ಹಾವೇರಿ: ಎಸ್‌ಐಆರ್ ಮೂಲಕ ಬಿಜೆಪಿಯಿಂದ ವೋಟ್ ಚೋರಿಯಾಗುತ್ತಿದೆ ಎಂದು ಹೇಳುತ್ತಿದ್ದ ಕಾಂಗ್ರೆಸ್‌ನಿಂದಲೇ ಮತಗಳ್ಳತನ ಆಗಿರುವ ಬಗ್ಗೆ ಆರೋಪ ಕೇಳಿಬಂದಿದೆ. ಪದವೀಧರರ ಪಶ್ಚಿಮ ಮತಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಹಾವೇರಿ ನಗರದ ತಹಸೀಲ್ದಾರ್ ಕಚೇರಿ ಮತಗಟ್ಟೆಯಲ್ಲಿ ಸಚಿವ ರುದ್ರಪ್ಪ ಲಮಾಣಿ ಜತೆಗೆ ಬಂದಿದ್ದ ಕಾಂಗ್ರೆಸ್ ಕಾರ್ಯಕರ್ತೆ ಮತ್ತೊಬ್ಬರ ಹೆಸರಿನಲ್ಲಿ ಮತದಾನ ಮಾಡಿದ್ದಾರೆ ಎಂದು ದಾಖಲೆ ಸಮೇತ ಬಿಜೆಪಿಯವರು ಆರೋಪಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಸಂಜೀವಕುಮಾರ ನೀರಲಗಿ, ನನ್ನ ಪತ್ನಿಯ ಹೆಸರಿನಲ್ಲಿ ನಕಲಿ ಮತದಾನ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಇದಕ್ಕೂ ನನಗೂ ಸಂಬಂಧವಿಲ್ಲ. ನಕಲಿ ಮತದಾನವಾಗಿರುವುದನ್ನು ಚುನಾವಣಾ ಅಧಿಕಾರಿಗಳೇ ಹೇಳಬೇಕು. ಈ ಬಗ್ಗೆ ಜಿಲ್ಲಾ ಚುನಾವಣಾಧಿಕಾರಿಗೆ ದೂರು ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.
ಘಟನೆ ಕುರಿತು ತನಿಖೆ ನಡೆಸಿ ಸತ್ಯಾಸತ್ಯತೆ ಬಹಿರಂಗಪಡಿಸಬೇಕು ಎಂದು ಬಿಜೆಪಿ ಮುಖಂಡರು ಆಗ್ರಹಿಸಿದ್ದಾರೆ. ಆಡಳಿತಾರೂಢ ಕಾಂಗ್ರೆಸ್ ಪಕ್ಷ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡು ನಕಲಿ ಮತದಾನ ಮಾಡಿಸಿದೆ ಎಂದು ಅವರು ಆರೋಪಿಸಿದ್ದಾರೆ.ಹಾವೇರಿಯ ತಹಸೀಲ್ದಾರ್ ಕಚೇರಿಯ ಮತಗಟ್ಟೆಯಲ್ಲಿ ನಕಲಿ ಮತದಾನ ನಡೆದಿರುವ ಕುರಿತು ಯಾವುದೇ ದೂರು ಬಂದಿಲ್ಲ, ಈಗ ವಿಷಯ ಗೊತ್ತಾಗಿದೆ. ನಕಲಿ ಮತದಾನ ಆಗಿದೆಯೋ ಇಲ್ಲವೋ ಎಂಬುದರ ಕುರಿತು ತನಿಖೆ ನಡೆಸುತ್ತೇವೆ. ಪಿಆರ್‌ಒ ಮೇಲೆ ದೂರು ದಾಖಲಾಗುತ್ತೆ ಎಂದು ಅಪರ ಜಿಲ್ಲಾಧಿಕಾರಿ ಎಲ್. ನಾಗರಾಜ್ ಹೇಳಿದರು.