ಚುನಾವಣೆಯಲ್ಲಿ ಕಾಂಗ್ರೆಸ್‌ಗೆಗ್ಯಾರಂಟಿಯೇ ರಕ್ಷಣೆ: ಡಿಕೆಶಿ

KannadaprabhaNewsNetwork |  
Published : Jul 16, 2025, 12:45 AM IST
Gurantee Meeting 1 | Kannada Prabha

ಸಾರಾಂಶ

ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯರಿಗೆ ತಮ್ಮ ಬೆಲೆ ಇನ್ನೂ ಅರ್ಥವಾಗಿಲ್ಲ. 2028ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕಾದರೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಗಳ ಕೆಲಸ ಬಹಳ ಮುಖ್ಯ ಎಂದು ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅಭಿಪ್ರಾಯಪಟ್ಟಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯರಿಗೆ ತಮ್ಮ ಬೆಲೆ ಇನ್ನೂ ಅರ್ಥವಾಗಿಲ್ಲ. 2028ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕಾದರೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಗಳ ಕೆಲಸ ಬಹಳ ಮುಖ್ಯ ಎಂದು ಕೆಪಿಸಿಸಿ ಅಧ್ಯಕ್ಷ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅಭಿಪ್ರಾಯಪಟ್ಟಿದ್ದಾರೆ.

ಕೆಪಿಸಿಸಿ ಕಚೇರಿಯ ಭಾರತ್‌ ಜೋಡೋ ಭವನದಲ್ಲಿ ಮಂಗಳವಾರ ನಡೆದ ರಾಜ್ಯ, ಜಿಲ್ಲೆ, ತಾಲೂಕು ಮಟ್ಟದ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಪದಾಧಿಕಾರಿಗಳ ಸಮಾವೇಶದಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಸಮಾಜ ಮತ್ತು ಬಡವರ ಕಲ್ಯಾಣಕ್ಕಾಗಿ ವಾರ್ಷಿಕ ₹1 ಲಕ್ಷ ಕೋಟಿ ವ್ಯಯಿಸುತ್ತಿದೆ. ಅದರಲ್ಲಿ ಗ್ಯಾರಂಟಿ ಯೋಜನೆಗಳಿಗಾಗಿಯೇ ₹50 ಸಾವಿರ ಕೋಟಿ ಖರ್ಚು ಮಾಡಲಾಗುತ್ತಿದೆ. ರಾಜ್ಯ ಬಜೆಟ್‌ನ ಶೇ.25ರಷ್ಟು ಹಣ ಜನರಿಗೆ ನೀಡಲಾಗುತ್ತಿದೆ. ಈ ಎಲ್ಲದರ ಬಗ್ಗೆ ಜನರಿಗೆ ಮನದಟ್ಟು ಮಾಡುವುದು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಕರ್ತವ್ಯ ಎಂದರು.

ಗ್ಯಾರಂಟಿ ಸಮಿತಿಗಳನ್ನು ರಚಿಸಿ ಕಾರ್ಯಕರ್ತರನ್ನು ಸರ್ಕಾರದ ಯೋಜನೆ ಭಾಗವಾಗಿ ಮಾಡಲಾಗಿದೆ. ಆದರೆ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯರಿಗೆ ತಮ್ಮ ಬೆಲೆ ಏನೆಂಬುದು ಇನ್ನೂ ಅರ್ಥವಾಗಿಲ್ಲ. ಸದಸ್ಯರಿಗೆ ಸರ್ಕಾರದ ಪ್ರತಿನಿಧಿಗಳನ್ನಾಗಿ ಮಾಡಲಾಗಿದೆ, ಅಧ್ಯಕ್ಷರಿಗೆ ಕಚೇರಿಗಳನ್ನು ನೀಡಲಾಗಿದೆ. ವಿರೋಧ ಪಕ್ಷದವರು ಸದನದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಕುರಿತು ಗದ್ದಲ ಎಬ್ಬಿಸಿದರು. ಅದಕ್ಕೆಲ್ಲ ಬಗ್ಗದೆ ನಿಮ್ಮನ್ನು ಮುಂದುವರಿಸಲಾಗಿದೆ. 2028ರಲ್ಲಿ ಮತ್ತೊಮ್ಮೆ ಪಕ್ಷ ಅಧಿಕಾರಕ್ಕೆ ಬರಬೇಕಾದರೆ ನಿಮ್ಮ ಕಾರ್ಯ ಬಹಳ ಮುಖ್ಯ. ಜನರಿಗೆ ನಮ್ಮ ಯೋಜನೆಗಳ ಕುರಿತು, ಜನಪರ ಕಾರ್ಯಗಳ ಬಗ್ಗೆ ತಿಳಿಸಬೇಕು. ಹಲವು ಕ್ಷೇತ್ರಗಳಲ್ಲಿ ಅತ್ಯತ್ತಮ ಕೆಲಸ ಮಾಡಲಾಗುತ್ತಿದ್ದು, ಅದು ಎಲ್ಲ ಕ್ಷೇತ್ರದಲ್ಲೂ ಆಗಬೇಕು ಎಂದು ಹೇಳಿದರು.++++ಜನರ ಅಭಿವೃದ್ಧಿಗಾಗಿ ನಾವು ಕೆಲಸ ಮಾಡುತ್ತಿದ್ದೇವೆ. ಐದು ಗ್ಯಾರಂಟಿಗಳ ಜತೆಗೆ ಇದೀಗ 6ನೇ ಗ್ಯಾರಂಟಿಯಾಗಿ ಉಚಿತವಾಗಿ ಭೂ ದಾಖಲೆಗಳನ್ನು ನೀಡುವ ಭೂ ಗ್ಯಾರಂಟಿಗೆ ಚಾಲನೆ ನೀಡಲಾಗಿದೆ. ಇತ್ತೀಚೆಗೆ 1.11 ಲಕ್ಷ ಭೂ ದಾಖಲೆಗಳನ್ನು ವಿತರಿಸಲಾಗಿದೆ. ಇದೀಗ ಬೆಂಗಳೂರು ನಗರದಲ್ಲಿ ಎಲ್ಲ ಆಸ್ತಿ ಖಾತಾ ದಾಖಲೆಗಳನ್ನು ಮನೆ ಬಾಗಿಲಿಗೆ ತಲುಪಿಸುವ ಕಾರ್ಯಕ್ರಮ ರೂಪಿಸಲಾಗಿದೆ ಎಂದು ತಿಳಿಸಿದರು.

ವಾರ್ಡ್‌-ಪಂಚಾಯ್ತಿ ಮಟ್ಟದಲ್ಲಿ ಸಮಾವೇಶ:

ಪ್ರತಿಯೊಬ್ಬರಿಗೂ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ತಿಳಿಸಲು ವಾರ್ಡ್‌, ಗ್ರಾಪಂ ಮಟ್ಟದಲ್ಲಿ ಗ್ಯಾರಂಟಿ ಸಮಾವೇಶಗಳು ನಡೆಸಬೇಕು. ಅಲ್ಲದೆ, ಜನರಲ್ಲಿ ಸರ್ಕಾರದ ಪರ ಭಾವನೆ ಮೂಡಿಸುವ ನಿಟ್ಟಿನಲ್ಲಿ ಎಲ್ಲರೂ ಕೆಲಸ ಮಾಡಬೇಕು. ಅದರಲ್ಲಿ ಯಾವ ರೀತಿ ಯಶ ಕಾಣುತ್ತೀರಿ ಎಂಬುದರ ಮೇಲೆ ನಿಮ್ಮ ಹಣೆಬರಹ ನಿರ್ಧಾರವಾಗಲಿದೆ. ಕೇವಲ ಡಿ.ಕೆ.ಶಿವಕುಮಾರ್‌, ಎಚ್‌.ಎಂ.ರೇವಣ್ಣ ಅವರ ಹಿಂದೆ ಗಿರಕಿ ಹೊಡೆದರೆ ಚುನಾವಣೆಗಳಲ್ಲಿ ಟಿಕೆಟ್‌ ಸಿಗುವುದಿಲ್ಲ. ಕೆಲಸ ಮಾಡಿದರಷ್ಟೇ ಸ್ಥಾನಮಾನ ಸಿಗಲಿದೆ ಎಂದು ಡಿ.ಕೆ.ಶಿವಕುಮಾರ್‌ ಹೇಳಿದರು.

ಮಂಗಳೂರು ಭಾಗ ಕೇಂದ್ರೀಕರಿಸಿ:

ಕರಾವಳಿ ಜಿಲ್ಲೆಗಳಲ್ಲಿ ಅದರಲ್ಲೂ ಮಂಗಳೂರು ಭಾಗದಲ್ಲಿ ನಮಗೆ ಹೆಚ್ಚಿನ ಸೋಲಾಗಿದೆ. ಆದರೆ, ಗ್ಯಾರಂಟಿ ಯೋಜನೆಗಳಲ್ಲಿ ಹೆಚ್ಚಿನ ಫಲಾನುಭವಿಗಳು ಆ ಭಾಗದವರಾಗಿದ್ದಾರೆ. ಆದರೆ, ಆ ಭಾಗದ ವಿರೋಧ ಪಕ್ಷವರು ಗ್ಯಾರಂಟಿ ಯೋಜನೆಗಳನ್ನು ಟೀಕಿಸುತ್ತಿದ್ದಾರೆ. ಗ್ಯಾರಂಟಿ ಯೋಜನೆಯ ಫಲ ಅನುಭವಿಸಿ ಅದನ್ನೇ ಟೀಕಿಸುವುದು ಸರಿಯಲ್ಲ. ಅವರು ಏನು ಬೇಕಾದರೂ ಟೀಕೆ ಮಾಡಲಿ. ಅವರ ಟೀಕೆಗಳು ಸಾಯುತ್ತವೆ, ನಮ್ಮ ಕೆಲಸಗಳು ಉಳಿಯುತ್ತವೆ ಎಂದು ಡಿ.ಕೆ. ಶಿವಕುಮಾರ್‌ ಅಭಿಪ್ರಾಯಪಟ್ಟರು.

ರಾಜ್ಯ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್‌.ಎಂ.ರೇವಣ್ಣ, ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ.ಚಂದ್ರಶೇಖರ್‌ ಇತರರಿದ್ದರು.

PREV

Latest Stories

ಡಿಕೆಶಿ ಪರ ದಾವಣಗೆರೆಯಲ್ಲಿ 101 ತೆಂಗಿನಕಾಯಿ ಸೇವೆ
ಬೆಂಗಳೂರು-ತುಮಕೂರುಪ್ರಯಾಣ, ಜನ ಹೈರಾಣ
ಸ್ಮಾರ್ಟ್‌ ಮೀಟರ್‌ ವಿವಾದ: ಸಚಿವಜಾರ್ಜ್ ವಿರುದ್ಧ ಬಿಜೆಪಿ ದೂರು