ಕನ್ನಡಪ್ರಭ ವಾರ್ತೆ ಬೀದರ್
ಕೇಂದ್ರ ಸರ್ಕಾರದಿಂದ ಮುಂಗಾರು ಬಿತ್ತನೆಗಾಗಿ ರಸಗೊಬ್ಬರ ಕಳುಹಿಸಿದರೂ ರಾಜ್ಯ ಕಾಂಗ್ರೆಸ್ ಸರ್ಕಾರ ಕೃತಕ ಅಭಾವ ಸೃಷ್ಟಿಸಿ ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿದೆ ಇದನ್ನು ಕೂಡಲೇ ನಿಲ್ಲಿಸಬೇಕು, ರೈತರಿಗೆ ಸಮರ್ಪಕವಾಗಿ ರಸಗೊಬ್ಬರ ವಿತರಣೆ ಮಾಡಬೇಕೆಂದು ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ ಆಗ್ರಹಿಸಿದರು.ಅವರು ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರೈತ ವಿರೋಧಿ ಸರ್ಕಾರವಾಗಿದೆ. ಕೇಂದ್ರವು ಯೂರಿಯಾ ರಸಗೊಬ್ಬರವನ್ನು 8.73 ಲಕ್ಷ ಮೆಟ್ರಿಕ್ ಟನ್, ಡಿಎಪಿ 2.87 ಲಕ್ಷ ಮೆಟ್ರಿಕ್ ಟನ್, ಎನ್‌ಪಿಕೆಎಸ್ 12.41 ಲಕ್ಷ ಮೆ. ಟನ್ ರಸಗೊಬ್ಬರ ರಾಜ್ಯಕ್ಕೆ ಕಳುಹಿಸಿದೆ. ಅದರಲ್ಲಿ ಬೀದರ್ ಜಿಲ್ಲೆಗೆ ಯೂರಿಯಾ 13727 ಮೆ.ಟನ್, ಡಿಎಪಿ 13211 ಮೆ.ಟನ್ ಕಳುಹಿಸಿದೆ. ಅದರಲ್ಲಿ 8139 ಮೆ. ಟನ್ ಯೂರಿಯಾ ಮಾರಾಟ ಮಾಡಲಾಗಿದೆ. ಡಿಎಪಿ 7274 ಮೆ.ಟನ್ ರಸಗೊಬ್ಬರ ಮಾರಾಟ ಮಾಡಲಾಗಿದೆ. ಯೂರಿಯಾ ಜಿಲ್ಲೆಯಲ್ಲಿ ಇನ್ನೂ 1363 ಮೆ. ಟನ್ ಲಭ್ಯವಿದೆ. ಡಿ.ಎ.ಪಿ. 2047 ಮೆ. ಟನ್ ಜಿಲ್ಲೆಯಲ್ಲಿ ಲಭ್ಯವಿದೆ ಆದರೂ ಕೂಡ ರಾಜ್ಯ ಸರ್ಕಾರ ಕೃತಕ ಅಭಾವ ಸೃಷ್ಟಿಸಿ ರೈತರಿಗೆ ತೊಂದರೆ ನೀಡುತ್ತಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರೈತರ ಮಕ್ಕಳಿಗೆ ಬಿಜೆಪಿ ಈ ಹಿಂದೆ ನೀಡುತ್ತಿದ್ದ ವಿದ್ಯಾನಿಧಿ ವಿದ್ಯಾರ್ಥಿ ವೇತನ ಬಂದ್ ಮಾಡಿದೆ. 52 ಲಕ್ಷ ರೈತರಿಗೆ ವರ್ಷದಲ್ಲಿ 4 ಸಾವಿರ ಹಣ ಬಿಜೆಪಿ ಸರ್ಕಾರ ನೀಡುತ್ತಿತ್ತು ಅದನ್ನೂ ಕಾಂಗ್ರೆಸ್ ಬಂದ್ ಮಾಡಿದೆ. ಕೇಂದ್ರದಿಂದ ಬಂದ ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ಹಣ ರಾಜ್ಯ ಸರ್ಕಾರ ರೈತರಿಗೆ ಕೊಡಲಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ 3400 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತರ ಬಾವಿ, ಬೋರ್ವೆಲ್‌ಗೆ ಕೂಡಿಸುವ ಟ್ರಾನ್ಸ್ ಫಾರ್ಮರ್ ಬಿಜೆಪಿ ಅವಧಿಯಲ್ಲಿ ಕೇವಲ 25 ಸಾವಿರಕ್ಕೆ ಮಾತ್ರ ನೀಡಲಾಗುತಿತ್ತು ಕಾಂಗ್ರೆಸ್ ಸರ್ಕಾರದಲ್ಲಿ 3 ಲಕ್ಷಕ್ಕೆ ಏರಿಸಿದೆ ಎಂದರು.ಇದೇ ವೇಳೆ ಮಾಜಿ ಬುಡಾ ಅಧ್ಯಕ್ಷ ಬಾಬು ವಾಲಿ, ಪ್ರಮುಖರಾದ ಶಿವರಾಜ ಅಲ್ಮಾಜೆ, ಶ್ರೀನಿವಾಸ ಚೌಧರಿ, ಸಂತೋಷ ರೆಡ್ಡಿ ಆಣದೂರ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.