ಸಿದ್ದರಾಮಯ್ಯ ಸರ್ಕಾರ ಈ ಯೋಜನೆಗೆ ಎಳ್ಳು ನೀರು ಬಿಡುವ ಪ್ರಯತ್ನ ಮೂಲಕ ದಲಿತರಿಗೆ, ಹಿಂದುಳಿದ ವರ್ಗದವರಿಗೆ ಹಾಗೂ ಬಡವರ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡುತ್ತಿದೆ ಎಂದು ಸಂಸದ ರಮೇಶ ಜಿಗಜಿಣಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕನ್ನಡಪ್ರಭ ವಾರ್ತೆ ವಿಜಯಪುರ
ಆರ್ಥಿಕವಾಗಿ ಹಿಂದುಳಿದವರು ಸೇರಿದಂತೆ ಎಲ್ಲ ಬಡವರಿಗೆ ಗಂಗಾ ಕಲ್ಯಾಣ ಯೋಜನೆ ಅನುಕೂಲಕರ ಯೋಜನೆಯಾಗಿತ್ತು. ನಾನು ಸಮಾಜ ಕಲ್ಯಾಣ ಇಲಾಖೆಯ ಸಚಿವನಾಗಿದ್ದ ವೇಳೆ ಜಾರಿಗೆ ಬಂದ ಈ ಮಹತ್ವದ ಯೋಜನೆಯಿಂದ ಲಕ್ಷಾಂತರ ಫಲಾನುಭವಿಗಳು ಪ್ರಯೋಜನ ಪಡೆಯುತ್ತಿದ್ದಾರೆ. ಆದರೆ ಸಿದ್ದರಾಮಯ್ಯ ಸರ್ಕಾರ ಈ ಯೋಜನೆಗೆ ಎಳ್ಳು ನೀರು ಬಿಡುವ ಪ್ರಯತ್ನ ಮೂಲಕ ದಲಿತರಿಗೆ, ಹಿಂದುಳಿದ ವರ್ಗದವರಿಗೆ ಹಾಗೂ ಬಡವರ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡುತ್ತಿದೆ ಎಂದು ಸಂಸದ ರಮೇಶ ಜಿಗಜಿಣಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಗಂಗಾ ಕಲ್ಯಾಣ ಯೋಜನೆ ರೈತರಿಗೆ ಒಂದು ವರದಾನವಾಗಿತ್ತು. ಬೋರವೆಲ್ ಕೊರೆಯಿಸಲು ಸಾಧ್ಯವಾಗದ ಬಡ ರೈತರು ಈ ಯೋಜನೆ ಮೂಲಕ ಬೋರವೆಲ್ ಕೊರೆಯಿಸಿಕೊಳ್ಳುತ್ತಿದ್ದರು. ಪರಿಣಾಮವಾಗಿ ಪ್ರತಿವರ್ಷ 15 ಸಾವಿರಕ್ಕೂ ಹೆಚ್ಚು ಜನರು ಈ ಗಂಗಾ ಕಲ್ಯಾಣ ಯೋಜನೆ ಫಲಾನುಭವಿಯಾಗುತ್ತಿದ್ದರು. ಆದರೆ ರಾಜ್ಯ ಸರ್ಕಾರ ಈ ಯೋಜನೆಗೆ ಆದ್ಯತೆ ನೀಡದೆ ಒಂದು ರೀತಿ ಬೇಜವಾಬ್ದಾರಿತನಿಂದ ವರ್ತಿಸುತ್ತಿದೆ. ಪ್ರತಿ ವರ್ಷ ಸುಮಾರು 10 ರಿಂದ 12 ಸಾವಿರ ದಲಿತ ರೈತರಿಗೆ ಅನುಕೂಲವಾಗುತ್ತಿದ್ದ ಈ ಯೋಜನೆಗೆ ಆದ್ಯತೆ ನೀಡದೆ ಈ ಎಲ್ಲ ರೈತರನ್ನು ಯೋಜನೆಯಿಂದ ವಂಚಿತರನ್ನಾಗಿಸಿದೆ. ಆ ಮೂಲಕ ಆರ್ಥಿಕವಾಗಿ ದಲಿತರನ್ನು ಇನ್ನೂ ಹಿಂದಕ್ಕೆ ತಳ್ಳುವ ಎಲ್ಲ ಪ್ರಯತ್ನದಲ್ಲಿ ಕಾಂಗ್ರೆಸ್ ಸರ್ಕಾರ ನಿರತವಾಗಿದೆ ಎಂದು ಹೇಳಿದ್ದಾರೆ.
ಹಿಂದೆ ನಾನು ರಾಜ್ಯ ಸಮಾಜ ಕಲ್ಯಾಣ ಸಚಿವನಾಗಿದ್ದಾಗ ಮೊರಾರ್ಜಿ ದೇಸಾಯಿ ಶಾಲೆ ಹಾಗೂ ಗಂಗಾ ಕಲ್ಯಾಣ ಯೋಜನೆ ಅನುಷ್ಠಾನಕ್ಕೆ ತಂದಿದ್ದೆ. ರಾಜ್ಯ ಸರ್ಕಾರ ತಮ್ಮ ಪಂಚ ಗ್ಯಾರಂಟಿ ಯೋಜನೆಯ ತಮ್ಮ ಹಣಕಾಸಿನ ಅಗತ್ಯ ಪೂರೈಸಲು ಗಂಗಾ ಕಲ್ಯಾಣ ಯೋಜನೆ ಹಣವನ್ನು ಉಪಯೋಗಿಸುತ್ತಿದ್ದಾರೆ. ಈಗಾಗಲೇ ಸುಮಾರು ₹42,000 ಕೋಟಿ ಎಸ್‌ಸಿಎಸ್‌ಪಿ-ಟಿಎಸ್‌ಪಿ ಅನುದಾನವನ್ನು, ₹187 ಕೋಟಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ನುಂಗಿ ನೀರು ಕುಡಿದಿದೆ. ಸಣ್ಣ ರೈತರ ಗಂಗಾ ಕಲ್ಯಾಣ ಯೋಜನೆಗೂ ಕೊಡಲಿ ಪೆಟ್ಟು ನೀಡಿದೆ. 2023-24ರಲ್ಲಿ ಕೇವಲ 4000 ಕೊಳವೆ ಬಾವಿಗಳನ್ನು ಕೊರೆದರೆ, 2024-25ರಲ್ಲಿ ಕೇವಲ 3000 ಕೊಳವೆ ಬಾವಿಗಳನ್ನು ಗಂಗಾ ಕಲ್ಯಾಣ ಯೋಜನೆಯಡಿ ಕೊರೆಯಿಸಲಾಗಿದೆ. ಇದರ ಪ್ರಮಾಣ ವರ್ಷದಿಂದ ವರ್ಷಕ್ಕೆ ಇಳಿಮುಖ ಮಾಡಿ ಈ ಕಾಂಗ್ರೆಸ್ ಸರ್ಕಾರ ಯೋಜನೆಯನ್ನೇ ಬಂದ್ ಮಾಡುವ ಹುನ್ನಾರದಲ್ಲಿದೆ ಎಂದು ಸಂಸದ ಜಿಗಜಿಣಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.