ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರಕೆ.ಸಿ.ವ್ಯಾಲಿ ೨ ನೇ ಹಂತದ ಯೋಜನೆಯಡಿ ಲಕ್ಷ್ಮಿಸಾಗರ ಪಂಪ್ ಹೌಸ್‌ನಿಂದ ಕೋಲಾರ ತಾಲೂಕಿನ ೩೦ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಹಾಗೂ ಪಂಪ್ ಹೌಸ್ ಕೇಂದ್ರಕ್ಕೆ ಸಿಎಂ ಸಿದ್ದರಾಮಯ್ಯ ಬೆಂಗಳೂರಿನ ತಮ್ಮ ಕಾವೇರಿ ನಿವಾಸದಲ್ಲಿ ವರ್ಚುವಲ್ ವೇದಿಕೆ ಮೂಲಕ ಗುರುವಾರ ಚಾಲನೆ ನೀಡಿದರು.ಜಿಲ್ಲಾಡಳಿತ ಹಾಗೂ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯು ಜಂಟಿಯಾಗಿ ಕಾರ್ಯಕ್ರಮದ ನೇರ ಪ್ರಸಾರ ತಾಲೂಕಿನ ನರಸಾಪುರ ಹೋಬಳಿಯ ಲಕ್ಷ್ಮಿಸಾಗರದಲ್ಲಿನ ಕೆ.ಸಿ.ವ್ಯಾಲಿ ಯೋಜನೆಯ ಐದನೇ ಪಂಪಿಂಗ್ ಕೇಂದ್ರದ ಬಳಿ ಹಮ್ಮಿಕೊಳ್ಳಲಾಗಿತ್ತು.೨೫೦ಕ್ಕೂ ಹೆಚ್ಚು ಕೆರೆಗಳಿಗೆ ನೀರು
ಚಾಲನೆ ನೀಡಿದ ಬಳಿಕ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಬೆಂಗಳೂರಿನ ಸುತ್ತಮುತ್ತಲಿನ ಜಿಲ್ಲೆಗಳ ಅಂತರ್ಜಲ ಅಭಿವೃದ್ಧಿಗೆ ನಾವು ಹಿಂದಿನ ಸಲ ಅಧಿಕಾರದಲ್ಲಿದ್ದಾಗ ಕೈಗೊಂಡ ಯೋಜನೆಗಳು ಈ ಭಾಗದ ರೈತರ ಜೀವನ ಮಟ್ಟವನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿದೆ ೨೫೦ಕ್ಕೂ ಹೆಚ್ಚು ಕೆರೆಗಳಿಗೆ ಸಂಸ್ಕರಿಸಿದ ನೀರನ್ನು ಪ್ರತಿನಿತ್ಯ ಹರಿಸಲಾಗುತ್ತಿದೆ ಎಂದರು. ಕೆ.ಸಿ.ವ್ಯಾಲಿ ಎರಡನೇ ಹಂತದ ಯೋಜನೆಯಡಿ ಕೋಲಾರ ತಾಲ್ಲೂಕಿನ ೩೦ ಕೆರೆಗಳಿಗೆ ನೀರು ತುಂಬಿಸಲಾಗುವುದು. ಮೊದಲನೇ ಹಂತದಲ್ಲಿ ತ್ಯಾಜ್ಯ ನೀರನ್ನು ಸಂಸ್ಕರಿಸಿ ಕೋಲಾರ -ಚಿಕ್ಕಬಳ್ಳಾಪುರ ಕೆರೆಗಳನ್ನು ಯಶಸ್ವಿಯಾಗಿ ತುಂಬಿಸಲಾಗಿದೆ. ಈ ನೀರನ್ನು ಕುಡಿಯಲು ಬಳಸುವುದಿಲ್ಲ. ಕೆರೆ ತುಂಬಿಸಿದ ವ್ಯಾಪ್ತಿಯಲ್ಲಿ ಅಂತರ್ಜಲ ಮಟ್ಟ ಉತ್ತಮಗೊಂಡಿದೆ ಎಂದು ಹೇಳಿದರು.ಯೋಜನೆಗ ಬಗ್ಗೆ ಅಪಪ್ರಚಾರಯೋಜನೆ ಬಗ್ಗೆ ಕೆಲವರು ಅಪಪ್ರಚಾರ ಮಾಡಿದರೂ, ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂಬುವುದು ಈಗಾಗಲೇ ಸಾಬೀತಾಗಿದೆ. ಬೆಳೆಗಳಿಗೆ, ದನಕರುಗಳಿಗೆ ಯಾವುದೇ ತೊಂದರೆ ಇಲ್ಲ ಎಂದು ನಿರೂಪಿತವಾಗಿದೆ. ಕೆ.ಸಿ.ವ್ಯಾಲಿ ಎರಡನೇ ಹಂತ ಡಿಸೆಂಬರ್ ಅಂತ್ಯದ ಒಳಗೆ ಪೂರ್ಣಗೊಳ್ಳಲಿದ್ದು, ಇದರಿಂದ ೨೭೨ ಕೆರೆಗಳನ್ನು ತುಂಬಿಸಲು ಸಾಧ್ಯವಿದೆ ಎಂದರು.
ಕೋಲಾರ, ಚಿಕ್ಕಬಳ್ಳಾಪುರ ಭಾಗದಲ್ಲಿ ನದಿಗಳಲಿಲ್ಲದೆ ಇರುವುದರಿಂದ ಯೋಜನೆಯಿಂದ ರೈತರಿಗೆ ಅನುಕೂಲವಾಗಲಿದೆ. ೪೪೬ ಕೋಟಿಗಳ ವೆಚ್ಚದಲ್ಲಿ ಎರಡನೇ ಹಂತದ ಯೋಜನೆ ಕೈಗೊಳ್ಳಲಾಗಿದೆ. ಕೋಲಾರ ಜಿಲ್ಲೆಯ ೨೨೨ ಕೆರೆಗಳು ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ೫೦ ಕೆರೆಗಳನ್ನು ತುಂಬಿಸಲಾಗುತ್ತದೆ’ ಎಂದರು.ಜನತೆಗೆ ಮಾಹಿತಿ ನೀಡಿ
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ’೨೭೨ ಕೆರೆಗಳಿಗೆ ನೀರನ್ನು ತುಂಬಿಸುವ ಯೋಜನೆ ರೂಪಿಸುವ ಮೂಲಕ ನಮ್ಮ ಕಾಂಗ್ರೆಸ್ ಸರ್ಕಾರ ಬಯಲುಸೀಮೆಯ ಜನರ ಹಿತ ಕಾಪಾಡಲು ಮುಂದಡಿ ಇಟ್ಟಿದೆ. ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯ ಕಾಂಗ್ರೆಸ್ ಶಾಸಕರು ಕೆರೆ ಬಳಿ ಹೋಗಿ ಜನ ಸೇರಿಸಿ ಕಾರ್ಯಕ್ರಮ ಮಾಡಬೇಕು. ಎಲ್ಲಾ ತಾಲೂಕುಗಳಲ್ಲಿ ಕಾರ್ಯಕ್ರಮ ಹಮ್ಮಿಕೊಂಡು ಯೋಜನೆಯ ಅನುಕೂಲ ತಿಳಿಸಬೇಕು ಎಂದು ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಸಣ್ಣ ನೀರಾವರಿ ಸಚಿವ ಎನ್.ಎಸ್. ಬೋಸರಾಜು, ಸಚಿವರಾದ ಕೆ.ಎಚ್. ಮುನಿಯಪ್ಪ, ಡಾ.ಎಂ.ಸಿ.ಸುಧಾಕರ್, ಡಾ. ಶರಣ ಪ್ರಕಾಶ್ ಪಾಟೀಲ್, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಕೋಲಾರ ಶಾಸಕ ಕೊತ್ತೂರು ಮಂಜುನಾಥ್, ಮಾಲೂರು ಶಾಸಕ ಕೆ.ವೈ.ನಂಜೇಗೌಡ, ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್ ಗ್ಯಾರಂಟಿ ಸಮಿತಿ ಅಧ್ಯಕ್ಷ ವೈ ಶಿವಕುಮಾರ್ ಇದ್ದರು.ಉದ್ಘಾಟನೆಯ ನೇರ ಪ್ರಸಾರ
ಲಕ್ಣ್ಮಿಸಾಗರ ಐದನೇ ಪಂಪಿಂಗ್ ಕೇಂದ್ರದ ಮುಂದೆ ದೊಡ್ಡಪರದೆಯಲ್ಲಿ ಉದ್ಘಾಟನೆಯ ನೇರಪ್ರಸಾರ ಮಾಡಲಾಯಿತು. ಬೆಳ್ಳೂರು ಗ್ರಾಪಂ ಅಧ್ಯಕ್ಷೆ ಮಮತ, ಉಪಾಧ್ಯಕ್ಷೆ ಪದ್ಮಾ, ಪಿಡಿಒ ಸಂಪರಾಜ್, ನರಸಾಪುರ ಗ್ರಾಪಂ ಅಧ್ಯಕ್ಷ ಕುಮಾರ್, ಸೂಲೂರು ಗ್ರಾಪಂ ಅಧ್ಯಕ್ಷ ಪೆಮ್ಮಶೆಟ್ಟಿಹಳ್ಳಿ ಸುರೇಶ್, ಸಣ್ಣ ನೀರಾವರಿ ಇಲಾಖೆಯ ಹೆಚ್ಚುವರಿ ಪ್ರಭಾರ ಕಾರ್ಯಪಾಲಕ ಎಂಜಿನಿಯರ್ ವಿಷ್ಣು ಕಾಮತ್, ಸಹಾಯಕ ಎಂಜಿನಿಯರ್ ಶಶಿಕುಮಾರ್ ಮುಖಂಡರಾದ ಸೀಸಂದ್ರ ಗೋಪಾಲಗೌಡ, ಮೈಲಾಂಡಹಳ್ಳಿ ಮುರಳಿ, ವೀರೇಂದ್ರ ಪಾಟೀಲ್, ನದೀಂ ಮತ್ತಿತರರು ಇದ್ದರು.