)
ಕಾರ್ಕಳ: ಪುರಸಭಾ ವ್ಯಾಪ್ತಿಯ ಕಸದ ಸಮಸ್ಯೆ ಪರಿಹಾರ ಹಾಗೂ ಕ್ಷೇತ್ರದ ಅಭಿವೃದ್ಧಿ ಕುರಿತಂತೆ ಕಾರ್ಕಳ ಶಾಸಕರು ಈಗಾಗಲೇ ಜಿಲ್ಲಾ ಸಹಾಯಕ ಕಮಿಷನರ್, ಜಿಲ್ಲಾ ಯೋಜನಾಧಿಕಾರಿ ಸೇರಿದಂತೆ ವಿವಿಧ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕಾರ್ಯಯೋಜನೆ ರೂಪಿಸಿದ್ದಾರೆ. ಇದರ ಪರಿಣಾಮವಾಗಿ ಕಸದ ಸಮಸ್ಯೆಗೆ ಶೀಘ್ರದಲ್ಲೇ ಪರಿಹಾರ ದೊರೆಯಲಿದೆ ಎಂಬುದನ್ನು ಅರಿತ ಸ್ಥಳೀಯ ಕಾಂಗ್ರೆಸ್ ನಾಯಕರು ಅದರ ಕ್ರೆಡಿಟ್ ಪಡೆಯುವ ಉದ್ದೇಶದಿಂದ ನಾನಾ ರೀತಿಯ ಮಾಧ್ಯಮ ಹೇಳಿಕೆಗಳನ್ನು ನೀಡುತ್ತಿರುವುದು ಹಾಸ್ಯಾಸ್ಪದ ಎಂದು ಕಾರ್ಕಳ ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್ ಆರೋಪಿಸಿದ್ದಾರೆ.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ವೈಫಲ್ಯ ಸ್ಪಷ್ಟವಾಗಿ ಗೋಚರಿಸುತ್ತಿದ್ದು, ಪಕ್ಷದ ಒಳಜಗಳದಿಂದ ಆಡಳಿತ ಯಂತ್ರವೇ ಕುಸಿದಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷಗಳಾದರೂ ಕ್ಷೇತ್ರಗಳ ಅಭಿವೃದ್ಧಿಗೆ ಸಮರ್ಪಕ ಅನುದಾನ ಬಿಡುಗಡೆ ಆಗಿಲ್ಲ. ಸರ್ಕಾರಿ ನೌಕರರು, ಪುರಸಭಾ ಕಾರ್ಮಿಕರಿಗೆ ವೇತನ ಪಾವತಿಯಲ್ಲಿ ಸಮಸ್ಯೆಗಳಿದ್ದು, ವೃದ್ಧಾಪ್ಯ ಹಾಗೂ ವಿಧವಾ ವೇತನ ಸೇರಿದಂತೆ ವಿವಿಧ ಪಿಂಚಣಿಗಳ ವಿತರಣೆಯಲ್ಲೂ ವಿಳಂಬ ಉಂಟಾಗಿದೆ ಎಂದು ದೂರಿದ್ದಾರೆ.