ಪರೋಕ್ಷವಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಸಚಿವ ಎನ್ .ಚಲುವರಾಯಸ್ವಾಮಿ ವಿರುದ್ಧ ಎಚ್‌ಡಿಕೆ ಲೇವಡಿ ಮಾಡಿದರು.
ಪಾಂಡವಪುರ : ಕುರುಕ್ಷೇತ್ರದಲ್ಲಿ ನಡೆದ ಘಟನೆಯಂತೆ ಈ ಚುನಾವಣೆಯಲ್ಲೂ ಎದುರಾಗಿದೆ. ಕಾಂಗ್ರೆಸ್ಸಿಗರು ಹಣಬಲ, ಕುತಂತ್ರದಿಂದ ಚುನಾವಣೆ ಗೆಲ್ಲಲು ಹೊರಟಿದ್ದಾರೆ. ಇದಕ್ಕೆ ಜಿಲ್ಲೆಯ ಮತದಾರರು ಪಾಠ ಕಲಿಸಬೇಕು ಎಂದು ಮೈತ್ರಿ ಅಭ್ಯರ್ಥಿ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮನವಿ ಮಾಡಿದರು.
ಪಟ್ಟಣದಲ್ಲಿ ನಡೆದ ಜೆಡಿಎಸ್, ಬಿಜೆಪಿ ಕಾರ್ಯಕರ್ತರ ಬೃಹತ್ ಬಹಿರಂಗ ಸಭೆಯಲ್ಲಿ ಮಾತನಾಡಿ, ನಾನು ಏನು ಎಂಬುದನ್ನು ತಿಳಿಯಲು ಬೇರೆಯವರ ಸರ್ಟಿಫಿಕೆಟ್ ಬೇಕಿಲ್ಲ. ಜಿಲ್ಲೆಯ ನನ್ನ ತಂದೆ, ತಾಯಂದಿರ ತೀರ್ಮಾನಕ್ಕೆ ಬಿಡುತ್ತೇನೆ. ನಾನು ಭೂಮಿಗೆ ಹೋಗುವಾಗ ನಿಮ್ಮ ಹೃದಯದಲ್ಲಿ ಸ್ಥಾನ ಬಯಸಲು ಇಚ್ಛಿಸಿದ್ದೇನೆ ಎಂದು ಭಾವುಕರಾದರು.
ಮಂಡ್ಯಗೆ ನನ್ನ ಕೊಡುಗೆ ಏನೆಂದು ಕನಕಪುರದ ಸ್ನೇಹಿತ ಕೇಳುತ್ತಾರೆ. ಮಂಡ್ಯದ ಹಳೇ ಸ್ನೇಹಿತನಂತೂ ನನ್ನ ಬಗ್ಗೆ ತುಂಬಾ ಚೆನ್ನಾಗಿ ಮಾತನಾಡುತ್ತಾರೆ. ನನ್ನನ್ನು ಹೊಗಳುತ್ತಾರೆ. ಈಗ ಬೆಳೆದು ದೊಡ್ಡರಾಗಿದ್ದಾರೆ ಎಂದು ಪರೋಕ್ಷವಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಸಚಿವ ಎನ್ .ಚಲುವರಾಯಸ್ವಾಮಿ ವಿರುದ್ಧ ಲೇವಡಿ ಮಾಡಿದರು.
ಮಂಡ್ಯ ಜಿಲ್ಲೆಯ ಜನರ ಋಣವನ್ನು ನಾನು ಎಂದೂ ಮರೆಯೋದಿಲ್ಲ. ಅತ್ಯಂತ ಮುಗ್ಧ ಜನರು. ಪುಣ್ಯಕೋಟಿ ಕಥೆಯನ್ನು ಕೇಳಿಕೊಂಡು ಬೆಳೆದವರು. ಸಾಲಮನ್ನಾ ಯೋಜನೆಯಡಿ ಮಂಡ್ಯ ಜಿಲ್ಲೆಯ ರೈತರ 250 ಕೋಟಿ ರು. ಸಾಲಮನ್ನಾ ಆಗಿದೆ ಎಂಬುದನ್ನು ತಿಳಿಯಬೇಕು ಎಂದರು.
ಈ ದರಿದ್ರ ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಬರ ಬಂದಿದೆ. ಸರಿಯಾಗಿ ಮಳೆ, ಬೆಳೆ ಆಗುತ್ತಿಲ್ಲ. ಬೆಳೆ ಹಾಕಬೇಡಿ ಎಂದು ರೈತರಿಗೆ ಹೇಳಿದ ಯಾರಾದರೂ ಕೃಷಿ ಸಚಿವರಿದ್ದರೆ ಅದು ಚಲುವರಾಯಸ್ವಾಮಿ. ಕಾಂಗ್ರೆಸ್ಸಿಗರು ಖಾಲಿ ಚೊಂಬು ಜಾಹೀರಾತು ನೀಡಿ ಟೀಕಿಸಿದ್ದಾರೆ. ಆದರೆ, ಶೀಘ್ರದಲ್ಲೇ ಕಾಂಗ್ರೆಸ್ ನಾಯಕರು ಖಾಲಿ ಚೊಂಬು ಹಿಡಿದುಕೊಂಡು ಬರಲಿದ್ದಾರೆ ಎಂದು ಭವಿಷ್ಯ ನುಡಿದರು.
ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ಹಣವಂತ, ಹೃದಯವಂತನ ನಡುವೆ ಈ ಚುನಾವಣೆ ನಡೆಯುತ್ತಿದೆ. ಇದರಲ್ಲಿ ಕುಮಾರಣ್ಣನ ಗೆಲುವು ಕಟ್ಟಿಟ್ಟ ಬುತ್ತಿ. ಲೀಡ್ ಗಾಗಿ ಪೈಪೋಟಿ ನಡೆಯುತ್ತಿದೆ ಎಂದರು.
ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ 50 ಸಾವಿರಕ್ಕೂ ಹೆಚ್ಚು ಲೀಡ್ ಕೊಡಬೇಕು. ಆಗ ನಾನು ನನ್ನ ಸೋಲನ್ನು ಮರೆಯುತ್ತೇನೆ. ನಾನು ಸೋಲಿನ ಬಗ್ಗೆ ಯಾವತ್ತು ಯೋಚಿಸಿಲ್ಲ, ಯೋಚಿಸೋದು ಇಲ್ಲ. ಆಗಿದ್ದಲ್ಲಾ ಒಳ್ಳೆಯದಕ್ಕೆ ಎಂದು ನಂಬಿದ್ದೇನೆ. ಆದರೆ, ಈ ಚುನಾವಣೆಯಲ್ಲಿ ಕುಮಾರಣ್ಣನನ್ನು ಗೆಲ್ಲಿಸಿಕೊಡಿ ಎಂದು ಮನವಿ ಮಾಡಿದರು. ಕುಮಾರಣ್ಣ ಸಿಎಂ ಆಗಿದ್ದಾಗ ಮಂಡ್ಯದಲ್ಲಿ ಶಿಕ್ಷಣ ಕ್ರಾಂತಿಯೇ ಆಗಿದೆ. ಕೇವಲ ಮೇಲುಕೋಟೆ ವಿಧಾನಸಭಾ ಕ್ಷೇತ್ರಕ್ಕೆ 13 ವಿದ್ಯುತ್ ಸಬ್ ಸ್ಟೇಷನ್ ಗಳು, ಹತ್ತಾರು ಕಾಲೇಜುಗಳನ್ನು ಮಂಜೂರು ಮಾಡಿಕೊಟ್ಟಿದ್ದಾರೆ. 180 ಕೆರೆಗಳಿಗೆ ನೀರು ಹರಿಸಲು ಆರು ಏತ ನೀರಾವರಿ ಯೋಜನೆಗಳು ಅನುಷ್ಠಾನವಾಗಿವೆ. ಪಾಂಡವಪುರ ಪಟ್ಟಣಕ್ಕೆ ಕಾವೇರಿ ಕುಡಿಯುವ ನೀರು ಪೂರೈಕೆಗೆ ಎಚ್.ಡಿ.ಕೆ. ಕಾರಣ ಎಂದು ತಿಳಿಸಿದರು.
ಇದೇ ವೇಳೆ ಮಾಜಿ ಶಾಸಕ ಡಿ.ಹಲಗೇಗೌಡರ ಪುತ್ರ ಎಚ್.ಮಂಜುನಾಥ್ ಹಾಗೂ ಬೆಂಬಲಿಗರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಗೊಂಡರು. ಈ ವೇಳೆ ಮಾಜಿ ಸಚಿವ ಬಂಡೆಪ್ಪ ಕಾಶೆಂಪೂರ್, ಜೆಡಿಎಸ್ ಎಸ್ಸಿ ಘಟಕದ ಡಾ.ಕೆ.ಅನ್ನದಾನಿ, ಬಿಜೆಪಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಮಂಜುಳಾ, ಮಾಜಿ ಸಚಿವರಾದ ರಾಜಾ ವೆಂಕಟಪ್ಪ ನಾಯಕ, ಕೆ.ಸಿ.ನಾರಾಯಣಗೌಡ, ಆಲ್ಕೋಡು ಹನುಮಂತಪ್ಪ, ಮಾಜಿ ಶಾಸಕ ಜಿ.ಬಿ.ಶಿವಕುಮಾರ್, ಒಕ್ಕಲಿಗರ ಸಂಘದ ನಿರ್ದೇಶಕರಾದ ಡಾ.ಆಂಜನಪ್ಪ, ಬಿಜೆಪಿ ಮುಖಂಡ ಎಸ್.ಜೆ.ಅಶೋಕ್ ಜಯರಾಮ್, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಿ.ರಮೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್, ರೈತ ಹೋರಾಟಗಾರ ಕೆ.ಎಸ್.ನಂಜುಂಡೇಗೌಡ, ಬಿಜೆಪಿ ಮುಖಂಡರಾದ ಅಬ್ಬಾಸ್ ಆಲಿ ಬೊಹ್ರಾ, ಎಸ್.ಸಚ್ಚಿದಾನಂದ ಇಂಡುವಾಳು, ಜಿಪಂ ಮಾಜಿ ಸದಸ್ಯ ಎಚ್.ಮಂಜುನಾಥ್, ರಾಜ್ಯ ಸರಕಾರಿ ನೌಕರರ ಸಂಘದ ಮಾಜಿ ರಾಜ್ಯಾಧ್ಯಕ್ಷ ಎಚ್.ಕೆ.ರಾಮು ಇತರರು ಭಾಗವಹಿಸಿದ್ದರು.