ಕನ್ನಡಪ್ರಭ ವಾರ್ತೆ ಬೆಂಗಳೂರು
ಕೋಲಾರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಗೊಂದಲ ನಿವಾರಣೆಯಾಗದ ಹಿನ್ನೆಲೆಯಲ್ಲಿ ಕೋಲಾರದಿಂದಲೇ ಶುಕ್ರವಾರ ಚಾಲನೆ ದೊರೆಯಬೇಕಿದ್ದ ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶ ಮುಂದೂಡಲಾಗಿದೆ.
ದಿನದಿಂದ ದಿನಕ್ಕೆ ಕೋಲಾರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಜಟಿಲಗೊಳ್ಳುತ್ತಿದ್ದು, ಅದರ ನಿವಾರಣೆಗೆ ಕಾಂಗ್ರೆಸ್ ನಾಯಕರು ಹರಸಾಹಸಪಡುವಂತಾಗಿದೆ.
ಸಚಿವ ಮುನಿಯಪ್ಪ ಅಳಿಯ ಚಿಕ್ಕಪೆದ್ದಣ್ಣ ಅವರಿಗೆ ಟಿಕೆಟ್ ನೀಡುವುದನ್ನು ವಿರೋಧಿಸಿ ಶಾಸಕರು ರಾಜೀನಾಮೆಗೂ ಮುಂದಾಗಿದ್ದರು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ ಅಸಮಧಾನಿತ ಶಾಸಕರೊಂದಿಗೆ ಸಭೆ ನಡೆಸಿದರೂ ಅಸಮಧಾನ ತಣಿದಿಲ್ಲ.
ಹೀಗಾಗಿ ಕೋಲಾರದಲ್ಲಿ ಶುಕ್ರವಾರ ನಡೆಯಬೇಕಿದ್ದ ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶಗಳನ್ನು ಮುಂದೂಡಲಾಗಿದೆ. ಕೋಲಾರ, ಚಿಕ್ಕಬಳ್ಳಾಪುರ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿದಂತೆ ಇರುವ ಗೊಂದಲಗಳು ನಿವಾರಣೆಯಾದ ನಂತರ ಪ್ರಜಾಧ್ವನಿ ಸಮಾವೇಶ ಆಯೋಜಿಸುವ ಕುರಿತು ಕಾಂಗ್ರೆಸ್ ನಾಯಕರು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಿದ್ದು ಸಭೆಯಿಂದಲೂ ಕಣ್ಣೀರಿಡುತ್ತಾ ಹೊರ ನಡೆದ ವೀಣಾ ಕಾಶಪ್ಪನವರ್‘ಬಾಗಲಕೋಟೆ ಲೋಕಸಭೆ ಕ್ಷೇತ್ರಕ್ಕೆ ಸಂಯುಕ್ತಾ ಪಾಟೀಲ್ ಹೆಸರು ಘೋಷಣೆಯಾಗಿದೆ. ಯಾವುದೇ ಕಾರಣಕ್ಕೂ ಅಭ್ಯರ್ಥಿಯ ಬದಲಾವಣೆಯಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟಿಕೆಟ್ ಆಕಾಂಕ್ಷಿ ವೀಣಾ ಕಾಶಪ್ಪನವರ್ ಹಾಗೂ ಬೆಂಬಲಿಗರಿಗೆ ಸ್ಪಷ್ಟವಾಗಿ ತಿಳಿಸಿದ್ದಾರೆ.
ಇದೇ ವೇಳೆ ವೀಣಾ ಕಾಶಪ್ಪನವರ್ ಅವರಿಗೆ ಉತ್ತಮ ರಾಜಕೀಯ ಭವಿಷ್ಯವಿದೆ. ಮುಂದಿನ ದಿನಗಳಲ್ಲಿ ಉತ್ತಮ ರಾಜಕೀಯ ಅಧಿಕಾರ ದೊರೆಯಲಿದೆ. ಅಲ್ಲಿಯವರೆಗೆ ತಾಳ್ಮೆಯಿಂದ ಪಕ್ಷದ ಕೆಲಸ ಮಾಡುವಂತೆ ಸಿದ್ದರಾಮಯ್ಯ ಮನವೊಲಿಕೆ ಪ್ರಯತ್ನ ನಡೆಸಿದರು.
ಸಭೆಯಲ್ಲಿ ವೀಣಾಗೆ ಸಿಎಂ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷ ಸ್ಥಾನದ ಭರವಸೆ ನೀಡಿದರು ಎಂದು ತಿಳಿದುಬಂದಿದೆ. ಡಾ.ಪುಷ್ಪಾ ಅಮರನಾಥ್ ಅವರ ಸ್ಥಾನಕ್ಕೆ ನಿಮ್ಮನ್ನು ನೇಮಿಸಲಾಗುವುದು.
ರಾಜ್ಯದಲ್ಲಿ ಮಹಿಳಾ ಕಾಂಗ್ರೆಸ್ ಸಂಘಟಿಸಿ ಪಕ್ಷದ ಕೆಲಸ ಮಾಡಿದರೆ ಮುಂದೆ ಉಜ್ವಲ ರಾಜಕೀಯ ಭವಿಷ್ಯ ಇರಲಿದೆ ಎಂದಿರುವುದಾಗಿ ಮೂಲಗಳು ತಿಳಿಸಿವೆ.ಆದರೂ ಸಮಾಧಾನಗೊಳ್ಳದ ವೀಣಾ, ಕಣ್ಣೀರು ಹಾಕುತ್ತಲೇ ಸಭೆಯಿಂದ ಎದ್ದು ಹೋದರು ಎಂದು ತಿಳಿದುಬಂದಿದೆ.
ಟಿಕೆಟ್ ಕೈತಪ್ಪಿದ್ದರಿಂದ ಅಸಮಾಧಾನಗೊಂಡಿರುವ ವೀಣಾ ಹಾಗೂ ಬೆಂಬಲಿಗರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಗುರುವಾರ ಸಂಜೆ ಸಂಧಾನ ಸಭೆ ನಡೆಸಿದರು. ಈ ವೇಳೆ ಶಾಸಕ ವಿಜಯಾನಂದ ಕಾಶಪ್ಪನವರ್, ವಿನಯ್ ಕುಲಕರ್ಣಿ ಹಾಗೂ ಬೆಂಬಲಿಗರು ಭಾಗವಹಿಸಿದ್ದರು.
ಟಿಕೆಟ್ ಘೋಷಣೆಯಾದರೂ ಪಟ್ಟು ಸಡಿಲಸದ ವೀಣಾಗೆ ಕಿವಿಮಾತು ಹೇಳಿದ ಸಿದ್ದರಾಮಯ್ಯ, ಟಿಕೆಟ್ ಘೋಷಣೆಗೆ ಮೊದಲು ಜಿಲ್ಲಾ ನಾಯಕರ ಅಭಿಪ್ರಾಯ, ಸಮೀಕ್ಷಾ ವರದಿಯನ್ನು ಪರಿಶೀಲಿಸಿಯೇ ಹೈಕಮಾಂಡ್ ನಿರ್ಧಾರ ಮಾಡಿದೆ.
ಜಿಲ್ಲೆಯಲ್ಲಿ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಮೊದಲೇ ಹೇಳಿದ್ದೆ. ನಿಮಗೆ ಟಿಕೆಟ್ ನೀಡುವಂತೆ ಜಿಲ್ಲೆಯ ನಾಯಕರು ಶಿಫಾರಸು ಮಾಡಿಲ್ಲ. ಲೋಕಸಭೆ ಕ್ಷೇತ್ರದ ಉಸ್ತುವಾರಿ ಸಚಿವರೂ ನಿಮ್ಮ ಹೆಸರು ಪ್ರಸ್ತಾಪ ಮಾಡಿಲ್ಲ. ಇನ್ನು ಈಗಾಗಲೇ ಟಿಕೆಟ್ ಘೋಷಣೆಯಾಗಿದ್ದು, ಈ ಹಂತದಲ್ಲಿ ಬದಲಾವಣೆ ಮಾಡಲು ಬರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಹೊರಗಿನವರಿಗೆ ಯಾಕೆ ಟಿಕೆಟ್ ಕೊಟ್ಟಿದ್ದೀರಿ ಎಂಬ ಬೆಂಬಲಿಗರ ಪ್ರಶ್ನೆಗೆ ಗರಂ ಆದ ಸಿದ್ದರಾಮಯ್ಯ, ನಾನು ಮೈಸೂರಿನಿಂದ ಬಂದು ಬಾದಾಮಿಯಲ್ಲಿ ಸ್ಪರ್ಧೆ ಮಾಡಿರಲಿಲ್ಲವೇ? ಆಗ ನನ್ನನ್ನು ನೀವೇ ಆಯ್ಕೆ ಮಾಡಿರಲಿಲ್ಲವೇ ಎಂದು ಪ್ರಶ್ನಿಸಿದರು.
ಮಹಿಳಾ ಘಟಕದ ಅಧ್ಯಕ್ಷ ಸ್ಥಾನದ ಭರವಸೆಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆಯಲ್ಲಿ ವೀಣಾ ಕಾಶಪ್ಪನವರ್ ಅವರಿಗೆ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷ ಸ್ಥಾನದ ಭರವಸೆ ನೀಡಿದರು ಎಂದು ತಿಳಿದುಬಂದಿದೆ.
ಡಾ.ಪುಷ್ಪಾ ಅಮರನಾಥ್ ಅವರ ಸ್ಥಾನಕ್ಕೆ ನಿಮ್ಮನ್ನು ನೇಮಿಸಲಾಗುವುದು. ರಾಜ್ಯದಲ್ಲಿ ಮಹಿಳಾ ಕಾಂಗ್ರೆಸ್ ಸಂಘಟಿಸಿ ಪಕ್ಷದ ಕೆಲಸ ಮಾಡಿದರೆ ಮುಂದೆ ಉಜ್ವಲ ರಾಜಕೀಯ ಭವಿಷ್ಯ ಇರಲಿದೆ ಎಂದಿರುವುದಾಗಿ ಮೂಲಗಳು ತಿಳಿಸಿವೆ.