ಕಾಂಗ್ರೆಸ್‌ ಮುಖಂಡ ಶ್ರೀನಿವಾಸನ್‌ ಕೊಲೆ ತನಿಖೆ ಸಿಬಿಐಗೆ

KannadaprabhaNewsNetwork | Published : Mar 18, 2025 12:34 AM

ಸಾರಾಂಶ

ಪ್ರಕರಣದಲ್ಲಿ ಸ್ಥಳೀಯ ಪೊಲೀಸರು ಮತ್ತು ಸಿಐಡಿ ಅಧಿಕಾರಿಗಳು ಸಮರ್ಪಕ ತನಿಖೆ ನಡೆಸಿಲ್ಲ. ತನಿಖೆಯ ಗುಣಮಟ್ಟ ಕಳಪೆಯಾಗಿದ್ದು, ಸಾಕಷ್ಟು ಲೋಪದೋಷಗಳಿವೆ. ಕೊಲೆಯಲ್ಲಿ ಪ್ರಮುಖ ರಾಜಕಾರಣಿಯ ಕೈವಾಡವಿದೆ ಎಂಬುದಾಗಿ ಮೃತ ಪತ್ನಿ ಆರೋಪ ಮಾಡಿದ್ದಾರೆ. ಹಾಗಾಗಿ, ತನಿಖೆಯನ್ನು ಸಿಬಿಐಗೆ ವಹಿಸಬೇಕೆಂಬ ವಾದಕ್ಕೆ ಹೈಕೋರ್ಟ್‌ ಮನ್ನಣೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕೋಲಾರ ಜಿಲ್ಲಾ ಪಂಚಾಯತ್‌ ಮಾಜಿ ಅಧ್ಯಕ್ಷ ಎಂ.ಶ್ರೀನಿವಾಸನ್‌ ಕೊಲೆ ಪ್ರಕರಣವನ್ನು ಕೇಂದ್ರ ತನಿಖಾ ದಳಕ್ಕೆ (ಸಿಬಿಐ) ವಹಿಸಿ ಹೈಕೋರ್ಟ್‌ ಮಹತ್ವದ ಆದೇಶ ಹೊರಡಿಸಿದೆ.

ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಕೋರಿ ಮೃತರ ಪತ್ನಿ ಡಾ. ಎಸ್.ಚಂದ್ರಕಲಾ ಅವರು ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಆದೇಶ ಮಾಡಿದೆ.

ಕೊಲೆಯಲ್ಲಿ ರಾಜಕಾರಣಿ ಕೈವಾಡ

ಪ್ರಕರಣದಲ್ಲಿ ಸ್ಥಳೀಯ ಪೊಲೀಸರು ಮತ್ತು ಸಿಐಡಿ ಅಧಿಕಾರಿಗಳು ಸಮರ್ಪಕ ತನಿಖೆ ನಡೆಸಿಲ್ಲ. ತನಿಖೆಯ ಗುಣಮಟ್ಟ ಕಳಪೆಯಾಗಿದ್ದು, ಸಾಕಷ್ಟು ಲೋಪದೋಷಗಳಿವೆ. ಕೊಲೆಯಲ್ಲಿ ಪ್ರಮುಖ ರಾಜಕಾರಣಿಯ ಕೈವಾಡವಿದೆ ಎಂಬುದಾಗಿ ಮೃತ ಪತ್ನಿ ಆರೋಪ ಮಾಡಿದ್ದಾರೆ. ಹಾಗಾಗಿ, ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಸರ್ಕಾರಿ ಅಭಿಯೋಜಕರಾಗಿದ್ದ ಹಿರಿಯ ವಕೀಲ ಸಿ.ಎಚ್‌. ಹನುಮಂತರಾಯ ವಾದಿಸಿದ್ದರು.

ಈ ಅಂಶ ಗಂಭೀರವಾಗಿ ಪರಿಗಣಿಸಿದ ಹೈಕೋರ್ಟ್‌, ಸಿಐಡಿ ನಡೆಸಿರುವ ತನಿಖೆಯಲ್ಲಿ ಗಂಭೀರವಾದ ಲೋಪಗಳಿರುವುದು ತಿಳಿದು ಬರಲಿದೆ. ಹಾಗಾಗಿ, ತನಿಖೆಯನ್ನು ಸಿಬಿಐಗೆ ವಹಿಸುವುದು ಸೂಕ್ತ ಎಂದು ಹೇಳಿತು. ನಂತರ ಸಿಬಿಐ ಅಧಿಕಾರಿಗಳು ಎಫ್‌ಐಆರ್‌ ದಾಖಲಾದ ಹಂತದಿಂದಲೇ ಪ್ರಕರಣ ಕುರಿತು ಹೊಸದಾಗಿ ತನಿಖೆ ನಡೆಸಬೇಕು. ಮುಂದಿನ ಮೂರು ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಬೇಕು ಎಂದು ಸಿಬಿಐಗೆ ನಿರ್ದೇಶಿಸಿರುವ ನ್ಯಾಯಪೀಠ ಸೂಚಿಸಿದೆ.

2023ರಲ್ಲಿ ನಡೆದ ಕೊಲೆ ಘಟನೆ

ಕೋಲಾರ ಜಿಲ್ಲೆ ಶ್ರೀನಿವಾಸಪುರ ಹೊರವಲಯದಲ್ಲಿ 2023ರ ಅ.23ರಂದು ಕಾಂಗ್ರೆಸ್ ಮುಖಂಡ ಎಂ.ಶ್ರೀನಿವಾಸ್ ಅವರನ್ನು ದುಷ್ಕರ್ಮಿಗಳು ಮಚ್ಚಿನಿಂದ ಕೊಚ್ಚಿ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದರು. ತದ ನಂತರ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಲಕಾರಿಯಾಗದೇ ಅವರು ಮೃತಪಟ್ಟಿದ್ದರು.

ಇದರಿಂದ ಹೈಕೋರ್ಟ್‌ ಮೆಟ್ಟಿಲೇರಿದ್ದ ಮೃತರ ಪತ್ನಿ ಚಂದ್ರಕಲಾ, ಇದೊಂದು ನಿಗೂಢ ಕೊಲೆ ಪ್ರಕರಣ. ಯಾರು, ಏತಕ್ಕಾಗಿ, ಈ ಕೃತ್ಯ ಎಸಗಿದ್ದಾರೆ ಎಂಬೆಲ್ಲಾ ಸಂಗತಿಗಳು ರಹಸ್ಯವಾಗಿ ಉಳಿದು ಬಿಟ್ಟಿವೆ. ಪ್ರಕರಣವನ್ನು ಮೊದಲು ಸ್ಥಳೀಯ ಪೊಲೀಸರು 37 ದಿನ ತನಿಖೆ ನಡೆಸಿದ್ದರು. ನಂತರ ರಾಜ್ಯ ಸರ್ಕಾರವು ತನಿಖೆಯನ್ನು ಸಿಐಡಿಗೆ ಹಸ್ತಾಂತರಿಸಿತ್ತು. ಸಿಐಡಿ ಪೊಲೀಸರು 50 ದಿನ ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದಾರೆ. ಆದರೆ, ಇದು ಸುಪಾರಿ ಕೊಲೆಯೋ ಅಥವಾ ಅಲ್ಲವೋ ಎಂಬ ಬಗ್ಗೆ ದೋಷಾರೋಪ ಪಟ್ಟಿಯಲ್ಲಿ ವಿವರಿಸಿಲ್ಲ. ಪ್ರಕರಣ ಸಂಬಂಧ ತಮಗೆ ಇಂತವರ ಮೇಲೆ ಸಂದೇಹವಿರುವುದಾಗಿ ತಾವು ಸಿಐಡಿಗೆ ತಿಳಿಸಿದ್ದರೂ ಆ ಕುರಿತು ತನಿಖೆ ನಡೆಸಿಲ್ಲ ಎಂದು ಆರೋಪಿಸಿದ್ದರು.

ಕಳಪೆ ದೋಷಾರೋಪ ಪಟ್ಟಿ

ಅಲ್ಲದೆ, ಘಟನೆ ಸಂಭವಿಸಿದ ಐದು ದಿನದ ಬಳಿಕ ಪ್ರತ್ಯಕ್ಷದರ್ಶಿಗಳ ಹೇಳಿಕೆ ದಾಖಲಿಸಲಾಗಿದೆ. ಸಿಸಿಟಿವಿ ದೃಶ್ಯಾವಳಿ ಸಂಗ್ರಹಿಸಿಲ್ಲ. ಆರೋಪಿಗಳ ಪೋನ್‌ ಸಂಭಾಷಣೆ (ಸಿಡಿಆರ್) ಕಲೆ ಹಾಕಿಯಿಲ್ಲ. ವೈಜ್ಞಾನಿಕ ಪುರಾವೆಗಳನ್ನು ಸಂಗ್ರಹಿಸಿಲ್ಲ. ಇದೊಂದು ಅತ್ಯಂತ ಕಳಪೆ ದೋಷಾರೋಪ ಪಟ್ಟಿ, ತನಿಖೆಯನ್ನು ಸಿಬಿಐಗೆ ವಹಿಸುವಂತೆ ಕೋರಿದ್ದರು.

ಇದೇ ವೇಳೆ ಸರ್ಕಾರ ಪರ ವಾದ ಮಂಡಿಸಿದ ವಿಶೇಷ ಅಭಿಯೋಜಕರಾಗಿದ್ದ ಹಿರಿಯ ವಕೀಲ ಸಿ.ಎಚ್.ಹನುಮಂತರಾಯ ಅವರು, ದೋಷಾರೋಪ ಪಟ್ಟಿಯಲ್ಲಿ ನೂರಾರು ಗೊಂದಲಗಳಿವೆ. ಕೊಲೆಯಲ್ಲಿ ಪ್ರಭಾವಿ ರಾಜಕಾರಣಿಗಳ ಕೈವಾಡವಿರುವುದಾಗಿ ಅರ್ಜಿದಾರರೇ ಆರೋಪಿಸಿದ್ದರು. ಆ ಕುರಿತು ಸಿಐಡಿ ಪೊಲೀಸರು ತನಿಖೆ ನಡೆಸಿಲ್ಲ. ಯಾರೋ ಪರದೇ ಹಿಂದೆ ನಿಂತು ಕೊಲೆ ನೆಡಸಿದ್ದಾರೆ ಎಂಬುದು ದೋಷಾರೋಪ ಪಟ್ಟಿ ನೋಡಿದರೆ ತಿಳಿಯಲಿದೆ. ಸಿಬಿಐಗೆ ತನಿಖೆ ನಡೆಸಲು ಅವಕಾಶ ನೀಡಿದರೆ, ಪರದೇ ಹಿಂದೆ ಅಡಗಿಕೂತವರು ಯಾರು ಎಂದು ತಿಳಿಯಬಹುದು ಎಂದು ವಾದಿಸಿದ್ದರು.

Share this article