ, ಅವರಿಂದ ಆಗುವುದಿಲ್ಲ. ೨೦೧೪ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗರು ₹೧೫ ಲಕ್ಷ ಹಣ ಜನರ ಖಾತೆಗೆ ಹಾಕುತ್ತೇವೆ ಎಂದಿದ್ದರು.
ಇದು ವರೆಗೂ ಒಂದು ರುಪಾಯಿಯೂ ಬಂದಿಲ್ಲ. ಮೊದಲು ಅದನ್ನು ಹಾಕಿ ಗ್ಯಾರಂಟಿ ತರಬೇಕು. ಹಾಗಾಗದೇ ಇದ್ದರೆ ಅವರಿಗೆ ಅರ್ಹತೆ ಇಲ್ಲ, ನೈತಿಕತೆ ಇಲ್ಲ. ಈಗ ಬಿಜೆಪಿ ಮತ್ತೆ ಯಾವ ಯಾವ ಸುಳ್ಳು ಗ್ಯಾರಂಟಿ ಬರುತ್ತದೆಯೊ ಗೊತ್ತಿಲ್ಲ ಎಂದು ಲೇವಡಿ ಮಾಡಿದರು.
ಶಾಸಕ ಭೀಮಣ್ಣ ನಾಯ್ಕ ಮಾತನಾಡಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲಾ ಜನಪರ ಯೋಜನೆ ಜಾರಿಗೆ ತಂದಿದೆ. ದೇವರಾಜು ಅರಸು, ಬಂಗಾರಪ್ಪ ಒಳಗೊಂಡು ಕಾಂಗ್ರೆಸ್‌ನಿಂದ ಮುಖ್ಯಮಂತ್ರಿಯಾದವರು ಜನರ ಒಳಿತಿಗೆ ಶ್ರಮಿಸಿದ್ದಾರೆ.
ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಒಳ್ಳೊಳ್ಳೆ ಕಾರ್ಯಕ್ರಮ ಕೊಡುತ್ತಿದೆ. ಬೇರೆ ಯಾವ ಪಕ್ಷವೂ ನೀಡಿಲ್ಲ. ರೈತರಿಗೆ, ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ ಹೀಗೆ ಎಲ್ಲ ವರ್ಗಕ್ಕೂ ಯೋಜನೆಯನ್ನು ಸಿದ್ದರಾಮಯ್ಯ ತಂದಿದ್ದಾರೆ. ಸರ್ಕಾರ ಜಾರಿಗೆ ತಂದ ಕಾರ್ಯಕ್ರಮ ಜನಪರ ಆಗಬೇಕು. ಆಗ ಸಾರ್ಥಕವಾಗುತ್ತದೆ ಎಂದು ಅಭಿಪ್ರಾಯಿಸಿದರು.
ಅಧ್ಯಕ್ಷತೆ ವಹಿಸಿದ್ದ ಎಂಸಿಎ ಅಧ್ಯಕ್ಷ, ಶಾಸಕ ಸತೀಶ ಸೈಲ್ ಮಾತನಾಡಿ, ನೂರು ದಿನದಲ್ಲಿ ಭರವಸೆ ನೀಡಿದ್ದ ಯೋಜನೆಗೆ ಕಾಂಗ್ರೆಸ್ ಸರ್ಕಾರದಿಂದ ಚಾಲನೆ ನೀಡಲಾಗಿದೆ. ಕಾರವಾರ ಗಡಿಯಿಂದ ಭಟ್ಕಳ ಗಡಿ ವರೆಗೆ ಗೋವಾ ಮಾದರಿ ತಾಣವಾಗಬೇಕು.
ಇಂತಹ ಕರಾವಳಿ ಎಲ್ಲಿಯೂ ಇಲ್ಲ. ನಮ್ಮ ಜಿಲ್ಲೆ ಅಭಿವೃದ್ಧಿಯಾದರೆ ಗೋವಾ ಯಾವ ಲೆಕ್ಕಕ್ಕೂ ಇಲ್ಲ. ನಾವೆಲ್ಲ ಜನಪ್ರತಿನಿಧಿಗಳು ಸೇರಿ ಮಾದರಿ ತಾಣವನ್ನಾಗಿಸುವ ನಿಟ್ಟಿನಲ್ಲಿ ಶ್ರಮಿಸುತ್ತೇವೆ ಎಂದು ಭರವಸೆ ನೀಡಿದರು.
ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ, ಜಿಪಂ ಸಿಇಒ ಈಶ್ವರಕುಮಾರ ಕಾಂದೂ, ಎಸ್‌ಪಿ ಎನ್. ವಿಷ್ಣುವರ್ಧನ, ಉಪ ವಿಭಾಗಾಧಿಕಾರಿ ಡಾ. ನಯನಾ, ಕಲ್ಯಾಣಿ ಕಾಂಬ್ಳೆ, ಕನಿಷ್ಕ್, ಡಿಯುಡಿಸಿ ಯೋಜನಾ ನಿರ್ದೇಶಕಿ ಸ್ಟೆಲ್ಲಾ ವರ್ಗಿಸ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಾಯಿ ಗಾಂವಕರ, ಗ್ಯಾರಂಟಿ ಯೋಜನೆಯ ಜಿಲ್ಲಾ ಮಟ್ಟದ ಅಧ್ಯಕ್ಷ ಸತೀಶ ನಾಯ್ಕ, ಎಸ್.ಕೆ. ಭಾಗ್ವತ, ರಾಜೇಂದ್ರ ರಾಣೆ, ಸುಮಾ ಉಗ್ರಾಣಕರ ಮೊದಲಾದವರು ಇದ್ದರು.
ಹಾಡಿಗೆ ಧ್ವನಿಗೂಡಿಸಿದ ಸಚಿವ, ಶಾಸಕ: ನಗರದಲ್ಲಿ ನಡೆದ ಗ್ಯಾರಂಟಿ ಯೋಜನೆ ಫಲಾನುಭವಿಗಳ ಸಮಾವೇಶದಲ್ಲಿ ಕಲಾವಿದ ಪುರುಷೋತ್ತಮ ಗೌಡ, ಸಂಗಡಿಗರು ಸಿದ್ದರಾಮಣ್ಣ ನಿಮ್ಮ ಪಂಚ ಗ್ಯಾರಂಟಿ ವರ್ಣಿಸಲು, ಭಾಗ್ಯದ ಸರದಾರ ನಿಮಗೆ ಸರಿಸಾಟಿ ಉಂಟೆ ಎನ್ನುವ ಹಾಡನ್ನು ಹಾಡುವಾಗ ಸಚಿವ ಮಂಕಾಳು ವೈದ್ಯ, ಶಾಸಕರಾದ ಸೈಲ್, ಭೀಮಣ್ಣ ಕೂಡಾ ಧ್ವನಿಗೂಡಿಸಿದ್ದು, ವಿಶೇಷವಾಗಿತ್ತು.
ಬಾರದ ಸಿಎಂ, ಡಿಸಿಎಂ: ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಸಮಾವೇಶಕ್ಕೆ ಆಗಮಿಸುತ್ತಾರೆ ಎಂದು ನಿರೀಕ್ಷೆಯಿತ್ತು. ಆದರೆ, ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಗೆ ಬರುವ ಕಾರಣ ಸಿಎಂ, ಡಿಸಿಎಂ ಸಮಾವೇಶಕ್ಕೆ ಆಗಮಿಸಲಿಲ್ಲ. ಕೇಂದ್ರ ಚುನಾವಣಾ ಆಯೋಗದ ಸುದ್ದಿಗೋಷ್ಠಿ ಆರಂಭಕ್ಕೂ ಮೊದಲೇ ಪೆಂಡಾಲ್‌ಗಳನ್ನು ತೆರವು ಮಾಡಲಾಗಿತ್ತು.
ಭಾಷಣವಿರುವಾಗಲೇ ಊಟ: ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಭಾಷಣ ಮಾಡುತ್ತಿದ್ದಾಗಲೇ ಸಭಿಕರು ಊಟಕ್ಕೆ ತಂಡೋಪತಂಡವಾಗಿ ತೆರಳುತ್ತಿದ್ದರು.
ಬಿರು ಬಿಸಿಲಿನಲ್ಲಿ ಬಸವಳಿದ ಜನರು 12 ಗಂಟೆಯಾಗುತ್ತಲೆ ಊಟಕ್ಕೆ ತೆರಳಿದ್ದು, ಊಟದ ಕೌಂಟರ್ ಭರ್ತಿಯಾಗಿತ್ತು. ನಂತರ ಉಳಿದವರು ಭಾಷಣ ಮಾಡುತ್ತಿದ್ದಾಗ ಮತ್ತಿಷ್ಟು ಜನರು ಊಟಕ್ಕ ತೆರಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಬರುತ್ತಾರೆ ಎಂದು ಕಾರ್ಯಕ್ರಮಕ್ಕೆ ಬಂದವರಿಗೆ ಅವರು ಬಾರದಿರುವುದು ನಿರಾಶೆ ಉಂಟುಮಾಡಿತು.
ಸಾಕಷ್ಟು ಅನುಕೂಲ: ಈ ಹಿಂದೆ ಸರ್ಕಾರದಿಂದ ಯಾವುದೇ ಯೋಜನೆ ಬಂದರೆ ಆ ದಾಖಲೆ, ಈ ದಾಖಲೆ ಬೇಕು ಎನ್ನುತ್ತಿದ್ದರು. ಆದರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ₹೧ ಖರ್ಚು ಮಾಡದೆ ಯೋಜನೆ ನಮಗೆ ಸಿಕ್ಕಿದೆ.
ಅಂಗನವಾಡಿ ಕಾರ್ಯಕರ್ತೆಯರು ಮನೆ ಮನೆ ಬಂದು ರಾಜ್ಯ ಸರ್ಕಾರದಿಂದ ಜಾರಿಗೆಯಾದ ಯೋಜನೆ ಬಗ್ಗೆ ತಿಳಿಸಿ, ನೋಂದಣಿ ಮಾಡಿಸುತ್ತಿದ್ದಾರೆ. ಗ್ಯಾರಂಟಿಯಿಂದ ಸಾಕಷ್ಟು ಅನುಕೂಲವಾಗಿದೆ ಎಂದು ಗ್ಯಾರಂಟಿ ಯೋಜನೆ ಫಲಾನುಭವಿ ನಸ್ರಿನ್ ಖಲೀಲ್ ಶೇಖ್ ಹೇಳಿದರು.