ದೇವನಹಳ್ಳಿ: ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀ ವೇಣುಗೋಪಾಲಸ್ವಾಮಿ ಬ್ರಹ್ಮರಥೋತ್ಸವ ಮಂಗಳವಾರ ವಿಜೃಂಭಣೆಯಿಂದ ನೆರವೇರಿತು. ಕೋಟೆಯ ತೇರಿನ ಬೀದಿಯಲ್ಲಿ ಭಕ್ತರು ತೇರು ಎಳೆದು ಭಕ್ತಿಭಾವ ಮೆರೆದರು

ದೇವನಹಳ್ಳಿ: ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀ ವೇಣುಗೋಪಾಲಸ್ವಾಮಿ ಬ್ರಹ್ಮರಥೋತ್ಸವ ಮಂಗಳವಾರ ವಿಜೃಂಭಣೆಯಿಂದ ನೆರವೇರಿತು. ಕೋಟೆಯ ತೇರಿನ ಬೀದಿಯಲ್ಲಿ ಭಕ್ತರು ತೇರು ಎಳೆದು ಭಕ್ತಿಭಾವ ಮೆರೆದರು.

ತಹಸೀಲ್ದಾರ್ ಎಂ.ಅನಿಲ್, ಧಾರ್ಮಿಕದತ್ತಿ ಇಲಾಖೆ ಅಧಿಕಾರಿಗಳು ಯಾದವ ಸಂಘದ ಮುಖಂಡರು ರಥ ಅಣಿಗೊಳಿಸುವ ಬಿದಲೂರು ಗ್ರಾಮಸ್ಥರು ಉತ್ಸವ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು.

ತಾಲೂಕಾದ್ಯಂತ ಆಗಮಿಸಿದ ಸಹಸ್ರಾರು ಭಕ್ತರು ಶ್ರೀವೇಣುಗೋಪಾಲಸ್ವಾಮಿ ರಥಕ್ಕೆ ಬಾಳೆಹಣ್ಣು ದವನ ಸಮರ್ಪಿಸಿ ಗೋವಿಂದ ಗೋವಿಂದ ನಾಮ ಸ್ಮರಿಸಿ, ಇಷ್ಟಾರ್ಥಗಳನ್ನು ಈಡೇರಿಸುವಂತೆ ದೇವರಲ್ಲಿ ಪ್ರಾರ್ಥಿಸಿದರು.

ಕಮಲದ ಹಾರ, ಬಂದಿ, ನಂಜರಾಜೆ ಅರಸರ ಪದಕ, ಪರಂಗಿ ಸುಳಿ ಪದಕ, ಪದ್ಮ ಸುಳಿ ಪದಕ, ಮುತ್ತಿನ ಕಂಟಿ ಸರ, ಟೊಳ್ಳು ಗುಂಟಿನ ಸರ ಕಂಠಿ, ಚಂದ್ರದಾರ ನಕಾಶೆ, ರತ್ನ ಪಡಿ ಕಿರೀಟ, ಚಂದ್ರ ಸೂರ್ಯ ಮುತ್ತಿನ ಬಟ್ಟು ಸೇರಿದಂತೆ ಕೋಟ್ಯಂತರ ರು. ಮೌಲ್ಯದ ಆಭರಣಗಳನ್ನು ಪ್ರತಿವರ್ಷ ನಕ್ಷತ್ರದ ದಿನದಂದು ನಡೆಯುವ ಬ್ರಹ್ಮರಥೋತ್ಸವ ಸಂದರ್ಭದಲ್ಲಿ ಹೊರತಂದು ದೇವರಿಗೆ ಅಲಂಕಾರ ಮಾಡಿ ದೇವಾಲಯದಲ್ಲಿ ಪ್ರದಕ್ಷಿಣೆ ಹಾಕಿ ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ತಾಲೂಕು ಆಡಳಿತ ಪುನಃ ಖಜಾನೆಯಲ್ಲಿ ಭದ್ರಪಡಿಸಿದರು.

ಜಾತ್ರೆ ಅಂಗವಾಗಿ ಪಟ್ಟಣದ ಶ್ರೀ ಚೌಡೇಶ್ವರಿ ದೇವಾಲಯದ ಬಳಿಯ ದೊಡ್ಡಅಣ್ಣಯ್ಯಪ್ಪ ಛತ್ರದಲ್ಲಿ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.

ರಥೋತ್ಸವದ ನಂತರದ ದಿನ ಫೆ.೪ರಂದು ಬುಧವಾರ ಹಗಲು ಪರಿಷೆ ನಡೆಯಲಿದೆ. ಸಹಸ್ರಾರು ಜಾತ್ರೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ಪಾನಕದ ಬಂಡಿಗಳು, ಮಂಡಿಗೆ ಸೇವೆ ಮತ್ತು ಜಾನಪದ ವಾದ್ಯಗೊಷ್ಠಿಗಳು ನಡೆಯಲಿವೆ. ಮರಳುಬಾಗಿಲು ಶ್ರೀ ರಂಗನಾಥಸ್ವಾಮಿ ದೇಗುಲದಲ್ಲಿ ಶ್ರೀಯವರಿಗೆ ಕಲ್ಯಾಣೋತ್ಸವ ಮತ್ತು ಪ್ರಸಾದ ವಿನಿಯೋಗ ಏರ್ಪಡಿಸಲಾಗಿದೆ.

೩ ದೇವನಹಳ್ಳಿ ಚಿತ್ರಸುದ್ದಿ: ೧

ದೇವನಹಳ್ಳಿಯ ಶ್ರೀ ಗೋಪಾಲಸ್ವಾಮಿ ಬ್ರಹ್ಮರಥೋತ್ಸವ ಅದ್ದೂರಿಯಿಂದ ಆಚರಿಸಲಾಯಿತು.