ಅಪ್ಪಾರಾವ್ ಸೌದಿ
ಕನ್ನಡಪ್ರಭ ವಾರ್ತೆ ಬೀದರ್ಬಿಜೆಪಿಯ ಟಿಕೆಟ್‌ನಷ್ಟೇ ಕುತೂಹಲ ಮೂಡಿಸಿದ್ದ ಬೀದರ್ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಯಲ್ಲಿ ಕಾಂಗ್ರೆಸ್ ಕೊನೆಗೂ ತನ್ನ ನಿರ್ಧಾರ ಪ್ರಕಟಿಸಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಪುತ್ರನಿಗೇ ಟಿಕೆಟ್ ನೀಡುವ ಮೂಲಕ ಕಮಲ ಪಾಳಯದ ಹಾಲಿ ಸಂಸದ ಭಗವಂತ ಖೂಬಾಗೆ ಭಾರಿ ಟಕ್ಕರ್ ನೀಡಲು ತಂತ್ರ ರೂಪಿಸಿದಂತಿದೆ.
ಮಾಜಿ ಸಚಿವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆಯವರ ಪರಮಾಪ್ತರಾದ ರಾಜಶೇಖರ ಪಾಟೀಲ್ ಅವರಿಗೇ ಟಿಕೆಟ್ ನೀಡುವುದು ಬಹುತೇಕ ಪಕ್ಕಾ ಎಂದೆನ್ನಲಾಗಿದ್ದರೂ ಸ್ಪರ್ಧೆ ವಿಚಾರವಾಗಿ ಈ ಹಿಂದೆ ಖಂಡ್ರೆ ಅವರಿಗೆ ಮಾತು ಕೊಟ್ಟಿದ್ದ ಪಾಟೀಲ್ ತನ್ನ ಮಾತಿಗೆ ನಡೆದುಕೊಂಡಂತೆ ಪಕ್ಷದ ಮುಖಂಡರಿಗೆ ಚುನಾವಣಾ ಕಣಕ್ಕಿಳಿಯದಿರುವ ಕುರಿತು ತಮ್ಮ ಸ್ಪಷ್ಟತೆಯನ್ನು ತಿಳಿಸಿದ್ದೇ ಅಂತಿಮವಾಗಿ ಟಿಕೆಟ್ ಖಂಡ್ರೆ ಪುತ್ರನಿಗೆ ಸಿಗುವಂತಾಯಿತು.ಬೀದರ್ ಕಾಂಗ್ರೆಸ್ ಲೋಕಸಭಾ ಟಿಕೆಟ್‌ಗಾಗಿ ಕಳೆದ ಐದಾರು ತಿಂಗಳುಗಳ ಹಿಂದೆಯೇ ತಯಾರಿ ನಡೆಸಿದ್ದ ಸಾಗರ ಖಂಡ್ರೆ ಹಾಗೂ ಕೊನೆ ಕ್ಷಣದಲ್ಲಿ ಖರ್ಗೆ ಅವರಿಂದ ಸೂಚಿಸಲ್ಪಟ್ಟ ಮಾಜಿ ಸಚಿವರೂ ಆದ ರಾಜಶೇಖರ ಪಾಟೀಲ್ ಅವರ ಮಧ್ಯ ಯಾರಿಗೆ ಟಿಕೆಟ್ ಸಿಗುತ್ತೆ ಎಂಬ ಕುತೂಹಲ, ಈ ಹಿಂದೆ ಪಾಟೀಲರು ಖಂಡ್ರೆಗೆ ನೀಡಿದ್ದ ಮಾತು ಉಳಿಸಿಕೊಳ್ತಾರಾ ಎಂಬ ಪ್ರಶ್ನೆ ಜನರಲ್ಲಿ ಮೂಡಿತ್ತು. ಅದಕ್ಕೆಲ್ಲ ಈಗ ಉತ್ತರ ಸಿಕ್ಕಂತಾಗಿದೆ.
ಈಶ್ವರ ಖಂಡ್ರೆ ಪುತ್ರ ಸಾಗರ ಖಂಡ್ರೆ ಎನ್‌ಎಸ್‌ಯುಐ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಕೆಲ ತಿಂಗಳುಗಳ ಹಿಂದೆ ನೇಮಕಗೊಂಡಿದ್ದು, ಲೋಕಸಭಾ ಕ್ಷೇತ್ರದಾದ್ಯಂತ ತಂದೆಯ ಛಾಯೆಯಲ್ಲಿಯೇ ತನ್ನ ಛಾಪನ್ನು ಮೂಡಿಸುವಲ್ಲಿ ತಲ್ಲೀನರಾಗಿದ್ದು, ಇದೀಗ ಕೇಂದ್ರದಲ್ಲಿ ಸಚಿವರಾಗಿ ಅಷ್ಟೇ ಅಲ್ಲ ಕಳೆದ ಎರಡು ಚುನಾವಣೆಗಳಲ್ಲಿ ಘಟಾನುಘಟಿಗಳ ವಿರುದ್ಧ ಸ್ಪರ್ಧಿಸಿ ಗೆಲುವು ಸಾಧಿಸಿದ, ಮತ್ತೊಮ್ಮೆ ಮೋದಿ ಅಲೆಯಲ್ಲಿರುವ ಭಗವಂತ ವಿರುದ್ಧ ಸೆಣಸುವದಕ್ಕಾಗಿ ಸಜ್ಜಾಗಬೇಕಿದೆ.ಬಿಜೆಪಿಯಲ್ಲಿ ಈಗಾಗಲೇ ಮನೆಯೊಂದು ಮೂರು ಬಾಗಿಲು ಎಂಬಂತೆ ಭಿನ್ನಮತಗಳು ಪಕ್ಷ ಮುಖಂಡರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಇತ್ತೀಚೆಗೆ ಕಲಬುರಗಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡಿದ್ದ ಸಂದರ್ಭದಲ್ಲಿ ಜಿಲ್ಲೆಯ ಶಾಸಕರನ್ನು ಪಕ್ಷದ ಮುಖಂಡರು ಕರೆದು ಮಾತನಾಡಿಸಿ ಬಿಕ್ಕಟ್ಟು ಶಮನಕ್ಕೆ ಪ್ರಯತ್ನಿಸಿದ್ದಾರೆ. ಇನ್ನೂ ಪ್ರಭು ಚವ್ಹಾಣ್ ಅವರ ಕೋಪದ ಕುರಿತು ಮಾಹಿತಿ ಇಲ್ಲವಾಗಿದೆ. ಇನ್ನುಳಿದ ಶಾಸಕರ ಮನಸ್ಥಿತಿ ತಿಳಿದುಬಂದಿಲ್ಲ.
ಇನ್ನು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಜಿಲ್ಲೆಯಲ್ಲಿ ಉತ್ತಮ ಸಂಬಂಧಗಳನ್ನು ಹೊಂದಿದ್ದಾರಾದರೂ ಹಿರಿಯ ನಾಯಕರಾದ ಮಾಜಿ ಸಚಿವ ರಾಜಶೇಖರ ಪಾಟೀಲ್ ಅವರ ಸಹಕಾರ ಅತ್ಯಗತ್ಯ. ಪಾಟೀಲ್ ಅವರು ಕ್ಷೇತ್ರದಲ್ಲಿ ಸಾಕಷ್ಟು ಮತದಾರರನ್ನು ಅತೀ ಸಮೀಪದಿಂದ ಬಲ್ಲವರಾಗಿದ್ದು ಕಾಂಗ್ರೆಸ್ ಅಭ್ಯರ್ಥಿಗೆ ಅವರು ಪ್ರಾಮಾಣಿಕವಾಗಿ ಸಾಥ್ ನೀಡಿದಲ್ಲಿ ಮಾತ್ರ ಖಂಡ್ರೆ ಸ್ಪರ್ಧೆಗೆ ರಂಗು ಬರೋದು.ಇದರೊಟ್ಟಿಗೆ ಬಿಜೆಪಿಯ ಘೋಷಿತ ಅಭ್ಯರ್ಥಿ ಭಗವಂತ ಖೂಬಾ ಅವರು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಜೊತೆ ರಾಜಕೀಯವಾಗಿ ಸಾಕಷ್ಟು ವಿರೋಧದ ಧೋರಣೆಗಳನ್ನು ಹೊಂದಿದ್ದು, ಇದೀಗ ಕಾಂಗ್ರೆಸ್ ಮತ್ತು ಬಿಜೆಪಿಯ ಮಧ್ಯದ ಈ ಸ್ಪರ್ಧೆಯಲ್ಲಿ ಎಂದಿನಂತೆ ಒಬ್ಬರ ವಿರುದ್ಧ ಒಬ್ಬರ ಆರೋಪ ಪ್ರತ್ಯಾರೋಪಗಳ ಸುರಿಮಳೆಯಾಗಲಿದೆ. ಅದನ್ನು ಜನ ಯಾವ ರೀತಿ ಸ್ವೀಕರಿಸುತ್ತಾರೆ ಯಾರಿಗೆ ವರಿಸುತ್ತಾರೆ ಎಂಬುವದನ್ನು ಮಾತ್ರ ಚುನಾವಣಾ ಫಲಿತಾಂಶದ ವರೆಗೆ ಕಾದು ನೋಡಬೇಕಿದೆ.