ಬೇಲೂರು ಬಸವೇಶ್ವರ ವೃತ್ತದಲ್ಲಿ ಪ್ರಜ್ವಲ್‌ ರೇವಣ್ಣ ವಿರುದ್ಧ ಕಾಂಗ್ರೆಸ್‌ ಪ್ರತಿಭಟನೆ

KannadaprabhaNewsNetwork |  
Published : May 06, 2024, 12:39 AM IST
ಚಿತ್ರ ೧ (ಬಿ.ಎಲ್.ಆರ್.ಪಿ)ಬೇಲೂರು ಕಾಂಗ್ರೆಸ್ ಪಕ್ಷದಿಂದ ಪ್ರಜ್ವಲ್‌ರೇವಣ್ಣ ವಿರುದ್ದ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಶೀಘ್ರವೇ ಪ್ರಜ್ವಲ್‌ ರೇವಣ್ಣ ಅವರನ್ನು ಬಂಧಿಸಿ ದೇಶ ಬಿಟ್ಟು ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿ ಬೇಲೂರು ತಾಲೂಕು ಕಾಂಗ್ರೆಸ್ ಪಕ್ಷದ ಮುಖಂಡರು ಬಸವೇಶ್ವರ ವೃತ್ತದ ಬಳಿ ಪ್ರತಿಭಟನೆ ನಡೆಸಿದರು.

ಬೇಲೂರು ತಾಲೂಕು ಕಾಂಗ್ರೆಸ್‌ನಿಂದ ಧರಣಿ

ಕನ್ನಡಪ್ರಭ ವಾರ್ತೆ ಬೇಲೂರು

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮೊಮ್ಮಗ ಪ್ರಜ್ವಲ್‌ ರೇವಣ್ಣ ಮಹಿಳೆಯರ ಮೇಲೆ ನಡೆಸಿದ ಲೈಂಗಿಕ ದೌರ್ಜನ್ಯ ಮತ್ತು ಅಶ್ಲೀಲ ವಿಡಿಯೋ ಚಿತ್ರಗಳು ಇಡೀ ಸಮಾಜವೇ ತಲೆತಗ್ಗಿಸಬೇಕಾದ ಪರಿಸ್ಥಿತಿ ಬಂದಿದ್ದು ಶೀಘ್ರವೇ ಬಂಧಿಸಿ ದೇಶ ಬಿಟ್ಟು ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿ ಬೇಲೂರು ತಾಲೂಕು ಕಾಂಗ್ರೆಸ್ ಪಕ್ಷದ ಮುಖಂಡರು ಬಸವೇಶ್ವರ ವೃತ್ತದ ಬಳಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ.ಆರ್.ವೆಂಕಟೇಶ್, ‘ದೇಶದಲ್ಲಿ ಹೆಣ್ಣಿಗೆ ವಿಶೇಷ ಸ್ಥಾನ-ಮಾನ ನೀಡುವ ಸಂಸ್ಕೃತಿ ಇದೆ. ಇಂತಹ ದೇಶದಲ್ಲಿ ಹುಟ್ಟಿದ ಮಹಿಳೆಯರನ್ನು ಅತ್ಯಾಚಾರ ನಡೆಸಿ ದೇಶಬಿಟ್ಟು ನಾಪತ್ತೆಯಾದ ಪ್ರಜ್ವಲ್‌ ರೇವಣ್ಣನನ್ನು ಬಂಧಿಸಿ ಆತನನ್ನು ಬೀದಿಯಲ್ಲಿ ನಿಲ್ಲಿಸಿ ಮಹಿಳೆಯರಿಂದ ಕಲ್ಲಿನಿಂದ ಹೊಡೆಸಬೇಕು. ದೇಶದ್ರೋಹದ ಮೇಲೆ ಗಡಿಪಾರು ಮಾಡಬೇಕಿದೆ ಎಂದು ಆಗ್ರಹಿಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸೈಯದ್‌ತೌಫಿಕ್ ಮಾತನಾಡಿ, ಹಾಸನದ ಹೆಸರನ್ನು ದೇವೇಗೌಡರು ಕೆಂಪುಕೋಟೆ ತನಕ ಹಬ್ಬಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಆದರೆ ಮೊಮ್ಮಗ ಇಡೀ ದೇಶದಲ್ಲಿ ತನ್ನ ಹೀನಕೃತ್ಯದ ಮೂಲಕ ಕುಖ್ಯಾತಿ ಪಡೆದಿದ್ದಾನೆ. ಇಂತಹ ವ್ಯಕ್ತಿ ಸಮಾಜಕ್ಕೆ ಮಾರಕ ಎಂದು ಕಿಡಿಕಾರಿದರು.

ತಾಲೂಕು ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ತೀರ್ಥಕುಮಾರಿ ಮಾತನಾಡಿ, ಪ್ರಜ್ವಲ್‌ ರೇವಣ್ಣ ಒಬ್ಬ ವಿಕೃತಿಕಾಮಿ ಎಂದು ತಿಳಿದರೂ ಮೈತ್ರಿ ಪಕ್ಷಗಳು ಆತನಿಗೆ ಲೋಕಸಭಾ ಟಿಕೆಟ್ ನೀಡುವ ಮೂಲಕ ಮಹಿಳಾ ಕುಲಕ್ಕೆ ಅವಮಾನ ಮಾಡಿದ್ದಾರೆ. ಯಾವುದೇ ಸರ್ಕಾರ ಇರಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯವನ್ನು ಖಂಡಿಸಿ ಆತನಿಗೆ ಉಗ್ರ ಶಿಕ್ಷೆಯನ್ನು ನೀಡಬೇಕಿದೆ. ಇಲ್ಲವಾದರೆ ಇಂತಹ ವಿಕೃತ ಕಾಮಿಗಳ ಉಗಮಕ್ಕೆ ಕಾರಣವಾಗುತ್ತದೆ ಎಂದು ಎಚ್ಚರಿಸಿದರು.

ಕಾಂಗ್ರೆಸ್ ಮುಖಂಡರಾದ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ದಾವೂದ್, ಜಿ.ಶಾಂತಕುಮಾರ್, ರತ್ನಸತ್ಯನಾರಾಯಣ್, ಸೌಮ್ಯ ಆನಂದ್, ವೆಂಕಟೇಶ್, ರಾಯಾಪುರ ರವಿ, ಆಶೋಕ್, ತೀರ್ಥಕುಮಾರ್, ಮಲ್ಲಿಕಾರ್ಜನ್, ಆನಂದ್, ಮುದ್ದಮ್ಮ, ಬಿಕ್ಕೋಡು ಚೇತನ್, ಅರೇಹಳ್ಳಿ ಶೇಖ್ ಅಬ್ದುಲ್, ಜಾಕೀರ್ ಪಾಷ ಹಾಜರಿದ್ದರು.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ