ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಕೇಂದ್ರ ಸರ್ಕಾರ ಜೀವರಕ್ಷಕ ಔಷಧಿಗೆ ಕಡಿಮೆ ಶುಲ್ಕ, ಹನ್ನೆರಡು ಲಕ್ಷದವರೆಗೆ ಶೂನ್ಯ ತೆರಿಗೆ ವಿಧಿಸಿದರೆ, ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿ ಉಳಿಸಿಕೊಳ್ಳಲು ಅಡುಗೆ ಎಣ್ಣೆಯಿಂದ ಕುಡಿಯುವ ಎಣ್ಣೆಗೂ ಬೆಲೆ ಏರಿಸಿ ಸಾಮಾನ್ಯರನ್ನು ದೋಚುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಆರೋಪಿಸಿದರು.ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಗುರುವಾರ ಸೇವಾ ಪಾಕ್ಷಿಕ-2025 ಅಭಿಯಾನದ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿ, ರಾಜ್ಯದಲ್ಲಿ ಸುಮಾರು 69 ದಿನ ಬಳಕೆ ವಸ್ತುಗಳ ಬೆಲೆ ಏರಿಸುವ ಮೂಲಕ ಕಾಂಗ್ರೆಸ್ ಬೆಲೆ ಏರಿಕೆಯ ಕುಖ್ಯಾತಿ ಪಡೆದುಕೊಂಡಿದೆ ಎಂದು ಹೇಳಿದರು.
ದೇಶದಲ್ಲಿ ಕಾಂಗ್ರೆಸ್ ಪಕ್ಷ ಅಧರ್ಮ, ರಾಷ್ಟ್ರ ವಿರೋಧಿ ಚಟುವಟಿಕೆಗೆ ಬೆಂಬಲಿಸುತ್ತಿದೆ. ರಾಷ್ಟ್ರದ ಪ್ರಧಾನಿಗೆ ಇವಿಎಂ, ಬ್ಯಾಲೆಟ್ ಹೆಸರಿನಲ್ಲಿ ಅಪಪ್ರಚಾರ ಹಾಗೂ ಹಿಂದೂ ಸಮಾಜವನ್ನು ಹತ್ತಿಕ್ಕುವ ಸಲುವಾಗಿ ಷಡ್ಯಂತ್ರ ಹೆಣೆಯುತ್ತಿದೆ. ಇದಕ್ಕೆ ಜನಸಾಮಾನ್ಯರು ಬಲಿಯಾಗಬಾರದು. ಆ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಕೇಂದ್ರದ ಜನಪರ ನಿಲುವು, ಸಾಧನೆಗಳನ್ನು ಮನದಟ್ಟು ಮಾಡಬೇಕು ಎಂದರು.ಕೇಂದ್ರ ಸರ್ಕಾರವು ಕ್ಯಾನ್ಸರ್ ಚಿಕಿತ್ಸೆಗೆ ನಿಯಮಿತ ಶುಲ್ಕ, ತೆರಿಗೆಯಲ್ಲಿ ವಿನಾಯಿತಿ ನೀಡಿದ ಪರಿಣಾಮ ಬಡವರ್ಗದ ಜನರಿಗೂ 12 ಲಕ್ಷ ರು.ಗೆ ಕನಿಷ್ಠ 1.50 ಲಕ್ಷ ರು. ತೆರಿಗೆ ಹಣ ಉಳಿತಾಯವಾಗಿದೆ. ಕೆಲವು ಬಲಾಢ್ಯ ಕಾರು ಕಂಪನಿಗಳು ಕೇಂದ್ರ ಸರ್ಕಾರದ ನೀತಿಯನ್ನು ತಮ್ಮ ಉದ್ಯಮದಲ್ಲಿ ಅಳವಡಿಸಿಕೊಂಡು ತೆರಿಗೆಯಲ್ಲಿ ಗ್ರಾಹಕರಿಗೆ ವಿನಾಯಿತಿ ನೀಡುತ್ತಿವೆ ಎಂದು ಹೇಳಿದರು.
ಬಿಜೆಪಿ ಅಧಿಕಾರದ ಆಸೆಯಿಂದಾಗಿ ರಾಜಕೀಯ ಮಾಡುತ್ತಿಲ್ಲ, ಜನಸೇವಾ ದೃಷ್ಟಿಯಿಂದ ಕೆಲಸ ಮಾಡುತ್ತಿದೆ. ಆದರೆ, ಕಾಂಗ್ರೆಸ್ ಸ್ವಾತಂತ್ರ್ಯ ಪೂರ್ವದಿಂದಲೂ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬದಲಿಸಿ ರಾಜಪ್ರಭುತ್ವ ಸ್ಥಾಪಿಸಲು ಹೊರಟಿದೆ. ಜಾತಿಗಳ ಮಧ್ಯೆ ವಿಷ ಬೀಜ ಭಿತ್ತಿ ಎತ್ತಿ ಕಟ್ಟುವು ಮೂಲಕ ಅಧಿಕಾರ ಉಳಿಸಿಕೊಳ್ಳಲು ದೇಶವನ್ನು ಒಡೆದಾಳುವಂತೆ ಮಾಡುತ್ತಿದೆ ಎಂದು ದೂರಿದರು.ಈ ತಿಂಗಳ ಸೆ.17ರಿಂದ ಅ.2ರವರೆಗೆ ನಡೆಯಲಿರುವ ಸೇವಾ ಪಾಕ್ಷಿಕ ಅಭಿಯಾನಕ್ಕೆ ಪ್ರತಿ ವಿಧಾನಸಭಾ ಕ್ಷೇತ್ರದಿಂದ ಮೋದಿ ಆಡಳಿತ, ಜೀವನ ಚರಿತ್ರೆ, ಸರ್ಕಾರದ ಸಾಧನೆಗಳು, ಜಾರಿಗೊಳಿಸಿರುವ ಯೋಜನೆಗಳ ಬಗ್ಗೆ ಸಮಗ್ರವಾಗಿ ಜನರಿಗೆ ಮುಟ್ಟಿಸಬೇಕು. ಬೂತ್‌ಮಟ್ಟದ ಕಾರ್ಯಕರ್ತರು ಮೋದಿಯವರ ಭಾವಚಿತ್ರವಿರಿಸಿ ಕೃತಜ್ಞತೆ ಸಲ್ಲಿಸುವ ಸಂದೇಶ ರವಾನಿಸಬೇಕು ಎಂದು ತಿಳಿಸಿದರು.
ಸೇವಾ ಪಾಕ್ಷಿಕ ಅಭಿಯಾನದಲ್ಲಿ ವಿಧಾನಸಭಾ ಕ್ಷೇತ್ರ, ಬೂತ್‌ಮಟ್ಟದಲ್ಲಿ ಸಂವಾದ, ಕಾರ್ಯಾಗಾರ ಹಮ್ಮಿಕೊಳ್ಳಬೇಕು. ಕೇಂದ್ರದ ಜನಪ್ರಿಯ ಯೋಜನೆ ಹಾಗೂ ರಾಜ್ಯ ಸರ್ಕಾರದ ಬೆಲೆ ಏರಿಕೆಯ ಪಟ್ಟಿಯನ್ನು ಸ್ವವಿವರವಾಗಿ ಜನರಿಗೆ ಪರಿಚಯಿಸುವ ಕಾರ್ಯ ಮಾಡಿದರೆ ಭವಿಷ್ಯದಲ್ಲಿ ರಾಷ್ಟ್ರವು ಶಕ್ತಿಶಾಲಿಯಾಗಿ ಬೆಳವಣಿಗೆ ಹೊಂದಲು ಸಾಧ್ಯವಾಗಲಿದೆ ಎಂದು ಹೇಳಿದರು.ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್‌ಶೆಟ್ಟಿ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವೀಂದ್ರ ಬೆಳವಾಡಿ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪುಣ್ಯಪಾಲ್, ಬಿಜೆಪಿ ರಾಜ್ಯ ಒಬಿಸಿ ಕಾರ್ಯದರ್ಶಿ ಬಿ.ರಾಜಪ್ಪ, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸಂತೋಷ್ ಕೋಟ್ಯಾನ್, ಮುಖಂಡರಾದ ವೇನಿಲ್ಲಾ ಭಾಸ್ಕರ್, ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮುಗುಳುವಳ್ಳಿ ದಿನೇಶ್, ರಾಜೇಶ್ವರಿ ಹಾಜರಿದ್ದರು.