ಕಾಂಗ್ರೆಸ್‌ ಸರ್ಕಾರದಿಂದಲೇ ಮುಸ್ಲಿಂ ಗೂಂಡಾಗಳಿಗೆ ಉತ್ತೇಜನ

KannadaprabhaNewsNetwork | Published : Mar 18, 2025 12:30 AM

ಸಾರಾಂಶ

ಸ್ವಾತಿ ಎಂಬ ಯುವತಿಯನ್ನು ಲವ್ ಜಿಹಾದ್ ಮುಖಾಂತರ ಕೊಲೆ ಮಾಡಲಾಗಿದೆ. ಇಂತಹ ಸಂದರ್ಭಲ್ಲಿಯೂ ರಾಜ್ಯದ ಮುಖ್ಯಮಂತ್ರಿಗಳು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ನೀವು ಏನಾದರೂ ಮಾಡಿ ನಾವು ನಿಮ್ಮ ಜೊತೆ ಇದ್ದೇವೆ ಎಂದು ಮುಸ್ಲಿಂ ಗೂಂಡಾಗಳಿಗೆ ಕಾಂಗ್ರೆಸ್‌ ಸರ್ಕಾರ ಉತ್ತೇಜನ ನೀಡುತ್ತಿದೆ ಎಂದು ಬಿಜೆಪಿ ಮುಖಂಡ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ಗಂಭೀರ ಆರೋಪ ಮಾಡಿದರು.

ಕೆ.ಎಸ್‌.ಈಶ್ವರಪ್ಪ ಆರೋಪ । ಲವ್‌ ಜಿಹಾದ್‌ನಿಂದ ಹತ್ಯೆ ಮಾಡುವವರನ್ನು ಗುಂಡಿಟ್ಟು ಕೊಲ್ಲುವ ಕಾನೂನು ತನ್ನಿ

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಹಾವೇರಿ ಜಿಲ್ಲೆಯಲ್ಲಿ ಸ್ವಾತಿ ಎಂಬ ಯುವತಿಯನ್ನು ಲವ್ ಜಿಹಾದ್ ಮುಖಾಂತರ ಕೊಲೆ ಮಾಡಲಾಗಿದೆ. ಇಂತಹ ಸಂದರ್ಭಲ್ಲಿಯೂ ರಾಜ್ಯದ ಮುಖ್ಯಮಂತ್ರಿಗಳು ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ನೀವು ಏನಾದರೂ ಮಾಡಿ ನಾವು ನಿಮ್ಮ ಜೊತೆ ಇದ್ದೇವೆ ಎಂದು ಮುಸ್ಲಿಂ ಗೂಂಡಾಗಳಿಗೆ ಕಾಂಗ್ರೆಸ್‌ ಸರ್ಕಾರ ಉತ್ತೇಜನ ನೀಡುತ್ತಿದೆ ಎಂದು ಬಿಜೆಪಿ ಮುಖಂಡ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್‌.ಈಶ್ವರಪ್ಪ ಗಂಭೀರ ಆರೋಪ ಮಾಡಿದರು.

ನಗರದಲ್ಲಿ ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಮುಸ್ಲಿಮರ ಪರ ಕಾಂಗ್ರೆಸ್‌ ಸರ್ಕಾರ ಧೋರಣೆ ನೋಡಿದರೆ ರಾಜ್ಯವನ್ನು ಮುಸ್ಲಿಮರಿಗೆ ಮಾರುವುದು ಒಳ್ಳೆಯದು. ಲವ್ ಜಿಹಾದ್‌ ಮೂಲಕ ಹೆಣ್ಣುಮಕ್ಕಳನ್ನು ಕೊಲೆ ಮಾಡುವರನ್ನು ಗುಂಡಿಟ್ಟು ಕೊಲ್ಲುವಂತಹ ಕಾನೂನು ತನ್ನಿ ಎಂದು ಒತ್ತಾಯಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ನಿಮ್ಮ ಮನೆಯ ಹೆಣ್ಣುಮಕ್ಕಳಿಗೆ ಹೀಗಾಗಿದ್ದರೆ ನೀವೇನು ಮಾಡುತ್ತಿದ್ರಿ? ಇತ್ತೀಚೆಗೆ ರಾಜ್ಯದಲ್ಲಿ ಲವ್ ಜಿಹಾದ್ ಹೆಚ್ಚಾಗುತ್ತಿದೆ. ಅಷ್ಟೇ ಅಲ್ಲದೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ನಡವಳಿಕೆಗೆ ಯಾರಿಗೂ ನೆಮ್ಮದಿ ತರುತ್ತಿಲ್ಲ. ಹಾವೇರಿಯಲ್ಲಿ ಸ್ವಾತಿ ಎಂಬ ಯುವತಿಯನ್ನು ಕೊಲೆ ಮಾಡಲಾಗಿದೆ. ಸ್ವಾತಿ ಕಾಣೆಯಾದ ದಿನವೇ ಆಕೆಯ ತಾಯಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬಳಿಕ ತುಂಗಾಭದ್ರಾ ನದಿಯಲ್ಲಿ ಸ್ವಾತಿ ಶವ ಪತ್ತೆಯಾಗಿದೆ. ಶವ ಸಿಕ್ಕ ಕೂಡಲೇ ರಾತ್ರೋರಾತ್ರಿ ಪೊಲೀಸರು ಅಂತ್ಯಸಂಸ್ಕಾರ ಮಾಡಿದ್ದಾರೆ. ಸ್ವಾತಿ ಕಾಣಿಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿದ್ದರೂ ಮನೆಯವರಿಗೆ ವಿಷಯ ತಿಳಿಸದೇ ಗಡಿಬಿಡಿಯಲ್ಲಿ ಅಂತ್ಯಸಂಸ್ಕಾರ ಮಾಡುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದರು.

ಇದೇ ರೀತಿ ಮುಸ್ಲಿಂ ಯುವತಿಯನ್ನು ಹಿಂದು ಯುವಕ ಕೊಲೆ ಮಾಡಿದ್ದರೆ ನೀವು ಏನೂ ಮಾಡುತ್ತಿದ್ದೀರಿ. ಹಿಂದು ಯುವತಿ ಕೊಲೆಯಾಗಿದ್ದರೂ ರಾಜ್ಯ ಸರ್ಕಾರ ಮುಸ್ಲಿಂ ಗೂಂಡಾಗಳ ಪರ ಇದೆ. ರಾಜ್ಯದ ಮುಖ್ಯಮಂತ್ರಿಗಳೇ ಹಾಗೂ ಗೃಹಸಚಿವರೇ ನಿಮ್ಮ ಮನೆ ಹೆಣ್ಣುಮಕ್ಕಳಿಗೆ ಹೀಗಾಗಿದ್ದರೆ ನಿವೇನು ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರರವರಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ನಾಡಗೀತೆಯನ್ನು ಸರಿಯಾಗಿ ಅರ್ಧೈಸಿಕೊಳ್ಳಲು ಹೇಳಿದ್ದಾರೆ. ಆದರೆ, ಡಿ.ಕೆ.ಶಿವಕುಮಾರ್‌ರವರು ಮೊದಲು ಸಂವಿಧಾನವನ್ನು ಅರ್ಥಮಾಡಿಕೊಳ್ಳಬೇಕು ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಸರ್ಕಾರ ನಮ್ಮ ರಾಜ್ಯದ ಮಸ್ಲಿಮರಿಗೆ ಶೇ.4 ರಷ್ಟು ಮೀಸಲಾತಿ ಕೊಟ್ಟಿದೆ. ಆದರೆ, ದೇಶದ ಯಾವುದೇ ರಾಜ್ಯದಲ್ಲಿ ಮುಸ್ಲಿಮರಿಗೆ ಇಷ್ಟರ ಮಟ್ಟಿಗೆ ಮೀಸಲಾತಿಯನ್ನು ಕೊಟ್ಟಿಲ್ಲ. ಅಷ್ಟೇ ಅಲ್ಲದೆ ನಮ್ಮ ಸಂವಿಧಾನದಲ್ಲಿಯೂ ಸಹ ಯಾವುದೇ ಧರ್ಮಕ್ಕೆ ಧರ್ಮಾಧಾರಿತ ಮೀಸಲಾತಿಯನ್ನು ನೀಡಬಾರದು ಎಂದು ಹೇಳಿದೆ. ಆದರೆ, ನೀವು ಮುಸ್ಲಿಮರಿಗೆ ಮೀಸಲಾತಿಯನ್ನು ನೀಡಿದ್ದೀರಿ. ಆದ್ದರಿಂದ ಬೇರೆಯವರಿಗೆ ಹೇಳುವ ಬದಲು ನೀವು ನಮ್ಮ ದೇಶದ ಸಂವಿಧಾನ ಓದಿ ಎಂದು ಕುಟುಕಿದರು.

ಪ್ರಮುಖರಾದ ಇ.ವಿಶ್ವಾಸ್, ಜಾದವ್, ಬಾಲು, ಕಾಚಿನಕಟ್ಟೆ ಸತ್ಯನಾರಾಯಣ್ ಮೊದಲಾದರು ಇದ್ದರು.

ಚಕ್ರವರ್ತಿ ಸೂಲಿಬೆಲೆ ಹೇಳಿಕೆಗೆ ನನ್ನ ಬೆಂಬಲವಿದೆ

ಚಕ್ರವರ್ತಿ ಸೂಲಿಬೆಲೆಯವರು ಹಿಂದೂ ಹುಡುಗರು ಮುಸ್ಲಿಂ ಹುಡುಗಿಯರನ್ನು ಮದುವೆಯಾಗಿ ಎಂಬ ಹೇಳಿದ್ದಾರೆಯೇ ಹೊರೆತು ಪ್ರೀತಿಸಿ ಕೊಲೆ ಮಾಡಿ ಎಂದು ಹೇಳಿಲ್ಲ. ಅವರ ಹೇಳಿಕೆಗೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಕೆ.ಎಸ್‌.ಈಶ್ವರಪ್ಪ ತಿಳಿಸಿದರು.

ಕಾಂಗ್ರೆಸ್‌ನವರು ಕರ್ನಾಟಕ ರಾಜ್ಯವನ್ನು ಮುಸ್ಲಿಮರ ರಾಜ್ಯವಾಗಿ ಮಾಡಲು ಹೊರಟಿದ್ದಾರೆ. ಆದರೆ, ಹಿಂದೂಗಳ ತಾಳ್ಮೆಯನ್ನು ಪರೀಕ್ಷೆ ಮಾಡಬೇಡಿ. ದೇಶದಲ್ಲಿ ಎಲ್ಲೂ ಕಾಂಗ್ರೆಸ್‌ ಸರ್ಕಾರ ಇಲ್ಲ, ಕರ್ನಾಟಕದಲ್ಲಿ ಹಾಗೋ, ಹೀಗೋ ಕಾಂಗ್ರೆಸ್‌ ಸರ್ಕಾರ ಇದೆ. ಆದರೆ, ಮತ್ತೊಮ್ಮೆ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರಲು ಜನರೇ ಬಿಡುವುದಿಲ್ಲ ಎಂದು ಹರಿಹಾಯ್ದರು.

Share this article