ಪಾಕ್ ಸರ್ಕಾರದ ಮಿತ್ರ ಪಕ್ಷದಂತೆ ವರ್ತಿಸುತ್ತಿರುವ ಕಾಂಗ್ರೆಸ್‌: ಎನ್‌. ರವಿಕುಮಾರ್

KannadaprabhaNewsNetwork | Published : May 22, 2025 12:56 AM
ಕಾಂಗ್ರೆಸ್‌ ನಾಯಕರು ರಾಜ್ಯವನ್ನು ಪಾಕಿಸ್ತಾನ ರೀತಿ ಮಾಡುತ್ತಿದ್ದಾರೆ. ಪಹಲ್ಗಾಮ್ ಘಟನೆ ಸಂಭವಿಸಿದ ಬಳಿಕ ರಾಜ್ಯದಲ್ಲಿ ಫೇಮಸ್ ಇರದ ಸಿದ್ದು ಸರ್ಕಾರ ಪಾಕಿಸ್ತಾನದಲ್ಲಿ ಬಹಳಷ್ಟು ಫೇಮಸ್ ಆಗಿಬಿಟ್ಟಿದೆ ಎಂದು ವಿಧಾನಪರಿಷತ್‌ ಸದಸ್ಯ, ಬಿಜೆಪಿ ನಾಯಕ ಎನ್‌. ರವಿಕುಮಾರ್‌ ವ್ಯಂಗ್ಯವಾಡಿದರು.
Follow Us

ಹಾವೇರಿ: ನಮ್ಮ ಪಾಕಿಸ್ತಾನ ಎಂದು ಹೇಳುತ್ತಿರುವ ಕಾಂಗ್ರೆಸ್‌ ನಾಯಕರು ಕರ್ನಾಟಕವನ್ನು ಪಾಕಿಸ್ತಾನದ ರೀತಿ ಮಾಡುತ್ತಿದ್ದಾರೆ. ಪಾಕಿಸ್ತಾನ ಸರ್ಕಾರದ ಮಿತ್ರ ಪಕ್ಷದಂತೆ ಕಾಂಗ್ರೆಸ್‌ ವರ್ತಿಸುತ್ತಿದೆ ಎಂದು ವಿಧಾನಪರಿಷತ್‌ ಸದಸ್ಯ, ಬಿಜೆಪಿ ನಾಯಕ ಎನ್‌. ರವಿಕುಮಾರ್‌ ಆರೋಪಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ರಾಜ್ಯ ಕಾಂಗ್ರೆಸ್‌ ಸರ್ಕಾರದ ವೈಫಲ್ಯಗಳ ಚಾರ್ಜ್‌ಶೀಟ್‌ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಾಂಗ್ರೆಸ್‌ ಸಾಧನಾ ಸಮಾವೇಶದಲ್ಲಿ ನಮ್ಮ ಪಾಕಿಸ್ತಾನ ಎಂದು ಹೇಳಿದ್ದಾರೆ. ಪಾಕಿಸ್ತಾನ ಮುಟ್ಟಿ ನೋಡಿಕೊಳ್ಳುವ ರೀತಿಯಲ್ಲಿ ಭಾರತೀಯ ಸೇನೆ ದಾಳಿ ನಡೆಸಿದರೂ ಖರ್ಗೆಯವರು ಚುಟ್ ಪುಟ್‌ ಎಂದು ಹೇಳುತ್ತಾರೆ. ಕಾಂಗ್ರೆಸ್‌ ನಾಯಕರು ರಾಜ್ಯವನ್ನು ಪಾಕಿಸ್ತಾನ ರೀತಿ ಮಾಡುತ್ತಿದ್ದಾರೆ. ಪಹಲ್ಗಾಮ್ ಘಟನೆ ಸಂಭವಿಸಿದ ಬಳಿಕ ರಾಜ್ಯದಲ್ಲಿ ಫೇಮಸ್ ಇರದ ಸಿದ್ದು ಸರ್ಕಾರ ಪಾಕಿಸ್ತಾನದಲ್ಲಿ ಬಹಳಷ್ಟು ಫೇಮಸ್ ಆಗಿಬಿಟ್ಟಿದೆ ಎಂದು ವ್ಯಂಗ್ಯವಾಡಿದರು.

ಸಿದ್ದರಾಮಯ್ಯ ಸಿಎಂ ಆದರೆ ಏನೋ ಮಾಡುತ್ತಾರೆ ಎಂದು ಜನರು ನಂಬಿಕೊಂಡಿದ್ದರು. ಆದರೆ, ಈಗ ಹಿಂದೂ ವಿರೋಧಿ ಅಲ್ಪಸಂಖ್ಯಾತರ ಸರ್ಕಾರವಾಗಿದೆ. ಹಿಂದೂಗಳ ಜಮೀನನ್ನು ವಕ್ಫ್‌ ಹೆಸರಿನಲ್ಲಿ ಮುಸ್ಲಿಮರಿಗೆ ನೀಡಿ ಓಲೈಕೆ ರಾಜಕಾರಣ ಮಾಡುತ್ತಿದೆ. ವಿಧಾನಸೌಧದಲ್ಲಿ ಪಾಕ್‌ ಜಿಂದಾಬಾದ್‌ ಎಂದರೂ ಕ್ರಮವಾಗಿಲ್ಲ. ಮದರಸಾ, ಮಸೀದಿಗಳ ಮೌಲ್ವಿಗಳಿಗೆ ₹6 ಸಾವಿರ ಸಂಬಳ ನೀಡುತ್ತಿದ್ದಾರೆ. ಅದೇ ಹಿಂದೂ ದೇವಸ್ಥಾನಗಳ ಅರ್ಚಕರಿಗೆ ಏನೂ ಇಲ್ಲ. ಗುತ್ತಿಗೆಯಲ್ಲಿ ಅಲ್ಪಸಂಖ್ಯಾತರಿಗೆ ಶೇ. 4 ಮೀಸಲಾತಿ ನೀಡುತ್ತಿದ್ದಾರೆ. ಆ ಮೂಲಕ ಸಂವಿಧಾನ ವಿರೋಧಿ ನೀತಿಯನ್ನು ಕಾಂಗ್ರೆಸ್‌ ಅನುಸರಿಸುತ್ತಿದೆ ಎಂದು ಆಪಾದಿಸಿದರು.

ಕಾಂಗ್ರೆಸ್ಸಿನವರು ಚುನಾವಣೆ ಪೂರ್ವದಲ್ಲಿ ನೀಡಿದ್ದ 593 ಭರವಸೆಗಳಲ್ಲಿ 242 ಭರವಸೆ ಈಡೇರಿಸಿದ್ದೇವೆ ಹಾಗೂ ಐದು ಗ್ಯಾರಂಟಿಗಳನ್ನು ಈಡೇರಿಸಿದ್ದೇವೆ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ. ಯಾರಿಗಾದರೂ ಸಮರ್ಪಕವಾಗಿ ಐದು ಗ್ಯಾರಂಟಿಗಳು ಪ್ರತಿ ತಿಂಗಳು ತಲುಪಿದ್ದಾವಾ? ಎಂದು ಪ್ರಶ್ನಿಸಿದ ಅವರು, ಹಾಗಾದರೆ ಹೊಸಪೇಟೆಯಲ್ಲಿ ಯಾವ ಪುರುಷಾರ್ಥಕ್ಕೆ ಸಾಧನಾ ಸಮಾವೇಶ ಮಾಡಿದ್ದಾರೆ. ಜನಸಾಮಾನ್ಯರ ತೆರಿಗೆ ದುಡ್ಡನ್ನು ಪೋಲು ಮಾಡಿ ರಾಜ್ಯದ ಜನತೆಗೆ ಮಹಾದ್ರೋಹ ಎಸಗುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಅಲ್ಪಸಂಖ್ಯಾತರ ಪರ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ 60 ಪರ್ಸೆಂಟ್ ಕಮಿಷನ್ ಸರ್ಕಾರವಾಗಿದೆ. ಗುತ್ತಿಗೆದಾರರ ಸಂಘದ ಹಿಂದಿನ ಅಧ್ಯಕ್ಷ ಕೆಂಪಣ್ಣ ಅವರು ನಮ್ಮ ಸರ್ಕಾರದ ಮೇಲೆ 40 ಪರ್ಸೆಂಟ್ ಸರ್ಕಾರ ಎಂದು ಆರೋಪ ಮಾಡಿದ್ದರು. ಯಾವುದಾದರೂ ಸಚಿವರು ಕಮಿಷನ್ ಪಡೆದುಕೊಂಡಿದ್ದಾರಾ ಎಂಬುದನ್ನು ಸಾಬೀತುಪಡಿಸಿಲಿ ಎಂದು ಸವಾಲೆಸೆದ ಅವರು, ಈಗಿನ ಗುತ್ತಿಗೆದಾರರ ಸಂಘದವರು ಸ್ವತಃ ಡಿಸಿಎಂಗೆ ಮನವಿ ಕೊಟ್ಟಿದ್ದಾರೆ. ಕಾಂಗ್ರೆಸ್‌ನವರು ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.ರಾಜ್ಯ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ. ಅಕಾರಕ್ಕೆ ಬಂದ ಎರಡೇ ವರ್ಷದಲ್ಲಿ ₹3,06,986 ಕೋಟಿ ಸಾಲ ಮಾಡಿದೆ. ಎಸ್ಸಿ ಎಸ್ಟಿ ಕಲ್ಯಾಣಕ್ಕೆ ಮೀಸಲಿಟ್ಟ ₹38,800 ಕೋಟಿ ಹಣವನ್ನು ಗ್ಯಾರಂಟಿಗಳಿಗೆ ವಿನಿಯೋಗಿಸಿಕೊಂಡಿದೆ. ಇದು ಎಸ್ಸಿ ಎಸ್ಟಿ ವಿರೋಧಿ ಸರ್ಕಾರ. ಸಾಂವಿಧಾನಿಕವಾಗಿ, ಕಾನೂನಾತ್ಮಕ ವ್ಯಭಿಚಾರ ನಡೆಸಿರುವ ಸರ್ಕಾರ ದುರ್ಬಳಕೆ ಮಾಡಿಕೊಂಡ ಹಣವನ್ನು ವಾಪಸ್ ಕೊಡಬೇಕು ಎಂದು ಆಗ್ರಹಿಸಿದರು. ಮಾಜಿ ಕೃಷಿ ಸಚಿವ ಬಿ.ಸಿ. ಪಾಟೀಲ ಮಾತನಾಡಿ, ಸಾಧನಾ ಸಮಾವೇಶದಲ್ಲಿ ನಮ್ಮ ಪಾಕಿಸ್ತಾನ ಎಂದು ಖರ್ಗೆ ರೋಷಾವೇಶವಾಗಿ ಹೇಳಿದ್ದಾರೆ. ಕಾಂಗ್ರೆಸ್‌ನವರ ಹೃದಯ ಬಗೆದರೆ ಪಾಕಿಸ್ತಾನ ನಾಯಕರು ಕಾಣುತ್ತಾರೆ. ಆಪರೇಷನ್ ಸಿಂದೂರ ಟೀಕೆ ಮಾಡುವ ಉದ್ದೇಶದಿಂದ ಹಾಗೂ ಪಾಕಿಸ್ತಾನ ಬೆಂಬಲಿಸುವ ಸಮಾವೇಶ ಮಾಡಿದೆ. ಎಲ್ಲ ವಲಯದಲ್ಲಿ ಬೆಲೆ ಏರಿಕೆ ಮಾಡಿ ಹಗಲುದರೋಡೆ ನಡೆಸುತ್ತಿದ್ದಾರೆ. ಇದೊಂದು ಹಗಲುದರೋಡೆ ಸರ್ಕಾರ ಆಗಿದೆ ಎಂದು ಆರೋಪಿಸಿದರು.

ರಾಜ್ಯದಲ್ಲಿರುವುದು ಜಾಹೀರಾತಿನ ಸರ್ಕಾರವಾಗಿದ್ದು, ಮಾಧ್ಯಮ ಜಾಹೀರಾತಿನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಪೋಟೋ ಹಾಕಿರುವುದು ಶಿಷ್ಟಾಚಾರ ಉಲ್ಲಂಘನೆಯಾಗುತ್ತಿದೆ. ಕಾಂಗ್ರೆಸ್‌ನ ಸಾಧನಾ ಸಮಾವೇಶ ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರ ಸಾಧನಾ ಸಮಾವೇಶ ಅಲ್ಲ. ಈ ಜಾಹೀರಾತಿನ ಹಣವನ್ನು ಕಾಂಗ್ರೆಸ್ ಪಕ್ಷದಿಂದಲೇ ಕಟ್ಟಿಸಬೇಕು ಎಂದು ಒತ್ತಾಯಿಸಿದರು.ಬಿಜೆಪಿ ರಾಜ್ಯ ಉಪಾಧ್ಯಕ್ಷ ಡಾ. ಬಸವರಾಜ ಕೇಲಗಾರ, ಮಾಜಿ ಶಾಸಕರಾದ ವಿರೂಪಾಕ್ಷಪ್ಪ ಬಳ್ಳಾರಿ, ಶಿವರಾಜ ಸಜ್ಜನರ, ಗವಿಸಿದ್ದಪ್ಪ ದ್ಯಾಮಣ್ಣವರ, ನಿಕಟಪೂರ್ವ ಜಿಲ್ಲಾಧ್ಯಕ್ಷ ಸಿದ್ಧರಾಜ ಕಲಕೋಟಿ, ಸಂತೋಷ ಆಲದಕಟ್ಟಿ, ಮೃತ್ಯುಂಜಯ ಮುಷ್ಠಿ ಇತರರು ಇದ್ದರು.