ಶಿವಮೊಗ್ಗ: ಆರ್‌ಎಸ್‌ಎಸ್ ಸಂಘಟನೆ ಸುದ್ದಿಗೆ ಬಂದರೆ ಕಾಂಗ್ರೆಸ್ ನಿರ್ನಾಮವಾಗಲಿದೆ ಎಂದು ರಾಷ್ಟ್ರಭಕ್ತ ಬಳಗದ ಸಂಚಾಲಕ ಕೆ.ಎಸ್.ಈಶ್ವರಪ್ಪ ಕಾಂಗ್ರೆಸ್ ನಾಯಕರಿಗೆ ಎಚ್ಚರಿಕೆ ನೀಡಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ನ ಪ್ರಿಯಾಂಕ್ ಖರ್ಗೆ, ಬಿ.ಕೆ.ಹರಿಪ್ರಸಾದ್ ಮುಂತಾದವರು ಆರ್‌ಎಸ್‌ಎಸ್ ಚಟುವಟಿಕೆಗಳನ್ನು ಸರ್ಕಾರಿ ಜಾಗಗಳಲ್ಲಿ ನಿಷೇಧಿಸಬೇಕು ಎಂದು ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ಇವರ ಈ ಹೇಳಿಕೆಗಳು ಹುಚ್ಚು ಹೇಳಿಕೆಗಳಾಗಿವೆ. ಆರ್‌ಎಸ್‌ಎಸ್ ಸುದ್ದಿಗೆ ತಾಕತ್ತಿದ್ದರೆ ಬನ್ನಿ ಅದನ್ನು ನಿಷೇಧಿಸಿ ನೋಡೋಣ ಎಂದು ಸವಾಲು ಹಾಕಿದರು.ಆರ್‌ಎಸ್‌ಎಸ್‌ಗೆ ತನ್ನದೇ ಆದ ಪ್ರಾಮುಖ್ಯತೆ ಇದೆ. ಅದು 100 ವರ್ಷಗಳನ್ನು ಪೂರೈಸಿದೆ. ದಿಲ್ಲಿಯಿಂದ ಹಳ್ಳಿಯವರೆಗೆ ಕೋಟ್ಯಾಂತರ ಯುವಕರು, ಆರ್‌ಎಸ್‌ಎಸ್ ಮೂಲಕ ರಾಷ್ಟ್ರ ಪ್ರೇಮವನ್ನು ಬೆಳೆಸಿಕೊಳ್ಳುತ್ತಿದ್ದಾರೆ. ಇದು ಒಂದು ವಿಶ್ವರೂಪಿ ದರ್ಶನ ನೀಡುತ್ತದೆ. 1932ರ ಭಾರತ-ಚೀನಾ ಯುದ್ಧದಲ್ಲಿ ಹೋರಾಡಿದ ಸೈನಿಕರಿಗೆ ನೆರವಾಗುವುದರಿಂದ ಹಿಡಿದು, ನೈಸರ್ಗಿಕ ವಿಕೋಪಗಳು, ಅವಘಡಗಳು ಉಂಟಾದಾಗ ಸಂಘವೇ ಸೇವೆ ನೀಡುತ್ತದೆ. ಈ ಸೇವೆ ಆರ್‌ಎಸ್‌ಎಸ್ ಸ್ವಯಂಸೇವಕರಿಗೆ ರಕ್ತಗತವಾಗಿದೆ ಎಂದು ತಿಳಿಸಿದರು.
ಸುಪ್ರೀಂಕೋರ್ಟ್ ಕೂಡ ತನ್ನ ಹಲವು ತೀರ್ಪುಗಳಲ್ಲಿ ಆರ್‌ಎಸ್‌ಎಸ್ ಸಕ್ರೀಯವಾಗಿರುವುದರಿಂದಲೇ ಹಿಂದೂ ಸಂಸ್ಕೃತಿ ರಕ್ಷಣೆಯಾಗುತ್ತಿದೆ ಎಂದಿದೆ. ಹಿಂದೂ ಧರ್ಮ ಎನ್ನುವುದು ಅದೊಂದು ಜೀವನ ಕ್ರಮವಾಗಿದೆ. ಆ ತತ್ವದ ಅಡಿಯಲ್ಲಯೇ ಆರ್‌ಎಸ್‌ಎಸ್ ತನ್ನ ಕಾರ್ಯಚಟುವಟಿಕೆಯನ್ನು ವಿಸ್ತರಿಸುತ್ತದೆ. ಇಡೀ ಪ್ರಪಂಚವೇ ಆರ್‌ಎಸ್‌ಎಸ್ ಸಂಘಟನೆಯನ್ನು ಮೆಚ್ಚುತ್ತಿದೆ. ಹೀಗಿರುವಾಗ ಕರ್ನಾಟಕದ ಕೆಲವು ಮಂತ್ರಿಗಳು ಹುಚ್ಚು ಹುಚ್ಚಾಗಿ ಮಾತನಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಆರ್‌ಎಸ್‌ಎಸ್‌ನಿಂದ ಬಂದ ಅಟಲ್ ಬಿಹಾರಿ ವಾಜಪೇಯಿ, ನರೇಂದ್ರ ಮೋದಿ ಮುಂತಾದವರು ಈ ದೇಶದ ಪ್ರಧಾನ ಮಂತ್ರಿಯಾಗಿದ್ದಾರೆ. ರಾಷ್ಟ್ರಪತಿ ಉಪರಾಷ್ಟ್ರಪತಿಗಳೂ ಆಗಿದ್ದಾರೆ. ಆರ್‌ಎಸ್‌ಎಸ್‌ನಿಂದ ಪಾಠ ಕಲಿತ ನಾಯಕರುಗಳು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ, ಏಕರೂಪ ಸಂಹಿತೆ, ೩೭೦ ಕಾಯ್ದೆಜಾರಿ ಮುಂತಾದ ಹಲವು ನಿರ್ಣಯಗಳನ್ನು ತೆಗೆದುಕೊಳ್ಳಲು ಸಾಧ್ಯವಾಗಿದೆ ಎಂದರು.
ಈ ಹಿಂದಿನ ಪ್ರಧಾನ ಮಂತ್ರಿಗಳಾಗಿದ್ದ ನೆಹರೂ, ಇಂದಿರಾಗಾಂಧಿಯವರು ಸಂಘವನ್ನು ನಿಷೇಧಿಸಲು ಹೋಗಿ ಮುಖಭಂಗಕ್ಕೆ ಒಳಗಾಗಿದ್ದನ್ನು ಪಿಯಾಂಕ್ ಖರ್ಗೆ, ಹರಿಪ್ರಸಾದ್ ಮರೆತಂತೆ ಇದೆ. ಪ್ರಿಯಾಂಕ್ ಖರ್ಗೆ ಮುಖ್ಯಮಂತಿಗಳಿಗೆ ಪತ್ರ ಬರೆದಿದ್ದನ್ನು ಸಿದ್ದರಾಮಯ್ಯ ಅವರು ಹರಿದು ಬಿಸಾಕಬೇಕಿತ್ತು. ಆದರೆ ಮುಖ್ಯ ಕಾರ್ಯದರ್ಶಿಗಳಿಗೆ ಕಳುಹಿಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿರುವುದು ಅವರ ಬುದ್ಧಿಗೇಡಿತನವನ್ನು ತೋರಿಸುತ್ತದೆ, ಮುಖ್ಯಮಂತ್ರಿ ಹುದ್ದೆ ಕಳೆಯಲೆಂದೇ ಖರ್ಗೆ ಈ ಉಪಾಯ ಹೂಡಿದ್ದಾರೆ ಇದನ್ನು ಸಿದ್ದರಾಮಯ್ಯ ಅರಿತುಕೊಂಡು ಖರ್ಗೆ ಕರೆದು ಛೀಮಾರಿ ಹಾಕಬೇಕು ಎಂದು ಆಗ್ರಹಿಸಿದರು.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆರ್‌ಎಸ್‌ಎಸ್ ಸುದ್ದಿಗೆ ಬಂದರೆ ಅಧಿಕಾರವನ್ನು ಕಳೆದುಕೊಳ್ಳುತ್ತಾರೆ. ಈಗಾಗಲೇ ಕಾಂಗೆಸ್ ಇಡೀ ದೇಶದಲ್ಲಿ ಜನರಿಂದ ತಿರಸ್ಕೃತವಾಗಿದೆ. ಕರ್ನಾಟಕ ಸೇರಿದಂತೆ ಒಂದೆರಡು ರಾಜ್ಯಗಳಲ್ಲಿ ಅಧಿಕಾರದಲ್ಲಿದೆ. ಇಂತಹ ಹುಚ್ಚಾಟದ ನಿರ್ಧಾರಗಳನ್ನು ತೆಗೆದುಕೊಂಡರೆ ಕಾಂಗ್ರೆಸ್ ನಿರ್ನಾಮವಾಗುವುದು ಖಂಡಿತ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಮಹಾಲಿಂಗಯ್ಯಶಾಸ್ತ್ರೀ, ಈ.ವಿಶ್ವಾಸ್, ಕುಬೇರಪ್ಪ, ಚನ್ನಬಸಪ್ಪ, ಬಾಲು ಇತರರಿದ್ದರು.