ಭೂಮಿಯ ಹಕ್ಕು ಕೊಡಿಸಲು ಕಾಂಗ್ರೆಸ್ ಪಕ್ಷ ಬದ್ಧವಾಗಿದೆ : ಡಾ.ಅಂಶುಮಂತ್‌

KannadaprabhaNewsNetwork | Published : Aug 25, 2024 1:46 AM

ಸಾರಾಂಶ

ಚಿಕ್ಕಮಗಳೂರು, ಜೀವನಕ್ಕಾಗಿ ಈಗಾಗಲೇ ಸಾಗುವಳಿ ಮಾಡಿರುವ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಭೂಮಿ ಹಕ್ಕು ಕೊಡಿಸಲು ಕಾಂಗ್ರೆಸ್ ಪಕ್ಷ ಬದ್ಧವಾಗಿದೆ. ಆದರೆ, ವಿಪಕ್ಷದವರ ಹೇಳಿಕೆಯಿಂದ ಜಿಲ್ಲೆಯ ಜನರಲ್ಲಿ ಆತಂಕ ಸೃಷ್ಟಿಯಾಗುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಭದ್ರಾ ಕಾಡಾ ಅಧ್ಯಕ್ಷ ಡಾ. ಕೆ.ಪಿ. ಅಂಶುಮಂತ್ ಹೇಳಿದ್ದಾರೆ.

ಜೀವನೋಪಾಯಕ್ಕಾಗಿ ಮಾಡಿದ ಕೃಷಿ ಭೂಮಿಯಿಂದ ಅರಣ್ಯ ಇಲಾಖೆ ಅಧಿಕಾರಿಗಳು ಒಕ್ಕಲೆಬ್ಬಿಸ ಬಾರದು ।

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಜೀವನಕ್ಕಾಗಿ ಈಗಾಗಲೇ ಸಾಗುವಳಿ ಮಾಡಿರುವ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಭೂಮಿ ಹಕ್ಕು ಕೊಡಿಸಲು ಕಾಂಗ್ರೆಸ್ ಪಕ್ಷ ಬದ್ಧವಾಗಿದೆ. ಆದರೆ, ವಿಪಕ್ಷದವರ ಹೇಳಿಕೆಯಿಂದ ಜಿಲ್ಲೆಯ ಜನರಲ್ಲಿ ಆತಂಕ ಸೃಷ್ಟಿಯಾಗುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಭದ್ರಾ ಕಾಡಾ ಅಧ್ಯಕ್ಷ ಡಾ. ಕೆ.ಪಿ. ಅಂಶುಮಂತ್ ಹೇಳಿದ್ದಾರೆ.

ಜಿಲ್ಲೆಯಲ್ಲಿ ಜೀವನೋಪಾಯಕ್ಕಾಗಿ ಮಾಡಿರುವ ಕೃಷಿ ಭೂಮಿಯಿಂದ ಜನರನ್ನು ಒಕ್ಕಲೆಬ್ಬಿಸಲು ಅರಣ್ಯ ಇಲಾಖೆ ಅಧಿಕಾರಿ ಗಳು ಮುಂದಾಗಬಾರದು. ಸಾಗುವಳಿದಾರರಿಗೆ ಅಡ್ಡಿಪಡಿಸಬಾರದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ರಾಜ್ಯದಲ್ಲಿ ಉತ್ತಮ ಆಡಳಿತ ನಡೆಸಿರುವ ಕಾಂಗ್ರೆಸ್ ಪಕ್ಷ ಜನರಿಗೆ ಭೂಮಿ ಹಕ್ಕು ನೀಡಿದ್ದು, ಅಧಿಕಾರ ಅನುಭವಿಸಿರುವ ಬಿಜೆಪಿ ಜನರಿಗೆ ಭೂಮಿ ಹಕ್ಕು ಕೊಡಿಸುವ ಬಗ್ಗೆ ಚಿಂತನೆ ಮಾಡಲಿಲ್ಲ, ಅದರ ಬದಲಿಗೆ ಭೂ ಕಬಳಿಕೆ ನಿಷೇಧ ಕಾಯ್ದೆ ಜಾರಿ ಗೊಳಿಸುವ ಮೂಲಕ ಒತ್ತುವರಿದಾರರನ್ನು ಭೂಗಳ್ಳರು ಎಂದೇ ಬಿಂಬಿಸಲಾಗುತ್ತಿತ್ತು ಎಂದು ಆರೋಪಿಸಿದರು.

ಬಿಜೆಪಿ ಸರ್ಕಾರದ ಆಡಳಿತದಲ್ಲಿ ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಧ್ವನಿಯಾಗದೆ, ಜನಪ್ರತಿನಿಧಿಗಳು ನಿರಾಸಕ್ತಿ ತೋರಿದ್ದರಿಂದ ಜಿಲ್ಲೆಯಲ್ಲಿ ಸಮಸ್ಯೆಗಳು ತಲೆದೋರಿವೆ. ಅರಣ್ಯಕ್ಕೆ ಸಂಬಂಧಿಸಿದ ವಿಚಾರವನ್ನು ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಲು ಸಂಸದರು ಮುಂದಾಗುತ್ತಿಲ್ಲವೆಂದು ಟೀಕಿಸಿದರು.

ಈಗಾಗಲೇ ಬಾಕಿ ಇರುವ ನಮೂನೆ 50, 53, 57, 94ಸಿ ಅಡಿಯಲ್ಲಿ ಅರ್ಜಿಗಳನ್ನು ವಿಲೇವಾರಿ ಮಾಡಲಾಗುವುದು ಎಂದು ಹೇಳಿದ ಅವರು, ಪರಿಸರ ಮತ್ತು ರೈತರ ಬದುಕು ಉಳಿಯಬೇಕೆಂಬ ಬಗ್ಗೆ ವಾಸ್ತಾವಾಂಶಗಳು ವೈಜ್ಞಾನಿಕವಾಗಿರಬೇಕೆಂಬ ದೃಷ್ಟಿಯಿಂದ ರಾಜ್ಯ ಸರ್ಕಾರ ರೈತರ ನೆರವಿಗೆ ಬರಲಿದೆ ಎಂದರು.

ಕೇಂದ್ರದಲ್ಲಿ ಡಾ. ಮನಮೋಹನ್‌ಸಿಂಗ್ ಪ್ರಧಾನಿಯಾಗಿದ್ದಾಗ ಬುಡಕಟ್ಟು ಜನರಿಗೆ ಪಾರಂಪರಿಕ ಅರಣ್ಯ ಹಕ್ಕನ್ನು ನೀಡಲಾಯಿತು. ಜಿಲ್ಲೆಯ ಗಂಭೀರ ವಿಷಯಗಳ ಬಗ್ಗೆ ಶಾಸಕರು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದಿದ್ದು, ಕಂದಾಯ ಮತ್ತು ಅರಣ್ಯ ವಿಷಯಕ್ಕೆ ಸಂಬಂಧಿಸಿದಂತೆ ಕಂದಾಯ ಸಚಿವರು ಮತ್ತು ಅರಣ್ಯ ಸಚಿವರೊಂದಿಗೆ ಚರ್ಚೆ ನಡೆಸಿದ್ದಾರೆಂದು ಹೇಳಿದರು.

ಕಂದಾಯ ಮತ್ತು ಅರಣ್ಯ ಪ್ರದೇಶದ ಗಡಿ ಗುರುತಿಸಲು ಈಗಾಗಲೇ ಜಂಟಿ ಸರ್ವೆಗೆ ಚಾಲನೆ ನೀಡಲಾಗಿದೆ. ಅರಣ್ಯಕ್ಕೆ ಸಂಬಂಧಿಸಿದಂತೆ ಪಂಚಾಯಿತಿ ಮಟ್ಟದಿಂದ ಜನವಸತಿ ಪ್ರದೇಶದ ವಸ್ತುಸ್ಥಿತಿ ಪರಿಗಣಿಸಿ ಗಂಭೀರ ಹೆಜ್ಜೆ ಇಡಲಾಗಿದೆ. ಸಾರ್ವಜನಿಕರ ಗಮನಕ್ಕೆ ಇಲ್ಲದೆ ಅರ್ಜಿ ವಿಲೇವಾರಿ ಮಾಡದಂತೆ ಫಾರೆಸ್ಟ್ ಸೆಟ್ಲ್‌ಮೆಂಟ್ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಪರಿಭಾವಿತ ಅರಣ್ಯವನ್ನು 1.50 ಲಕ್ಷ ಎಕರೆಯಿಂದ 55 ಸಾವಿರಕ್ಕೆ ಇಳಿಸಲಾಗಿದೆ. ನಿವೇಶನ ರಹಿತರಿಗೆ ನಿವೇಶನ ಕೊಡಲು, ಸ್ಮಶಾನಕ್ಕೆ ಭೂಮಿ ಕಾಯ್ದಿರಿಸಲು, ಈಗಾಗಲೇ ಸಾಗುವಳಿ ಮಾಡಿದ ಸಣ್ಣ ರೈತರಿಗೆ ಭೂಮಿ ಹಕ್ಕು ಕೊಡಿಸುವ ಪ್ರಯತ್ನ ನಡೆದಿದೆ. ಕೃಷಿ ಬದುಕಿಗೆ ಮಾಡಿರುವ ಒತ್ತುವರಿ ತೆರವುಗೊಳಿಸದಂತೆ ಈಗಾಗಲೇ ಸರ್ಕಾರ ಸೂಚನೆ ನೀಡಿದೆ ಎಂದರು.

ಮಾಜಿ ಸಚಿವ ಡಿ.ಎನ್.ಜೀವರಾಜ್ ಒತ್ತುವರಿಗೆ ಸಂಬಂಧಿಸಿದಂತೆ ವಿವಿಧ ಹೇಳಿಕೆ ನೀಡುವ ಮೂಲಕ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇಂತಹ ಹೇಳಿಕೆಗಳಿಗೆ ಜಿಲ್ಲೆ ಜನರು ಕಿವಿಗೊಡಬಾರದು ಎಂದು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ, ತಾಲೂಕು ಅಧ್ಯಕ್ಷ ಮಲ್ಲೇಶ್ ಸ್ವಾಮಿ, ಹಿಂದುಳಿದ ವರ್ಗ ಜಿಲ್ಲಾಧ್ಯಕ್ಷ ಡಿ.ಸಿ.ಪುಟ್ಟೇಗೌಡ, ನಗರಸಭೆ ಸದಸ್ಯ ಮುನೀರ್ ಅಹ್ಮದ್ ಉಪಸ್ಥಿತರಿದ್ದರು.

ಪೋಟೋ ಫೈಲ್‌ ನೇಮ್‌ 24 ಕೆಸಿಕೆಎಂ 4

Share this article