ಕನ್ನಡಪ್ರಭ ವಾರ್ತೆ ಬೆಳಗಾವಿ
ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರಕ್ಕಾಗಿಯೇ ಹುಟ್ಟಿಕೊಂಡಿರುವ ಪಕ್ಷ. ದೇಶವನ್ನು ಲೂಟಿ ಮಾಡಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ದೊಡ್ಡ ಸಾಧನೆ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಾಗ್ದಾಳಿ ನಡೆಸಿದರು.ನಗರದ ಬಸವೇಶ್ವರ ವೃತ್ತದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಎರಡನೇ ಹಂತದ ಜನಾಕ್ರೋಶ ಯಾತ್ರೆಯಲ್ಲಿ ಅವರು ಮಾತನಾಡಿದರು. ದೇಶದಲ್ಲಿ ಯಾವುದೇ ಉದ್ಯಮಿ ಮಾಡದಷ್ಟು ದೊಡ್ಡ ಸಾಧನೆಯನ್ನು ಕಾಂಗ್ರೆಸ್ ನಾಯಕರು ಮಾಡಿದ್ದಾರೆ. ಯಂಗ್ ಇಂಡಿಯಾ ಟ್ರಸ್ಟ್ ಮೂಲಕ ದೊಡ್ಡ ಹಗರಣ ನಡೆಸಿರುವುದು ಬೆಳಕಿಗೆ ಬಂದಿದೆ. ದೊಡ್ಡ ಹಗರಣ ಮಾಡುವುದೇ ಕಾಂಗ್ರೆಸ್‌ನ ಅಭಿವೃದ್ಧಿ ಮಾದರಿಯಾಗಿದೆ ಎಂದು ವ್ಯಂಗ್ಯವಾಡಿದರು.ಸರ್ಕಾರಿ ಗುತ್ತಿಗೆಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ, ಮುಸ್ಲಿಂ ವಿದ್ಯಾರ್ಥಿಗಳ ವಿದೇಶಿ ವ್ಯಾಸಂಗಕ್ಕೆ ವರ್ಷಕ್ಕೆ ₹30 ಲಕ್ಷ ನೆರವು ನೀಡುವ ಮೂಲಕ ಕಾಂಗ್ರೆಸ್ ಸರ್ಕಾರ ಹಿಂದು ವಿರೋಧಿ ನಿಲುವು ಹೊಂದಿದೆ. ಹಿಂದುಗಳಿಗೆ ಯಾವುದೇ ಸೌಲಭ್ಯ ನೀಡಿಲ್ಲ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಹಿಂದುಗಳು ತಕ್ಕ ಉತ್ತರ ನೀಡುತ್ತಾರೆ. ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ, 50ಕ್ಕೂ ಅಧಿಕ ವಸ್ತುಗಳ ಬೆಲೆ ಏರಿಕೆಯಿಂದ ಜನ ತತ್ತರಿಸಿದ್ದು, ಸರ್ಕಾರದ ವಿರುದ್ಧ ಆಕ್ರೋಶಗೊಂಡಿದ್ದಾರೆ. ಜನ ಅನುಭವಿಸುತ್ತಿರುವ ತೊಂದರೆ ಬೆಳಕಿಗೆ ತರಲು ಜನಾಕ್ರೋಶ ಯಾತ್ರೆ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.ಹಿಂದುಗಳನ್ನು ಪೀಸ್ ಪೀಸ್ ಮಾಡಿದ್ದಾರೆ:
ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ ಮಾತನಾಡಿ, ಜಾತಿ ಗಣತಿ ಮಾಡದೇ ಸಿಎಂ ಸಿದ್ದರಾಮಯ್ಯ ₹ 165 ಕೋಟಿ ಗುಳುಂ ಮಾಡಿದ್ದಾರೆ. ಸಿದ್ದರಾಮಯ್ಯ ಧರ್ಮ, ಜಾತಿ ಒಡೆಯುವುದರಲ್ಲಿ ನಂಬರ್ 1 ಆಗಿದ್ದಾರೆ. ಈ ಹಿಂದೆ ಲಿಂಗಾಯತ ಧರ್ಮ ಒಡೆಯಲು ಹೋಗಿ ಕಪಾಳ ಮೋಕ್ಷ ತಿಂದಿದ್ದಾರೆ. ಈಗ ಜಾತಿ ಗಣತಿ ವರದಿ ತೋರಿಸಿ ಹಿಂದೂಗಳನ್ನು ಒಡೆಯುತ್ತಿದ್ದಾರೆ. ಮುಸ್ಲಿಂ ಧರ್ಮದಲ್ಲೂ 10 ಜಾತಿಗಳಿವೆ. ಒಂದೂ ಡಿವೈಡ್ ಮಾಡಿಲ್ಲ. ಆದರೆ ಹಿಂದುಗಳನ್ನು ಪೀಸ್ ಪೀಸ್ ಮಾಡಿದ್ದಾರೆ ಎಂದು ಆರೋಪಿಸಿದರು.ಸಮೀಕ್ಷೆಗೆ ಮನೆ ಮನೆಗೆ ಬಂದಿಲ್ಲ ಎಂದು ಸ್ವತಃ ಕಾಂಗ್ರೆಸ್ ಶಾಸಕರೇ ಹೇಳಿದ್ದಾರೆ. ಮನೆ ಮನೆಗೆ ಹೋಗದೇ ಸರ್ವೆ ಮಾಡಿರುವುದು ಸಿದ್ದರಾಮಯ್ಯನವರ ಟೆಕ್ನಿಕ್. ಸಮೀಕ್ಷೆ ಮಾಡದೇ ಅದಕ್ಕೆ ಮೀಸಲಿಟ್ಟ ₹165 ಕೋಟಿ ಲೂಟಿ ಮಾಡಿದ್ದಾರೆ. ಈ ಬಗ್ಗೆ ಲೋಕಾಯುಕ್ತ ತನಿಖೆ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಫೆವಿಕಲ್ ಹಚ್ಚಿಕೊಂಡಂತೆ ಅಧಿಕಾರಕ್ಕೆ ಅಂಟಿಕೊಂಡಿದ್ದಾರೆ. ಸಿದ್ದರಾಮಯ್ಯನವರು ಫೆವಿಕಲ್ ಮುಖ್ಯಮಂತ್ರಿ. ದೇವೇಗೌಡರು ಸಿದ್ದರಾಮಯ್ಯರನ್ನು ಮಂತ್ರಿ ಮಾಡಿದರು. ಉಪಮುಖ್ಯಮಂತ್ರಿ, ಹಣಕಾಸು ಮಂತ್ರಿ ಮಾಡಿದರು. ಅಧಿಕಾರ ಇರುವ ತನಕ ಸಿದ್ದರಾಮಯ್ಯ ಜೆಡಿಎಸ್‌ನಲ್ಲಿದ್ದರು. ಅಧಿಕಾರ ಕೊಡಲ್ಲ ಎಂದಾಗ ಸಿದ್ದರಾಮಯ್ಯ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿ ಸಿಎಂ ಆದರು. ಸಿಎಂ ಬದಲಾವಣೆ ಒಪ್ಪಂದ ಆಗಿರುವುದು ನೂರಕ್ಕೆ ನೂರಕ್ಕೆ ಸತ್ಯ. ಆಗ ಒಪ್ಪಿ ಸಿದ್ದರಾಮಯ್ಯ ಈಗ ಮಾತು ತಪ್ಪುತ್ತಿದ್ದಾರೆ ಎಂದು ಹೇಳಿದರು.ಜಾತಿ ಗಣತಿ ವರದಿ ಒಪ್ಪಲ್ಲ: ಜಾತಿ ಗಣತಿ ವರದಿ ಮಂಡನೆಯಿಂದ ಹಿಂದುಳಿದ ಸಮಾಜದಲ್ಲಿ ಭಯ ಶುರುವಾಗಿದೆ. ನಮ್ಮ ಮೀಸಲಾತಿ ಕಸಿದುಕೊಂಡು ಬೇರೆ ಜಾತಿಗೆ ಕೊಡುತ್ತಾರೆಂಬ ಆತಂಕ ಶುರುವಾಗಿದೆ. ಆ ಕಾರಣಕ್ಕೆ ನಾನು ಜಾತಿಗಣತಿ ವರದಿಯನ್ನು ಒಪ್ಪಲ್ಲ, ನಮ್ಮ ಪಕ್ಷವೂ ವಿರೋಧಿಸುತ್ತದೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದರು.ನಮ್ಮ ಜಾತಿಯ ಮೀಸಲಾತಿ ಕಸಿದುಕೊಂಡರೇ ರಕ್ತಕ್ರಾಂತಿಯನ್ನೇ ಮಾಡಬೇಕಾಗುತ್ತದೆ. ಪ್ರತಿಯೊಬ್ಬರೂ ಹನಿ ರಕ್ತ ಹರಿಸಿ ಆದರೂ ಮೀಸಲಾತಿ ಹಿಡಿದಿಟ್ಟುಕೊಳ್ಳುತ್ತೇವೆ. ನಮ್ಮ ಸಮಾಜದ ಜನರಲ್ಲಿ ಧ್ವನಿ ಇಲ್ಲದಾಗಿದೆ. ಈ ಕಾರಣಕ್ಕೆ ನಮ್ಮ ಸಮಾಜದ ನಿಗಮಗಳ ಹಣವನ್ನು ಲೂಟಿ ಮಾಡಲಾಗಿದೆ. ಕೋಟ್ಯಂತರ ಲೂಟಿ ಆದರೂ ನಮ್ಮ ಸಮಾಜಕ್ಕೆ ಧ್ವನಿ ಎತ್ತಲು ಸಾಮರ್ಥ್ಯ ಇಲ್ಲದಾಗಿದೆ. ಈ ಸರ್ಕಾರದ ಲೂಟಿಯಿಂದ ನಮ್ಮ ಸಮಾಜದ ಮಕ್ಕಳಿಗೆ ಶಿಷ್ಯವೇತನ ನಿಂತಿದೆ ಎಂದು ಆರೋಪಿಸಿದರು.ಸಂಸದ ಗೋವಿಂದ ಕಾರಜೋಳ ಮಾತನಾಡಿ, ಕಾಂಗ್ರೆಸ್ ಇರುವ ತನಕ ದೇಶದಲ್ಲಿ ದಲಿತರ ಉದ್ಧಾರ ಆಗಲ್ಲ. ಈ ಮಾತನ್ನು ಡಾ.ಬಿ.ಆರ್. ಅಂಬೇಡ್ಕರ್ ಹೇಳಿದ್ದರು. ತುಘಲಕ್ ಮಾದರಿಯಲ್ಲಿ ಸಿದ್ದರಾಮಯ್ಯನವರು ಆಡಳಿತ ನಡೆಸುತ್ತಿದ್ದಾರೆ. ರಾಹುಲ್ ಗಾಂಧಿಗೆ ಯಾವುದೇ ಮೆರಿಟ್ ಇಲ್ಲ. ಮ್ಯಾನೇಜ್ಮೆಂಟ್ ಕೋಟಾದಲ್ಲಿ ರಾಹುಲ್ ಪ್ರತಿಪಕ್ಷ ನಾಯಕರಾಗಿದ್ದಾರೆ. ಖರ್ಗೆಯವರು ನಾಮ್ ಕೆ ವಾಸ್ತೆ ಅಧ್ಯಕ್ಷರಾಗಿದ್ದಾರೆ. ಗಾಂಧಿ ಕುಟುಂಬ ಸರ್ವಾಧಿಕಾರಿ ಆಗಿದೆ. ಖರ್ಗೆಯವರದ್ದು ಕಾಂಗ್ರೆಸ್‌ನಲ್ಲಿ ಏನೂ ನಡೆಯಲ್ಲ. ಕಾಂಗ್ರೆಸ್ ದಲಿತ ವಿರೋಧಿ, ಅಂಬೇಡ್ಕರ್ ಸೋಲಿಸಿದ್ದು ಕಾಂಗ್ರೆಸ್ ಎಂದರು.ಮಾಜಿ ಸಚಿವ, ಶಾಸಕ ಬಾಲಚಂದ್ರ ಜಾರಕಿಹೊಳಿ ಮಾತನಾಡಿ, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಬರೆದುಕೊಡುತ್ತೇನೆ. ಇಂದಿನ ಸರ್ಕಾರ ಜನತೆಗೆ ತೊಂದರೆ ನೀಡುವುದನ್ನು ನಿಲ್ಲಿಸಬೇಕು. ಭ್ರಷ್ಟ ಸರ್ಕಾರಕ್ಕೆ ಜನ ಮುಂದಿನ ಬಾರಿ ಬೆಂಬಲ ನೀಡುವುದಿಲ್ಲ ಎಂದರು.ಸಂಸದ ಜಗದೀಶ ಶೆಟ್ಟರ್, ಪರಿಷತ್ ಪ್ರತಿಪಕ್ಷ ನಾಯಕ ಚಲುವಾದಿ ನಾರಾಯಣ ಸ್ವಾಮಿ, ಸಂಸದ ಯದುವೀರ ಒಡೆಯರ, ಶಾಸಕರಾದ ಅಭಯ ಪಾಟೀಲ, ದುರ್ಯೋಧನ ಐಹೊಳೆ, ಶಶಿಕಲಾ ಜೊಲ್ಲೆ, ನಿಖಿಲ್ ಕತ್ತಿ, ವಿಠ್ಠಲ ಹಲಗೇಕರ, ರವಿಕುಮಾರ್, ಅಣ್ಣಾಸಾಹೇಬ್ ಜೊಲ್ಲೆ ಮೊದಲಾದವರು ಪಾಲ್ಗೊಂಡಿದ್ದರು. ಬಳಿಕ ಬಸವೇಶ್ವರ ವೃತ್ತದಿಂದ ನಾಥಪೈ ವೃತ್ತದ ಮೂಲಕ ಹಾಯ್ದು ಜನಾಕ್ರೋಶ ಯಾತ್ರೆಯು ಶಿವಾಜಿ ಉದ್ಯಾನಕ್ಕೆ ತೆರಳಿ ಮುಕ್ತಾಯವಾಯಿತು. ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ಧ ಹರಿಹಾಯ್ದು, ಆಕ್ರೋಶ ವ್ಯಕ್ತಪಡಿಸಿದರು.ಜನಾಕ್ರೋಶ ಯಾತ್ರೆಗೆ ರಮೇಶ ಜಾರಕಿಹೊಳಿ ಗೈರು: ಬೆಳಗಾವಿಯಲ್ಲಿ ನಡೆದ ಎರಡನೇ ಹಂತದ ಬಿಜೆಪಿ ಜನಾಕ್ರೋಶ ಯಾತ್ರೆಗೆ ಮಾಜಿ ಸಚಿವ, ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಗೈರಾದರು. ಜನಾಕ್ರೋಶ ಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ರಮೇಶ ಜಾರಕಿಹೊಳಿ ಅವರನ್ನು ಮೊಬೈಲ್ ಮೂಲಕ ಕರೆ ಮಾಡಿ, ಸಂಪರ್ಕಿಸಲು ಯತ್ನಿಸಿದರು. ಆದರೆ, ರಮೇಶ ಜಾರಕಿಹೊಳಿ ಅವರು ಕರೆ ಸ್ವೀಕರಿಸಲಿಲ್ಲ ಎನ್ನಲಾಗಿದೆ. ಬೆಳಗಾವಿ ಜಿಲ್ಲೆಯಲ್ಲಿದ್ದರೂ ರಮೇಶ ಜಾರಕಿಹೊಳಿ ಜನಾಕ್ರೋಶ ಯಾತ್ರೆಯಿಂದ ದೂರ ಉಳಿದಿದ್ದರು.