ಬಡವರ ಕಲ್ಯಾಣಕ್ಕಾಗಿ ಕಾಂಗ್ರೆಸ್ ಸದಾ ಸಿದ್ಧ: ಶಾಸಕ ರಘುಮೂರ್ತಿ

KannadaprabhaNewsNetwork | Published : Feb 5, 2024 1:47 AM

ಸಾರಾಂಶ

2023ರಲ್ಲಿ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರ ಚುನಾವಣಾ ಸಂದರ್ಭದಲ್ಲಿ ನೀಡಿದ ಎಲ್ಲಾ 5 ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತರುವ ಮೂಲಕ ರಾಜ್ಯದ ಬಡ ಜನರ ನೆರವಿಗೆ ಸರ್ಕಾರ ಧಾವಿಸಿದ್ದು ಸರ್ಕಾರ ಬಡವರ ಪರವಾಗಿದೆ.

ಚಳ್ಳಕೆರೆ: 2023ರಲ್ಲಿ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರ ಚುನಾವಣಾ ಸಂದರ್ಭದಲ್ಲಿ ನೀಡಿದ ಎಲ್ಲಾ 5 ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತರುವ ಮೂಲಕ ರಾಜ್ಯದ ಬಡ ಜನರ ನೆರವಿಗೆ ಸರ್ಕಾರ ಧಾವಿಸಿದ್ದು, ಸಾರ್ವಜನಿಕರು ಕಾಂಗ್ರೆಸ್ ಅನ್ನು ಚುನಾವಣೆಯಲ್ಲಿ ಬೆಂಬಲಿಸುವಂತೆ ಶಾಸಕ ಟಿ.ರಘುಮೂರ್ತಿ ತಿಳಿಸಿದರು.

ನಗರದ ಗುರುರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಚಳ್ಳಕೆರೆ ವಿಧಾನಸಭಾ ವ್ಯಾಪ್ತಿಯ ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ, ಯುವನಿಧಿ, ಶಕ್ತಿಯೋಜನೆ ಫಲಾನುಭವಿಗಳ ಜಾಗೃತಿ ಸಮಾವೇಶವನ್ನು ಗಿಡಕ್ಕೆ ನೀರು ಎರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ರಾಜ್ಯದ ಕೋಟ್ಯಾಂತರ ಜನರು ಗ್ಯಾರಂಟಿ ಯೋಜನೆಗಳ ಲಾಭವನ್ನು ಉತ್ತಮ ರೀತಿಯಲ್ಲಿ ಪಡೆಯುವ ಮೂಲಕ ಸ್ವಾವಲಂಬನೆ ಬದುಕನ್ನು ನಡೆಸುತ್ತಿದ್ದು, ಮುಂದಿನ ದಿನಗಳಲ್ಲೂ ಸಹ ಮತದಾರರು ಯಾವುದೇ ಚುನಾವಣೆ ಬರಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿದರು.

ಚಳ್ಳಕೆರೆ ಕ್ಷೇತ್ರ ವ್ಯಾಪ್ತಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಸುಮಾರು 26 ಲಕ್ಷ ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದಾರೆ. ರಾಜ್ಯದಾದ್ಯಂತ ಈವರೆಗೂ ಸುಮಾರು ೧೪೦ ಕೋಟಿ ಮಹಿಳೆಯರು ಈ ಸೌಲಭ್ಯ ಸದುಪಯೋಗ ಪಡೆದುಕೊಂಡಿದ್ದಾರೆ. ಸರ್ಕಾರ 3464 ಕೋಟಿ ರು. ಹಣವನ್ನು ಕೆಎಸ್‌ಆರ್‌ಟಿಸಿಗೆ ನೀಡಿದೆ, ಚಳ್ಳಕೆರೆ ಕೆಎಸ್‌ಆರ್‌ಟಿಸಿ ಡಿಪೋಗೆ ಸರ್ಕಾರದಿಂದ ಈಗಾಗಲೇ 10 ಕೋಟಿ ರು. ಹಣ ಸಂದಾಯವಾಗಿದೆ.

ಕ್ಷೇತ್ರ ವ್ಯಾಪ್ತಿಯಲ್ಲಿ ಗೃಹಜ್ಯೋತಿ ಯೋಜನೆಯಲ್ಲಿ 46 ಸಾವಿರ ಮನೆಗಳು ಮಂಜೂರಾಗಿದ್ದು, ತಿಂಗಳಿಗೆ 1.45 ಕೋಟಿಯಂತೆ ಈವರೆಗೆ 10 ಕೋಟಿ ರು. ಹಣ ಇಲಾಖೆಗೆ ಸಂದಾಯವಾಗಿದೆ. ಗೃಹಲಕ್ಷ್ಮಿ ಯೋಜನೆಯಲ್ಲಿ 39 ಕೋಟಿ ರು. ಕ್ಷೇತ್ರಕ್ಕೆ ಬಂದಿದೆ. ಎಲ್ಲಾ ಯೋಜನೆಗಳಲ್ಲೂ ಶೇ.೯೮ರ ಸಾಧನೆ ಮಾಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ರೇಹಾನ್‌ ಪಾಷ, ಇಒ ಶಶಿಧರ, ಪೌರಾಯುಕ್ತ ಸಿ.ಚಂದ್ರಪ್ಪ, ಸಿಡಿಪಿಒ ಹರಿಪ್ರಸಾದ್, ಬೆಸ್ಕಾಂ ಎಇಇ ರಾಜು, ಆಹಾರ ಇಲಾಖೆಯ ವೀರಣ್ಣ, ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ಪ್ರಭು, ನಗರಸಭಾ ಸದಸ್ಯರಾದ ಎಂ.ಜೆ.ರಾಘವೇಂದ್ರ, ಕೆ.ವೀರಭದ್ರಪ್ಪ, ಮಂಜುಳಾ, ಸುಮಕ್ಕ, ಕವಿತಾ, ಸುಜತಾ, ಸುಮ, ಜೈತುಂಬಿ, ಮುಖಂಡರಾದ ಎಂ.ಚೇತನ್‌ಕುಮಾರ್, ಆರ್.ಪ್ರಸನ್ನ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.

Share this article