ಕಾಂಗ್ರೆಸ್ ಪಕ್ಷ ಸುಳ್ಳು ಹೇಳಲ್ಲ.. ಕೊಟ್ಟಮಾತು ಮರೆಯಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

KannadaprabhaNewsNetwork |  
Published : Oct 17, 2024, 12:46 AM IST
16ಕೆಎಂಎನ್ ಡಿ13 | Kannada Prabha

ಸಾರಾಂಶ

ವಿಪಕ್ಷಗಳು ಸುಮ್ಮನೇ ಅಪಪ್ರಚಾರ ಮಾಡುತ್ತಾರೆ. ಅಭಿವೃದ್ಧಿ ಕೆಲಸ ನಿಂತು ಹೋಗುತ್ತವೆ ಅಂತಾರೆ. ಎತ್ತಿನಹೊಳೆ ಯೋಜನೆ ನಾವು ಮಾಡಿದ್ದು, ಇದು ಅಭಿವೃದ್ಧಿ ಕೆಲಸ ಅಲ್ವಾ?. ಈ ಸರ್ಕಾರ ಇರುವವರೆಗೂ ಗ್ಯಾರಂಟಿಗಳ ಜೊತೆಗೆ ಅಭಿವೃದ್ಧಿಯನ್ನು ನಾವು ಮಾಡುತ್ತವೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ/ಹಲಗೂರು

ಕಾಂಗ್ರೆಸ್ ಪಕ್ಷ ಸುಳ್ಳು ಹೇಳಲ್ಲ. ಕೊಟ್ಟ ಮಾತು ಮರೆಯಲ್ಲ. ನಮ್ಮ ಸರ್ಕಾರ ಎಲ್ಲಾ ಭರವಸೆ ಈಡೇರಿಸುವ ಕೆಲಸ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ತಾಲೂಕಿನ ತೊರೆಕಾಡನಹಳ್ಳಿಯಲ್ಲಿ ಬುಧವಾರ ಬೆಂಗಳೂರಿನ 110 ಹಳ್ಳಿಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಕಾವೇರಿ 5ನೇ ಹಂತದ ಯೋಜನೆ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ನಾವು ಹೇಳಿದ್ದನ್ನು ಮಾಡೇ ಮಾಡುತ್ತೇವೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಎಂಟು ತಿಂಗಳಲ್ಲೇ ಎಲ್ಲಾ ಗ್ಯಾರಂಟಿ ಅನುಷ್ಠಾನಗೊಳಿಸಿದ್ದೇವೆ. ಜನರಿಗೆ ಮೂಲಭೂತ ಸಮಸ್ಯೆ ಬಗೆಹರಿಸುವ ಕೆಲಸ ಮಾಡುತ್ತಿದೆ ಎಂದರು.

ಗ್ಯಾರಂಟಿ ಯೋಜನೆಗಳಿಗೆ 52 ಸಾವಿರ ಕೋಟಿ ಖರ್ಚಾಗುತ್ತಿದೆ. ಈ ಗ್ಯಾರಂಟಿಗಳನ್ನು ಪ್ರಧಾನಿ ಮೋದಿ ಸೇರಿ ಬಿಜೆಪಿಯವರು ಟೀಕೆ ಮಾಡಿದ್ದರು. ಆದರೆ, ಬಜೆಟ್‌ನಲ್ಲೂ ಗ್ಯಾರಂಟಿಗಳಿಗೆ ಅನುದಾನ ಮೀಸಲಿಡಲಾಗಿದೆ ಎಂದರು.

ವಿಪಕ್ಷಗಳು ಸುಮ್ಮನೇ ಅಪಪ್ರಚಾರ ಮಾಡುತ್ತಾರೆ. ಅಭಿವೃದ್ಧಿ ಕೆಲಸ ನಿಂತು ಹೋಗುತ್ತವೆ ಅಂತಾರೆ. ಎತ್ತಿನಹೊಳೆ ಯೋಜನೆ ನಾವು ಮಾಡಿದ್ದು, ಇದು ಅಭಿವೃದ್ಧಿ ಕೆಲಸ ಅಲ್ವಾ?. ಈ ಸರ್ಕಾರ ಇರುವವರೆಗೂ ಗ್ಯಾರಂಟಿಗಳ ಜೊತೆಗೆ ಅಭಿವೃದ್ಧಿಯನ್ನು ನಾವು ಮಾಡುತ್ತೇವೆ ಎಂದರು.

ಬೆಂಗಳೂರು ನಗರ ವೇಗವಾಗಿ ಬೆಳೆಯುತ್ತಿದೆ. ಆ ನಗರಕ್ಕೆ ಮೂಲ ಸೌಕರ್ಯ ಕಲ್ಪಿಸುವುದು ಪ್ರತಿ ಸರ್ಕಾರದ ಜವಾಬ್ದಾರಿ. ಪೆರಿಪರಲ್ ರಿಂಗ್ ರೋಡ್ ಯೋಜನೆ ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. ಟನಲ್ ಸಿಸ್ಟಂ ತರಲು ಪ್ರಯತ್ನ ನಡೆಸಲಾಗುತ್ತಿದೆ ಎಂದರು.

ಇಡೀ ಬೆಂಗಳೂರಿಗೆ ಶುದ್ಧ ಕುಡಿಯುವ ನೀರು ಕೊಡುತ್ತೇವೆ. 6ನೇ ಹಂತದ ಯೋಜನೆಯಿಂದ 500 ಎಂಎಲ್‌ಡಿ ನೀರು ಸಿಗಲಿದೆ ಎಂದರು. ಇದೇ ವೇಳೆ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರ ಮನವಿ ಮೇರೆಗೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ಮಳವಳ್ಳಿಗೆ ವಿಶೇಷ ಅನುದಾನದ ಭರವಸೆ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!