ಶಿವಾನಂದ ಗೊಂಬಿ
ಪಶ್ಚಿಮ ಪದವೀಧರ ಕ್ಷೇತ್ರದಿಂದ ಪರಿಷತ್‌ಗೆ ನಡೆಯುವ ಚುನಾವಣೆಗೆ 11 ತಿಂಗಳು ಬಾಕಿಯಿರುವಾಗಲೇ ತನ್ನ ಅಭ್ಯರ್ಥಿಯನ್ನು ಅಂತಿಮಗೊಳಿಸಿರುವ ಕಾಂಗ್ರೆಸ್ ಹೈಕಮಾಂಡ್‌ಗೆ ಟಿಕೆಟ್ ವಂಚಿತರನ್ನು ಸಮಾಧಾನ ಪಡಿಸುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಹೇಗಾದರೂ ಮಾಡಿ ಕ್ಷೇತ್ರವನ್ನು ವಶ ಪಡಿಸಿಕೊಳ್ಳಬೇಕೆಂಬ ಇರಾದೆಯಲ್ಲಿದ್ದ ಕಾಂಗ್ರೆಸ್‌ಗೆ ಭಿನ್ನಮತ ಸುಡುತ್ತಿದೆ.
ಆಗಿರುವುದೇನು?:ಉತ್ತರ ಕನ್ನಡ, ಧಾರವಾಡ, ಹಾವೇರಿ, ಗದಗ ಜಿಲ್ಲೆಗಳನ್ನೊಳಗೊಂಡ ಪಶ್ಚಿಮ ಪದವೀಧರ ಕ್ಷೇತ್ರ 2026ರ ಅಕ್ಟೋಬರ್‌ನಲ್ಲಿ ಅವಧಿ ಮುಕ್ತವಾಗಲಿದೆ. ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ. ಚುನಾವಣೆ ಘೋಷಣೆಗೂ ಮುನ್ನವೇ ತನ್ನ ಅಭ್ಯರ್ಥಿಯನ್ನಾಗಿ ವಿಧಾನ ಪರಿಷತ್ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ ಅವರನ್ನು ಅಖೈರು ಮಾಡಿದೆ. ಅವರು ಈಗಿನಿಂದಲೇ ನಾಲ್ಕು ಜಿಲ್ಲೆಗಳಲ್ಲಿ ಸುತ್ತಾಡುತ್ತಾ ಚುನಾವಣೆ ಪ್ರಚಾರ ಶುರು ಹಚ್ಚಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಇಷ್ಟು ಬೇಗ ಅಭ್ಯರ್ಥಿಯನ್ನು ಅಖೈರುಗೊಳಿಸಿರುವ ಕಾಂಗ್ರೆಸ್, ಹೊಸ ತಂತ್ರಗಾರಿಕೆಗೆ ಮುಂದಾಗಿದೆ. ಆದರೆ, ಒಂದೂವರೆ ಡಜನ್‌ಗಟ್ಟಲೇ ಇದ್ದ ಆಕಾಂಕ್ಷಿಗಳಲ್ಲಿ ಇದು ತೀವ್ರ ಅಸಮಾಧಾನವನ್ನುಂಟು ಮಾಡಿದೆ. ಅದರಲ್ಲಿ ಒಂದಿಬ್ಬರು ಬಹಿರಂಗವಾಗಿಯೇ ಪಕ್ಷಕ್ಕೆ ಸಡ್ಡು ಹೊಡೆಯುವ ಸಂದೇಶವನ್ನು ರವಾನಿಸುವ ಮೂಲಕ ಎಚ್ಚರಿಕೆಯನ್ನೇ ನೀಡಿದ್ದಾರೆ.
ಕಳೆದ ಬಾರಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಪಡೆದು ಪರಾಭವಗೊಂಡಿದ್ದ ಆರ್.ಎಂ. ಕುಬೇರಪ್ಪ ಅವರಿಗೆ ಇದು 5ನೇ ಚುನಾವಣೆ. ಎರಡು ಬಾರಿ ಪಶ್ಚಿಮ ಪದವೀಧರ ಕ್ಷೇತ್ರವಾಗಿದ್ದರೆ, ಮೂರು ಬಾರಿ ಶಿಕ್ಷಕರ ಕ್ಷೇತ್ರದಿಂದ ಅದೃಷ್ಟ ಪರೀಕ್ಷಿಸಿದ್ದರು. ಆದರೆ ಅದೃಷ್ಟ ಒಲಿಯಲಿಲ್ಲ. ಕಳೆದ ಬಾರಿ ಬಿಜೆಪಿ ಸರ್ಕಾರವಿದ್ದಾಗ
ಕಳೆದ ಬಾರಿ ಜೆಡಿಎಸ್ ಬೆಂಬಲದೊಂದಿಗೆ ಪಕ್ಷೇತರರಾಗಿ ಕಣಕ್ಕಿಳಿದು ಪರಾಭವಗೊಂಡಿರುವ ಬಸವರಾಜ ಗುರಿಕಾರ ಇದೀಗ ಕಾಂಗ್ರೆಸ್‌ನಲ್ಲಿದ್ದಾರೆ. ಕೆಪಿಸಿಸಿ ಶಿಕ್ಷಕರ ವಿಭಾಗದ ಅಧ್ಯಕ್ಷರೂ ಆಗಿರುವ ಅವರು ಈ ಸಲ ತಮಗೆ ಗೆಲ್ಲುವ ಅವಕಾಶವಿತ್ತು. ಆದರೆ, ಪಕ್ಷ ಸರಿಯಾಗಿ ಪರಾಮರ್ಶಿಸದೆ ಟಿಕೆಟ್ ಘೋಷಿಸಿದೆ. ಮತ್ತೊಮ್ಮೆ ಪರಿಶೀಲಿಸಿ ಟಿಕೆಟ್ ಬಗ್ಗೆ ಅಂತಿಮ ನಿರ್ಣಯ ಕೈಗೊಳ್ಳಬೇಕು. ಈ ಸಂಬಂಧ ತಾವೂ ಹೈಕಮಾಂಡ್ ಭೇಟಿ ಮಾಡಿ ಮನವರಿಕೆ ಮಾಡಿಕೊಡುತ್ತೇವೆ ಎನ್ನತ್ತಾರೆ ಗುರಿಕಾರ.
ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದು ಈ ಬಾರಿ ಟಿಕೆಟ್ ಸಿಗುತ್ತದೆ ಎಂದು ಭರವಸೆ ಇಟ್ಟುಕೊಂಡಿದ್ದೆ. ಆದರೆ, ಇದೀಗ ಮತ್ತೊಬ್ಬರನ್ನು ಘೋಷಿಸಿದ್ದು ನಾಲ್ಕು ಜಿಲ್ಲೆಗಳ ಕಾರ್ಯಕರ್ತರೊಂದಿಗೆ ಚರ್ಚಿಸಿ ಮುಂದಿನ ನಿರ್ಣಯಕೈಗೊಳ್ಳುತ್ತೇನೆ.
ಬಸವರಾಜ ಗುರಿಕಾರ, ಟಿಕೆಟ್ ವಂಚಿತ ಆಕಾಂಕ್ಷಿ