ಯಾವಾಗ ಬೇಕಾದ್ರು ಕೈ ಸರ್ಕಾರ ಪತನ

KannadaprabhaNewsNetwork | Published : Jan 1, 2024 1:15 AM

ಸಾರಾಂಶ

ಯಾವಾಗ ಬೇಕಾದರೂ ಕಾಂಗ್ರೆಸ್‌ ಸರ್ಕಾರ ಪತನ

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಅಭಿವೃದ್ಧಿ ಮರೆತಿರುವ ರಾಜ್ಯದ ಕಾಂಗ್ರೆಸ್ ಸರಕಾರ ಯಾವಾಗ ಬೇಕಾದರೂ ಪತನವಾಗಬಹುದು. ಒಂದು ವೇಳೆ ರಾಜ್ಯದಲ್ಲಿ ನಾಳೆ ವಿಧಾನಸಭೆ ಚುನಾವಣೆ ಬಂದರೂ ಬಿಜೆಪಿ 140 ಸ್ಥಾನದಲ್ಲಿ ಗೆಲುವು ಸಾಧಿಸುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಕಲಾಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ದೇಶದ ಪ್ರಧಾನಿ ಮಾಡುವವರೆಗೆ ನಾನು ವಿಶ್ರಮಿಸುವುದಿಲ್ಲ ಎಂದು ಶಪಥ ಮಾಡಿದ್ದೇನೆ ಎಂದರು.

ರಾಜ್ಯದ 500 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರೂ, ಸಿಎಂ ತಿರುಗಿ ನೋಡಲಿಲ್ಲ. ಅಲ್ಪಸಂಖ್ಯಾತರಿಗೆ ಸಿಎಂ ಸಾವಿರ ಕೋಟಿ ರುಪಾಯಿ ನೀಡುವುದಾಗಿ ಹೇಳಿದ್ದಾರೆ. ಅದೇ ಹಣವನ್ನು ಉತ್ತರ ಕರ್ನಾಟಕ್ಕೆ ನೀಡಿದರೆ ಇಲ್ಲಿನ ಜ್ವಲಂತ ಸಮಸ್ಯೆಗಳೇ ಬಗೆಹರಿಯುತ್ತಿದ್ದವು ಎಂದರು.

ದಿನದ 24 ಗಂಟೆ ಅಲ್ಪಸಂಖ್ಯಾತರ ಬಗ್ಗೆ ಚಿಂತನೆ ನಡೆಸುವ ಸಿಎಂಗೆ ಬಡವರ, ರೈತರ ಹಾಗೂ ದೀನ ದಲಿತರ ಸಮಸ್ಯೆಗಳ ಬಗ್ಗೆ ಗಮನವಿಲ್ಲ. ಮುಂಬರುವ ಲೋಕಸಭೆ ಚುನಾವಣೆಗಾಗಿ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ. ನೀವು ರಾಜ್ಯಕ್ಕೆ ಸಿಎಂ, ಕೇವಲ ಅಲ್ಪಸಂಖ್ಯಾತರಿಗಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ವ್ಯತ್ಯಾಸ ಬದಿಗಿಟ್ಟು, ಕಾರ್ಯಕರ್ತರಿಂದಲೇ ನಾವು ಶಾಸಕ ಹಾಗೂ ಸಂಸದರಾಗಿದ್ದೇವೆ ಎಂಬುವುದನ್ನು ಅರಿತು, ಬೇಸರ ಪಡದೇ ಪಕ್ಷ ಸಂಘಟಿಸಿ, ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 28 ಸೀಟ್‌ಗಳನ್ನು ಗೆಲ್ಲಿಸೋಣಗೆ ಎಂದು ಕರೆ ನೀಡಿದರು.

ಮಾಜಿ ಸಚಿವ ಗೋವಿಂದ ಕಾರಜೋಳ ಮಾತನಾಡಿ, ರಾಜ್ಯ ಸರಕಾರ ಬಜೆಟ್ ಮಂಡಿಸುವ ಪೂರ್ವದಲ್ಲಿ ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ದೊಡ್ಡ ಪ್ರತಿಭಟನೆ ಹಮ್ಮಿಕೊಳ್ಳಬೇಕಿದೆ ಎಂದರು.

ಸಂಸದ ಪಿ.ಸಿ.ಗದ್ದಿಗೌಡರ, ವಿಪ ಸದಸ್ಯರಾದ ಪಿ.ಎಚ್.ಪೂಜಾರ ಹಾಗೂ ಹಣಮಂತ ನಿರಾಣಿ, ಮಾಜಿ ಶಾಸಕರಾದ ವೀರಣ್ಣ ಚರಂತಿಮಠ, ಎ.ಎಸ್.ಪಾಟೀಲ ನಡಹಳ್ಳಿ, ದೊಡ್ಡನಗೌಡ ಪಾಟೀಲ ಹಾಗೂ ರಾಜಶೇಖರ ಶೀಲವಂತ, ವಿಪ ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ ಮುಖಂಡರಾದ ಅಶೋಕ ಲಿಂಬಾವಳಿ, ರಾಜು ನಾಯ್ಕರ್, ರಾಜು ರೇವಣಕರ ಸೇರಿದಂತೆ ಅನೇಕರಿದ್ದರು.

---

ಬಾಕ್ಸ್‌

ಕಾಂಗ್ರೆಸ್ ಬಿಡಲು 50 ಶಾಸಕರು ರೆಡಿ

ಬಿಜೆಪಿ ಸರಕಾರ ಚಾಲನೆ ನೀಡಿದ್ದ ಎಲ್ಲ ಅಭಿವೃದ್ಧಿ ಕೆಲಸಗಳನ್ನು ಕಾಂಗ್ರೆಸ್ ಸರಕಾರ ನಿಲ್ಲಿಸಿದೆ. ಕೋಮಾದಲ್ಲಿರುವ ಕಾಂಗ್ರೆಸ್, ಒಳ ಜಗಳಗಳಿಂದಲೇ ಅಧಿಕಾರ ಕಳೆದುಕೊಳ್ಳಲಿದೆ. ಕಾಂಗ್ರೆಸ್‌ನ 50 ಶಾಸಕರು ಪಕ್ಷ ತೊರೆಯಲು ತುದಿಗಾಲ ಮೇಲೆ ನಿಂತಿದ್ದಾರೆ. ಬಿಎಸ್‌ವೈ ಮಗ ಎಂದು ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿಲ್ಲ. ಅವರ ಸಾರಥ್ಯದಲ್ಲಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 28 ಸ್ಥಾನಗಳನ್ನು ಗೆಲ್ಲುವ ಮೂಲಕ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಕಾಣಿಕೆ ನೀಡಬೇಕು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಮುರುಗೇಶ ನಿರಾಣಿ ಹೇಳಿದರು.

---

ಕೋಟ್:

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ರಾಜ್ಯದ ಭರವಸೆಯ ನಾಯಕರಾಗಿದ್ದಾರೆ. ನೂತನ ತಂಡವನ್ನು ಕಟ್ಟಿಕೊಂಡು ರಾಜ್ಯಾದ್ಯಂತ ಸಂಚರಿಸುವ ಮೂಲಕ ಲೋಕಸಭೆ ಚುನಾವಣೆಗೆ ತಯಾರು ನಡೆಸಿದ್ದಾರೆ. ಅವರ ನೇತೃತ್ವದಲ್ಲಿ ಕೇಂದ್ರದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ತರಬೇಕು.

-ಎಸ್.ಟಿ.ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ

---

ಬಾಗಲಕೋಟೆ ಜಿಲ್ಲೆಗೂ ಯಡಿಯೂರಪ್ಪನವ್ರಿಗೂ ಅವಿನಾಭಾವ ಸಂಬಂಧ ಇದೆ. ಬಹುಶಃ ಬಾಗಲಕೋಟೆ ಜಿಲ್ಲೆಯ ಪ್ರತಿಯೊಂದು ಗ್ರಾಮಕ್ಕೆ ಯಡಿಯೂರಪ್ಪ ನವ್ರು ಭೇಟಿ ಕೊಟ್ಟಿದ್ದಾರೆ. ಯಡಿಯೂರಪ್ಪನವರು ಯಾವಾಗಲೂ ಒಂದು ಮಾತು ಹೇಳತ್ತಿದ್ದರು. ಉತ್ತರ ಕರ್ನಾಟಕ ಜನರಲ್ಲಿ ಸ್ವಲ್ಪ ಬಡತನ ಇರಬಹುದು. ಹೃದಯದಿಂದ ಶ್ರೀಮಂತರಿದ್ದಾರೆ ಎಂದು ಹೇಳಿದ್ದರು. ಅವರ ಮಾತು ನೂರಕ್ಕೆ ನೂರರಷ್ಟು ಸತ್ಯ ಅನಿಸುತ್ತಿದೆ. ನನಗೂ ಅಷ್ಟು ಪ್ರೀತಿಯಿಂದ ಬರಮಾಡಿಕೊಂಡಿದ್ದೀರಿ.

-ಬಿ.ವೈ ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ

--

ವಿಜಯೇಂದ್ರ ಅವರು ಮೀನಿನ ಮರಿಯಂತೆ. ಮೀನಿನ ಮರಿಗೆ ಈಜು ಕಲಿಸುವ ಅವಶ್ಯಕತೆ ಇಲ್ಲ. ಯಡಿಯೂರಪ್ಪ ಅವರಿಗಿಂತಲೂ ವಿಜಯೇಂದ್ರ ಅವರು ಒಂದು ಹೆಜ್ಜೆ ಮುಂದೆ ಇರುತ್ತಾರೆ. ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿ ಮಾಡಲು ನಾವೆಲ್ಲ ದುಡಿಯಬೇಕು, ಶ್ರಮಿಸಬೇಕಿದೆ.

-ಗೋವಿಂದ ಕಾರಜೋಳ ಮಾಜಿ ಡಿಸಿಎಂ

Share this article