ಬಿಜೆಪಿಗರ ಅಪಪ್ರಚಾರದಿಂದ ಕಾಂಗ್ರೆಸ್ ಗೆ ಸೋಲು: ಎಸ್. ನಾರಾಯಣ್ ದೂಷಣೆ

KannadaprabhaNewsNetwork |  
Published : May 13, 2026, 01:00 AM IST
 ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯ ಉಪಾಧ್ಯಕ್ಷ ಎಸ್.ನಾರಾಯಣ್   | Kannada Prabha

ಸಾರಾಂಶ

ದೇಶಕ್ಕಾಗಿ ಸ್ವಾತಂತ್ರ್ಯ ತಂದುಕೊಟ್ಟಿದ್ದು ಕಾಂಗ್ರೆಸ್, ಸ್ವಾತಂತ್ರ್ಯ ಪೂರ್ವದಿಂದಲೂ ದೀನ- ದಲಿತರು, ಹಿಂದುಳಿದ ವರ್ಗಗಳು ಹಾಗೂ ಮಹಿಳೆಯ ಪರವಿರುವ ಪಕ್ಷ ಕಾಂಗ್ರೆಸ್ ಆಗಿದೆ. ನೆಹರು ಅವರಿಂದ ಡಾ. ಮನಮೋಹನ್ ಸಿಂಗ್ ವರೆಗೆ ಕಾಂಗ್ರೆಸ್ ನ ಹಲವು ಮುಖಂಡರು ದೇಶಕ್ಕಾಗಿ ತಮ್ಮ ಪ್ರಾಣ ಅರ್ಪಣೆ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಕಾಂಗ್ರೆಸ್ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಿರುವ ಪಕ್ಷವಾಗಿದೆ. ವಿರೋಧ ಪಕ್ಷಗಳ ಅಪಪ್ರಚಾರದಿಂದ ಕಾಂಗ್ರೆಸ್‌ಗೆ ಸೋಲಾಗುತ್ತಿದೆ. ಇದನ್ನು ತಪ್ಪಿಸಲು ಪ್ರಚಾರ ಸಮಿತಿಯು ನಿರಂತರವಾಗಿ ಪಕ್ಷದ ಪರ ಕೆಲಸ ಮಾಡಲಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯ ಉಪಾಧ್ಯಕ್ಷ ಎಸ್.ನಾರಾಯಣ್ ತಿಳಿಸಿದರು.

ನಗರದ ಸತ್ತಿ ರಸ್ತೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ನಡೆದ ಕಾಂಗ್ರೆಸ್ ಪ್ರಚಾರ ಸಮಿತಿಯ ಜಿಲ್ಲಾ ಕಾರ್ಯಕಾರಿಣಿ ಸಭೆ, ಬ್ಲಾಕ್ ಸಮಿತಿ ಪದಾಧಿಕಾರಿಗಳಿಗೆ ನೇಮಕಾತಿ ಪತ್ರ ವಿತರಿಸಿ ಅವರು ಮಾತನಾಡಿದರು.

ದೇಶಕ್ಕಾಗಿ ಸ್ವಾತಂತ್ರ್ಯ ತಂದುಕೊಟ್ಟಿದ್ದು ಕಾಂಗ್ರೆಸ್, ಸ್ವಾತಂತ್ರ್ಯ ಪೂರ್ವದಿಂದಲೂ ದೀನ- ದಲಿತರು, ಹಿಂದುಳಿದ ವರ್ಗಗಳು ಹಾಗೂ ಮಹಿಳೆಯ ಪರವಿರುವ ಪಕ್ಷ ಕಾಂಗ್ರೆಸ್ ಆಗಿದೆ. ನೆಹರು ಅವರಿಂದ ಡಾ. ಮನಮೋಹನ್ ಸಿಂಗ್ ವರೆಗೆ ಕಾಂಗ್ರೆಸ್ ನ ಹಲವು ಮುಖಂಡರು ದೇಶಕ್ಕಾಗಿ ತಮ್ಮ ಪ್ರಾಣ ಅರ್ಪಣೆ ಮಾಡಿದ್ದಾರೆ. ಅಲ್ಲದೇ ಅವರು ತಂದ ಯೋಜನೆಗಳು ಹಾಗೂ ಕಾರ್ಯಕ್ರಮಗಳು ದೇಶವನ್ನು ಅಭಿವೃದ್ಧಿ ಹೊಂದಿದ ಸಾಲಿನಲ್ಲಿ ನಿಲ್ಲಿಸಿವೆ. ಆದರೆ, ಪ್ರಚಾರದ ಕೊರತೆಯಿಂದ ಇಂದು ದೇಶದೆಲ್ಲಡೆ ಪದೇ ಪದೇ ಕಾಂಗ್ರೆಸ್ ಸೋಲಬೇಕಾಗಿದೆ. ಬಿಜೆಪಿಯವರು ಸುಳ್ಳನ್ನೇ ಹೇಳಿ ಜನರನ್ನು ನಂಬಿಸುವಲ್ಲಿ ನಿಸ್ಸೀಮರು, ಹೀಗಾಗಿ ಇತರೆ ರಾಜ್ಯಗಳಲ್ಲಿ ಹಿನ್ನಡೆಯಾಗಿದೆ. ಇದನ್ನು ಅರ್ಥ ಮಾಡಿಕೊಂಡು ನಾವೆಲ್ಲರೂ ಪಕ್ಷದ ಗೆಲುವಿಗೆ ಶ್ರಮಿಸಬೇಕಾಗಿದೆ ಎಂದರು.

ಕಾಂಗ್ರೆಸ್ ಪಕ್ಷವು ಮಹಿಳಾ ಮೀಸಲಾತಿ ವಿರೋಧಿ ಎಂದು ಬಿಜೆಪಿ ಬಿಂಬಿಸುತ್ತಿದೆ. ೨೦೨೩ರಲ್ಲೇ ನಾರಿ ವಂದನ್ ಮಹಿಳಾ ಮೀಸಲಾತಿ ಜಾರಿಯಾಗಿರುವ ಕುರಿತು ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದರು. ೨೦೨೬ರಲ್ಲಿ ಮತ್ತೊಮ್ಮೆ ಈ ಕಾಯ್ದೆಯನ್ನು ಜಾರಿಗೊಳಿಸಲು ಹೊರಟಿರುವ ಉದ್ದೇಶವೇನು ಎಂದು ಪ್ರಶ್ನಿಸಿದರು.

ಸಂವಿಧಾನದ ೭೩, ೭೪ನೇ ತಿದ್ದುಪಡಿ ಮಾಡಿ ಮಹಿಳೆಯರಿಗೆ ಶೇ.೩೩ರಷ್ಟು ಮೀಸಲಾತಿಯನ್ನು ಕಾಂಗ್ರೆಸ್ ಅವಧಿಯಲ್ಲೇ ಜಾರಿಗೊಳಿಸಲಾಗಿದೆ, ಮಹಿಳಾ ಮೀಸಲಾತಿ ಜಾರಿಗೊಳಿಸುವಲ್ಲಿ ಕಾಂಗ್ರೆಸ್ ಮುನ್ನುಡಿ ಬರೆದಿದೆ. ದೇಶದ ೫ ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲಿ ತುರ್ತು ಅಧಿವೇಶನ ಕರೆಯುವ ಅಗತ್ಯ ಏನಿತ್ತು. ಉದ್ದೇಶಪೂರ್ವಕವಾಗಿ ಅಧಿವೇಶನ ಕರೆದು ಮಹಿಳೆಯರು, ಜನತೆಯನ್ನು ದಿಕ್ಕು ತಪ್ಪಿಸುವ ಹುನ್ನಾರ ಬಿಜೆಪಿಯವರದ್ದಾಗಿತ್ತು ಎಂದು ಆರೋಪಿಸಿದರು.

ಕಾಂಗ್ರೆಸ್ ಪ್ರಚಾರ ಸಮಿತಿ ಬಲಿಷ್ಠವಾಗಿದ್ದು ಪಕ್ಷ ಸದೃಢವಾಗುತ್ತದೆ. ಸೇನಾನಿಗಳಂತೆ ಕೆಲಸ ಮಾಡುವುದು ಕಾಂಗ್ರೆಸ್ ಪ್ರಚಾರ ಸಮಿತಿ ಕೆಲಸವಾಗಿದೆ. ಇಷ್ಟು ವರ್ಷಗಳು ಇದ್ದ ಕಾಂಗ್ರೆಸ್ ಪ್ರಚಾರ ಸಮಿತಿಯೆ ಬೇರೆ, ಈಗಿರುವ ಪ್ರಚಾರ ಸಮಿತಿಯೇ ಬೇರೆ. ಪ್ರಚಾರ ಸಮಿತಿ ಎಂದರೆ ನೇಮಕಾತಿ ಆದೇಶ ಪಡೆದು, ವಿಸಿಟಿಂಗ್ ಕಾರ್ಡ್ ಪಡೆದು ಇಟ್ಟುಕೊಂಡು ಕಾರ್‌ಗೆ ನಾಮಫಲಕ ಹಾಕಿಕೊಳ್ಳುವುದು ಅಲ್ಲ ಎಂದರು.

ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಮಾಜಿಕ ನ್ಯಾಯ:

ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ಕಾಂಗ್ರೆಸ್ ಪಕ್ಷವು ಎಲ್ಲ ವರ್ಗ, ಎಲ್ಲ ಧರ್ಮಗಳಿಗೆ ಸಾಮಾಜಿಕ ನ್ಯಾಯ ಕೊಡಿಸುತ್ತದೆ. ಕಾಂಗ್ರೆಸ್ ಪ್ರಚಾರ ಸಮಿತಿಯ ೨೩ ಮಂದಿಗೆ ನೇಮಕಾತಿ ಆದೇಶಪತ್ರ ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ಕೊಳ್ಳೇಗಾಲ ಕ್ಷೇತ್ರದಲ್ಲೂ ಕಾರ್ಯಕ್ರಮ ಮಾಡಿ. ನಿಮಗೆ ಎಲ್ಲ ರೀತಿಯ ಸಹಕಾರ ಕೊಡುವುದಾಗಿ ತಿಳಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ಚೂಡಾ ಅಧ್ಯಕ್ಷರಾದ ಪಿ.ಮರಿಸ್ವಾಮಿ ಮಾತನಾಡಿ, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಸೇರಿ ಎಲ್ಲ ಘಟಕಗಳು ತಳಮಟ್ಟದಲ್ಲಿ ಸಂಘಟನೆ ಮಾಡಿ ಮುಂಬರುವ ಜಿಪಂ, ತಾಪಂ ಹಾಗೂ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಮಧುಸೂದನ್ ಮಾತನಾಡಿ, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಎಲ್ಲ ಬ್ಲಾಕ್‌ಗಳಿಗೂ ಅಧ್ಯಕ್ಷರು, ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಪ್ರಚಾರ ಸಮಿತಿಯನ್ನು ಬಲಿಷ್ಠಗೊಳಿಸಿ ಮುಂಬರುವ ಚುನಾವಣೆಗಳಲ್ಲಿ ಪಕ್ಷದ ಗೆಲುವಿಗೆ ಶ್ರಮಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಬಿ.ಕೆ. ರವಿಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಆರ್. ಮಹದೇವ್, ಚಿಕ್ಕಮಹದೇವ್, ಬ್ಲಾಕ್ ಅಧ್ಯಕ್ಷ ಎ.ಎಸ್. ಗುರುಸ್ವಾಮಿ, ಜಿಪಂ ಮಾಜಿ ಸದಸ್ಯ ಬೋಮಯ್ಯ, ಕಾಂಗ್ರೆಸ್ ಪ್ರಚಾರ ಸಮಿತಿಯ ಜಿಲ್ಲಾ ಉಪಾಧ್ಯಕ್ಷರಾದ ಸೈಯದ್ ನಜಾವುಲ್ಲಾ, ಆರ್.ಸಿದ್ದರಾಜು, ಇರಸವಾಡಿ ಅಶೋಕ ಕುಮಾರ್, ಹೆಗ್ಗವಾಡಿ ಕೆಂಪರಾಜು, ಕೆರೆಹಳ್ಳಿ, ರವಿಕುಮಾರ್, ರಾಜಕುಮಾರ, ಗುಂಡ್ಲುಪೇಟೆ ಶಾನೀಜಾ ಮುದ್ದೀನ್, ಆರ್.ಡಿ.ಉಲ್ಲಾಸ್, ವಿ.ಶಿವಕುಮಾರ್, ಕಲಾವತಿ,ಬ್ಲಾಕ್ ಅಧ್ಯಕ್ಷರಾದ ರವಿ ಬಿಸಲವಾಡಿ, ಅಪ್ಸರ್ ಅಹಮದ್, ಡಿ.ಕೆ.ಶಿವಕುಮಾರ್,ಮನೋಹರ್, ಕೋಟೆಕೆರೆ ಶಂಕರನಾಯಕ, ಪ್ರಸಾದ್, ಸೋಮಳ್ಳಿ ಮುರುಳಿ ಇತರರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಆಗ್ರಹಿಸಿ ಕರವೇ ಪ್ರತಿಭಟನೆ
ಮಂಗಳಕ್ಕೆ ಹೋಗಿ ಬಂದರೆ ದೇಶದ ಅಭಿವೃದ್ಧಿ ಅಸಾಧ್ಯ: ಚೇತನ್ ಅಹಿಂಸಾ