ಪ್ರಜಾಪ್ರಭುತ್ವ ರಕ್ಷಣೆಗೆ ಕಾಂಗ್ರೆಸ್ ಹೋರಾಟ: ದೀಪ್ತಿ ಮೇರಿ ವರ್ಗೀಸ್

KannadaprabhaNewsNetwork |  
Published : Oct 28, 2026, 01:15 AM IST
೨೭ಕೆಎಲ್‌ಆರ್-೩ಕೋಲಾರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿರುವ ಎಐಸಿಸಿ ವೀಕ್ಷಕಿ ದೀಪ್ತಿ ಮೇರಿ ವರ್ಗೀಸ್. | Kannada Prabha

ಸಾರಾಂಶ

ವೋಟ್ ಬಚಾವೋ ದೇಶ್ ಬಚಾವೋ ಎಂಬ ಜನಾಂದೋಲನವನ್ನು ದೇಶದಾದ್ಯಂತ ರೂಪಿಸಲಾಗುತ್ತಿದೆ.

ವೋಟ್ ಬಚಾವೋ ದೇಶ್ ಬಚಾವೋ ಜನಾಂದೋಲನ । ಪತ್ರಿಕಾಗೋಷ್ಠಿಯಲ್ಲಿ ಎಐಸಿಸಿ ವೀಕ್ಷಕಿ ದೀಪ್ತಿ ಮೇರಿ ವರ್ಗೀಸ್ ಮಾಹಿತಿ

ಕನ್ನಡಪ್ರಭ ವಾರ್ತೆ ಕೋಲಾರ

ದೇಶದಲ್ಲಿ ೧೩ ಕೋಟಿಗೂ ಹೆಚ್ಚು ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ಅಕ್ರಮವಾಗಿ ತೆಗೆದುಹಾಕಿದ್ದು, ಪ್ರಜಾಪ್ರಭುತ್ವ ಮತ್ತು ಜನರ ಮತದಾನದ ಹಕ್ಕು ರಕ್ಷಣೆಗಾಗಿ ಕಾಂಗ್ರೆಸ್ ಪಕ್ಷ ದೇಶದಾದ್ಯಂತ ಪ್ರಜಾಪ್ರಭುತ್ವ ಉಳಿಸಿ ಆಂದೋಲನ ಹಮ್ಮಿಕೊಂಡಿದೆ ಎಂದು ಎಐಸಿಸಿ ವೀಕ್ಷಕಿ ದೀಪ್ತಿ ಮೇರಿ ವರ್ಗೀಸ್ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವೋಟ್ ಬಚಾವೋ ದೇಶ್ ಬಚಾವೋ ಎಂಬ ಜನಾಂದೋಲನವನ್ನು ದೇಶದಾದ್ಯಂತ ರೂಪಿಸಲಾಗುತ್ತಿದೆ. ಮತದಾನದ ಹಕ್ಕು ಕಿತ್ತುಕೊಳ್ಳುತ್ತಿರುವ ಕೇಂದ್ರ ಸರ್ಕಾರ ಹಾಗೂ ಕೇಂದ್ರ ಚುನಾವಣಾ ಆಯೋಗದ ವಿರುದ್ಧ ನವದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆಗಳು ನಡೆಯುತ್ತಿವೆ ಎಂದರು.

ಮತದಾರರ ಪಟ್ಟಿಯ ದುರ್ಬಳಕೆ ಹಾಗೂ ಅಕ್ರಮ ಮೊದಲು ಬೆಳಕಿಗೆ ಬಂದಿದ್ದೇ ಕರ್ನಾಟಕದ ಮಹಾದೇವಪುರ ಕ್ಷೇತ್ರದಲ್ಲಿ. ಅಲ್ಲಿ ೧ ಲಕ್ಷಕ್ಕೂ ಅಧಿಕ ಮತಗಳನ್ನು ಅಕ್ರಮವಾಗಿ ತೆಗೆದುಹಾಕಲಾಗಿತ್ತು. ಈ ಬಗ್ಗೆ ರಾಹುಲ್ ಗಾಂಧಿ ಗಂಭೀರವಾಗಿ ದನಿ ಎತ್ತಿದ್ದರು. ಅದಾದ ಬಳಿಕ ಮಹಾರಾಷ್ಟ್ರದ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಳ ನಡುವಿನ ಅವಧಿಯಲ್ಲಿ ಸುಮಾರು ೩೯ ಲಕ್ಷ ಮತದಾರರ ಹೆಸರನ್ನು ಏಕಾಏಕಿ ಕೈಬಿಡಲಾಗಿದೆ. ಈ ಎಲ್ಲಾ ಅಕ್ರಮಗಳಿಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಮಾಧ್ಯಮಗಳ ಮುಂದೆ ರಾಹುಲ್ ಗಾಂಧಿ ಬಹಿರಂಗಪಡಿಸಿದ್ದರೂ, ಚುನಾವಣಾ ಆಯೋಗವು ಕಣ್ಣು ಮುಚ್ಚಿ ಕುಳಿತಿದೆ ಎಂದು ಆರೋಪಿಸಿದರು.

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಬದಲಾಗಿ ಕೇಂದ್ರದ ಬಿಜೆಪಿ ಸರ್ಕಾರದ ಕಟ್ಟುಪಾಡುಗಳಿಗೆ ತಕ್ಕಂತೆ ನಡೆಯುತ್ತಿದ್ದಾರೆ. ಫಾರಂ ಸಂಖ್ಯೆ ೬ ರ ತಿದ್ದುಪಡಿ ಸೇರಿದಂತೆ ಹಲವು ನಿರ್ಧಾರಗಳಿಗೆ ಚುನಾವಣಾ ಆಯೋಗದ ಇಬ್ಬರು ಆಯುಕ್ತರೇ ೧೪ಕ್ಕೂ ಹೆಚ್ಚು ಬಾರಿ ವಿರೋಧ ವ್ಯಕ್ತಪಡಿಸಿದ್ದಾರೆ. ಸಂಸತ್ತಿನ ಗಮನಕ್ಕೆ ತರದೆ ಮಾಡಲಾದ ಬದಲಾವಣೆಗಳನ್ನು ಸುಪ್ರೀಂ ಕೋರ್ಟ್ ಕೂಡ ಅಮಾನ್ಯಗೊಳಿಸಿದೆ. ಆದ್ದರಿಂದ, ಅಕ್ರಮಗಳಿಗೆ ಹೊಣೆ ಹೊತ್ತು ಮುಖ್ಯ ಚುನಾವಣಾ ಆಯುಕ್ತ ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ವಿರೋಧ ಪಕ್ಷವಾಗಿ ಕಾಂಗ್ರೆಸ್ ಹೋರಾಡುತ್ತಿದ್ದು, ಮತದಾನದ ಹಕ್ಕು ಕಳೆದುಕೊಂಡ ಸಾಮಾನ್ಯ ಜನರು ಏಕೆ ಪ್ರತಿಭಟಿಸುತ್ತಿಲ್ಲ ಎಂಬ ಪ್ರಶ್ನೆಗೆ, ಮೊದಲು ಅನ್ಯಾಯಕ್ಕೊಳಗಾದ ಜನರು ನಮ್ಮನ್ನು ಸಂಪರ್ಕಿಸಿದರು, ನಂತರವೇ ನಮಗೆ ಈ ಅಕ್ರಮದ ವಿಚಾರ ತಿಳಿಯಿತು. ಮಹಾರಾಷ್ಟ್ರ ಮತ್ತು ಮಹಾದೇವಪುರದಲ್ಲೂ ಮೊದಲು ಜನರೇ ನಮಗೆ ಮಾಹಿತಿ ನೀಡಿದರು. ಪಶ್ಚಿಮ ಬಂಗಾಳದಲ್ಲಿ ಜನರು ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ್ದಾರೆ, ಜನರು ಧ್ವನಿ ಎತ್ತುತ್ತಿಲ್ಲ ಎಂಬುದು ತಪ್ಪು ಅಭಿಪ್ರಾಯ. ರಾಹುಲ್ ಗಾಂಧಿ ಸೂಕ್ತ ಸಾಕ್ಷ್ಯಾಧಾರಗಳೊಂದಿಗೆ ಮಾಧ್ಯಮಗಳ ಮುಂದೆ ವಿಷಯ ಮಂಡಿಸಿದ ಮೇಲೂ ಚುನಾವಣಾ ಆಯೋಗ ಮೌನ ವಹಿಸಿದಾಗ, ನಾವು ಬೀದಿಗಿಳಿದು ಹೋರಾಡುವುದು ಅನಿವಾರ್ಯವಾಯಿತು ಎಂದರು.

ಬಾಂಗ್ಲಾದೇಶಿಯರು ಸೇರಿದಂತೆ ಅಕ್ರಮ ವಲಸಿಗರು ಮತ್ತು ಮೃತರ ಮತದಾರರ ಹೆಸರನ್ನು ಪಟ್ಟಿಯಿಂದ ತೆರವುಗೊಳಿಸುವ ಕಾರ್ಯ ನಡೆದಿದೆ ಎಂಬ ಪ್ರಶ್ನೆಗೆ, ಒಂದು ವೇಳೆ ಬಾಂಗ್ಲಾದೇಶಿ ಅಕ್ರಮ ವಲಸಿಗರಿದ್ದರೆ ಆಕ್ಷೇಪವಿಲ್ಲ, ಅವರ ಹೆಸರನ್ನು ತೆರವುಗೊಳಿಸಲಿ. ಆದರೆ, ನಿರ್ದಿಷ್ಟ ಧರ್ಮದ ಮತಗಳನ್ನು ಅಳಿಸಿಹಾಕುವ ಹುನ್ನಾರ ನಡೆದಿದೆ ಎಂದು ಹೇಳಿದರು.

ಮತದಾರರ ಪಟ್ಟಿಯ ಅಕ್ರಮದ ಕುರಿತು ಜನಸಾಮಾನ್ಯರಿಗೆ ಮನವರಿಕೆ ಮಾಡುವಲ್ಲಿ ಕಾಂಗ್ರೆಸ್ ವಿಫಲವಾಗಿದೆಯೇ ಎಂಬುದಕ್ಕೆ, ಜನಸಾಮಾನ್ಯರು, ಕೂಲಿ ಕಾರ್ಮಿಕರು ತಮ್ಮ ಮತದಾನದ ಹಕ್ಕು ರದ್ದಾಗಿರುವ ಬಗ್ಗೆ ಸಂಪೂರ್ಣ ಜಾಗೃತರಾಗಿಲ್ಲ. ಹೀಗಾಗಿಯೇ, ಬೂತ್, ಬ್ಲಾಕ್ ಹಾಗೂ ಜಿಲ್ಲಾ ಮಟ್ಟದಲ್ಲಿ ಜಾಗೃತಿ ಆಂದೋಲನ ಆರಂಭಿಸಿದ್ದೇವೆ ಎಂದರು.

ನ. ೧ರಂದು ದೆಹಲಿಯಲ್ಲಿ ಬೃಹತ್ ರಾಲಿ ಹಾಗೂ ನ. ೨೫ರಂದು ದೇಶದಾದ್ಯಂತ ಲಕ್ಷಾಂತರ ಕಾರ್ಯಕರ್ತರ ಭಾಗವಹಿಸುವಿಕೆಯೊಂದಿಗೆ ಬೃಹತ್ ರಾಲಿ ನಡೆಯಲಿದೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ ಬೀದಿಗಿಳಿದು ಹೋರಾಟ ಮುಂದುವರಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್, ಕೆಪಿಸಿಸಿ ಪದಾಧಿಕಾರಿ ಮಧುಸೂದನ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮ್ಯಾಕಲ ನಾರಾಯಣಸ್ವಾಮಿ, ಮಹಿಳಾ ಘಟಕದ ಅಧ್ಯಕ್ಷೆ ಹೇಮಮಾಲಿನಿ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಅಧ್ಯಕ್ಷ ವೈ.ಶಿವಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮೈಲಾಂಡಹಳ್ಳಿ ಮುರಳಿ, ಸೈಯದ್ ಅಫ್ಸರ್, ಹಿರಿಯ ಮುಖಂಡ ಬೆಳಗಾನಹಳ್ಳಿ ಮುನಿವೆಂಕಟಪ್ಪ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಲ್ಲರಬಾಣವಾಡಿಯಲ್ಲಿ ಚಿರತೆ ಮರಿ ಪತ್ತೆ
ಬದುಕಿನ ಸನ್ನಡತೆಗೆ ಯೋಗ-ಅಧ್ಯಾತ್ಮ ಸಹಕಾರಿ: ಸ್ವಾಮೀಜಿ