ಸಂಸದರ ಅಮಾನತ್ತು ಖಂಡಿಸಿ ಕಾಂಗ್ರೆಸ್‌ ಪ್ರತಿಭಟನೆ

KannadaprabhaNewsNetwork | Published : Dec 23, 2023 1:45 AM

ಸಾರಾಂಶ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಸತ್ತಿನಲ್ಲಿ ಚರ್ಚೆ ಮಾಡಲು ಅವಕಾಶ ನೀಡಬೇಕು. ಪ್ರತಿಪಕ್ಷ ಕೇಳುವ ಪ್ರಶ್ನೆಗೆ ಉತ್ತರ ನೀಡಬೇಕು. ಆದರೆ, ವಿಷಯಾಂತರ ಮಾಡುವ ದುರುದ್ದೇಶದಿಂದ ಸಂಸದರನ್ನು ಅಮಾನತು ಮಾಡಲಾಗುತ್ತಿದೆ ಎಂದು ಸಚಿವ ಹಾಗೂ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಶಿವರಾಜ ತಂಗಡಗಿ ವಾಗ್ದಾಳಿ ಮಾಡಿದರು.

ಕೊಪ್ಪಳ: ದೆಹಲಿಯ ಸಂಸತ್ತಿನಲ್ಲಿ ಅತಿರೇಕದ ವರ್ತನೆ ಮಾಡಿದ್ದಾರೆ ಎನ್ನುವ ಆರೋಪದಡಿ ಸಂಸದರನ್ನು ಅಮಾನತು ಮಾಡಿರುವುದನ್ನು ವಿರೋಧಿಸಿ ನಗರದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.

ನಗರದ ಅಶೋಕ ವೃತ್ತ ಬಳಿಯ ಹೆದ್ದಾರಿಯಲ್ಲಿ ನೂರಾರು ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಕೇಂದ್ರ ಸರ್ಕಾರ ಮತ್ತು ಪ್ರಧಾನಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪಕ್ಷದ ಜಿಲ್ಲಾಧ್ಯಕ್ಷ, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಸತ್ತಿನಲ್ಲಿ ಚರ್ಚೆ ಮಾಡಲು ಅವಕಾಶ ನೀಡಬೇಕು. ಪ್ರತಿಪಕ್ಷ ಕೇಳುವ ಪ್ರಶ್ನೆಗೆ ಉತ್ತರ ನೀಡಬೇಕು. ಆದರೆ, ವಿಷಯಾಂತರ ಮಾಡುವ ದುರುದ್ದೇಶದಿಂದ ಸಂಸದರನ್ನು ಅಮಾನತು ಮಾಡಲಾಗುತ್ತಿದೆ ಎಂದು ಸಚಿವ ಹಾಗೂ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಶಿವರಾಜ ತಂಗಡಗಿ ವಾಗ್ದಾಳಿ ಮಾಡಿದರು.ದೇಶದಲ್ಲಿ ಆಗುತ್ತಿರುವ ಅನ್ಯಾಯವನ್ನು ಪ್ರಶ್ನೆ ಮಾಡುವುದಕ್ಕೂ ಅವಕಾಶ ನೀಡುತ್ತಿಲ್ಲ. ಸಂಸತ್ತಿಗೆ ಸೂಕ್ತ ರಕ್ಷಣೆ ನೀಡುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಇಂಥ ಸರ್ಕಾರವನ್ನು ನಾವು ಹಿಂದೆಂದೂ ನೋಡಿರಲಿಲ್ಲ ಎಂದು ಕಿಡಿಕಾರಿದರು.ಸಂಸತ್ತಿನಲ್ಲಿ ಆಗಿರುವ ವೈಫಲ್ಯ ಪ್ರಶ್ನಿಸಿದರೆ, ಅಣಕ ಮಾಡಿದರೆ ಅದನ್ನೇ ಬಿಜೆಪಿಯವರು ದೊಡ್ಡದು ಮಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ನನ್ನನ್ನೂ ಸೇರಿದಂತೆ ಅನೇಕರ ಕುರಿತು ಇದುವರೆಗೂ ಅನೇಕ ಬಾರಿ ಅಣಕು ಮಾಡುತ್ತಾರೆ. ಕೆಲವು ಕಲಾವಿದರು ಮಹಾನ್ ನಾಯಕರ ಅಣಕ ಮಾಡುತ್ತಾರೆ. ಅದೊಂದು ಕಲೆಯಾಗಿದೆ. ಅದರಲ್ಲಿ ತಪ್ಪೇನಿದೆ ಎನ್ನುವುದೇ ಅರ್ಥವಾಗುತ್ತಿಲ್ಲ ಎಂದರು.ಶಾಸಕ ರಾಘವೇಂದ್ರ ಹಿಟ್ನಾಳ ಮಾತನಾಡಿ, ಸಂಸತ್ತಿನ ಮೇಲೆ ದಾಳಿಯಾಗಿದ್ದರೂ ಅವರ ಮೇಲೆ ಕ್ರಮ ಕೈಗೊಳ್ಳಬೇಕಾದ ಸರ್ಕಾರ ಸಂಸದರ ಮೇಲೆ ಕ್ರಮ ಕೈಗೊಳ್ಳುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು.ಜಿಪಂ ಮಾಜಿ ಅಧ್ಯಕ್ಷ ರಾಜಶೇಖರ ಹಿಟ್ನಾಳ ಮಾತನಾಡಿ, ದೇಶದ ಸಂಸತ್ತು ರಕ್ಷಣೆ ಮಾಡುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಇಂಥ ಕೆಟ್ಟ ಸರ್ಕಾರದಿಂದಾಗಿಯೇ ದೇಶದ ಘನತೆಗೆ ಧಕ್ಕೆಯಾಗಿದೆ. ದಾಳಿ ಮಾಡಿದವರ ಮೇಲೆ ಕ್ರಮ ಕೈಗೊಳ್ಳಬೇಕಾದ ಸರ್ಕಾರ ಅದನ್ನು ಪ್ರಶ್ನೆ ಮಾಡುವ ಸಂಸದರ ಮೇಲೆ ಕ್ರಮ ಕೈಗೊಳ್ಳುವುದು ಘೋರ ಅನ್ಯಾಯ ಮತ್ತು ಪ್ರಜಾಪ್ರಭುತ್ವದ ಕಗ್ಗೊಲೆ ಎಂದರು.ಇದಕ್ಕಿಂತ ಮಿಗಿಲಾಗಿ ಸಂಸತ್ತಿನಲ್ಲಿ ಹೊಗೆ ಬಾಂಬ್ ಸಿಡಿಸಿದ ಪ್ರಕರಣ ತನಿಖೆ ನಡೆಸಿ, ತಪ್ಪಿತಸ್ಥರನ್ನು ಶಿಕ್ಷೆ ಮಾಡಬೇಕಾದ ಸರ್ಕಾರವೇ ದಿಕ್ಕು ತಪ್ಪಿಸುತ್ತಿದೆ. ಇದುವರೆಗೂ ಅಂಥವರಿಗೆ ಸಂಸತ್ತಿನಲ್ಲಿ ಪ್ರವೇಶ ನೀಡಲು ಪತ್ರ ನೀಡಿದ ಸಂಸದ ಪ್ರತಾಪ ಸಿಂಹ ಅವರನ್ನು ವಿಚಾರಣೆ ನಡೆಸಿಲ್ಲ ಎಂದು ಆರೋಪಿಸಿದರು.ಪ್ರತಿಭಟನೆಯಲ್ಲಿ ಕೃಷ್ಣ ಇಟ್ಟಂಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಾರಡ್ಡಿ ಗಲಬಿ, ಮುತ್ತುರಾಜ ಕುಷ್ಟಗಿ, ಯಂಕನಗೌಡ್ರ ಹಿರೇಗೌಡ್ರು, ಕೆಡಿಪಿ ಸದಸ್ಯ ಕುರಗೋಡರವಿ ಯಾದವ್, ಗಾಳೆಪ್ಪ ಪೂಜಾರ, ಜ್ಯೋತಿ ಗೊಂಡಬಾಳ, ಮಾಲತಿ ನಾಯಕ್ ಮತ್ತಿತರು ಇದ್ದರು.

Share this article