ಕನ್ನಡಪ್ರಭ ವಾರ್ತೆ ಶಿರಾ ಚಿತ್ರದುರ್ಗ ಲೋಕಸಭಾ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಗೆಲುವಿಗೆ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಶ್ರಮಿಸಬೇಕು. ಪ್ರತಿ ಮನೆ ಮನೆಗೂ ತೆರಳಿ ಮತಯಾಚಿಸುವ ಮೂಲಕ ಅತ್ಯಧಿಕ ಮತಗಳಿಂದ ಗೆಲುವು ಸಾಧಿಸುವಂತೆ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ ಹೇಳಿದರು. ತಾಲೂಕಿನ ಕೊಟ್ಟ ಗ್ರಾಮದಲ್ಲಿ ಗೋವಿಂದ ಕಾರಜೋಳ ಪರ ಮತಯಾಚಿಸಿ ಮಾತನಾಡಿದರು. ಗೋವಿಂದ ಕಾರಜೋಳ ಅತ್ಯಂತ ಮುತ್ಸದ್ದಿ ರಾಜಕಾರಣಿ, ಉತ್ತಮ ಅನುಭವ ಹೊಂದಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ, ಸಣ್ಣ ನೀರಾವರಿ ಸಚಿವ, ಲೋಕೋಪಯೋಗಿ ಸಚಿವರಾಗಿ ಕೆಲಸ ಮಾಡಿದ್ದಾರೆ. ದೇಶದಲ್ಲಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಗೋವಿಂದ ಕಾರಜೋಳ ಅವರನ್ನು ಗೆಲ್ಲಿಸಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಕೊಲೆ, ದೌರ್ಜನ್ಯಗಳು ಹೆಚ್ಚಾಗಿವೆ. ಇದೊಂದು ದುಷ್ಟ ಸರ್ಕಾರ. ಈ ಸರ್ಕಾರಕ್ಕೆ ಅಂತ್ಯ ಆಡಬೇಕು ಎಂದರು. ಮಧುಗಿರಿ ವಿಭಾಗದ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಂಜಲಗೆರೆ ಮೂರ್ತಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ದೇಶದ ಎಲ್ಲ ಕುಟುಂಗಳಿಗೆ ಮನೆ ಮನೆಗೆ ನೀರು ನೀಡುವ ಉದ್ದೇಶದಿಂದ ಜಲ್ ಜೀವನ್ ಮೀಷನ್ ಯೋಜನೆ ಜಾರಿಗೊಳಿಸಿದ್ದಾರೆ. ಮಹಿಳೆಯರು ಸೌದೆಯಲ್ಲಿ ಅಡುಗೆ ಮಾಡಬಾರದು. ಅವರ ಆರೋಗ್ಯ ಉತ್ತಮವಾಗಿರಲಿ ಎಂಬ ಆಶಯದಿಂದ ಉಜ್ವಲ ಯೋಜನೆಡಿ ಉಚಿತವಾಗಿ ಅನಿಲ ಸಂಪರ್ಕ ನೀಡಿದ್ದಾರೆ. ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆಯಡಿ ಪ್ರತಿ ವರ್ಷ 6,000 ನೀಡಲಾಗುತ್ತಿದೆ. ಆದ್ದರಿಂದ ಕೇಂದ್ರದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಬೇಕು. ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಬಿಜೆಪಿ ಅಭ್ಯರ್ಥಿಗಳಿಗೆ ಮತ ನೀಡಬೇಕು ಎಂದು ಮನವಿ ಮಾಡಿದರು.