ಕನ್ನಡಪ್ರಭ ವಾರ್ತೆ ಬೊಮ್ಮನಹಳ್ಳಿ
ಕಾಂಗ್ರೆಸ್‌ನವರಿಗೆ ರಾಮನನ್ನು ಕಂಡರೆ ಆಗಲ್ಲವೆಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ವಿಷಾದ ವ್ಯಕ್ತಪಡಿಸಿದರು.
ನರೇಂದ್ರ ಮೋದಿ ಹಾಗೂ ಶ್ರೀರಾಮ ಈರ್ವರನ್ನು ಕಂಡರೂ ಕಾಂಗ್ರೆಸ್‌ನವರಿಗೆ ಭಯ ಶುರುವಾಗಿದೆ. ಇಂತಹ ಐತಿಹಾಸಿಕ ಕಾರ್ಯಕ್ರಮಕ್ಕೆ ರಜೆ ನೀಡದಕ್ಕೆ ಸಿದ್ದರಾಮಯ್ಯನವರಿಗೆ ಶ್ರೀರಾಮ ಒಳ್ಳೆಯ ಬುದ್ಧಿ ಕೊಡಲಿ ಎಂದರು.
ರೂಪೇನ ಅಗ್ರಹಾರದ ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಕುಂಬಾಭಿಷೇಕ ಮಹೋತ್ಸವದಲ್ಲಿ ಪಾಲ್ಗೊಂಡು ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದರು. ಕಾಂಗ್ರೆಸ್‌ನವರಿಗೆ ಮೊದಲಿನಿಂದಲೂ ಪ್ರಧಾನಿ ಅವರನ್ನು ಕಂಡರೆ ಭಯವಿದ್ದೇ ಇದೆ ಎಂದರು.
ಶಾಸಕ ಎಂ.ಸತೀಶ್ ರೆಡ್ಡಿ ಮಾತನಾಡಿ, ಜ.೨೨ ಇತಿಹಾಸದ ಪುಟದಲ್ಲಿ ಅಳಿಸಲಾಗದ ಹೆಜ್ಜೆ ಗುರುತಾಗಲಿದೆ. ಪ್ರಧಾನಿ ಮೋದಿ ಅವರು ಪ್ರಪಂಚದೆಲ್ಲೆಡೆ ರಾಮನ ನೀತಿ, ತತ್ವ, ದಕ್ಷತೆ, ಪ್ರಾಮಾಣಿಕತೆಯನ್ನು ಪಸರಿಸಲು ಮುಂದಾಗಿದ್ದಾರೆ ಎಂದು ಹೇಳಿದರು.
ಬೆಂ.ದಕ್ಷಿಣ ಲೋಕಸಭಾ ಸಂಸದ ತೇಜಸ್ವಿ ಸೂರ್ಯ, ಯಲಹಂಕ ಶಾಸಕ ವಿಶ್ವನಾಥ ರೆಡ್ಡಿ, ವಿಧಾನ ಪರಿಷತ್ ಸದಸ್ಯರಾದ ಗೋಪಿ ನಾಥ್ ರೆಡ್ಡಿ, ದೇವಸ್ಥಾನದ ಜೀರ್ಣೋದ್ಧಾರದ ಮುಖಂಡರಾದ ನರೇಂದ್ರ ಬಾಬು, ಬಿಜೆಪಿ ಮುಖಂಡರಾದ ಶ್ರೀನಿವಾಸ ರೆಡ್ಡಿ ಉಪಸ್ಥಿತ ರಿದ್ದರು.
ಶಾಲೆಗಳಲ್ಲಿ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ನೇರ ಪ್ರಸಾರ
ಬೆಂಗಳೂರು: ರಾಜಧಾನಿ ಬೆಂಗಳೂರಿನ ಬಹುತೇಕ ಖಾಸಗಿ ಶಾಲೆಗಳಲ್ಲಿ ಟಿವಿ, ಎಲ್‌ಇಡಿ ಪರದೆಯ ಮೂಲಕ ಅಯೋಧ್ಯೆಯಲ್ಲಿ ಸೋಮವಾರ ನಡೆದ ರಾಮಮಂದಿರ ಉದ್ಘಾಟನೆ ಮತ್ತು ಬಾಲರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ನೇರ ಪ್ರಸಾರ ಮಾಡಲಾಯಿತು.
ರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಸೋಮವಾರ ಶಾಲೆಗಳಿಗೆ ರಜೆ ಘೋಷಿಸಬೇಕೆಂಬ ಒತ್ತಡ ಇದ್ದರೂ ಸರ್ಕಾರ ರಜೆ ನೀಡಿರಲಿಲ್ಲ. ಹಾಗಾಗಿ ಬಹುತೇಕ ಖಾಸಗಿ ಶಾಲೆಗಳಲ್ಲಿ ರಾಮ ಪ್ರಾಣಪ್ರತಿಷ್ಠೆಯ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಿದ್ದವು.
ಆದರೆ, ಸರ್ಕಾರಿ ಶಾಲೆಗಳಲ್ಲಿ ಅಂತಹ ಯಾವುದೇ ವ್ಯವಸ್ಥೆ ಮಾಡಿರಲಿಲ್ಲ. ಕೆಲ ಶಾಲೆಗಳಲ್ಲಿ ಶಿಕ್ಷಕರು, ಪೋಷಕರು ಮಕ್ಕಳಿಗೆ ಸಿಹಿ ಹಂಚಿ ರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ್ದು ಕಂಡುಬಂತು.
ಖಾಸಗಿ ಶಾಲೆಗಳಲ್ಲಿ ಮಕ್ಕಳು ಸಮವಸ್ತ್ರದ ಬದಲು ‘ಬಣ್ಣ ಬಣ್ಣದ ಉಡುಪು’ ಧರಿಸಿಕೊಂಡು ಬರಲು ಅವಕಾಶ ನೀಡಲಾಗಿತ್ತು. ಕೆಲ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿ ಮಕ್ಕಳಿಗೆ ಶ್ರೀರಾಮ, ಲಕ್ಷ್ಮಣ, ಸೀತೆ, ಹಾಗೂ ಹನುಮಂತನ ವೇಷ ಹಾಕಿಕೊಂಡು ಶಾಲೆಗೆ ಕರೆದುಕೊಂಡು ಬಂದಿದ್ದು ಕಂಡುಬಂತು.
ಕೆಲ ಪೋಷಕರು ಮಕ್ಕಳನ್ನು ಕೃಷ್ಣನ ವೇಷದಲ್ಲಿ ಕರೆತಂದಿದ್ದರು. ಒಟ್ಟಿನಲ್ಲಿ ಶಾಲೆಗಳಲ್ಲೂ ಒಂದು ರೀತಿ ಹಬ್ಬದ ರೀತಿಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯನ್ನು ಸಂಭ್ರಮಿಸಿದರು.
ಕೆಲವು ಶಾಲೆಗಳಲ್ಲಿ ಶ್ರೀರಾಮನ ಫೋಟೋ ಇಟ್ಟು, ಪೂಜೆ ಮಾಡಿ ಮಕ್ಕಳಿಗೆ ಪಾನಕ, ಮಜ್ಜಿಗೆ, ಕೋಸಂಬರಿಯನ್ನು ವಿತರಿಸಲಾಗಿದೆ. ಕೆಲವೆಡೆ ಲಘು ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.