ದೇಶದ ಮೇಲಿನ ಸಾಲವನ್ನು 205 ಲಕ್ಷ ಕೋಟಿ ಹೆಚ್ಚಿಸಿದ್ದೇ ಬಿಜೆಪಿ ಸಾಧನೆ : ಎಂ. ಲಕ್ಷ್ಮಣ

KannadaprabhaNewsNetwork | Updated : Feb 03 2025, 11:44 AM IST

ಸಾರಾಂಶ

, 1947 ರಿಂದ 2014 ರವರೆಗೆ ನಮ್ಮ ದೇಶ ಮಾಡಿದ್ದ ಸಾಲ 53 ಲಕ್ಷ ಕೋಟಿ ಮಾತ್ರ. ಬಿಜೆಪಿ ಅಧಿಕಾರಕ್ಕೆ ಬಂದ ಕೇವಲ 10 ವರ್ಷದಲ್ಲಿ 205 ಲಕ್ಷ ಕೋಟಿ ಆಗಿದೆ.

  ಮೈಸೂರು : ದೇಶದ ಪ್ರತಿ ವ್ಯಕ್ತಿ ಮೇಲೆ 3.50 ಲಕ್ಷ ರೂ. ಸಾಲ ಇದೆ. ದೇಶದ ಮೇಲಿನ ಸಾಲವನ್ನು 205 ಲಕ್ಷ ಕೋಟಿ ರೂ. ಏರಿಕೆ ಮಾಡಿದ್ದೇ ಬಿಜೆಪಿ ಸಾಧನೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಟೀಕಿಸಿದರು.

ನಗರ ಕಾಂಗ್ರೆಸ್ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಖಾಲಿ ಚೊಂಚು, ತೆಂಗಿನಕಾಯಿ ಚಿಪ್ಪು ಪ್ರದರ್ಶಿಸುವ ಮೂಲಕ ಕೇಂದ್ರ ಬಜೆಟ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಮಾತನಾಡಿದ ಅವರು, 1947 ರಿಂದ 2014 ರವರೆಗೆ ನಮ್ಮ ದೇಶ ಮಾಡಿದ್ದ ಸಾಲ 53 ಲಕ್ಷ ಕೋಟಿ ಮಾತ್ರ. ಬಿಜೆಪಿ ಅಧಿಕಾರಕ್ಕೆ ಬಂದ ಕೇವಲ 10 ವರ್ಷದಲ್ಲಿ 205 ಲಕ್ಷ ಕೋಟಿ ಆಗಿದೆ. ದೇಶವನ್ನ ಸಾಲದ ಕೂಪಕ್ಕೆ ತಳ್ಳುವಂತ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ ಎಂದು ವಾಗ್ದಾಳಿ ನಡೆಸಿದರು.

ಈ ಬಾರಿಯ ಬಜೆಟ್ ಇಂಡಿಯಾ ಮಾಡಿರುವ ಬಜೆಟ್ ತರ ಕಾಣುತ್ತಿಲ್ಲ. ಬಿಹಾರದ ಬಜೆಟ್ ತರ ಕಾಣುತ್ತಿದೆ. ಬಿಹಾರಕ್ಕೆ 78 ಸಾವಿರ ಕೋಟಿ ಪ್ರಾಜೆಕ್ಟ್ ಘೋಷಿಸಿದ್ದಾರೆ. ಎಲ್ಲಿ ಚುನಾವಣೆ ಬರುತ್ತಾ ಇದೆ ಅಲ್ಲಿ ವಿಶೇಷ ಪ್ಯಾಕೇಜ್ ಕೊಟ್ಟು ಮತದಾರರ ಓಲೈಸುವ ಕೆಲಸ ಮಾಡುತ್ತಿದೆ ಎಂದು ಅವರು ದೂರಿದರು.

ರಾಜ್ಯಕ್ಕೆ ಶೂನ್ಯ ಬಜೆಟ್. ಯೋಜನೆ ಜಿಎಸ್ಟಿ ಹಣವದಲ್ಲೂ ಅನ್ಯಾಯ ಮಾಡಿದೆ. ನರೇಗಾ ಯೋಜನೆಯಲ್ಲೂ ಅನುದಾನ ಕಡಿಮೆ ಮಾಡಿದ್ದಾರೆ. ಕೃಷಿ ಕ್ಷೇತ್ರದ ಅನುದಾನದಲ್ಲೂ ಗಣನೀಯ ಇಳಿಕೆ ಆಗಿದೆ. ಮೇಕ್ ಇನ್ ಇಂಡಿಯಾ, ಸ್ಟ್ಯಾಂಡ್ ಅಪ್ ಇಂಡಿಯಾ ಅನುಷ್ಠಾನಕ್ಕೆ ಕೇವಲ 100 ಕೋಟಿ ಕೊಟ್ಟಿದ್ದಾರೆ. ಕಾರ್ಪೊರೇಟ್ ಕಂಪನಿಗಳ ಟ್ಯಾಕ್ಸ್ ಕಡಿಮೆ ಮಾಡುವ ಮೂಲಕ ಕ್ರೂರಿ ಕ್ಯಾಪಿಟಲಿಸ್ಟ್ ಓಲೈಸಲಾಗಿದೆ. ನಮ್ಮ ರಾಜ್ಯಕ್ಕೆ ಖಾಲಿ ಚೊಂಬು, ಖಾಲಿ ತೆಂಗಿನ ಕಾಯಿ ಚಿಪ್ಪು, ಮೂರು ನಾಮ ಹಾಕಿದ್ದಾರೆ ಎಂದು ಅವರು ಆರೋಪಿಸಿದರು.

ರಾಜ್ಯ ಸಂಸದರು ಕರ್ನಾಟಕಕ್ಕೆ ಒಂದೇ ಒಂದು ಯೋಜನೆ ತರಲು ಸಾಧ್ಯವಾಗಿಲ್ಲ. ನಮ್ಮ ಸಂಸದರು ಮತ್ತು ಕೇಂದ್ರ ಸಚಿವರು ತಮಿಳುನಾಡಿನವರನ್ನು ನೋಡಿ ಕಲಿಯಬೇಕು. ಅಭಿವೃದ್ಧಿ ವಿಷಯ ಬಂದಾಗ ಎಲ್ಲರೂ ಒಂದಾಗುತ್ತಾರೆ. ನಮ್ಮಲ್ಲಿ ದಿನ ಬೆಳಗಾದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ನಿಂದಿಸುತ್ತ ಕಾಲಹರಣ ಮಾಡುತ್ತಾರೆ ಎಂದು ಅವರು ಕಿಡಿಕಾರಿದರು.

ಮುಡಾ ಮಾಜಿ ಅದ್ಯಕ್ಷ ಎಚ್.ವಿ. ರಾಜೀವ್, ಜಿಪಂ ಮಾಜಿ ಅಧ್ಯಕ್ಷ ಬಿ.ಎಂ. ರಾಮು, ಕಾಂಗ್ರೆಸ್ ನಗರ ಪ್ರಧಾನ ಕಾರ್ಯದರ್ಶಿ ಎಂ. ಶಿವಣ್ಣ, ಮಾಧ್ಯಮ ವಕ್ತಾರ ಕೆ. ಮಹೇಶ, ಬಸವಣ್ಣ ಇದ್ದರು.

Share this article