ಬೆಂಗಳೂರು : ಅಕ್ರಮ ಆನ್‌ಲೈನ್ ಬೆಟ್ಟಿಂಗ್ ಆ್ಯಪ್ ಹಗರಣ ಸಂಬಂಧ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಹಾಗೂ ಉದ್ಯಮಿ ಕೆ.ಸಿ.ವೀರೇಂದ್ರ ಅಲಿಯಾಸ್ ಪಪ್ಪಿ ಅವರನ್ನು ಮತ್ತೆ ನಾಲ್ಕು ದಿನ ಕಾಲ ಜಾರಿ ನಿರ್ದೇಶನಾಲಯದ (ಇ.ಡಿ) ವಶಕ್ಕೆ ನೀಡಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಗುರುವಾರ ಆದೇಶಿಸಿದೆ.
ಪೊಲೀಸ್ ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಶಾಸಕ ವೀರೇಂದ್ರ ಅವರನ್ನು ಇ.ಡಿ. ಅಧಿಕಾರಿಗಳು ಹಾಜರುಪಡಿಸಿದರು. ಈ ವೇಳೆ ಪ್ರಕರಣದ ಹೆಚ್ಚಿನ ತನಿಖೆ ಸಲುವಾಗಿ ಆರೋಪಿಯನ್ನು ಮತ್ತೆ ವಶಕ್ಕೆ ನೀಡುವಂತೆ ಇ.ಡಿ ಸಲ್ಲಿಸಿದ ಮನವಿ ಪುರಸ್ಕರಿಸಿದ ನ್ಯಾಯಾಲಯ, ನಾಲ್ಕು ದಿನಗಳ ಕಾಲ ಪಪ್ಪಿ ಅವರನ್ನು ವಶಕ್ಕೆ ನೀಡಿತು.
ಪ್ರಕರಣದ ತನಿಖೆಗೆ ಆರೋಪಿಯನ್ನು 11 ದಿನ ಕಾಲ ವಶಕ್ಕೆ ಪಡೆದು ಇ.ಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ನ್ಯಾಯಾಲಯಕ್ಕೆ ಹಾಜರುಪಡಿಸುವ ಮುನ್ನ ಬೌರಿಂಗ್ ಆಸ್ಪತ್ರೆಯಲ್ಲಿ ಶಾಸಕರಿಗೆ ವೈದ್ಯಕೀಯ ತಪಾಸಣೆ ನಡೆಸಲಾಯಿತು. ನ್ಯಾಯಾಲಯದಲ್ಲಿ ಇ.ಡಿ. ವಶಕ್ಕೆ ನೀಡಲು ವೀರೇಂದ್ರ ಪರ ವಕೀಲ ಕಿರಣ್ ಜವಳಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಪ್ರಕರಣದ ತನಿಖೆ ವೇಳೆ ಅಕ್ರಮ ಹಣ ವ್ಯವಹಾರದ ಬಗ್ಗೆ ಮಾಹಿತಿ ಇದೆ. ಆದರೆ ವಿಚಾರಣೆಗೆ ಆರೋಪಿ ಸ್ಪಂದಿಸುತ್ತಿಲ್ಲ. ಹೀಗಾಗಿ ಆರೋಪಿ ವಿಚಾರಣೆ ನಡೆಸಲು ಮತ್ತೆ ವಶಕ್ಕೆ ನೀಡುವಂತೆ ಇ.ಡಿ. ಪರ ವಕೀಲ ಪ್ರಮೋದ್ ಚಂದ್ರ ವಾದಿಸಿದರು.
ಅಕ್ರಮವಾಗಿ ಆನ್‌ಲೈನ್ ಬೆಟ್ಟಿಂಗ್ ಆ್ಯಪ್‌ಗಳನ್ನು ನಡೆಸಿ ಬಹುಕೋಟಿ ಹಣ ಗಳಿಸಿರುವ ಬಗ್ಗೆ ಶಾಸಕ ವೀರೇಂದ್ರ ವಿರುದ್ಧ ಆರೋಪ ಕೇಳಿ ಬಂದಿದೆ. ಪ್ರಕರಣ ಸಂಬಂಧ ಆ.23 ರಂದು ವೀರೇಂದ್ರ ಅವರನ್ನು ಇ.ಡಿ ಬಂಧಿಸಿತ್ತು. ಇದಕ್ಕೂ ಮುನ್ನ ವೀರೇಂದ್ರ ಅವರ ಮನೆ, ಕಚೇರಿ ಹಾಗೂ ಅವರ ಸಂಬಂಧಿಕರ ಮನೆಗಳನ್ನು ಇ.ಡಿ ಶೋಧಿಸಿತ್ತು. ಈ ವೇಳೆ ಐಷಾರಾಮಿ ಕಾರುಗಳು, ಕೆ.ಜಿ. ಗಟ್ಟಲೆ ಚಿನ್ನ ಹಾಗೂ ಕೋಟ್ಯಂತರ ರು. ನಗದು ಜಪ್ತಿಯಾಗಿತ್ತು. ಬೆಟ್ಟಿಂಗ್ ಆ್ಯಪ್‌ಗಳಿಂದ ಕಡಿಮೆ ಅವಧಿಯಲ್ಲಿ ಸುಮಾರು 2000 ಕೋಟಿ ರು. ಗಳಿಸಿದ್ದಾರೆ ಎಂದು ತನಿಖೆ ವೇಳೆ ಪತ್ತೆಯಾಗಿರುವುದಾಗಿ ಇ.ಡಿ ಹೇಳಿದೆ. ಈ ಹಿನ್ನೆಲೆಯಲ್ಲಿ ಆನ್‌ಲೈನ್ ಮೋಸದ ಜಾಲ ಮತ್ತಷ್ಟು ಶೋಧಿಸಲು ವೀರೇಂದ್ರ ಅವರಿಗೆ ಇ.ಡಿ. ಗ್ರಿಲ್ ನಡೆಸಲಿದೆ ಎನ್ನಲಾಗಿದೆ.