ಪರಿಶಿಷ್ಟ ಮಹಿಳೆ ಮೀಸಲಾತಿ ಬದಲಾಯಿಸಿ ಮಾದಿಗ ಸಮಾಜಕ್ಕೆಅನ್ಯಾಯ ಮಾಡಿದ ಬಿಜೆಪಿ
ಕನ್ನಡಪ್ರಭ ವಾರ್ತೆ, ಕಡೂರುಕಡೂರು-ಬೀರೂರು ಪುರಸಭೆಗೆ ಅಧ್ಯಕ್ಷರ ಮೀಸಲಾತಿ ಪರಿಶಿಷ್ಟ ಮಹಿಳೆಗೆ ಬಂದಾಗ ಆಗಿನ ಬಿಜೆಪಿ ಮುಖಂಡರು ಮೀಸಲಾತಿ ಬದಲಾಯಿಸಿ ಸಾಮಾನ್ಯ ವರ್ಗಕ್ಕೆ ತರುವ ಮೂಲಕ ಮಾದಿಗ ಸಮಾಜಕ್ಕೆ ಅನ್ಯಾಯ ಮಾಡಿದರು ಎಂದು ಮಾದಿಗ ಸಮಾಜದ ತಾಲೂಕು ಅಧ್ಯಕ್ಷ ಚಿಕ್ಕಂಗಳ ಲಕ್ಷ್ಮಣ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಾದಿಗ ಸಮಾಜದ ಮಲ್ಲಿಕಾರ್ಜುನ ಖರ್ಗೆಯವರಿಗೆ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡುವ ಮೂಲಕ ಮಾದಿಗ ಸಮಾಜವನ್ನು ದೊಡ್ಡಮಟ್ಟಕ್ಕೆ ಕೊಂಡೊಯ್ಯು ತ್ತಿರುವ ಪಕ್ಷ ಕಾಂಗ್ರೆಸ್. ಈಗಾಗಲೇ ಖರ್ಗೆಯವರನ್ನು ಪ್ರಧಾನಿ ಅಭ್ಯರ್ಥಿ ಎಂದು ದೇಶಾದ್ಯಂತ ಚರ್ಚೆಗಳು ನಡೆಯುತ್ತಿವೆ. ರಾಜ್ಯದಲ್ಲಿ ಜಿ.ಪರಮೇಶ್ವರ್ ಅವರನ್ನು ಗೃಹ ಸಚಿವರಾಗಿ ಮಾಡಿ ಮಾದಿಗ ಸಮಾಜಕ್ಕೆ ದೊಡ್ಡ ಸ್ಥಾನ ನೀಡಿದ ಪಕ್ಷ ಕಾಂಗ್ರೆಸ್. ಚುನಾವಣೆ ಸಂದರ್ಭದಲ್ಲಿ ಸದಾಶಿವ ಆಯೋಗ ಜಾರಿಗೆ ತರುವ ಹೇಳಿಕೆ ನೀಡಿ ಮಾದಿಗ ಜನಾಂಗಕ್ಕೆ ಬಿಜೆಪಿ ಅನ್ಯಾಯವೆಸಗಿತು ಎಂದು ಆರೋಪಿಸಿದರು.ಮುಖಂಡ ಶಂಕರ್ ಮಾತನಾಡಿ, ಬಿಜೆಪಿ ಮಾದಿಗ ಸಮಾಜವನ್ನು ಮತಗಳಿಗೆ ಮಾತ್ರ ಬಳಸಿಕೊಂಡು ಒಡೆದು ಆಳುವ ಕೆಲಸ ಮಾಡುತ್ತಿದೆ. ಸಂವಿಧಾನದ ಪರವಾಗಿ ಕಾಂಗ್ರೆಸ್ ಇದ್ದರೆ ವಿರುದ್ಧವಾಗಿ ಬಿಜೆಪಿ ನಡೆದುಕೊಳ್ಳುತ್ತಿದೆ. ಅಂಬೇಡ್ಕರ್ ಮೇಲೆ ನಂಬಿಕೆ ಇರುವ ಪಕ್ಷ ಕಾಂಗ್ರೆಸ್. ಅವರನ್ನು ಕರಡು ಸಮಿತಿ ಅಧ್ಯಕ್ಷರಾಗಿ ನೇಮಿಸಿ ಸಂವಿಧಾನ ರಚನೆಗೆ ಅವಕಾಶ ಕಲ್ಪಿಸಿತ್ತು. ಇದರಿಂದ ದಲಿತರು ಹಿಂದುಳಿದ ವರ್ಗದವರು, ಮಾದಿಗ ಸಮಾಜದವರು ಎಂದಿಗೂ ಕಾಂಗ್ರೆಸ್ ಪರವಾಗಿದ್ದಾರೆ. ಬರುವ ಲೋಕಸಭಾ ಚುನಾವಣೆಗೆ ಬಿಜೆಪಿ ಸಮಾಜವನ್ನು ಇಬ್ಬಾಗ ಮಾಡುವ ಕಾರ್ಯ ಮಾಡುತ್ತಿದೆ ಎಂದರು.
ಡಿ ಎಸ್ಎಸ್ ನ ಮೈಸೂರು ವಿಭಾಗೀಯ ಸಂಚಾಲಕ ಕೃಷ್ಣಪ್ಪ ಮಾತನಾಡಿ, ಡಾ. ಬಿ ಆರ್ ಅಂಬೇಡ್ಕರ್ ರಚಿಸಿದ ಪ್ರಪಂಚದಲ್ಲೇ ಅತ್ಯಧ್ಬುತವಾದ ಸಂವಿಧಾನವನ್ನು ಕೋಮುವಾದಿಗಳು ವಿರೋಧಿಸುತ್ತಾ ಬಂದಿದ್ದು, ಕಾಂಗ್ರೆಸ್ ವಿರುದ್ಧ ಬಿಜೆಪಿ ಸುಳ್ಳು ಆರೋಪ ಮಾಡುತ್ತಿದೆ. ದಲಿತರಿಗೆ ನ್ಯಾಯ ನೀಡುವ ಏಕೈಕ ಪಕ್ಷ ಕಾಂಗ್ರೆಸ್ ಪರಿಶಿಷ್ಟ ಪಂಗಡದ ಗುತ್ತಿಗೆದಾರರಿಗೆ ಎಸ್ಟಿಪಿ ಮತ್ತು ಟಿ.ಎಸ್ಪಿ ಅನುದಾನದಲ್ಲಿ 1 ಕೋಟಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೀಸಲಿಟ್ಟಿದ್ದಾರೆ. ಬಿಜೆಪಿ ಆಡಳಿತ ನಮ್ಮ ಸಮಾಜಕ್ಕೆ ಅನ್ಯಾಯ ವೆಸಗಿತು ಎಂದು ದೂರಿದರು.ಸಮಾಜದ ಮುಖಂಡರಾದ ಆರ್. ತಮ್ಮಯ್ಯ, ಬಿ.ಎನ್.ಚಂದ್ರಪ್ಪ, ಸುರೇಶ್, ಎಂ.ಎಚ್. ತಿಮ್ಮಯ್ಯ (ಆಟೋ) ಗಣೇಶ್, ಶ್ರೀನಿವಾಸ್, ಜಯಂತ್, ಬೀರೂರು ಜಗದೀಶ್, ರಾಮಸ್ವಾಮಿ, ಶಿವಣ್ಣ, ರಾಮು, ನಾರಾಯಣ ಮೂರ್ತಿ, ಲಕ್ಷ್ಮಣ, ಜಗದೀಶ್ ಕುಮಾರ್ ಮತ್ತಿತರರು ಹಾಜರಿದ್ದರು.
---ಬಾಕ್ಸ್ ಸುದ್ದಿ ---- ಮಾದಿಗ ಸಮಾಜದ ರಮೇಶ್ ಜಿಗಜಿಣಿಗಿ, ಗೋವಿಂದ ಕಾರಜೋಳ ಸಮಾಜದ ಹೆಸರಿನಲ್ಲಿ ರಾಜಕಾರಣದಲ್ಲಿ ಮೇಲೆ ಬಂದರೂ ನಾವು ಈ ಸಮಾಜದವರು ಎಂದು ಎಲ್ಲಿಯೂ ಹೇಳುತ್ತಿಲ್ಲ. ಅಲ್ಲದೆ ಸದಾಶಿವ ಆಯೋಗದ ವರದಿ ಜಾರಿಗೆ ತರುವ ಪ್ರಯತ್ನ ಮಾಡಲೇ ಇಲ್ಲ. ನಾರಾಯಣಸ್ವಾಮಿ ಸದಾಶಿವ ಆಯೋಗ ಜಾರಿ ಸಾಧ್ಯವಿಲ್ಲ ಎಂದರು. ಈ ನಾಯಕರು ಆರ್‌ಎಸ್‍ಎಸ್ ಹೇಳಿದಂತೆ ಕೇಳುತ್ತಿದ್ದಾರೆ. ಮಾದಿಗರು ಮುನ್ನೆಡೆಗೆ ಕಾರ್ಯಕ್ರಮ ಮಾಡುತ್ತಿದ್ದು, ದಲಿತರಲ್ಲಿ ಇತರೆ ಪಂಗಡದವರು ಮುನ್ನೆಲೆಗೆ ಬಂದಿದ್ದಾರೆ. ಈ ಕಾರ್ಯಕ್ರಮಕ್ಕೆ ನಮ್ಮಗಳ ಧಿಕ್ಕಾರವಿದೆ. ಕಾರ್ಯಕ್ರಮದಲ್ಲಿ ಕಪ್ಪು ಬಾವುಟ ಪ್ರದರ್ಶಿಸಲಾಗುವುದು ಎಂದು ದಲಿತ ಸಮಾಜದ ಹಿರಿಯ ಮುಖಂಡ ಬಿ.ಟಿ. ಚಂದ್ರುಶೇಖರ್ ಹೇಳಿದರು.30ಕೆಕೆಡಿಯು1,
ಕಡೂರಿನ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಮಾದಿಗ ಸಮಾಜದ ಮುಖಂಡರು.