ಧಾರವಾಡ: ನೂತನ ರಾಜ್ಯ ಸರ್ಕಾರವು ಅಸ್ತಿತ್ವಕ್ಕೆ ಬಂದಾಗಿನಿಂದ ವಿದ್ಯುತ್ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಿಲ್ಲ. ಇದು ಜನಸ್ನೇಹಿ ಸರ್ಕಾರದ ಸಾಧನೆ ಎಂದು ಇಂಧನ ಖಾತೆ ಸಚಿವ ಕೆ.ಜೆ. ಜಾರ್ಜ್ ಹೇಳಿದರು.
ಜನರಿಗೆ ವಿದ್ಯುತ್ ಬಿಲ್ ಸಂಬಂಧಿತ ಸಮಸ್ಯೆಗಳು, ಹೊಸ ಸಂಪರ್ಕ ಪಡೆಯುವಲ್ಲಿನ ವಿಳಂಬ, ವಿದ್ಯುತ್ ಕಂಬಗಳು ಮತ್ತು ತಂತಿಗಳ ನಿರ್ವಹಣೆ, ಹಲವು ಸಣ್ಣ ಸಣ್ಣ ತೊಂದರೆಗಳು ಎದುರಾಗುತ್ತಿವೆ. ಅದಕ್ಕೆ ಸೂಕ್ತವಾದ ಕ್ರಮಗಳನ್ನು ವಹಿಸಲು ಸೂಚಿಸಿದ ಅವರು, ಗ್ರಾಹಕ ಸೇವಾ ಕೇಂದ್ರಗಳನ್ನು ಇನ್ನಷ್ಟು ಬಲಪಡಿಸಬೇಕು ಮತ್ತು ಸಾರ್ವಜನಿಕರ ಕುಂದುಕೊರತೆಗಳಿಗೆ ತ್ವರಿತವಾಗಿ ಸ್ಪಂದಿಸಬೇಕು ಎಂದು ನಿರ್ದೇಶನ ನೀಡಿದರು.
ಮುಂದಿನ ದಿನಗಳಲ್ಲಿ ಇಂಧನ ವಿತರಣಾ ವ್ಯವಸ್ಥೆ ಇನ್ನಷ್ಟು ಸುಧಾರಿಸಲು ಮತ್ತು ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಲು ಕ್ರಮಕೈಗೊಳ್ಳುವುದಾಗಿ ಹೇಳಿದರು. ಪ್ರಸಕ್ತ ಸಾಲಿನ ಮುಂಗಾರು ಮಳೆಗೆ ಧಾರವಾಡ ಜಿಲ್ಲೆಯ ವಿವಿಧ ಕಡೆ ವಿದ್ಯುತ್ ಕಂಬ, ಟಿಸಿ ಮತ್ತು ಇತರ ಪರಿಕರಗಳಿಗೆ ಹಾನಿಯಾಗಿದ್ದು, ಅಂದಾಜು ₹1.71 ಕೋಟಿ ಮೊತ್ತದ ಹಾನಿಯಾಗಿದೆ ಎಂದು ಮಾಹಿತಿ ನೀಡಿದರು.2004ರಿಂದಲೂ ಅಭ್ಯಾಸವಾಗಿರುವ ಅನಧಿಕೃತ ವಿದ್ಯುತ್ ಸಂಪರ್ಕಗಳನ್ನು ಸಕ್ರಮಗೊಳಿಸಲು ನಿರ್ದಿಷ್ಟ ಮಾನದಂಡಗಳನ್ನು ಮಾಡಲಾಗಿದೆ. ಇದಕ್ಕಾಗಿ ಕುಸುಮ ಬಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗಿದೆ. 500 ಮೀಟರ್ ವ್ಯಾಪ್ತಿಯ ಹೊರಗಿರುವ ಪಂಪ್‌ಸೆಟ್ ವಿದ್ಯುತ್ ಸಂಪರ್ಕಗಳಿಗೆ ಈಗಾಗಲೇ ಶೇ. 60 ರಷ್ಟು ಇರುವ ರಿಯಾಯಿತಿಯನ್ನು ಶೇ. 80ಕ್ಕೆ ಹೆಚ್ಚಳ ಮಾಡಿ ಯಾವುದೇ ಅಕ್ರಮ, ಹೆಚ್ಚುವರಿ ಆರ್ಥಿಕ ವೆಚ್ಚವಾಗದಂತೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕ್ರಮವಹಿಸಲಾಗಿದೆ ಎಂದರು.
ಕೃಷಿ ಪಂಪ್ ಸೆಟ್‌ಗಳ ವಿದ್ಯುದೀಕರಣ: ಸ್ವಯಂ ಕಾರ್ಯಗತಗೊಳಿಸುವಿಕೆ ಮತ್ತು ಹೊಸ ಎಸ್‌ಎಸ್‌ವೈ ಯೋಜನೆಯಡಿ ಧಾರವಾಡ ಜಿಲ್ಲೆಯಲ್ಲಿ ಇಲ್ಲಿಯ ವರೆಗೆ ಒಟ್ಟು 674 ಕೃಷಿ ಪಂಪ್‌ಸೆಟ್‌ಗಳು ನೋಂದಣಿಗೊಂಡಿವೆ. ಇವುಗಳ ಪೈಕಿ 400 ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದ್ದು, 271 ಕೃಷಿ ಪಂಪ್‌ಸೆಟ್‌ಗಳು ಕಾಮಗಾರಿಗಳು ಪ್ರಗತಿಯಲ್ಲಿವೆ. ಸೌರ ಮೇಲ್ಚಾವಣಿ ಸ್ಥಾವರಗಳ ಅಳವಡಿಕೆಯಲ್ಲಿ ಗ್ರಾಹಕರಿಗೆ 28.95 ಮೆ. ವ್ಯಾಟ್ ಸಾಮರ್ಥ್ಯದ 933 ಸ್ಥಾವರಗಳನ್ನು ಅಳವಡಿಸಲಾಗಿದೆ. ಪಿ.ಎಂ. ಸೂರ್ಯ ಘರ್ ಯೋಜನೆಯಡಿ 940 ಸ್ಥಾವರಗಳಿದ್ದು, 1.92 ಮೆ. ವ್ಯಾಟ್ ವಿದ್ಯುತ್ ಉತ್ಪಾದನೆ ಮತ್ತು ಪೂರೈಕೆ ಆಗುತ್ತಿದೆ ಎಂದರು.ಸಭೆಯಲ್ಲಿ ಶಾಸಕರಾದ ಎನ್.ಎಚ್. ಕೊನರಡ್ಡಿ, ಎಂ.ಆರ್. ಪಾಟೀಲ, ಮಹೇಶ ಟೆಂಗಿನಕಾಯಿ ಮಾತನಾಡಿದರು. ಇಂಧನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಗೌರವ ಗುಪ್ತಾ, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜಕುಮಾರ ಪಾಂಡೆ, ಹೆಸ್ಕಾಂ ಅಧ್ಯಕ್ಷ ಅಜೀಮ್ ಫೀರ್ ಖಾದ್ರಿ, ಜಿಲ್ಲಾಧಿಕಾರಿ ದಿವ್ಯ ಪ್ರಭು, ಜಿಪಂ ಸಿಇಒ ಭುವನೇಶ ಪಾಟೀಲ, ಹುಡಾ ಅಧ್ಯಕ್ಷ ಶಾಕೀರ್ ಸನದಿ ಇದ್ದರು. ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ವೈಶಾಲಿ ಎಂ.ಎಲ್. ಸಭೆ ನಿರ್ವಹಿಸಿದರು.