ಬೆಂಗಳೂರು ಅಂತರ್ಜಲ ಮಟ್ಟ ಅತೀ ಗಂಭೀರ

| N/A | Published : Sep 05 2025, 08:28 AM IST

Ground Water

ಸಾರಾಂಶ

ಒಕ್ಕೂಟ ವ್ಯವಸ್ಥೆಯ ಭಾರತದಲ್ಲಿ ಜಲಮೂಲ ಮತ್ತು ಅಂತರ್ಜಲ ಸಂರಕ್ಷಣೆ ವಿಚಾರದಲ್ಲಿ ಕೇಂದ್ರ-ರಾಜ್ಯ ಒಟ್ಟಾಗಿ ಕೆಲಸ ಮಾಡಬೇಕಾಗುತ್ತದೆ ಎಂದು ರಾಷ್ಟ್ರೀಯ ಜಲ ಮಿಷನ್‌ನ ನಿರ್ದೇಶಕ ಎನ್.ಅಶೋಕ್ ಬಾಬು ಹೇಳಿದರು.

 ಬೆಂಗಳೂರು : ಒಕ್ಕೂಟ ವ್ಯವಸ್ಥೆಯ ಭಾರತದಲ್ಲಿ ಜಲಮೂಲ ಮತ್ತು ಅಂತರ್ಜಲ ಸಂರಕ್ಷಣೆ ವಿಚಾರದಲ್ಲಿ ಕೇಂದ್ರ-ರಾಜ್ಯ ಒಟ್ಟಾಗಿ ಕೆಲಸ ಮಾಡಬೇಕಾಗುತ್ತದೆ ಎಂದು ರಾಷ್ಟ್ರೀಯ ಜಲ ಮಿಷನ್‌ನ ನಿರ್ದೇಶಕ ಎನ್.ಅಶೋಕ್ ಬಾಬು ಹೇಳಿದರು.

ಗುರುವಾರ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯಲ್ಲಿ (ಎಫ್‌ಕೆಸಿಸಿಐ) ಇಂಡಿಯಾ ಸಿಎಸ್ಆರ್‌ ಮತ್ತು ಸುಸ್ಥಿರತೆ ಸಮಾವೇಶ, ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಒಕ್ಕೂಟ ವ್ಯವಸ್ಥೆಯಲ್ಲಿ ಯಾವುದೇ ಯೋಜನೆಯ ಸಮರ್ಪಕ ಅನುಷ್ಠಾನ, ಪ್ರಗತಿ, ಯಶಸ್ಸಿಗೆ ರಾಜ್ಯ, ಕೇಂದ್ರ ಒಟ್ಟಾಗಿ ಕೆಲಸ ಮಾಡಬೇಕಾಗುತ್ತದೆ. ಅಂತರ್ಜಲ ಮಟ್ಟದ ಆಧಾರದಲ್ಲಿ ಕರ್ನಾಟಕದಲ್ಲಿ ಬೆಂಗಳೂರು ನಗರ, ಗ್ರಾಮೀಣ, ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ ಜಲ್ಲೆಗಳನ್ನು ಅತೀ ಗಂಭೀರ ಹಾಗೂ ಚಾಮರಾಜನಗರ, ದಾವಣಗೆರೆ, ರಾಮನಗರ, ತುಮಕೂರು ಜಿಲ್ಲೆಗಳನ್ನು ಗಂಭೀರ ಜಿಲ್ಲೆಗಳೆಂದು ವಿಭಾಗಿಸಲಾಗಿದೆ. ಮಾನ್ಸೂನ್‌ಗೂ ಮುನ್ನ ಕೇಂದ್ರದ ನೋಡಲ್‌ ಅಧಿಕಾರಿಗಳು ಈ ಜಿಲ್ಲೆಗಳಿಗೆ ಭೇಟಿ ನೀಡಿ ಅಂತರ್ಜಲ ಹೆಚ್ಚಿಸುವ ಕ್ರಮದ ಬಗ್ಗೆ ಜಿಲ್ಲಾಧಿಕಾರಿಗಳಿಂದ ವರದಿ ಪಡೆದು ಅಗತ್ಯ ಸೂಚನೆ ನೀಡುತ್ತಿದ್ದಾರೆ ಎಂದರು.

ಜಲಶಕ್ತಿ ಜನಭಾಗಿದಾರಿ ಯೋಜನೆಯಡಿ ಕರ್ನಾಟಕದಲ್ಲಿ 1.37 ಲಕ್ಷ ಕೆರೆಕಟ್ಟೆಗಳಂತ ರಚನೆಗಳನ್ನು ಗುರುತಿಸಲಾಗಿದೆ. ಗದಗ ಮಂಡ್ಯ, ವಿಜಯಪುರ, ಕಲಬುರಗಿ, ಕೋಲಾರ, ಬೀದರ್ ಸೇರಿ ಇತರ ಜಿಲ್ಲೆಗಳಲ್ಲಿ ಪ್ರಮುಖವಾಗಿ ಈ ಯೋಜನೆಯಡಿ ಕಾರ್ಯನಿರ್ವಹಿಸಲಾಗುತ್ತಿದೆ. ರಾಜ್ಯದಲ್ಲಿ ತುಂಗಾ, ಅಲಮಟ್ಟಿ ಸೇರಿ 22 ಡ್ಯಾಮ್‌ಗಳನ್ನು ಮರುನಿರ್ಮಾಣ, ಅಭಿವೃದ್ಧಿ ಪಡಿಸುವ ಕೆಲಸ ಮಾಡಲಾಗಿದೆ ಎಂದರು.

ಎಫ್‌ಕೆಸಿಸಿಐ ಅಧ್ಯಕ್ಷ ಎಂ.ಜಿ. ಬಾಲಕೃಷ್ಣ ಮಾತನಾಡಿ, ಕರ್ನಾಟಕದ ಕೈಗಾರಿಕಾ, ವ್ಯಾಪಾರ ಮತ್ತು ಸಮುದಾಯ ಅಭಿವೃದ್ಧಿಯನ್ನು ಬೆಂಬಲಿಸುವಲ್ಲಿ ಎಫ್‌ಕೆಸಿಸಿಐ 100 ವರ್ಷಗಳ ಪಾತ್ರ ಮಹತ್ವದ್ದಾಗಿದೆ. ಆರೋಗ್ಯ ರಕ್ಷಣೆ, ಶಿಕ್ಷಣ, ಪರಿಸರ, ಲಿಂಗ ಸಮಾನತೆ ಮತ್ತು ಹವಾಮಾನ ಕ್ರಮಗಳಲ್ಲಿ ಅತ್ಯುತ್ತಮ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಮತ್ತು ಸುಸ್ಥಿರತೆಯಿಂದ ಕಾರ್ಯನಿರ್ವಹಿಸುವಂತಾಗಲು ಕ್ರಮ ವಹಿಸಲಾಗಿದೆ ಎಂದರು.

ಎಫ್‌ಕೆಸಿಸಿಐ ಸಿಎಸ್‌ಆರ್ ಸಮಿತಿಯ ಅಧ್ಯಕ್ಷ ಕೀರ್ತನ್ ಕುಮಾರ್ ಮಾತನಾಡಿದರು.ಕಾರ್ಯಕ್ರಮದಲ್ಲಿ ಎಫ್ ಕೆಸಿಸಿಐ ಚುನಾಯಿತ ಅಧ್ಯಕ್ಷೆ ಉಮಾ ರೆಡ್ಡಿ ಮತ್ತು ಹಿರಿಯ ಉಪಾಧ್ಯಕ್ಷರಾಗಿ ಆಯ್ಕೆಗೊಂಡಿರುವ ಟಿ.ಸಾಯಿರಾಮ್ ಪ್ರಸಾದ್ ಇದ್ದರು. 

Read more Articles on