ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಕಾಂಗ್ರೆಸ್ ಕೇವಲ ರಾಜಕೀಯ ಪಕ್ಷವಲ್ಲ. ಅದು ಜನರ ಆಸೆ-ಆಕಾಂಕ್ಷೆಗಳ ಪ್ರತಿಬಿಂಬ. ಐದು ಭರವಸೆಗಳು ಕೇವಲ ಘೋಷಣೆಗಳಲ್ಲ. ಜನಜೀವನದ ಬಾಳಿನ ಬೆಳಕು ನೀಡುವ ಕ್ರಾಂತಿಕಾರಿ ನಿರ್ಣಯಗಳು. ಶಕ್ತಿ ಯೋಜನೆಯ ಉಚಿತ ವಿದ್ಯುತ್, ಅನ್ನಭಾಗ್ಯ, ಗೃಹಲಕ್ಷ್ಮಿ, ಯುವನಿಧಿ ಹಾಗೂ ಮಹಿಳೆಯರ ಉಚಿತ ಬಸ್ ಪ್ರಯಾಣ ಇವೆಲ್ಲವೂ ಜನಜೀವನದಲ್ಲಿ ಆರ್ಥಿಕ ಭದ್ರತೆಯ ಕಂಬಗಳನ್ನು ನಿರ್ಮಿಸುವ ಸಾಧನಗಳಾಗಿವೆ ಎಂದು ಕೆಪಿಸಿಸಿ ಪ್ರಚಾರ ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ವಿನಯಕುಮಾರ ಸೊರಕೆ ಹೇಳಿದರು.ನಗರದಲ್ಲಿ ಶನಿವಾರ ನಡೆದ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ಪಕ್ಷದ ವಾಗ್ದಾನಗಳಲ್ಲ. ಇವು ಜನರ ಹಕ್ಕುಗಳ ಸಾಧನೆಗಳು. ಸಂಘಟಿತ ಹೋರಾಟದ ಮೂಲಕ ಈ ಸಂದೇಶವನ್ನು ಮನೆ ಮನೆಗೆ ತಲುಪಿಸುವುದು ಪ್ರತಿಯೊಬ್ಬ ಕಾರ್ಯಕರ್ತನ ಪವಿತ್ರ ಕರ್ತವ್ಯವೆಂದು ಹೇಳಿದರು.ಜಿಲ್ಲಾಧ್ಯಕ್ಷ ಎಸ್.ಜಿ. ನಂಜ್ಯಯನಮಠ ಮಾತನಾಡಿ, ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಹೋರಾಟ ಜನಜೀವನ ಸಮಸ್ಯೆಗಳ ಪರಿಹಾರದತ್ತ ಕೇಂದ್ರೀಕರಿಸಲಿದೆ. ರೈತ, ಕಾರ್ಮಿಕ, ಬಡ, ಹಿಂದುಳಿದವರ ಹಿತಕ್ಕಾಗಿ ಕಾಂಗ್ರೆಸ್ ಸರ್ಕಾರ ಹಲವಾರು ಕ್ರಾಂತಿಕಾರಿ ಯೋಜನೆ ಜಾರಿಗೆ ತಂದಿದೆ. ಗೃಹಲಕ್ಷ್ಮಿ, ಗ್ರಾಮ ವಿಕಾಸ, ವಿದ್ಯಾ ನೀತಿಗಳಂತಹ ಯೋಜನೆಗಳು ಜನರ ಬದುಕನ್ನು ಬದಲಾಯಿಸುತ್ತಿವೆ ಎಂದು ವಿವರಿಸಿದರು.
ಉಪಾಧ್ಯಕ್ಷ ಅಬ್ದುಲ್ ಮುನೀರ್ ಮಾತನಾಡಿ, ಪಕ್ಷದ ಹೋರಾಟಕ್ಕೆ ಯುವಕರ ಶಕ್ತಿ ಸೇರಬೇಕು. ಕಾಂಗ್ರೆಸ್ ಪಕ್ಷ ದೇಶಕ್ಕೆ ಸಂವಿಧಾನ ನೀಡಿದ ಮಹಾಪರಂಪರೆ ಹೊಂದಿದೆ. ಸಾಮಾಜಿಕ ನ್ಯಾಯ, ಸಮಾನತೆ ಹಾಗೂ ಅಭಿವೃದ್ಧಿ ಕಾಂಗ್ರೆಸ್ ಪಕ್ಷದ ಮೂಲ ಸಿದ್ಧಾಂತ. ಅದನ್ನು ಜನರ ಮನೆ ಮನೆಗೆ ತಲುಪಿಸುವ ಹೊಣೆಗಾರಿಕೆ ನಮ್ಮೆಲ್ಲರದಾಗಿದೆ ಎಂದು ಅಭಿಪ್ರಾಯಪಟ್ಟರು.ರಾಜ್ಯ ಪ್ರಚಾರ ಸಮಿತಿಯ ಮುಖ್ಯ ಸಂಯೋಜಕ ಡಾ.ಶರಣಪ್ಪ ಕೊಟಗಿ ಪ್ರಾಸ್ತಾವಿಕ ಭಾಷಣ ಮಾಡಿದರು. ಸಭೆಯಲ್ಲಿ ಪಕ್ಷದ ಸಂಘಟನಾ ಬಲವರ್ಧನೆ ಹಾಗೂ ಮುಂದಿನ ಚುನಾವಣಾ ತಂತ್ರಯೋಜನೆ ಕುರಿತು ಚರ್ಚೆ ನಡೆಯಿತು. ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ನೇಮಕಾತಿ ಆದೇಶ ಪತ್ರ ನೀಡಿ ಗೌರವಿಸಲಾಯಿತು.
ಜಿಲ್ಲಾಧ್ಯಕ್ಷ ನಾಗರಾಜ ಹದ್ಲಿ ಸ್ವಾಗತಿಸಿದರು. ಸಂಯೋಜಕರಾದ ಪಿ.ಕೆ. ನೀರಲಕಟ್ಟಿ ಮಹಾಬಳೇಶ್ವರ, ನಿಂಗನಗೌಡ ಪಾಟೀಲ, ರಾಜು ಮನ್ನಿಕೇರಿ, ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿ ಮಂಜುಳಾ ಕಮತಗಿ ವೇದಿಕೆ ಮೇಲಿದ್ದರು.ಜಿಲ್ಲಾ ಪ್ರಚಾರ ಸಮಿತಿಯ ಪದಾಧಿಕಾರಿಗಳಾದ ಮಹಾದೇವಗೌಡ ಪಾಟೀಲ, ಶ್ರೀಧರ ನೀಲನಾಯಕ, ವಾಸಿಂ ಜಾಹಗೀರದಾರ, ರಸೂಲ್‌ಸಾಬ ಮುಜಾವರ, ರಮೇಶ ತೇಲಿ, ವಿಜಯ ಮುಳ್ಳೂರ, ಲಕ್ಷ್ಮಿ ಚವ್ಹಾಣ, ನಾಗಮಲ್ಲೇಶ್ವರಿ, ಬ್ಲಾಕ್ ಅಧ್ಯಕ್ಷರಾದ ನೂರುಂದಗೌಡ ಕಲಗುಡಿ, ಕೆಎಂಎಫ್ ನಿರ್ದೇಶಕ ಸಿದ್ದಪ್ಪ ಕೋಲಾರ, ಶಂಕರ ತೋಟದ, ಬಿ.ಆರ್. ಸೊನ್ನದ, ಬಸವರಾಜ ಚಿಕ್ಕೂರಮಠ, ಶಿವಕುಮಾರ ಹಿರೇಮಠ, ಶ್ರೀಕಾಂತ ಬಟಕುರ್ಕಿ, ಮಲ್ಲನಗೌಡ ಪಾಟೀಲ, ಸಂಜು ಮೀಸಿ, ಬಸವರಾಜ ಗಲಗಲಿ, ನೇಮಕಾತಿ ಆದೇಶ ಪತ್ರ ಪಡೆದರು. ಸಭೆಯಲ್ಲಿ ಅನೇಕ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಇದ್ದರು.
ಮುಂಬರುವ ತಾಪಂ ಮತ್ತು ಜಿಪಂ ಚುನಾವಣೆಗಳು ಕಾಂಗ್ರೆಸ್ ಪಕ್ಷಕ್ಕೆ ಅತ್ಯಂತ ಪ್ರಮುಖವಾಗಿವೆ. ಈ ಚುನಾವಣೆಗಳಲ್ಲಿ ನಾವು ನಮ್ಮ ಜನಪರ ಕಾರ್ಯಕ್ರಮಗಳನ್ನು ಗ್ರಾಮಮಟ್ಟದ ಮತದಾರರಿಗೆ ತಲುಪಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ಪಂಚಾಯಿತಿ ಚುನಾವಣೆಗಳ ಜಯವೇ ಮುಂದಿನ ದೊಡ್ಡ ರಾಜಕೀಯ ಹೋರಾಟಕ್ಕೆ ಬುನಾದಿ ಆಗಲಿದೆ.- ವಿನಯಕುಮಾರ ಸೊರಕೆ ರಾಜ್ಯಾಧ್ಯಕ್ಷ ಕೆಪಿಸಿಸಿ ಪ್ರಚಾರ ಸಮಿತಿ