ಹಾವೇರಿ: ಕಾಂಗ್ರೆಸ್‌ನ ಅಂತರಿಕ ಸಂಘರ್ಷದ ಶಕ್ತಿ ಪ್ರದರ್ಶನ ಮಾಡಲು ಮೈಸೂರಿನಲ್ಲಿ ಸಮಾವೇಶ ಮಾಡಲಾಗುತ್ತಿದೆ. ಸಮಾವೇಶ ಮಾಡುವಷ್ಟು ಸಾಧನೆ ಕಾಂಗ್ರೆಸ್ ಮಾಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು. ನಗರದಲ್ಲಿ ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿ, ಕಾಂಗ್ರೆಸ್ ಸಾಧನಾ ಸಮಾವೇಶದ ಹೆಸರಿನಲ್ಲಿ ಹಿಂದೆ ಹಾಸನದಲ್ಲಿ ಶಕ್ತಿ ಪ್ರದರ್ಶನ ಮಾಡಬೇಕಿತ್ತು. ಅದು ಈಗ ಮೈಸೂರಿನಲ್ಲಿ ಆಗುತ್ತಿದೆ. ಈಗಾಗಲೇ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಶಾಸಕರು ಮತ್ತು ಸಚಿವರ ಜತೆ ಸಭೆ ಮಾಡಿರುವುದು, ಎಲ್ಲವೂ ಸರಿ ಇಲ್ಲ ಎನ್ನುವುದನ್ನು ತೋರಿಸಿದೆ.
ಶರಾವತಿ ಪಂಪ್ ಸ್ಟೋರೇಜ್ ಕುರಿತು ಪ್ರತಿಕ್ರಿಯಿಸಿದ ಅವರು, ಅತ್ಯಂತ ಕಡಿಮೆ ಖರ್ಚಿನಲ್ಲಿ ಸುಮಾರು ಎರಡು ಸಾವಿರ ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವಂಥದ್ದಾಗಿದೆ. ಯೋಜನೆಯಿಂದ ಸಾಕಷ್ಟು ಅರಣ್ಯ ಪ್ರದೇಶ ನಾಶವಾಗುತ್ತದೆ. ಅದರ ಬದಲು ಬೇರೆ ಕಡೆಗೆ ಅರಣ್ಯ ಬೆಳೆಸಬೇಕು ಹಾಗೂ ಸುತ್ತಲಿನ ಅರಣ್ಯ ಪ್ರದೇಶ ಕಾಪಾಡಬೇಕು. ಈಗಾಗಲೇ ಕೆಲವು ಷರತ್ತುಗಳೊಂದಿಗೆ ಅನುಮತಿ ದೊರೆತಿದೆ. ಅವುಗಳನ್ನು ಪಾಲನೆ ಮಾಡಿ ಮಾಡಬೇಕು ಎಂದರು. ಉತ್ತರ ಕರ್ನಾಟಕದಲ್ಲಿಯೂ ಸಾಧನಾ ಸಮಾವೇಶ: ಸಚಿವ ಶಿವಾನಂದ ಪಾಟೀಲ್ಹಾವೇರಿ: ಮೈಸೂರಿನಲ್ಲಿ ಸಾಧನಾ ಸಮಾವೇಶ ನಡೆಸುವ ಮೂಲಕ ಸಿಎಂ ಸಿದ್ದರಾಮಯ್ಯ ಅವರು ಶಕ್ತಿ ಪ್ರದರ್ಶನ ಮಾಡುತ್ತಿಲ್ಲ. ಅದೇ ಮಾದರಿಯಲ್ಲಿ ಮುಂದೆ ಉತ್ತರ ಕರ್ನಾಟಕದಲ್ಲಿಯೂ ಸಮಾವೇಶ ಮಾಡುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐದು ವರ್ಷ ಇರುತ್ತೇನೆಂದು ಸಿಎಂ ಅವರೇ ಹೇಳಿದ್ದಾರೆ. ನಾವೇಕೆ ಅದನ್ನು ಹೇಳಬೇಕು ಎಂದರು.ಅಂಗನವಾಡಿ ಹಾಲಿನ ಪುಡಿ ಗೋಲ್‌ಮಾಲ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಶಿಗ್ಗಾಂವಿಯಲ್ಲಿ ಅಂಗನವಾಡಿ ಭೇಟಿ ಮಾಡಿ 25 ಕೆಜಿ ಪ್ಯಾಕೇಟ್ ಒಪನ್ ಮಾಡಿ ನೋಡಿದ್ದೇನೆ, ತೂಕ ಸರಿಯಾಗಿದೆ. ತಡಸದಲ್ಲಿ ಎರಡು ಅಂಗನವಾಡಿ ಕೇಂದ್ರಕ್ಕೆ ಭೇಟಿ ಮಾಡಿದ್ದೇನೆ, ಸರಿಯಾಗಿದೆ. ಆದಾಗ್ಯೂ ತನಿಖೆ ಮಾಡಿಸುತ್ತೇನೆ, ತಪ್ಪಿದ್ದಲ್ಲಿ ಕ್ರಮ ಕೈಗೊಳ್ಳುತ್ತೇವೆ ಎಂದರು.ಹಾವೇರಿ ಮೆಡಿಕಲ್ ಕಾಲೇಜು ಸಿಬ್ಬಂದಿ ನೇಮಕದಲ್ಲಿ ಅಕ್ರಮ ವಿಚಾರ ಕುರಿತು, ಡೀನ್ ಜತೆಗೆ ಮಾತನಾಡಿದ್ದೇವೆ. ತಾಂತ್ರಿಕ ಸಮಸ್ಯೆಗಳಿಂದ ಆಗಿರಬಹುದು ಅಕ್ರಮ ಆಗಿದ್ದರೆ, ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ ಎಂದರು.
ಯೂರಿಯಾ ಗೊಬ್ಬರದ ಜತೆ ಲಿಂಕ್ ಗೊಬ್ಬರ ವಿತರಣೆ ಕುರಿತು ಪ್ರತಿಕ್ರಿಯಿಸಿದ ಅವರು, ರಾಜ್ಯಕ್ಕೆ ಬೇಕಾದಷ್ಟು ಯೂರಿಯಾ ಗೊಬ್ಬರ ಕೊಡಲು ಕೇಂದ್ರದಿಂದ ಆಗುತ್ತಿಲ್ಲ. ಪ್ರಸಕ್ತ ವರ್ಷ ಮಳೆ ಉತ್ತಮವಾಗಿದೆ. ಜಿಲ್ಲೆಯಲ್ಲಿ ಕಳಪೆ ಗೊಬ್ಬರದ ಬಗ್ಗೆ ನಾಲ್ಕು ಕೇಸ್ ದಾಖಲಾಗಿವೆ.ನಕಲಿ ಗೊಬ್ಬರ ಮಾರಾಟಗಾರರ ಬಂಧನಕ್ಕೂ ಕ್ರಮ ಕೈಗೊಳ್ಳುತ್ತೇವೆ, ಅವರ ಲೈಸೆನ್ಸ್ ರದ್ದು ಮಾಡಿದ್ದೇವೆ. ಉತ್ತಮ ಗೊಬ್ಬರ ಕೊಡಬೇಕೆಂದು ಲೈಸೆನ್ಸ್ ಕೊಟ್ಟಿರುತ್ತಾರೆ. ಕಳಪೆ ವಿತರಿಸಿದರೆ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದರು.