ಕಾರವಾರ: ಕಾರವಾರ ಶಾಸಕ ಸತೀಶ ಸೈಲ್ ಅಪರಾಧಿ ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪು ನೀಡಿರುವುದು ಕಾಂಗ್ರೆಸ್ ಪಕ್ಷವನ್ನು ತೀವ್ರ ಮುಜುಗರಕ್ಕೀಡುಮಾಡಿದೆ. ಈ ಹಿಂದೆ ಸೈಲ್ ಶಾಸಕರಾಗಿದ್ದ ಸಂದರ್ಭದಲ್ಲಿ ಸುಮಾರು ಒಂದೂವರೆ ವರ್ಷ ಕಾರಾಗೃಹದಲ್ಲಿದ್ದರೂ ಆಗ ಆರೋಪಿ ಎಂದಷ್ಟೇ ಪರಿಗಣಿಸಲ್ಪಟ್ಟಿದ್ದರು. ಈಗ ಆರು ಪ್ರಕರಣದಲ್ಲಿ ಅವರು ದೋಷಿ ಎಂದು ಆದೇಶದಲ್ಲಿ ತಿಳಿಸಿರುವುದು ಹಾಗೂ ಸಿಬಿಐ ಅವರನ್ನು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿರುವುದು ಕಾಂಗ್ರೆಸ್ ಹಾಗೂ ಸೈಲ್ ಅಭಿಮಾನಿಗಳಿಗೆ ಆತಂಕ ಮೂಡಿಸಿದೆ. ಸೈಲ್ ಅವರಿಗೆ ಶಿಕ್ಷೆಯ ಪ್ರಮಾಣ ಶನಿವಾರ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಪ್ರಕಟವಾಗಲಿದೆ. 2 ವರ್ಷಕ್ಕಿಂತ ಹೆಚ್ಚು ಶಿಕ್ಷೆಯಾದಲ್ಲಿ ಶಾಸಕ ಸ್ಥಾನವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಮೂರು ವರ್ಷಗಳಿಗಿಂತ ಹೆಚ್ಚು ಶಿಕ್ಷೆಯಾದಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲೇ ಜಾಮೀನು ಸಿಗುವ ಸಾಧ್ಯತೆ ಕಡಿಮೆಯಾಗಿದೆ. ಸತೀಶ ಸೈಲ್ ಕಾನೂನು ಹೋರಾಟ ನಡೆಸಲು ಅವಕಾಶ ತೆರೆದೇ ಇದೆ. ಉಚ್ಚ ನ್ಯಾಯಾಲಯದ ಮೊರೆ ಹೋಗಿ ತಡೆಯಾಜ್ಞೆ ದೊರೆತಲ್ಲಿ ಸೈಲ್ ನಿರಾಳವಾಗಿ ಜಾಮೀನು ಪಡೆಯಲು ಸಾಧ್ಯ. ತಡೆಯಾಜ್ಞೆ ದೊರೆಯದೆ ಇದ್ದಲ್ಲಿ ಇನ್ನಷ್ಟು ಸಂಕಟದಲ್ಲಿ ಸಿಲುಕಿಕೊಳ್ಳಲಿದ್ದಾರೆ. ಸದ್ಯ ಸೈಲ್ ಅವರಿಗೆ ಜನಪ್ರತಿನಿಧಿಗಳ ನ್ಯಾಯಾಲಯ ವಿಧಿಸಲಿರುವ ಶಿಕ್ಷೆಯ ಪ್ರಮಾಣ ಎಷ್ಟು ಎನ್ನುವುದರ ಮೇಲೆ ಗಮನ ಕೇಂದ್ರೀಕರಿಸಿದ್ದಾರೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಮುಖಂಡರಾಗಲಿ, ಬಿಜೆಪಿ, ಜೆಡಿಎಸ್ ಮುಖಂಡರಾಗಲಿ ಇದುವರೆಗೆ ಯಾವುದೆ ಪ್ರತಿಕ್ರಿಯೆಯನ್ನು ನೀಡಿಲ್ಲ.
ನ್ಯಾಯಾಲಯದ ಆದೇಶ ಏನು ಬರಲಿದೆ ಎನ್ನುವುದನ್ನು ಎದುರು ನೋಡುತ್ತಿದ್ದಾರೆ. ಸೈಲ್ ಸಹ ಶಿಕ್ಷೆಯ ಪ್ರಮಾಣ ಗೊತ್ತಾದ ಬಳಿಕವಷ್ಟೇ ಮುಂದಿನ ಕಾನೂನು ಹೋರಾಟಕ್ಕೆ ಇಳಿಯಲಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ. ಸಿಬಿಐ ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕರೆದೊಯ್ಯುತ್ತಿರುವಾಗ ಕೋರ್ಟ್ ತೀರ್ಪಿಗೆ ಬದ್ಧ ಎಂದು ಸತೀಶ ಸೈಲ್ ಹೇಳಿಕೆ ನೀಡಿದ್ದಾರೆ. ಈಗ ಎಲ್ಲರ ಗಮನ ಜನಪ್ರತಿನಿಧಿಗಳ ನ್ಯಾಯಾಲಯ ಪ್ರಕಟಿಸಲಿರುವ ಶಿಕ್ಷೆಯ ಪ್ರಮಾಣದತ್ತ ಕೇಂದ್ರೀಕೃತವಾಗಿದೆ.ತೀರ್ಪಿಗೆ ಬದ್ಧ: ನ್ಯಾಯಾಲಯದ ತೀರ್ಪಿಗೆ ನಾವು ಬದ್ಧರಿದ್ದೇವೆ ಹಾಗೂ ಗೌರವಿಸುತ್ತೇವೆ. ಮುಂದೆ ಕಾನೂನು ಹೋರಾಟ ನಡೆಸಲು ಅವರಿಗೆ ದಾರಿ ಮುಕ್ತವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಾಯಿ ಗಾಂವಕಾರ ತಿಳಿಸಿದರು.