ಶಿವಮೊಗ್ಗ: ಸಂವಿಧಾನವನ್ನು ಕಾಂಗ್ರೆಸ್ ತನ್ನ ಹಿತಕ್ಕೆ ಬೇಕಾದಂತೆ ತಿದ್ದುಪಡಿ ಮೂಲಕ ಬದಲಾಯಿಸಿಕೊಂಡಿದೆ ಎಂಬುವುದನ್ನು ಸಾರ್ವಜನಿಕರ ಎದುರು ಬಿಚ್ಚಿಡುವ ಕೆಲಸವಾಗಬೇಕಿದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ರಾಜ್ಯ ಖಾತೆ ಸಚಿವ ಡಾ.ಮುರುಗನ್ ಹೇಳಿದರು.
ನಗರದ ಫೆಸಿಟ್ ಕಾಲೇಜಿನ ಪ್ರೇರಣಾ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ನಮ್ಮ ಸಂವಿಧಾನ ನಮ್ಮ ಹೆಮ್ಮೆ, ಸಂವಿಧಾನ ಸನ್ಮಾನ್ ಅಭಿಯಾನ ಕಾರ್ಯಕ್ರಮದಲ್ಲಿ ಬಾಬಾ ಸಾಹೇಬರ ಸಂವಿಧಾನ ಬದಲಾಯಿಸಿದ್ದು ಯಾರು ? ಬಲಪಡಿಸಿದ್ದು ಯಾರು ? ಎಂಬ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಅಂಬೇಡ್ಕರ್ ಅವರ ಜನ್ಮಸ್ಥಳ, ಅಂಬೇಡ್ಕರ್ ಓದಿದ ಜಾಗ, ಅವರ ಬೆಳವಣಿಗೆಯನ್ನು ಪಂಚತೀರ್ಥ ಹೆಸರಿನಲ್ಲಿ ಬಿಜೆಪಿ ಸರ್ಕಾರ ಅಭಿವೃದ್ಧಿ ಪಡಿಸಲು ಮುಂದಾಯಿತು. ಅರ್ಥಶಾಸ್ತ್ರ ತಜ್ಞರಾದ ಅಂಬೇಡ್ಕರ್ ಅವರ ಹೆಸರಿನಲ್ಲಿ ಮೋದಿ ಸರ್ಕಾರ ಕಾರ್ಮಿಕರ ಸಂಬಳಕ್ಕಾಗಿ ಭೀಮ್ ಆಪ್ ಜಾರಿ ತಂದಿದೆ ಎಂದ ಅವರು, ವಾಜಪೇಯಿ ಕಾಲದಿಂದ ನರೇಂದ್ರ ಮೋದಿ ಅವಧಿಯಲ್ಲಿ ಬಿಜೆಪಿ ಸರ್ಕಾರ ಸಂವಿಧಾನವನ್ನು ಎಷ್ಟು ಬಾರಿ ತಿದ್ದುಪಡಿ ಮಾಡಿದೆ. ಕಾಂಗ್ರೆಸ್ ಸರ್ಕಾರ ಎಷ್ಟು ಬಾರಿ ಯಾವ ಕಾರಣಕ್ಕಾಗಿ ತಿದ್ದುಪಡಿ ಮಾಡಿತು ಎಂಬುವುದನ್ನು ವಿವರಿಸಿದರು.ಬಿಜೆಪಿ ರಾಜ್ಯಾಧ್ಯಕ್ಷ, ಶಾಸಕ ಬಿ.ವೈ.ವಿಜೇಂದ್ರ ಮಾತನಾಡಿ, ಸಂವಿಧಾನ ಎಲ್ಲರಿಗೂ ಗೌರವ ತಂದುಕೊಟ್ಟಿದೆ. ದೇಶಾದ್ಯಂತ ಸಮ್ಮಾನ ಅಭಿಯಾನವನ್ನು ಅಚರಿಸಲಾಗುತ್ತಿದೆ. ಸಂವಿಧಾನ ರಚನೆಯಾಗಿ 25 ವರ್ಷ ಕಳೆದಿದೆ. ಪ್ರಧಾನಿ ಮೋದಿಯ ಆಶಯದಂತೆ ದೇಶಕ್ಕೆ ಶಕ್ತಿ ತುಂಬಿದ ಸಂವಿಧಾನಕ್ಕೆ ಗೌರವ ಸಲ್ಲಿಸುವ ಅಭಿಯಾನ ಆರಂಭಿಸಲಾಗಿದೆ ಎಂದರು.ಭಾರತ 140 ಕೋಟಿ ಜನಸಂಖ್ಯೆ ಹೊಂದಿದೆ. ಸಾವಿರಾರು ಭಾಷೆ, ಸಂಸ್ಕೃತಿ ಹೊಂದಿರುವ ದೇಶದಲ್ಲಿ ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗಲಾಗುತ್ತಿದೆ ಎಂದರೆ ಸಂವಿಧಾನದಿಂದ ಮಾತ್ರ ಸಾಧ್ಯವಾಗಿದೆ. ಬಾಬಾಸಾಹೇಬರು ದೇಶದಲ್ಲಿ ಜನ್ಮ ತಾಳದೆ ಹೋಗಿದ್ದರೆ ಇಂತಹ ಸಂವಿಧಾನ ಕಾಣಲು ಸಾಧ್ಯವಾಗುತ್ತಿರಲಿಲ್ಲ. ಪವಿತ್ರ ಸಂವಿಧಾನ ರಚನೆ ಹಾಗೂ ಅದನ್ನು ಜಾರಿಗೆ ತಂದ ಬಾಬಾಸಾಹೇಬರಿಗೆ ಗೌರವ ಕೊಡಬೇಕು ಎಂದು ಹೇಳಿದರು.ಬಾಬಾಸಾಹೇಬರಿಗೆ ಗೌರವ ಕೊಡುವ ಕೆಲಸ ಮಾಡುತ್ತಿದೆ ಅಂದರೆ ಅದು ಬಿಜೆಪಿ. ಅಪಮಾನ ಮಾಡುತ್ತಿರುವ ಪಕ್ಷವೆಂದರೆ ಅದು ಕಾಂಗ್ರೆಸ್. ಗೃಹ ಸಚಿವ ಅಮಿತ್ ಶಾ ಹೇಳಿಕೆಯನ್ನು ತಿರುಚುವ ಮೂಲಕ ಕಾಂಗ್ರೆಸ್ ಬೇಳೆ ಬೇಯಿಸಿಕೊಳ್ಳಲು ಹೊರಟಿದೆ. ಪ್ರತಿಯೊಬ್ಬ ಪ್ರಜೆಯೂ ಸಂವಿಧಾನವನ್ನು ಗೌರವಿಸಬೇಕಿದೆ ಎಂದರು.ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಸ್ವಾತಂತ್ರ್ಯದ ವೇಳೆ ಇದ್ದ ಕಾಂಗ್ರೆಸ್ ಬೇರೆ, ಈಗಿನ ಕಾಂಗ್ರೆಸ್ ಬೇರೆಯಾಗಿದೆ. ಕಾಂಗ್ರೆಸ್‌ನ ವಿಸರ್ಜಿಸಲು ಬಾಪು ಹೇಳಿದ್ದರು. ಆದರೆ ಬಾಪು ಮಾತನ್ನು ಮೀರಿ ಕಾಂಗ್ರೆಸ್ ನಡೆದು ಬಂದಿದೆ. ಸಂವಿಧಾನ ರಚನೆಕಾರ ಅಂಬೇಡ್ಕರ್ ಅವರನ್ನು ಪಾರ್ಲಿಮೆಂಟ್ ಗೆ ಬಾರದಂತೆ ತಡೆಯಲಾಗಿತ್ತು ಎಂದು ದೂರಿದರು.ಬೆಳಗಾವಿಯಲ್ಲಿ ಕಾಂಗ್ರೆಸ್ ನ ಸಮಾವೇಶ ನಡೆಸಲಾಗಿದೆ. ಸಂವಿಧಾನವನ್ನು ಪ್ರಾಮಾಣಿಕವಾಗಿ ಪಾಲಿಸಲು ಸಾಧ್ಯವಾಯಿತಾ ? ಎಮರ್ಜೆನ್ಸಿ ತಂದು ಕರಾಳ ದಿನವನ್ನು ಆಚರಿಸಲಾಗಿತ್ತಲ್ಲಾ ? ಪ್ರಜಾಪ್ರಭುತ್ವದ ಕಗ್ಗೊಲೆ ನಡೆಸಿದ್ದು ಕಾಂಗ್ರೆಸ್ ಎಂದರು.ಭಾರತ ರತ್ನ ಮೊದಲು ಪಡೆದವರು ನೆಹರು, ಎರಡನೇಯವರು ಇಂದಿರಾಗಾಂಧಿ, ಮೂರನೇಯವರು ರಾಜೀವ್ ಗಾಂಧಿ ಗೆ ನೀಡಲಾಯಿತು. ಆಗ ಡಾ.ಬಾಬಾಸಾಹೇಬರ ನೆನಪು ಬರಲಿಲ್ವಾ ? ಅ ಬಾಬಾ ಸಾಹೇಬರಿಗೆ ಭಾರತ ರತ್ನ ನೀಡಲು ಕಾಂಗ್ರೆಸೇತರ ಸರ್ಕಾರ ಬರಬೇಕಾಯಿತು. ಮೀಸಲಾತಿಯನ್ನೂ ತಿದ್ದುಪಡಿ ಮಾಡಿದ್ದು ಕಾಂಗ್ರೆಸ್ ತನ್ನ ಹಿತಕ್ಕಾಗಿಯೇ ಹೊರತು ದಲಿತರ ಉದ್ಧಾರಕ್ಕಲ್ಲ ಎಂದು ಟೀಕಿಸಿದರು.ಶಾಸಕರಾದ ಎಸ್.ಎನ್.ಚನ್ನಬಸಪ್ಪ, ಆರಗಜ್ಞಾನೇಂದ್ರ, ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್.ಅರುಣ್, ಡಾ.ಧನಂಜಯಸರ್ಜಿ, ಮಾಜಿ ಶಾಸಕರಾದ ಕೆ.ಬಿ.ಅಶೋಕ್‌ನಾಯ್ಕ್, ಕೆ.ಜಿ.ಕುಮಾರಸ್ವಾಮಿ, ಎಸ್.ರುದ್ರೇಗೌಡ, ಪ್ರಮುಖರಾದ ಎಸ್.ದತ್ತಾತ್ರಿ, ಎಚ್.ಹಾಲಪ್ಪ, ಆರ್.ಕೆ.ಸಿದ್ರಾಮಣ್ಣ, ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಗುರುಮೂರ್ತಿ ಮತ್ತಿತರರು ಇದ್ದರು.