ಸೇನೆಯ ಬಗ್ಗೆ ಕಾಂಗ್ರೆಸ್‌ ಸಂಶಯ ಕಳವಳಕಾರಿ: ಎಂ.ಪಿ.ರೇಣುಕಾಚಾರ್ಯ

KannadaprabhaNewsNetwork | Published : May 25, 2025 1:23 AM
ಆಪರೇಷನ್ ಸಿಂದೂರ ಯಶಸ್ಸಿಗೆ ಜಾಗತಿಕ ಮಟ್ಟದಲ್ಲಿ ಪ್ರಶಂಸೆ ವ್ಯಕ್ತವಾಗುತ್ತಿರುವುದನ್ನು ಸಹಿಸದ ಎಐಸಿಸಿ ನಾಯಕರಾದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ಸಿನ ಮಂತ್ರಿ ಮಂಡಲದವರು ನಮ್ಮ ಯೋಧರು, ಸೇನೆ, ಸಶಸ್ತ್ರದ ಬಗ್ಗೆಯೇ ಅನುಮಾನಪಡುತ್ತಿರುವುದು ಕಳವಳಕಾರಿ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಕಿಡಿಕಾರಿದರು.
Follow Us

ಆಪರೇಷನ್ ಸಿಂದೂರ ಯಶಸ್ಸು ಸಹಿಸದ ಕೈ । ಬಹಿರಂಗವಾಗಿ ಕ್ಷಮೆ ಕೋರಲು ಆಗ್ರಹ

ಕನ್ನಡಪ್ರಭ ವಾರ್ತೆ ದಾವಣಗೆರೆ

ಆಪರೇಷನ್ ಸಿಂದೂರ ಯಶಸ್ಸಿಗೆ ಜಾಗತಿಕ ಮಟ್ಟದಲ್ಲಿ ಪ್ರಶಂಸೆ ವ್ಯಕ್ತವಾಗುತ್ತಿರುವುದನ್ನು ಸಹಿಸದ ಎಐಸಿಸಿ ನಾಯಕರಾದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ, ಕಾಂಗ್ರೆಸ್ಸಿನ ಮಂತ್ರಿ ಮಂಡಲದವರು ನಮ್ಮ ಯೋಧರು, ಸೇನೆ, ಸಶಸ್ತ್ರದ ಬಗ್ಗೆಯೇ ಅನುಮಾನಪಡುತ್ತಿರುವುದು ಕಳವಳಕಾರಿ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಕಿಡಿಕಾರಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆಪರೇಷನ್ ಸಿಂದೂರದ ಯಶಸ್ಸಿಗೆ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಇಡೀ ಜಗತ್ತು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರೂ, ರಾಹುಲ್ ಗಾಂಧಿ, ಖರ್ಗೆ, ಸಿದ್ದರಾಮಯ್ಯ, ಕಾಂಗ್ರೆಸ್ಸಿನ ಸಚಿವರು ಭಾರತ ಸೇನೆಯ ಯಶಸ್ಸಿನ ಬಗ್ಗೆಯೂ ಅನುಮಾನಪಡುತ್ತಿದ್ದಾರೆ. ಈ ಕಾಂಗ್ರೆಸ್ಸಿಗರು ಭಾರತ ಪರವೋ ಅಥವಾ ಶತೃ ರಾಷ್ಟ್ರ ಪಾಕಿಸ್ತಾನದ ಪರವೋ ಎಂಬುದನ್ನು ಜನರ ಮುಂದೆ ಬಹಿರಂಗಪಡಿಸಲಿ ಎಂದರು.

ರಾಹುಲ್ ಗಾಂಧಿ ಸಂವಿಧಾನದ ಪುಸ್ತಕ ಕೈಯಲ್ಲಿ ಹಿಡಿದುಕೊಂಡೇ ಓಡಾಡುತ್ತಾರೆ. ಇಂತಹವರು ದೇಶದ ಪರವಾಗಿ ನಿಲ್ಲುವ ಬದಲಿಗೆ ಪಾಕಿಸ್ಥಾನದ ಪರ ಮಾತನಾಡುತ್ತಾರೆಂದರೆ, ಇವರು ಪಾಕ್‌ನ ಅತ್ಯುನ್ನತ ನಾಗರಿಕ ಪ್ರಶಸ್ತಿ ಪಡೆಯಲೆಂದೇ ಹೀಗೆಲ್ಲ ಮಾತನಾಡುತ್ತಿದ್ದಾರೇನೋ ಎಂಬ ಪ್ರಶ್ನೆ ಕಾಡುತ್ತದೆ. ರಾಹುಲ್, ಖರ್ಗೆ, ಸಿದ್ದರಾಮಯ್ಯ,ಸಂತೋಷ್‌ ಲಾಡ್‌, ಕೃಷ್ಣ ಬೈರೇಗೌಡ, ಬಿ.ಕೆ.ಹರಿಪ್ರಸಾದ್‌ ಮೊದಲಾದವರು ಬಹಿರಂಗ ಕ್ಷಮೆಯಾಚಿಸಬೇಕು ಎಂದು ಆಗ್ರಹಿದರು.

ಮಲ್ಲಿಕಾರ್ಜುನ ಖರ್ಗೆ, ಚುಟ್‌ ಪುಟ್‌ ವಿಮಾನ ಕಳಿಸಿ ಯುದ್ಧ ಮಾಡಿದ್ರು ಅಂತಾರೆ. ಪ್ರಿಯಾಂಕ ಖರ್ಗೆ ದುಡ್ಡಿನ ದರ್ಪದಿಂದ ಮಾತನಾಡುತ್ತಾರೆ. ಹರಿಪ್ರಸಾದ್‌, ಪ್ರಧಾನಿ ಮೋದಿಗೆ ಉತ್ತರನ ಪೌರುಷನ ಒಲೆ ಮುಂದೆ ಅಂತಾರೆ. ಇದೇ ಮಲ್ಲಿಕಾರ್ಜುನ ಖರ್ಗೆ ಭಾಷಣದಲ್ಲಿ ನಮ್ಮ ಪಾಕಿಸ್ತಾನ ಎಂದು ಹೇಳಿಕೆ ನೀಡುತ್ತಾರೆ. ಕಾಂಗ್ರೆಸ್ಸಿನ ನಾಯಕರು ಪಾಕ್ ಏಜೆಂಟರಾಗಿ ಕೆಲಸ ಮಾಡುತ್ತಿದ್ದಾರೇನೋ ಎಂಬ ಅನುಮಾನ ಮೂಡುತ್ತಿದೆ ಎಂದು ದೂರಿದರು.

ಹೊಸಪೇಟೆಯಲ್ಲಿ ನಡೆದಿದ್ದು ರಾಜ್ಯ ಸರ್ಕಾರದ ಸಾಧನಾ ಸಮಾವೇಶವಲ್ಲ. ಜನರ ಸಮಾಧಿ ಮೇಲೆ ಮಾಡಿದ ಸಮಾವೇಶ, ಅದೊಂದು ಲೂಟಿ ಸಮಾವೇಶವಾಗಿದ್ದು, ಅಧಿಕಾರ ನಡೆಸುವ ನಡೆಸುವ, ಅಧಿಕಾರದಲ್ಲಿ ಮುಂದುವರಿಯುವ ಯಾವುದೇ ನೈತಿಕ ಹಕ್ಕು ಸಹ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪಕ್ಷದ ಮುಖಂಡರಾದ ರಾಜು ವೀರಣ್ಣ, ಪಂಜು ಪೈಲ್ವಾನ್, ಪ್ರವೀಣ ಜಾಧವ್‌ ಇತರರು ಇದ್ದರು.

ಯತ್ನಾಳ್ ಉಚ್ಚಾಟನೆಗೆ ದಾವಣಗೆರೆ ಸೂತ್ರದಾರ ಕಾರಣ!

ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಗೆ ದಾವಣಗೆರೆ ಜಿಲ್ಲೆಯ ಸೂತ್ರದಾರರೊಬ್ಬರು ಕಾರಣ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸ್ವಪಕ್ಷದ ಕೇಂದ್ರದ ಮಾಜಿ ಸಚಿವ ಜಿ.ಎಂ.ಸಿದ್ದೇಶ್ವರ ವಿರುದ್ಧವೇ ಆರೋಪ ಮಾಡಿದರು.

ಬಿಜೆಪಿಯಿಂದ ಉಚ್ಛಾಟಿದ ಬಸನಗೌಡ ಪಾಟೀಲ್ ಯತ್ನಾಳ್ ದಾವಣಗೆರೆಗೆ ಬಂದಾಗ ಜಿಎಂಐಟಿಯಲ್ಲಿ ಆಶ್ರಯ ನೀಡಿದ್ದಲ್ಲದೇ, ಪತ್ರಿಕಾಗೋಷ್ಟಿ ಮಾಡಲು ಸಹ ಇದೇ ಸೂತ್ರದಾರರು ಕುಮ್ಮಕ್ಕು ನೀಡಿದ್ದಾರೆ. ಇಂತಹವರಿಂದಾಗಿಯೇ ಯತ್ನಾಳ್ ಈಗ ಬಲಿಪಶುವಾಗಿದ್ದಾರೆ ಎಂದರು.

ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೆ ಯಾರಿಗೂ ತಿಳಿಯುವುದಿಲ್ಲವೆಂಬಂತೆ ಸೂತ್ರದಾರಿಯೂ ಅಂದುಕೊಂಡಿದ್ದಾರೆ. ಶೀಘ್ರವೇ ಯತ್ನಾಳ್‌ಗೆ ಆದ ಪರಿಸ್ಥಿತಿಯೂ ಈ ಸೂತ್ರದಾರನ ಬುಡಕ್ಕೂ ಬರುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಸಿದ್ದೇಶ್ವರ ಹೆಸರನ್ನು ಪ್ರಸ್ತಾಪಿಸದೇ ಸೂಚ್ಯವಾಗಿ ಹೇಳಿದರು.

ಯತ್ನಾಳ್ ಅಪ್ಪ-ಮಗನನ್ನು ಜೈಲಿಗೆ ಕಳಿಸುವುದಾಗಿ ಹೇಳಿಕೆ ನೀಡಿದ್ದಾರೆ. ಬಿ.ಎಸ್.ಯಡಿಯೂರಪ್ಪ, ಬಿ.ವೈ.ವಿಜಯೇಂದ್ರರನ್ನು ಜೈಲಿಗೆ ಕಳಿಸುವುದು ಯತ್ನಾಳ್ ಹಣೆಬರಹದಲ್ಲೇ ಇಲ್ಲ. ಯತ್ನಾಳ್‌ ನಮ್ಮ ನಾಯಕ ಯಡಿಯೂರಪ್ಪ ಕಾಲಿನ ಧೂಳಿಗೂ ಸಮನಲ್ಲ ಎಂದು ಲೇವಡಿ ಮಾಡಿದರು.

ರಾಮನಗರ ಹೆಸರು ಬದಲಾವಣೆಯನ್ನು ಅಧಿಕಾರದ ಮದದಲ್ಲಿ ಕಾಂಗ್ರೆಸ್ಸಿಗರು ಮಾಡುತ್ತಿದ್ದಾರೆ. ರಾಮನಗರ ಹೆಸರಿನಲ್ಲಿ ರಾಮನ ಹೆಸರು ಇದೆ. ಕಾಂಗ್ರೆಸ್ಸಿಗರಿಗೆ ರಹೀಂ, ಟಿಪ್ಪು ಅಂದ್ರೆ ಇಷ್ಟ.

ಎಂ.ಪಿ.ರೇಣುಕಾಚಾರ್ಯ, ಬಿಜೆಪಿ ಮಾಜಿ ಸಚಿವ.