ಜನಪರ ಕಾರ್ಯಕ್ರಮ ಅನುಷ್ಠಾನದಲ್ಲಿ ಕಾಂಗ್ರೆಸ್‌ ಸರ್ಕಾರ ಸಫಲ: ಪೊನ್ನಣ್ಣ

KannadaprabhaNewsNetwork |  
Published : Mar 08, 2024, 01:45 AM IST
ಜನಸಮಾನ್ಯರ ಆಶೋತ್ತರಗಳಿಗೆ ರಾಜ್ಯ ಸರ್ಕಾರ ಸ್ಪಂದಿಸಿದೆ.ಗ್ಯಾರೇಂಟಿಗಳ ಮೂಲಕ ಅನುಷ್ಠಾನಕ್ಕೆ ತಂದಿದೆ: ಶಾಸಕ ಎ.ಎಸ್. ಪೊನ್ನಣ್ಣ: | Kannada Prabha

ಸಾರಾಂಶ

ವಲಯ ಕಾಂಗ್ರೆಸ್ ಸಮಿತಿ ಬಿಳುಗುಂದ ಮತ್ತು ಬ್ಲಾಕ್ ಕಾಂಗ್ರೆಸ್ ವಿರಾಜಪೇಟೆ ಸಂಯುಕ್ತ ಅಶ್ರಯದಲ್ಲಿ ಬಿಳುಗುಂದ ಗ್ರಾಮದ ನಲ್ವತೋಕ್ಲು ಜುಮ್ಮಾ ಮಸೀದಿಯ ಮೈದಾನದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ಸಭೆ ಮತ್ತು ಸನ್ಮಾನ ಸಮಾರಂಭ ನಡೆಯಿತು. ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಪಾಲ್ಗೊಂಡರು.

ಕನ್ನಡಪ್ರಭ ವಾರ್ತೆ ವಿರಾಜಪೇಟೆ

ಜನರ ಭಾವನೆಗಳಿಗೆ ಸ್ಪಂದಿಸಿ, ಸಮಸ್ಯೆಗಳನ್ನು ಅರಿತು, ಪರಿಹಾರ ಕಂಡುಕೊಂಡು ಜನಪರ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಕಾಂಗ್ರೆಸ್‌ ಸರ್ಕಾರ ಸಫಲವಾಗಿದೆ ಎಂದು ವಿರಾಜಪೇಟೆ ಶಾಸಕ ಎ.ಎಸ್‌.ಪೊನ್ನಣ್ಣ ಹೇಳಿದ್ದಾರೆ.ವಲಯ ಕಾಂಗ್ರೆಸ್ ಸಮಿತಿ ಬಿಳುಗುಂದ ಮತ್ತು ಬ್ಲಾಕ್ ಕಾಂಗ್ರೆಸ್ ವಿರಾಜಪೇಟೆ ಸಂಯುಕ್ತ ಅಶ್ರಯದಲ್ಲಿ ಬಿಳುಗುಂದ ಗ್ರಾಮದ ನಲ್ವತೋಕ್ಲು ಜುಮ್ಮಾ ಮಸೀದಿಯ ಮೈದಾನದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕರ್ತರ ಸಭೆ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಕಾಂಗ್ರೆಸ್‌ ಸರ್ಕಾರ ರಾಜ್ಯದಲ್ಲಿ ಆಡಳಿತದ ಚುಕ್ಕಾಣಿ ಹಿಡಿದು ಎಂಟು ತಿಂಗಳಲ್ಲಿ ಚುನಾವಣೆ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿದ ಐದು ಗ್ಯಾರೆಂಟಿಗಳನ್ನು ಅನುಷ್ಠಾನಕ್ಕೆ ತಂದಿದೆ. ಈ ಐದು ಗ್ಯಾರಂಟಿಗಳಿಂದ ಜನಸಾಮಾನ್ಯರ ಬದುಕು ಹಸನಾಗಿದೆ. ಪ್ರತಿಪಕ್ಷಗಳು ಗ್ಯಾರೆಂಟಿ ಯೋಜನೆಗಳಿಂದ ರಾಜ್ಯ ದಿವಾಳಿಯಾಗುತ್ತವೆ ಎಂದು ಟೀಕಿಸಿದ್ದವು. ಅದು ನಿಜವಾಗಿಲ್ಲ ಎಂದರು.

ಶಕ್ತಿ ಯೋಜನೆಯಿಂದ 55 ಸಾವಿರ ಕೊಡಗಿನ ಮಹಿಳೆಯರು ಪ್ರಯೋಜನ ಪಡೆದಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವಿದ್ದೇವೆ. ಇಲ್ಲಿ ಟೀಕೆಗಳು ಸಾಮಾನ್ಯ. ಜನರ ಭಾವನೆಗಳ ಮೇಲೆ ಚೆಲ್ಲಾಟವಾಡಿ, ಸುಳ್ಳು ಹೇಳಿ, ಸುಳ್ಳಿನ ಕೋಟೆ ಕಟ್ಟಿ ನುಡಿಯುವ ನಾಯಕರು ಯಾರು ಎಂದು ಕಾರ್ಯಕರ್ತರು ಅರ್ಥೈಸಬೇಕು. ಅಂತಹ ನಾಯಕರನ್ನು ಪ್ರಶ್ನಿಸಬೇಕು ಮತ್ತು ಅವರಿಂದ ಉತ್ತರ ಪಡೆಯುವಂತಾದಲ್ಲಿ ಮಾತ್ರ ಪ್ರಜಾಪ್ರಭುತ್ವ ಉಳಿಸುವಂತಾಗುತ್ತದೆ ಎಂದರು.

ಕಳೆದ 10 ವರ್ಷಗಳಿಂದ ಕೇಂದ್ರದಲ್ಲಿ ಆಡಳಿತ ನಡೆಸಿದ ಬಿಜೆಪಿ ಸರ್ಕಾರದ ಸಂಸದರು ಕೊಡಗು ಜಿಲ್ಲೆಗೆ ನೀಡಿರುವ ಕೊಡುಗೆಗಳ ಬಗ್ಗೆ ಶ್ವೇತಪತ್ರ ಹೊರಡಿಸಲಿ. ಕೊಡಗು ಮೈಸೂರು ಲೋಕ ಸಭಾ ಕ್ಷೇತ್ರ ಸಂಸದರಿಗೆ ಕೊಡಗಿನ ಜನತೆಯಿಂದ ಮಾತ್ರ ಹೆಚ್ಚು ಮತ ಚಲಾವಣೆಗೊಂಡಿದೆ. ಕೊಡಗಿನಿಂದ ಹೆಚ್ಚು ಮತ ಪಡೆದರೂ ಇಲ್ಲಿನ ಅಭಿವೃದ್ಧಿ ಮಾತ್ರ ಶೂನ್ಯ ಎಂದು ಟೀಕಿಸಿದರು.

ಕೊಡಗು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಧರ್ಮಜ ಉತ್ತಪ್ಪ ಮಾತನಾಡಿ, ಕಾರ್ಯಕರ್ತರು ಪಕ್ಷದ ಬೆನ್ನಲುಬು. ೨೦ ವರ್ಷಗಳಿಂದ ಬಿಜೆಪಿ ಹಿಡಿತದಲ್ಲಿದ್ದ ಜಿಲ್ಲೆ ಕಾಂಗ್ರೆಸ್‌ ತೆಕ್ಕೆಗೆ ಬಂದಿದೆ. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ರೂಪುಗೊಂಡಿದೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಪರಿಶ್ರಮ ತ್ಯಾಗವಿದೆ. ಸಂಘಟಿತರಾಗಿ ಕಾರ್ಯಕರ್ತರು ದುಡಿಯಬೇಕು ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.

ಕೊಡಗು ಜಿಲ್ಲಾ ಕಾಂಗ್ರೆಸ್‌ ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಮತ್ತು ಬಿಳುಗುಂದ ಗ್ರಾಮ ಪಂಚಾಯಿತಿ ಸದಸ್ಯ ಪಿ.ಎ. ಹನೀಫಾ ಮಾತನಾಡಿ, ಐದು ಭಾಗ್ಯಗಳನ್ನು ಕರುಣಿಸಿದ ಕಾಂಗ್ರೆಸ್ ಸರ್ಕಾರದಿಂದ ಮಾತ್ರ ಅಭಿವೃದ್ಧಿ ಕಾಣಲು ಸಾಧ್ಯ ಎಂದರು.

ಪ್ರಮುಖರಾದ ನಾಸೀರ್ ಅಹಮ್ಮದ್, ಲ್ಲವಂಡ ಕಾವೇರಪ್ಪ, ಉದ್ಯಮಿ ಸೂಫಿ ಹಾಜಿ ಮಾತನಾಡಿದರು.

ಬಿಳುಗುಂದ ವಲಯ ಯುವ ಕಾಂಗ್ರೆಸ್ ಘಟಕದ ವತಿಯಿಂದ ಶಾಸಕರು ಸೇರಿದಂತೆ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷರು, ವಿರಾಜಪೇಟೆ ಬ್ಲಾಕ್ ಅಲ್ಪ ಸಂಖ್ಯಾತ ಘಟಕದ ಅದ್ಯಕ್ಷರು ಮತ್ತು ವಿರಾಜಪೇಟೆ ಬ್ಲಾಕ್ ಅಧ್ಯಕ್ಷರಿಗೆ ಬೃಹತ್ ಮಾಲಾರ್ಪಣೆ ಮಾಡಿ ಸನ್ಮಾನಿಸಲಾಯಿತು.

ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ವಿರಾಜಪೇಟೆ ಬ್ಲಾಕ್ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಕೋಳಮಂಡ ರಫೀಕ್, ಬಿಳುಗುಂದ ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಸಮೀರಾ, ಮಹಿಳಾ ಘಟಕ ಅಧ್ಯಕ್ಷೆ ಪೊನ್ನಕ್ಕಿ, ವಿರಾಜಪೇಟೆ ಬ್ಲಾಕ್ ಯುವ ಘಟಕದ ಅಧ್ಯಕ್ಷ ಉಮ್ಮರ್ ಫರೂಕ್‌ ಹಾಜರಿದ್ದರು.

ಬಿಳುಗುಂದ ವಲಯ ಕಾಂಗ್ರೆಸ್‌ ಪದಾಧಿಕಾರಿಗಳು, ಸದಸ್ಯರು, ಯುವ ಘಟಕದ ಸದಸ್ಯರು, ಹಿರಿಯ ಕಾಂಗ್ರೆಸಿಗರು, ನಲ್ವತೋಕ್ಲು ಗ್ರಾಮ, ಬಿಳುಗುಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಕ್ಷದ ಕಾರ್ಯಕರ್ತರು ಹಾಜರಿದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ