ಕಾಂಗ್ರೆಸ್‌ಗೆ ಸಂವಿಧಾನದ ಮೇಲೆ ಗೌರವ ಇಲ್ಲ: ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ನಾಯ್ಕ

KannadaprabhaNewsNetwork | Published : Jan 29, 2025 1:33 AM

ಸಾರಾಂಶ

ನಮ್ಮ ಸನಾತನ ಹಿಂದು ಧರ್ಮ, ದೇವರು, ಸಂಪ್ರದಾಯ, ಆಚರಣೆ, ನಂಬಿಕೆಗಳ ವಿರುದ್ಧ ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಹೀಗೆ ಹೇಳಲು ಖರ್ಗೆ ಅವರಿಗೆ ಯಾವ ನೈತಿಕತೆ ಇದೆ ಎಂದು ರೂಪಾಲಿ ನಾಯ್ಕ ಪ್ರಶ್ನಿಸಿದ್ದಾರೆ.

ಕಾರವಾರ: ಕುಂಭಮೇಳದಲ್ಲಿ ಸ್ನಾನ ಮಾಡುವುದರಿಂದ ಬಡತನ ಕೊನೆಯಾಗುತ್ತಾ ಎಂದು ಹೇಳುವ ಮೂಲಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೋಟ್ಯಂತರ ಹಿಂದುಗಳ ನಂಬಿಕೆಯ ಮೇಲೆ ಗದಾಪ್ರಹಾರ ಮಾಡಿದ್ದಾರೆ. ಹಿಂದುಗಳ ಧಾರ್ಮಿಕ ನಂಬಿಕೆ, ಭಾವನೆಗಳನ್ನು ವಿರೋಧಿಸುವ ಮೂಲಕ ಕಾಂಗ್ರೆಸ್ ಹಿಂದು ವಿರೋಧಿ ಎನ್ನುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ಎಸ್. ನಾಯ್ಕ ಕಿಡಿಕಾರಿದ್ದಾರೆ.

ನಮ್ಮ ಸನಾತನ ಹಿಂದು ಧರ್ಮ, ದೇವರು, ಸಂಪ್ರದಾಯ, ಆಚರಣೆ, ನಂಬಿಕೆಗಳ ವಿರುದ್ಧ ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಹೀಗೆ ಹೇಳಲು ಖರ್ಗೆ ಅವರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡಿದನ್ನು ಖರ್ಗೆ ಬಡತನಕ್ಕೆ ಹೋಲಿಕೆ ಮಾಡುತ್ತಾರೆ. ನಮ್ಮ ನಂಬಿಕೆ, ಸಂಪ್ರದಾಯ ಆಚರಣೆ ಬಗ್ಗೆ ವ್ಯಂಗ್ಯವಾಡುವ ಖರ್ಗೆ ಅವರು ಕೇಂದ್ರದಲ್ಲಿ ಆರು ದಶಕಗಳಿಗೂ ಹೆಚ್ಚು ಕಾಲ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಹಾಗಿದ್ದರೆ ಕಾಂಗ್ರೆಸ್ ಗೆ ಏಕೆ ಬಡತನ ನಿವಾರಣೆ ಮಾಡಲು ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್‌ನವರು ಕಾಯಂ ಸಂವಿಧಾನದ ಬಗ್ಗೆ ಮಾತನಾಡುತ್ತಾರೆ. ಅದೇ ಸಂವಿಧಾನದಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ಕೊಡಲಾಗಿದೆ. ಖರ್ಗೆ ಅವರೇ ಸಂವಿಧಾನದ ಪುಸ್ತಕಗಳ ಪುಟಗಳನ್ನು ತೆರೆದುನೋಡಿ. ಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡುವುದು ನಮ್ಮ ನಂಬಿಕೆ. ಅದರಿಂದ ಬೇರೆ ಯಾರಿಗಾದರೂ ಸಮಸ್ಯೆ ಆಗಲಿದೆಯೇ ಎಂದು ಪ್ರಶ್ನಿಸಿದ್ದಾರೆ.

ಗೋಕಳ್ಳರ ವಿರುದ್ಧ ಪೊಲೀಸ್ ಕಾರ್ಯ ಶ್ಲಾಘನೀಯ

ಕುಮಟಾ: ಕೆಲ ದಿನಗಳ ಹಿಂದೆ ಹೊನ್ನಾವರದ ಕೊಂಡಾಕುಳಿಯಲ್ಲಿ ಗರ್ಭಿಣಿ ಹಸುವಿನ ತಲೆ ಕಡಿದ ಗೋಕಳ್ಳರ ವಿರುದ್ಧ ಪೊಲೀಸ್ ಇಲಾಖೆಯ ಕೆಲಸ ಅತ್ಯಂತ ಸ್ತುತ್ಯರ್ಹವಾಗಿದೆ ಎಂದು ಜನಪರ ಹೋರಾಟ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಹಾಗೂ ಉತ್ತರ ಕನ್ನಡ ಉಳಿಸಿ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಎಂ.ಜಿ. ಭಟ್ ತಿಳಿಸಿದ್ದಾರೆ.ಪ್ರಕರಣದ ತನಿಖೆಯನ್ನು ಪೊಲೀಸ್ ಇಲಾಖೆ ಪ್ರಾಮಾಣಿಕವಾಗಿ ಹಾಗೂ ನಿಷ್ಪಕ್ಷಪಾತವಾಗಿ ಮಾಡುತ್ತಿದ್ದು, ಇಲಾಖೆಯ ಮೇಲೆ ಹೆಮ್ಮೆ ಮೂಡುವಂತೆ ಮಾಡಿದೆ. ಆದರೆ ಆರೋಪಿಗಳು ಪೊಲೀಸರ ಮೇಲೆ ಹಲ್ಲೆಗೆ ಮುಂದಾದಾಗ ಪೊಲೀಸರು ಆತ್ಮರಕ್ಷಣೆಗಾಗಿ ಗುಂಡನ್ನು ಹಾರಿಸಿದ್ದರ ವಿರುದ್ಧ ಎಸ್‌ಡಿಪಿಐ ಹಾಗೂ ಇತರ ಸಂಘಟನೆಯವರು ಸಾಮಾಜಿಕ ತಾಣಗಳಲ್ಲಿ ಕೊಂಕು ಎತ್ತುತ್ತಿರುವುದು ಕಂಡುಬಂದಿದೆ.

ಇದನ್ನು ಪ್ರತಿಯೊಬ್ಬ ದೇಶಪ್ರೇಮಿ ಭಾರತೀಯ ಖಂಡಿಸುತ್ತೇವೆ ಮತ್ತು ಎಲ್ಲರೂ ಪೊಲೀಸ್ ಇಲಾಖೆಯ ಜತೆ ಇದ್ದಾರೆ. ಉತ್ತರ ಕನ್ನಡದಲ್ಲಿ ಅವ್ಯಾಹತವಾಗಿ ಗೋಕಳವು ನಡೆಯುತ್ತಿದ್ದ ಸಂದರ್ಭದಲ್ಲಿ ಹಳ್ಳಿಹಳ್ಳಿಯ ಜನ ಅಸಹಾಯಕತೆಯಿಂದ ಕಣ್ಣೀರಿಡುವಾಗ ಪೊಲೀಸ್ ಇಲಾಖೆಯ ನಿರ್ದಾಕ್ಷಿಣ್ಯ ಕ್ರಮ ಗೋಪ್ರೇಮಿಗಳಲ್ಲಿ ಆಶಾಭಾವನೆ ಹಾಗೂ ಧೈರ್ಯ ಮೂಡಿಸಿದೆ ಎಂದು ಎಂ.ಜಿ. ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share this article