ದೊಡ್ಡಬಳ್ಳಾಪುರ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ನೀಡುತ್ತಿರುವ ಗ್ಯಾರೆಂಟಿ ಯೋಜನೆಗಳು ತಾತ್ಕಾಲಿಕ. ಆದರೆ ದೇಶದಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ದೊರೆಯುತ್ತಿರುವ ಗ್ಯಾರೆಂಟಿಗಳು ಜನರ ಭವಿಷ್ಯವನ್ನು ಸದೃಢವಾಗಿಸುತ್ತಿವೆ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಾ.ಕೆ.ಸುಧಾಕರ್ ಹೇಳಿದರು.
ಆರೋಗ್ಯ ಕ್ಷೇತ್ರದಲ್ಲಿ ಗಣನೀಯ ಸುಧಾರಣೆ ತಂದ ಬಿಜೆಪಿ ಜನೌಷಧ ಕೇಂದ್ರಗಳ ಮೂಲಕ ಸಾಮಾನ್ಯ ಜನರಿಗೆ ಕೈಗೆಟುಕುವ ದರದಲ್ಲಿ ಔಷಧಗಳು ದೊರೆಯುವಂತೆ ಮಾಡಿದೆ. ಕಿಸಾನ್ ಸಮ್ಮಾನ್, ಫಸಲ್ ಬಿಮಾ ಯೋಜನೆಗಳು ರೈತರಿಗೆ ವರದಾನವಾಗಿವೆ ಎಂದು ವಿವರಿಸಿದರು.
ಕಾಂಗ್ರೆಸ್ ಮಾನವೀಯತೆ ಸತ್ತಿದೆ!ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಆರೋಗ್ಯದ ವಿಚಾರದಲ್ಲಿ ನಿಕೃಷ್ಟವಾಗಿ ಮಾತನಾಡುವ ಮೂಲಕ ಕಾಂಗ್ರೆಸ್ ಮುಖಂಡರು ಅಮಾನವೀಯತೆ ಮೆರೆದಿದ್ದಾರೆ. ಒಬ್ಬ ವ್ಯಕ್ತಿಯ ಆರೋಗ್ಯದ ವಿಚಾರದಲ್ಲಿ ಅಮಾನವೀಯ ವರ್ತನೆ ತೋರುವ ಕಾಂಗ್ರೆಸ್‌ನ ಮಾನವೀಯತೆ ಸತ್ತಿದೆ. ಮೋದಿ ಹೆಸರೇಳಿದರೆ ಕಪಾಳಕ್ಕೆ ಒಡೀ ಬೇಕು ಎಂಬ ಕಿಡಿಗೇಡಿ ಹೇಳಿಕೆ ನೀಡುವ ಕಾಂಗ್ರೆಸ್ ಮುಖಂಡರಿಗೆ ಧಿಕ್ಕಾರವಿರಲಿ ಎಂದರು.
ಚುನಾವಣೆ ಬಳಿಕವೂ ಮೈತ್ರಿ ಮುಂದುವರಿಕೆ:ಜೆಡಿಎಸ್-ಬಿಜೆಪಿ ಮೈತ್ರಿ ಚುನಾವಣೆ ಬಳಿಕವೂ ಮುಂದುವರೆಯಲಿದೆ. ಈ ಬಗ್ಗೆ ಯಾವುದೇ ಅನುಮಾನ ಬೇಡ. ಗೆದ್ದ ಬಳಿಕವೂ ಉಭಯ ಪಕ್ಷಗಳ ಕಾರ್ಯಕರ್ತರಿಗೆ ಸಮಾನ ಮನ್ನಣೆ ದೊರೆಯಲಿದೆ ಎಂದರು.
ಸಭೆಯಲ್ಲಿ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಶಾಸಕ ಧೀರಜ್ ಮುನಿರಾಜ್, ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ, ರಾಜಣ್ಣ, ಇ.ಕೃಷ್ಣಪ್ಪ, ಮುಖಂಡರಾದ ಮುನೇಗೌಡ, ಅಪ್ಪಯ್ಯಣ್ಣ, ಹನುಮಂತರಾಯಪ್ಪ ಮತ್ತಿತರರಿದ್ದರು.1ಕೆಡಿಬಿಪಿ6- ದೊಡ್ಡಬಳ್ಳಾಪುರದಲ್ಲಿ ನಡೆದ ಜೆಡಿಎಸ್-ಬಿಜೆಪಿ ಸಮನ್ವಯ ಸಮಾವೇಶದಲ್ಲಿ ಡಾ.ಕೆ.ಸುಧಾಕರ್ ಮಾತನಾಡಿದರು.