ಹಿರೇಕೆರೂರು: ರಾಜ್ಯದಲ್ಲಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ನೀಡಿದ್ದ ಐದು ಗ್ಯಾರಂಟಿಗಳನ್ನೂ ಆಡಳಿತಕ್ಕೆ ಬಂದ ಮೇಲೆ ಜಾರಿ ಮಾಡಿದೆ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.
ತಾಲೂಕಿನ ದಸನಕೋಪ್ಪ ಗ್ರಾಮದಲ್ಲಿ ಹಾವೇರಿ, ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದ ಗಡ್ಡದೇವರಮಠ ಪರ ಮನೆ ಮನೆಗಳಿಗೆ ತೆರಳಿ ಬಿರುಸಿನ ಮತಪ್ರಚಾರ ನಡೆಸಿ, ಆನಂತರ ಅವರು ಮಾತನಾಡಿದರು. ಮಹಿಳೆಯರಿಗೆ ಗೃಹಲಕ್ಷ್ಮಿ, ಶಕ್ತಿ ಯೋಜನೆ, ಪದವೀದರರಿಗೆ ನಿರುದ್ಯೋಗ ಭತ್ಯೆ, ಅನ್ನಭಾಗ್ಯ, ವಿದ್ಯುತ್ ಉಚಿತವಾಗಿ ನೀಡುತ್ತಿದ್ದು, ಅದರಿಂದ ಬಡವರಿಗೆ ಅನುಕೂಲವಾಗಿದೆ ಎಂದು ಹೇಳಿದರು.ಬರಗಾಲದ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳಿಂದ ಬಡವರಿಗೆ ಸಾಕಷ್ಟು ಅನುಕೂಲವಾಗಿದೆ. ಬಡಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಜತೆಗೆ ಪೌಷ್ಟಿಕಾಂಶವುಳ್ಳ ರಾಗಿ ಮಾಲ್ಟ್ ವಿತರಿಸಲಾಗುತ್ತಿದೆ. ದೇಶ ಮತ್ತು ರಾಜ್ಯದ ಅಭಿವೃದ್ಧಿ ಕಾಂಗ್ರೆಸ್‌ನಿಂದ ಮಾತ್ರ ಸಾಧ್ಯ. ಈ ಹಿಂದೆ ಆಡಳಿತ ನಡೆಸಿದ ಬಿಜೆಪಿ ಭಾರಿ ಭ್ರಷ್ಟಾಚಾರ, ಕೋಮುಗಲಭೆ, ಕಮಿಷನ್ ದಂಧೆಗೆ ಇಳಿದಿತ್ತು. ಅದಕ್ಕೆ ರಾಜ್ಯದ ಜನತೆ ನಿರ್ಧರಿಸಿ ಬಿಜೆಪಿಯನ್ನು ಮನೆಗೆ ಕಳುಹಿಸಿದರು. ಕೇಂದ್ರದಲ್ಲಿಯೂ ಇಂತಹ ಸ್ಥಿತಿ ನಿರ್ಮಾಣವಾಗಿದೆ ಎಂದರು.
ಈ ಬಾರಿ ಹಾವೇರಿ, ಗದಗ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಶತಸಿದ್ಧವಾಗಿದೆ. ಈ ವಿಧಾನಸಭಾ ಕ್ಷೇತ್ರದಿಂದ ಅತಿ ಹೆಚ್ಚು ಮತಗಳು ಅವರ ಪರ ಚಲಾವಣೆಗೊಳ್ಳಲಿವೆ. ಕೇಂದ್ರದಲ್ಲಿನ ಬಿಜೆಪಿ ಸರ್ಕಾರ ವಿರೋಧ ಪಕ್ಷ ಆಡಳಿತವಿರುವ ಕಡೆ ಐಟಿ ಅಸ್ತ್ರವನ್ನು ಪ್ರಯೋಗಿಸುತ್ತಾ, ದ್ವೇಷದ ರಾಜಕೀಯವನ್ನು ಮಾಡುತ್ತಿದೆ ಎಂದರು,ರಟ್ಟೀಹಳ್ಳಿ, ಹಿರೇಕೆರೂರು ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಡಿ. ಬಸನಗೌಡ್ರ, ರಮೇಶ ಮಡಿವಾಳರ, ಶಿವರಾಜ ಹರಿಜನ, ಸನಾವುಲ್ಲಾ ಮಕಾಂದಾರ, ಮಹೇಶ ಗುಬ್ಬಿ, ಸಿದ್ದನಗೌಡ ನರೇಗೌಡ್ರ, ಎಸ್.ಬಿ. ತಿಪ್ಪಣ್ಣನವರ ಹಾಗೂ ಗ್ರಾಮಸ್ಥರು, ಕಾಂಗ್ರೆಸ್‌ನ ವಿವಿಧ ಘಟಕಗಳ ಪದಾಧಿಕಾರಿಗಳು ಇದ್ದರು.