ಅಶ್ವಿನ ಅಮ್ಮಣಗಿ
ಡಾ.ಅಂಬೇಡ್ಕರ್ ಅವರ ಶತಮಾನೋತ್ಸವ ವಿಷಯವನ್ನು ಶಶಿಕಲಾ ಜಿಲ್ಲೆ ಅವರು ಸರ್ಕಾರಕ್ಕೆ ಪ್ರಸ್ತಾಪಿಸಿದಾಗ ಸಿದ್ದರಾಮಯ್ಯನವರು ಗಮನ ಹರಿಸಲಿಲ್ಲ. ಕಾಂಗ್ರೆಸ್ ಅಧ್ಯಕ್ಷ ಖರ್ಗೆ ಅವರು ಕೂಡ ನಾಮ್ ಕೆ ವಾಸ್ತೆ ಕೂಡ ಈ ಕಡೆ ಗಮನಹರಿಸಲಿಲ್ಲ. ಕಾಂಗ್ರೆಸ್‌ನವರು ಎಂದಿಗೂ ದಲಿತರನ್ನು ಗೌರವಿಸಲಿಲ್ಲ ಎಂದು ಮಾಜಿ ಡಿಸಿಎಂ, ಸಂಸದ ಗೋವಿಂದ ಕಾರಜೋಳ ಅವರು ಗಂಭೀರ ಆರೋಪ ಮಾಡಿದರು.
ಅಂಬೇಡ್ಕರ್ ಅವರು ನಿಪ್ಪಾಣಿ ನಗರಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಭೀಮ ಹೆಜ್ಜೆ-100 ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.ಶ್ರೇಷ್ಠ ಸಂವಿಧಾನ ಸೃಷ್ಟಿಕರ್ತ ಅಂಬೇಡ್ಕರ್ ಅವರನ್ನು ದೇಶದ ಮೊದಲನೇ ಚುನಾವಣೆಯಲ್ಲಿ ಸೋಲಿಸಿದ ಶ್ರೇಯ ಕಾಂಗ್ರೆಸ್‌ಗೆ ಸಲ್ಲಬೇಕು. ಬಾಬಾಸಾಹೇಬ್ ಅವರು ಯಾವುದೇ ಕಾರಣಕ್ಕೂ ಲೋಕಸಭೆ ಪ್ರವೇಶ ಮಾಡಬಾರದು ಅಂತ ಕಠಿಣ ನಿರ್ಧಾರ ತೆಗೆದುಕೊಂಡಿದ್ದು ಅಂದಿನ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ಅವರು. ಕೇವಲ ವೋಟ್ ಬ್ಯಾಂಕ್‌ಗಾಗಿ ಬಾಬಾ ಸಾಹೇಬ್ ಅವರನ್ನು ನೆನಪಿಸಿಕೊಳ್ಳುವ ಕಾಂಗ್ರೆಸ್, ಗೌರವ ಕೊಡುವ ಸಮಯ ಬಂದಾಗ ಮಾತ್ರ ತಿರಸ್ಕಾರ ಮಾಡುತ್ತೆ. ಜೀವಿತ ಕಾಲದಲ್ಲಿ ಬಾಬಾಸಾಹೇಬ್ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಲಿಲ್ಲ ಎಂದರು.ನಾಮ್ ಕೆ ವಾಸ್ತೆ ಕಾಂಗ್ರೆಸ್ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರಿಗೂ ಕಾಂಗ್ರೆಸ್ ಕವಡೆ ಕಾಸಿನ ಕಿಮ್ಮತ್ತು ಕೊಡುತ್ತಿಲ್ಲ. ಸಭೆ ಸಮಾರಂಭಗಳಿಗೂ ಖರ್ಗೆಯವರಿಗೆ ಸ್ಥಾನಮಾನ ನೀಡುತ್ತಿಲ್ಲ. ಬಾಬಾಸಾಹೇಬ್ ಅವರನ್ನಲ್ಲ ಬಾಬು ಜಗಜೀವನ್ ರಾಮ್ ಅವರನ್ನು ವಾಜಪೇಯಿ ಅವರು ಪ್ರಧಾನಮಂತ್ರಿ ಮಾಡಬೇಕು ಅಂದುಕೊಂಡಾಗ ಕುತಂತ್ರದಿಂದ ಅವರನ್ನು ಸೋಲಿಸುವಂತಹ ಪ್ರಯತ್ನ ಕಾಂಗ್ರೆಸ್ ಮಾಡಿರುವುದು ಇತಿಹಾಸ. ಮ್ಯಾನೇಜ್ಮೆಂಟ್ ಕೋಟಾದಲ್ಲಿ ಐದು ಬಾರಿ ಲೋಕಸಭಾ ಸದಸ್ಯರಾದ ರಾಹುಲ್ ಗಾಂಧಿಯವರು ಕೂಡ ದಲಿತರಿಗಾಗಲಿ, ಬಾಬಾ ಸಾಹೇಬ್ ಅವರಿಗಾಗಲಿ ಗೌರವ ಕೊಡುವಂತಹ ಕೆಲಸ ಮಾಡಲಿಲ್ಲ ಎಂದು ಹರಿಹಾಯ್ದರು.ವಿಧಾನಸಭೆ ವಿರೋಧ ಪಕ್ಷ ನಾಯಕ ಆರ್.ಅಶೋಕ್ ಮಾತನಾಡಿದರು. ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿ, ಬಾಬಾಸಾಹೇಬ್ ಅವರು ನಿಪ್ಪಾಣಿಯಲ್ಲಿ ಪುಣ್ಯ ಸ್ಪರ್ಶ ಮಾಡಿ ಶತಮಾನೋತ್ಸವ ಆಚರಿಸುತ್ತಿದ್ದು ಇದು ಸುವರ್ಣ ಅಕ್ಷರದಲ್ಲಿ ಬರೆದಿಡುವಂತಹ ಕ್ಷಣ. ಇದನ್ನು ಬಿಜೆಪಿ ರಾಜ್ಯದ ಹಾಗೂ ಕೇಂದ್ರದ ನಾಯಕರ ನೇತೃತ್ವದಲ್ಲಿ ಮಾಡುತ್ತಿರುವುದು ನನ್ನ ಭಾಗ್ಯ. ಬಾಬಾ ಸಾಹೇಬ್ ಅವರು ಅಸ್ಪೃಶ್ಯತೆ ತೊಡೆದು ಹಾಕಲು ಹೋರಾಟ ಮಾಡುತ್ತಿದ್ದರು. ಅದರ ಅಂಗವಾಗಿ ಬಹಿಷ್ಕೃತ ಕಾರ್ಯಕಾರಿಣಿ ಸಭೆ ಇಟ್ಟುಕೊಂಡು ನಗರಕ್ಕೆ ಆಗಮಿಸಿದ್ದರು. ಈ ನೂರು ವರ್ಷದ ಇತಿಹಾಸವನ್ನು ಇಲ್ಲಿಗೆ ಮರೆಯದೆ ಮುಂದಿನ ಪೀಳಿಗೆಗೆ ಕೊಂಡೊಯ್ಯಬೇಕು ಎಂದು ಆಶಿಸಿದರು.ಇದಕ್ಕಾಗಿ ₹1.30 ಕೋಟಿ ಬಿಜೆಪಿ ಸರ್ಕಾರ ಇದ್ದಾಗ ಬಂದಿದೆ. ಸದ್ಯ ಶಾಸಕರ ನಿಧಿಯಿಂದ ₹1 ಕೋಟಿ ಹಾಗೂ ಜೊಲ್ಲೆ ಗ್ರೂಪ್ ವತಿಯಿಂದ ₹1 ಕೋಟಿ ಹೀಗೆ ₹3.30 ಕೋಟಿ ಹಣ ಈ ಭವ್ಯ ಸ್ಮಾರಕ ಕಾಗಿ ನೀಡುವುದಾಗಿ ತಿಳಿಸಿದರು.ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಪ ವಿರೋಧ ಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ವಿಪ ಸಚೇತಕ ಎನ್. ರವಿಕುಮಾರ್, ಮಾಜಿ ಸಚಿವ ಎನ್ ಮಹೇಶ್, ಮಾಜಿ ಸಂಸದರಾದ ಉಮೇಶ ಜಾಧವ, ಮುನಿಸ್ವಾಮಿ, ಎಸ್ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಸಿಮೆಂಟ್ ಮಂಜು, ಶಾಸಕ ಅವಿನಾಶ್ ಜಾಧವ, ಶಾಸಕ ದುರ್ಯೋಧನ ಐಹೊಳೆ, ಮಾಜಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ, ಮಾಜಿ ಸಂಸದೆ ಮಂಗಲ ಅಂಗಡಿ, ಮಾಜಿ ಶಾಸಕರಾದ ಶ್ರೀಮಂತ ಪಾಟೀಲ್, ಮಹೇಶ್ ಕುಮಠಳ್ಳಿ, ಪಿ.ರಾಜೀವ್, ಹುಕ್ಕೇರಿ ಶಾಸಕ ನಿಖಿಲ್ ಕತ್ತಿ, ಬಸವಪ್ರಸಾದ್ ಜೊಲ್ಲೆ ಉಪಸ್ಥಿತರಿದ್ದರು.ಬೈಕ್ ಮೂಲಕ ಅದ್ಧೂರಿ ಸ್ವಾಗತ
- ಶಶಿಕಲಾ ಜೊಲ್ಲೆ,
ಶಾಸಕಿ, ಮಾಜಿ ಸಚಿವೆ