ಕಲಬುರಗಿ ಮಹಾನಗರ ಪಾಲಿಕೆ ಕೈ ವಶ

KannadaprabhaNewsNetwork | Published : Jul 31, 2024 1:11 AM

ಸಾರಾಂಶ

ಕಲಬುರಗಿ ಮಹಾನಗರ ಪಾಲಿಕೆಯ 22ನೇ ಮೇಯರ್ ಆಗಿ 53ರ ವಾರ್ಡ್‌ನ ಪುರಪಿತೃವಾಗಿರುವ ಕಾಂಗ್ರೆಸ್ ಸದಸ್ಯ ಯಲ್ಲಪ್ಪ ನಾಯ್ಕೋಡಿ ಹಾಗೂ ಉಪ ಮೇಯರ್‌ ಆಗಿ ವಾರ್ಡ್‌ 10ರ ಸದಸ್ಯೆ ಹೀನಾಬೇಗಂ ಅಬ್ದುಲ್‌ ರಹೀಂ ಆಯ್ಕೆಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಇಲ್ಲಿನ ಕಲಬುರಗಿ ಮಹಾನಗರ ಪಾಲಿಕೆಯ 22ನೇ ಮೇಯರ್ ಆಗಿ 53ರ ವಾರ್ಡ್‌ನ ಪುರಪಿತೃವಾಗಿರುವ ಕಾಂಗ್ರೆಸ್ ಸದಸ್ಯ ಯಲ್ಲಪ್ಪ ನಾಯ್ಕೋಡಿ ಹಾಗೂ ಉಪ ಮೇಯರ್‌ ಆಗಿ ವಾರ್ಡ್‌ 10ರ ಸದಸ್ಯೆ ಹೀನಾಬೇಗಂ ಅಬ್ದುಲ್‌ ರಹೀಂ ಆಯ್ಕೆಯಾಗಿದ್ದಾರೆ.

ಇದರೊಂದಿಗೆ ಕಳೆದ 5 ವರ್ಷಗಳ ಕಾಲ ಪಾಲಿಕೆಯಲ್ಲಿನ ಬಿಜೆಪಿ ಆಡಳಿತ ಕೊನೆಯಾಗಿದೆ. ಯಲ್ಲಪ್ಪ ಮೇಯರ್‌ ಆಗಿ, ಹೀನಾ ಉಪ ಮೇಯರ್‌ ಆಗಿ ಆಯ್ಕೆಯಾಗುವ ಮೂಲಕ ಪಾಲಿಕೆಯಲ್ಲಿನ ಬಿಜೆಪಿಯ ಐದು ವರ್ಷಗಳ ಆಡಳಿತಕ್ಕೆ ತೆರೆ ಬಿತ್ತು.

ಈ ಬಾರಿ ಮೇಯರ್ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದರೆ, ಉಪ ಮೇಯರ್ ಹುದ್ದೆ ಬಿಸಿಎ ಪ್ರವರ್ಗಕ್ಕೆ ಮೀಸಲಾಗಿತ್ತು. ಒಟ್ಟು 55 ಸದಸ್ಯ ಬಲದ ಪಾಲಿಕೆಯಲ್ಲಿ ಕಾಂಗ್ರೆಸ್ ಪಕ್ಷದ 27 ಸದಸ್ಯರು ಆಯ್ಕೆಗೊಂಡಿದ್ದು, ಇದರ ಜೊತೆಗೆ ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ, ಸಂಸದ ರಾಧಾಕೃಷ್ಣ ದೊಡ್ಡಮನಿ, ಶಾಸಕರಾದ ಅಲ್ಲಮಪ್ರಭು ಪಾಟೀಲ್, ಕನೀಜ್ ಫಾತಿಮಾ, ಎಂಎಲ್‌ಸಿ ತಿಪ್ಪಣ್ಣಪ್ಪ ಕಮಕನೂರ್, ಜಗದೇವ ಗುತ್ತೇದಾರ್, ಚಂದ್ರಶೇಖರ ಪಾಟೀಲ್ ಅವರನ್ನು ಒಳಗೊಂಡಂತೆ ಸದಸ್ಯ ಬಲ 33ಕ್ಕೆ ಏರಿಕೆಯಾಗಿದೆ.

ಮತ್ತೊಂದೆಡೆ, 22 ಸದಸ್ಯ ಬಲ ಹೊಂದಿರುವ ಬಿಜೆಪಿಗೆ ಶಾಸಕ ಬಸವರಾಜ ಮತ್ತಿಮಡು, ಎಂಎಲ್‌ಸಿಗಳಾದ ಶಶಿಲ್ ನಮೋಶಿ, ಬಿ.ಜಿ. ಪಾಟೀಲ್ ಹಾಗೂ ಜೆಡಿಎಸ್ ಪಕ್ಷದ ನಾಲ್ವರು ಸದಸ್ಯರ ಬೆಂಬಲವಿದ್ದರೂ ಕೇವಲ 30 ಮತಗಳನ್ನು ಮಾತ್ರ ಕ್ರೋಢೀಕರಿಸಲು ಸಾಧ್ಯವಾಯಿತು.

ಈ ಎಲ್ಲ ಬೆಳವಣಿಗೆಗಳ ಮಧ್ಯೆ 23ನೇ ವಾರ್ಡ್‌ನ ಪಾಲಿಕೆ ಸದಸ್ಯ ಬಿಜೆಪಿಯ ದಿಗಂಬರ ನಾಡಗೌಡ ಎಸ್ಟಿ ಪ್ರಮಾಣ ಪತ್ರದೊಂದಿಗೆ ಮೇಯರ್‌ ಹುದ್ದೆಗೆ ನಾಮಪತ್ರ ಸಲ್ಲಿಸಿದ್ದರು.

ನಾಡಗೌಡರ ಅವರ ಎಸ್ಟಿ ಪ್ರಮಾಣ ಪತ್ರ ಅಸಿಂಧುಗೊಳಿಸುವಂತೆ ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ್ ದೂರು ಸಲ್ಲಿಸಿದ್ದರು. ದಿಗಂಬರ ಬಳಿ ತಳವಾರ ಸಮುದಾಯಕ್ಕೆ ಸೇರಿದ ಹಾಗೆ ಎಸ್ಟಿ ಜಾತಿ ಪ್ರಮಾಣಪತ್ರ ಇತ್ತು. ಆದರೆ ಅವರು ಹಿಂದುಳಿದ ಕಬ್ಬಲಿಗ ಸಮುದಾಯಕ್ಕೆ ಸೇರಿದ್ದಾರೆ. ಹಾಗಾಗಿ, ಅವರ ಪ್ರಮಾಣ ಪತ್ರ ಅಸಿಂಧುಗೊಳಿಸುವಂತೆ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ, ತಹಸೀಲ್ದಾರ್ ಅವರಿಗೆ ದೂರು ಸಲ್ಲಿಸಿದ್ದರು.

ಈ ದೂರಿನ ಕುರಿತು ಕಂದಾಯ ಇಲಾಖೆಯ ಅಧಿಕಾರಿಗಳು ಪಂಚನಾಮೆ ಕೈಗೊಂಡ ಬಳಿಕ ದಿಗಂಬರ ಅವರ ಎಸ್ಟಿ ಪ್ರಮಾಣ ಪತ್ರ ಅಸಿಂಧುಗೊಳಿಸಿದರು. ಹೀಗಾಗಿ, ದಿಗಂಬರ ಬಿಜೆಪಿಯಿಂದ ಮೇಯರ್ ಸ್ಥಾನದ ಸ್ಪರ್ಧೆಗೆ ಬಾರದಂತೆ ಮೂಗುದಾರ ಹಾಕುವಲ್ಲಿ ಕಾಂಗ್ರೆಸ್‌ ಮುಖಂಡರು ಚುನಾವಣೆಯ ಹಿಂದಿನ ದಿನವಾದ ಸೋಮವಾರವೇ ಯಶಸ್ವಿಯಾಗಿದ್ದರು.

ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಪಕ್ಷ ಕಲಬುರಗಿ ಮಹಾನಗರ ಪಾಲಿಕೆಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ಬಿಜೆಪಿಯ ಆಡಳಿತಕ್ಕೆ ಮಂಗಳ ಹಾಡುವಲ್ಲಿ ಯಶಸ್ವಿಯಾಗಿದೆ. ಏತನ್ಮಧ್ಯೆ, ಅಂತಿಮ ಕ್ಷಣದವರೆಗೆ ಬಿಜೆಪಿ ಮಾಜಿ ಸಂಸದ ಡಾ.ಉಮೇಶ್ ಜಾಧವ್, ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್, ಬಿಜೆಪಿ ನಗರ ಘಟಕದ ಅಧ್ಯಕ್ಷ ಚಂದು ಪಾಟೀಲ್ ನೇತೃತ್ವದಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಮೇಯರ್ ಮತ್ತು ಉಪ ಮೇಯರ್ ಹುದ್ದೆಗೆ ಆಯ್ಕೆ ಬಯಸಿ ಕಣಕ್ಕಿಳಿಸುವ ಪ್ರಯತ್ನ ಕೈಗೊಳ್ಳಲಾಯಿತಾದರೂ, ರಾಜಕೀಯವಾಗಿ ಹಿತಕರ ವಾತಾವರಣ ಇಲ್ಲದ ಹಿನ್ನೆಲೆಯಲ್ಲಿ ಕೈ ಚೆಲ್ಲಿದ್ದು ಕಂಡುಬಂತು.

ಹೀನಾಬೇಗಂ ಉಪ ಮೇಯರ್: ಮೇಯರ್ ಆಯ್ಕೆ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆಯೇ ಉಪ ಮೇಯರ್ ಸ್ಥಾನಕ್ಕೆ ಕಾಂಗ್ರೆಸ್ ಪಕ್ಷದ (ವಾರ್ಡ್ ಕ್ರಮಾಂಕ-10) ಹೀನಾಬೇಗಂ ಅಬ್ದುಲ್ ರಹೀಂ ಆಯ್ಕೆಗೊಂಡರು.

ಹೀನಾಬೇಗಂ ಅವರ ಪತಿ ಅಬ್ದುಲ್ ರಹೀಂ ಮೂಲತಃ ಎಸ್‌ಡಿಪಿಐ ಕಾರ್ಯಕರ್ತರಾಗಿದ್ದು, 2013ರಲ್ಲಿ ಎಸ್‌ಡಿಪಿಐ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸಿ ಪಾಲಿಕೆಗೆ ಆಯ್ಕೆಗೊಂಡಿದ್ದರು. ನಂತರ ಬದಲಾದ ರಾಜಕೀಯ ಬೆಳವಣಿಗೆಯ ಕಾರಣದಿಂದಾಗಿ ಉತ್ತರ ಕ್ಷೇತ್ರದ ಶಾಸಕಿ ಕನೀಜ್ ಫಾತಿಮಾ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು. ಈ ಬಾರಿ ಪಾಲಿಕೆ ಚುನಾವಣೆಯಲ್ಲಿ ಅವರು ತಮ್ಮ ಪತ್ನಿ ಹೀನಾ ಬೇಗಂ ಅವರನ್ನು ಕಣಕ್ಕಿಳಿಸಿ ಗೆಲ್ಲಿಸುವಲ್ಲಿ ಯಶಸ್ವಿಯಾಗಿದ್ದರು.

55 ಸದಸ್ಯರ ಬಲದ ಮಹಾನಗರ ಪಾಲಿಕೆ:

ಕಾಂಗ್ರೆಸ್ 27

ಬಿಜೆಪಿ 23

ಜೆಡಿಎಸ್ 4

ಪಕ್ಷೇತರ 1

ಕಾಂಗ್ರೆಸ್ ಸದಸ್ಯರು 27+ 6 ಜನಪ್ರತಿನಿಧಿಗಳು=33 ( ಈ ಪೈಕಿ ಮಲ್ಲಿಕಾರ್ಜುನ ಖರ್ಗೆ ಬರದಿದ್ದರೂ 32 ಖಚಿತ)

ಬಿಜೆಪಿ ಸದಸ್ಯರ ಬಲ 22 + ಜನಪ್ರತಿನಿಧಿ ಮತ 4 + ಜೆಡಿಎಸ್ + 4 = 30

Share this article