ಜೆಡಿಎಸ್-ಬಿಜೆಪಿ ಚುನಾವಣಾ ಪ್ರಚಾರ ಕಾರ್ಯಕ್ರಮ । 50 ವರ್ಷ ಆಡಳಿತದ ಕಾಂಗ್ರೆಸ್ ಕೊಡುಗೆ ಶೂನ್ಯ
ಕನ್ನಡಪ್ರಭ ವಾರ್ತೆ ಅರಕಲಗೂಡುದೇಶದಲ್ಲಿ, ರಾಜ್ಯದಲ್ಲಿ ದುಡ್ಡಿಗೆ ಸಮಸ್ಯೆಯಿಲ್ಲ. ರಾಜ್ಯದ ಜನತೆ ರಾಜ್ಯದ ಖಜಾನೆಯನ್ನು ತೆರಿಗೆ ಮೂಲಕ ಸಂಪೂರ್ಣವಾಗಿ ತುಂಬಿಸಿದ್ದೀರಿ. ಆ ದುಡ್ಡನ್ನು ಕಾಂಗ್ರೆಸ್ ಲೂಟಿ ಹೊಡೆಯುವುದನ್ನು ನಿಲ್ಲಿಸಿದರೆ ಜನರ ಕಷ್ಟ-ಸುಖ ಬಗೆಹರಿಸಬಹುದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ರಾಮನಾಥಪುರದ ಕಾಲೇಜು ಮೈದಾನದಲ್ಲಿ ಗುರುವಾರ ಆಯೊಜಿಸಿದ್ದ ಜೆಡಿಎಸ್-ಬಿಜೆಪಿ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿ, ಕಾಂಗ್ರೆಸ್ 1972ರಲ್ಲಿ ಗರೀಬಿ ಹಠಾವೋ ಘೋಷಿಸಿತು. ಆದರೆ ಬಡತನ ಹೋಗಲಾಡಿಸಿದರಾ? ಆಗಲಿಲ್ಲಾ? 50 ವರ್ಷ ಆಳ್ವಿಕೆ ನಡೆಸಿದರೂ ಕಾಂಗ್ರೆಸ್ ಕೊಡುಗೆ ಶೂನ್ಯ ಎಂದು ವ್ಯಂಗ್ಯವಾಡಿದರು.‘ಚುನಾವಣೆಗಿಂತ ಮುಂಚೆ ಕಾಂಗ್ರೆಸ್ ಮೇಕೆದಾಟಿನಿಂದ ಪಾದಯಾತ್ರೆ ಮಾಡಿದ್ರು, ನಮ್ಮ ನೀರು ನಮ್ಮ ಹಕ್ಕು ಎಂದವರು ನಮ್ಮ ನೀರು ತಮಿಳುನಾಡಿಗೆ ಎಂದು ನಡೆದಿರೋದು ನಮ್ಮ ಕಣ್ಣ ಮುಂದಿದೆ. ತಮಿಳುನಾಡಿನ ಡಿಎಂಕೆ ಪಕ್ಷ ಪ್ರಣಾಳಿಕೆಯಲ್ಲಿ ಮೇಕೆದಾಟು ಮಾಡಲು ಅವಕಾಶಕೊಡಲ್ಲ ಎಂದು ಹಾಕಿದಾರೆ. ಕಾಂಗ್ರೆಸ್ ಡಿಎಂಕೆ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ’ ಎಂದು ಟೀಕಿಸಿದರು.
‘ನಾನು 14 ತಿಂಗಳು ಸಿಎಂ ಆದಾಗ ಹಲವು ಸಮಸ್ಯೆ ಎದುರಿಸಿದ್ದೇನೆ. ನಾನು ಅಧಿಕಾರಕ್ಕೆ ಬಂದರೆ ಸಾಲಮನ್ನಾ ಮಾಡೋದಾಗಿ ಹೇಳಿದ್ದೆ. ಬಳಿಕ ಚುನಾವಣೆ ಆಗಿ ಯಾರಿಗೂ ಬಹುಮತ ಸಿಗದೆ ಹೋದಾಗ ಕಾಂಗ್ರೆಸ್ ದೇವೇಗೌಡರನ್ನು ಭೇಟಿಯಾದರು. ದೇವೇಗೌಡರು ನನ್ನ ಮಗ ಸಿಎಂ ಅಗೋದು ಬೇಡಾ ಎಂದರೂ ಅವರೇ ಒತ್ತಡ ಹಾಕಿ ಸಿಎಂ ಮಾಡಿದ್ರು. ಆಗ ಮೊದಲ ದಿನದಿಂದಲೇ ಸಾಲಮನ್ನಾ ಬಗ್ಗೆ ಅಪಸ್ವರ ಎತ್ತಿದರು. ಆದರೆ ನಾನು ಕೊಟ್ಟ ಮಾತಿನಂತೆ ಸಾಲಮನ್ನಾ ಮಾಡಿದೆ’ ಎಂದು ಹೇಳಿದರು.‘ಮಂಜಣ್ಣ ಅವರು ಮುಂದಿನ ದಿನದಲ್ಲಿ ಅರಕಲಗೂಡಿಗೆ ಹೆಚ್ಚಿನ ಮಾನ್ಯತೆ ಸಿಗಲಿ ಎಂದು ಕೆಲ ವಿಚಾರವನ್ನು ಹೇಳಿದ್ದಾರೆ. ಇದರ ಬಗ್ಗೆ ಯಾರೂ ತಪ್ಪು ತಿಳಿಯೋದು ಬೇಡ. ಮಂಜಣ್ಣ ಮಾತನಾಡೊವಾಗ ನೇರವಾಗಿ ಮಾತನಾಡುತ್ತಾರೆ. ಆದರೆ ಹೃದಯ ಶುದ್ದ ಇಟ್ಟು ಕೊಂಡಿದ್ದಾರೆ. ನನಗೆ ರಾಜಕೀಯವಾಗಿ ರಾಮನಗರ ಜನ್ಮಕೊಟ್ಟಿದೆ. ಮಂಡ್ಯದ ಜನತೆ ಪ್ರೀತಿ ವಿಶ್ವಾಸದಿಂದ ಶಕ್ತಿ ತುಂಬಿದ್ದಾರೆ. ಆದರೆ ನಾನು ಈ ಮಣ್ಣಿನಲ್ಲಿ ಹುಟ್ಟಿದ ಮಗ. ನಿಮ್ಮ ಮಕ್ಕಳು ತಪ್ಪು ಮಾಡಿದಾಗ ತಿದ್ದಿ ನಡೆಸೊದು ನೀವೇ. ತಪ್ಪಾಗಿದ್ದರೆ ತಿದ್ದಿಕೊಳ್ಳಲು ಅವಕಾಶ ಕಲ್ಪಿಸಿ ಎಂದು ಮೊದಲೇ ಕೇಳಿಕೊಂಡಿದ್ದೇನೆ. ನಮ್ಮ ಕುಟುಂಬದಿಂದ ಜಿಲ್ಲೆಗೆ ಮಾತ್ರವಲ್ಲ ರಾಜ್ಯಕ್ಕೆ ಏನೂ ಮೋಸ ಆಗಿಲ್ಲ. ಮಂಜಣ್ಣ ದೇವೇಗೌಡರ ಕಷ್ಣ ಕಾಲದಲ್ಲಿ ಸಹಾಯ ಮಾಡಿದ್ದಾರೆ. ಆದ್ದರಿಂದ ಈ ಬಾರಿ ಪ್ರಜ್ವಲ್ ಅವರನ್ನು ಅತಿ ಹೆಚ್ಚು ಮತಗಳಿಂದ ಗೆಲ್ಲಿಸಬೇಕು’ ಎಂದು ಮನವಿ ಮಾಡಿದರು.
ರೇವಣ್ಣ ಕಾಲೆಳೆದ ಎ.ಮಂಜು:ಶಾಸಕ ಎ.ಮಂಜು ಮಾತನಾಡಿ, ‘ತಾಲೂಕಿನ ಅಭಿವೃದ್ದಿಯನ್ನು ಕುಮಾರಸ್ವಾಮಿ ಅವರನ್ನು ಹಿಡಿದು ಮಾಡಿಸಿಕೊಳ್ಳುತ್ತೇವೆ. ಆದರೆ ನೀವು ಸುಮ್ಮನಿದ್ದರೆ ಸಾಕಪ್ಪ’ ಎಂದು ಎಚ್.ಡಿ.ರೇವಣ್ಣ ಆವರನ್ನು ಭಾಷಣದುದ್ಧಕ್ಕೂ ನಗುತ್ತಲೇ ಕಾಲೆಳೆದರು.
‘ರೇವಣ್ಣ ಅವರು ಯಾವುದೇ ಅಭಿವೃದ್ಧಿ ಕೆಲಸಗಳಾದರೂ ಹೊಳೆನರಸೀಪುರ, ಹಾಸನಕ್ಕೆ ಆಗಬೇಕು ಎನ್ನುತ್ತಾರೆ. ಇಂದು ತಾಲೂಕಿಗೆ ಎಂಜಿನಿಯರಿಂಗ್, ಡಿಪ್ಲೊಮಾ ಕಾಲೇಜು ಮಾಡಿಸಿಕೊಡುವುದಾಗಿ ಹೇಳಿದ್ದಾರೆ. ಆದರೆ ಹೊಳೆನರಸೀಪುರಕ್ಕೆ ಎಂಜಿನಿಯರಿಂಗ್, ಡಿಪ್ಲೊಮಾ ಕಾಲೇಜು ಮಾಡಿಸುವಾಗ ನಮ್ಮ ತಾಲೂಕು ಕಾಣಿಸಲಿಲ್ಲವಾ’ ಎಂದು ಛೇಡಿಸಿದರು.‘ರೇವಣ್ಣ ಅವರಿಗೆ ಸ್ಪೆಷಲ್ ಕ್ವಾಲಿಟಿ ಇದೆ. ನಾನು ಹೋದರೆ ಯಾರು ಕೇಳಲ್ಲ. ಆದ್ರೆ ರೇವಣ್ಣ ಹೋದರೆ ಗೌಡ್ರು ಮಗ ಬಂದ್ರು ಅಂತ ಸಹಿ ಹಾಕಿ ಕಳುಹಿಸುತ್ತಾರೆ. ನಮಗೆ ಹಾಕಲ್ಲ. ಅದೇ ಶಕ್ತಿ ನಿಮಗೆ. ನಮ್ಮ ಶಕ್ತಿ ಕುಮಾರಣ್ಣ, ರೇವಣ್ಣ. ಮುಂದಿನ ದಿನಗಳಲ್ಲಿ ತಾಲೂಕಿಗೆ ಎಂಜಿನಿಯರಿಂಗ್, ಡಿಪ್ಲೊಮಾ ಕಾಲೇಜನ್ನು ಮಾಡೇ ಮಾಡುತ್ತೇವೆ’ ಎಂದರು.
ಶಾಸಕ ಎಚ್.ಡಿ.ರೇವಣ್ಣ, ಎಂಎಲ್ಸಿ ಎಚ್.ವಿಶ್ವನಾಥ್, ಸಂಸದ ಪ್ರಜ್ವಲ್ ರೇವಣ್ಣ, ತಾಲೂಕು ಜೆಡಿಎಸ್ ಅಧ್ಯಕ್ಷ ಹೊನ್ನವಳ್ಳಿ ಸತೀಶ್, ಬಿಜೆಪಿ ಮುಖಂಡರು, ಜೆಡಿಎಸ್ ಮುಖಂಡರು ಇದ್ದರು.ಗೈರು:
ಕಾರ್ಯಕ್ರಮಕ್ಕೆ ಮಾಜಿ ಶಾಸಕ ಎ.ಟಿ.ರಾಮಸ್ವಾಮಿ, ಬಿಜೆಪಿ ಮುಖಂಡರಾದ ಎಚ್.ಯೋಗಾರಮೇಶ್, ಪ್ರೀತಂಗೌಡ ಅವರು ಗೈರಾಗಿದ್ದರು. ಆದರೆ, ಪಕ್ಷದ ಬ್ಯಾನರ್‌ನಲ್ಲಿ ಪ್ರೀತಂಗೌಡರ ಭಾವಚಿತ್ರ ಹಾಕದಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಯಿತು.ಫೋನ್ ಟ್ಯಾಪಿಂಗ್ ಮಾಡಿದ್ರೆ ನನ್ನ ಸರ್ಕಾರ ಯಾಕೆ ಬೀಳ್ತಿತ್ತು ‘ನಾನು ಪೋನ್ ಟ್ಯಾಪಿಂಗ್ ಮಾಡೋದಾಗಿದ್ರೆ ಅಂದು ನನ್ನ ಸರ್ಕಾರ ಯಾಕೆ ಬೀಳಿಸಿಕೊಳ್ತಿದ್ದೆ’ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಚಿವ ಚೆಲುವರಾಯ ಸ್ವಾಮಿಗೆ ತಿರುಗೇಟು ನೀಡಿದ್ದಾರೆ.ರಾಮನಾಥಪುರದಲ್ಲಿ ಗುರುವಾರ ಮಾಧ್ಯಮದೊಂದಿಗೆ ಮಾತನಾಡಿದರು. ಆದಿಚುಂಚನಗಿರಿ ಶ್ರೀಗಳ ಪೋನ್ ಟ್ಯಾಪಿಂಗ್ ಮಾಡಿಸಿದ್ದರು ಎಂಬ ಚೆಲುವರಾಯ ಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿ, ‘ನಾನು ಪೋನ್ ಟ್ಯಾಪಿಂಗ್ ಮಾಡೋದಾಗಿದ್ದರೆ ನನ್ನ ಸರ್ಕಾರ ಯಾಕೆ ಬೀಳಿಸಿಕೊಳ್ತಿದ್ದೆ. ಅವರು ತನಿಖೆ ಮಾಡಿಕೊಳ್ಳಲಿ’ ಎಂದು ತಿರುಗೇಟು ನೀಡಿದರು.ವರ್ಷದಲ್ಲಿ ರಾಜ್ಯದಲ್ಲಿ ರಾಜಕೀಯ ಬದಲಾವಣೆ ಆಗಲಿದೆ ಎಂಬ ಕುರಿತು ಪ್ರತಿಕ್ರಿಯಿಸಿ, ‘ಕಾದು ನೋಡಿ, ರಾಜಕೀಯ ಅಂದ ಮೇಲೆ ಹರಿಯೋ ನೀರು ಇದ್ದಂತೆ. ಯಾವಾಗ ಏನೇನಾಗುತ್ತೆ ನಮಗೂ ಗೊತ್ತಿಲ್ಲ. ಅವರಿಗೂ ಗೊತ್ತಿಲ್ಲ. ಅವರ ಸಚಿವರು, ನಾಯಕರು ಹೇಳ್ತಿದ್ದಾರೆ. ಅವರನ್ನೇ ಕೇಳಿ’ ಎಂದು ವ್ಯಂಗ್ಯವಾಡಿದರು.‘ಜೆಡಿಎಸ್ ಎಲ್ಲಿದೆ ಅನ್ನೊ ದುರಹಂಕಾರ ಮಾತಾಡ್ತಿರಲ್ಲ, ನಿಮ್ಮ ಸಹವಾಸ ಮಾಡಿದ್ದಕ್ಕೆ ಈಗ ಜೆಡಿಎಸ್ ಈ ಹಂತಕ್ಕೆ ಬಂದಿದೆ. ಐದು ವರ್ಷ ಅಧಿಕಾರ ಮಾಡಿ ಅಂತ ಕೊಟ್ಟು ಬುಡ ಸಮೇತ ತೆಗೆಯೋಕೆ ಹೊರಟ್ರಲ್ಲ. ಅದಕ್ಕೆ ಮರು ಜೀವ ಕೊಡೋಕೆ ಪ್ರಯತ್ನ ಮಾಡ್ತಾ ಇದ್ದೇನೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಆದಿ ಚುಂಚನಗಿರಿ ಪರ್ಯಾಯವಾಗಿ ಮಠ ಮಾಡಿದರು ಎಂಬ ವಿಚಾರ ಪ್ರತಿಕ್ರಿಯಿಸಿ, ‘ಬೇರೆ ಸಮುದಾಯದಲ್ಲೂ ಎಷ್ಟು ಮಠಗಳಿಲ್ಲ, ನಮ್ಮ ಸಮುದಾಯದಲ್ಲೂ ಬೆಳಿಯಲಿ ಅಂತ ಇನ್ನೊಬ್ಬರಿಗೂ ಸಹಾಯ ಮಾಡಿದ್ದೇವೆ’ ಎಂದರು.‘ಪಾಪ ಪದೇ ಪದೇ ಯಾಕೆ ವ್ಯಕ್ತಿ ಹೆಸರು ಮಧ್ಯ ತರಬೇಕು? ನೆನ್ನೆ ಅವರು ಎನ್‌ಡಿಎ ಪರ ಮತ ಕೇಳಿದ್ದಾರೆ. ಎನ್‌ಡಿಎ ಅಭ್ಯರ್ಥಿಗೆ ಮತ ಕೊಡಿ ಎಂದು ಹೇಳಿದ್ದಾರೆ. ಅವರು ರಾಜ್ಯದ ನಾಯಕರಿದ್ದಾರೆ, ಬೆರೆ ಬೇರೆ ಕಡೆ ಜವಾಬ್ದಾರಿ ಕೊಟ್ಟಿದ್ದಾರೆ. ಎಲ್ಲಾ ಕಡೆ ಹೋಗಬೇಕಿದೆ. ಬಿಜೆಪಿಯ ಎಲ್ಲ ಕಾರ್ಯಕರ್ತರು ಕೆಲಸ ಮಾಡ್ತಿದ್ದಾರೆ. ಗೊಂದಲ ಇಲ್ಲ’ ಎಂದು ಪ್ರೀತಂಗೌಡ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದರು.‘ಅಲ್ಲಲ್ಲಿ ಸ್ಥಳೀಯರು ಮಾಡ್ಕೋತಾರೆ, ಇಲ್ಲಿ ಯಾರದು ಫೋಟೋ ಬೇಕೊ ಹಾಕಿದ್ದಾರೆ. ಅದೇನು ದೊಡ್ಡ ವಿಷಯ ಅಲ್ಲ. ಹಲವು ಕಡೆ ಸಣ್ಣ ಪುಟ್ಟ ಸಮಸ್ಯೆ ಇರ್ತಾವೆ. ಕೆಲವರು ಬಿಜೆಪಿಯಲ್ಲಿ ಇದ್ಕೊಂಡೇ ಕಾಂಗ್ರೆಸ್‌ಗೆ ಕೆಲಸ ಮಾಡ್ತಿಲ್ವ? ಬಿಜೆಪಿ ಶಾಸಕರೆ ಕೆಲಸ ಮಾಡ್ತಿಲ್ಲವೇ’ ಎಂದು ಕಾರ್ಯಕ್ರಮದ ಬ್ಯಾನರಿನಲ್ಲಿ ಪ್ರೀತಂಗೌಡ ಪೋಟೋ ಇಲ್ಲದ ವಿಚಾರಕ್ಕೆ ಉತ್ತರಿಸಿದರುಜೆಡಿಎಸ್ ಒಂದು ಸ್ಥಾನ ಗೆಲ್ಲಲ್ಲ ಎಂಬ ಡಿಕೆ ಶಿವಕುಮಾರ್ ಹೇಳಿಕೆ ಪ್ರತಿಕ್ರಿಯಿಸಿ, ‘ಅವರು ಭವಿಷ್ಯ ಹೇಳೋದ್ರಲ್ಲಿ ಎಕ್ಸಪರ್ಟ್, ಅವರು ಜ್ಯೋತಿಷಿ ಅಲ್ವಾ. ಅವರ ಬ್ಯಾಗ್ ತೆಗೆದರೆ ಜ್ಯೋತಿಷ್ಯದ ಸಾಕಷ್ಟು ಪುಸ್ತಕ ಸಿಗುತ್ತವೆ. ಅವರು ಸಂಶೋಧನೆ ಮಾಡಿರಬಹುದು. ಅದನ್ನು ಹೇಳಿದ್ದಾರೆ. ನಾವೂ ರೀಸರ್ಚ್ ಮಾಡಿದ್ದೇವೆ, ಈ ರಾಜ್ಯದಲ್ಲಿ ಕಾಂಗ್ರೆಸ್ ತೆಗೆಯಲು ಏನು ಮಾಡಬೇಕೊ ಜನ ಅದನ್ನು ಮಾಡ್ತಾರೆ. ಹಿಂದೆ ಹೋದ ಕಡೆ ಜನ ಕುಮಾರಸ್ವಾಮಿ ಮುಖ್ಯಮಂತ್ರಿ ಅಂತ ಕೂಗೋರು. ಈಗ ಕೇಂದ್ರದ ಮಂತ್ರಿ ಆಗ್ತಾರೆ ಅಂತ ಕೂಗ್ತಾವ್ರೆ’ ಎಂದು ಕುಹಕವಾಡಿದರು.‘50 ಸಾರ್ವಜನಿಕ ಸಭೆಯಲ್ಲಿ ನನ್ನ ಚುನಾವಣೆ ಸಭೆ ಇರಲಿದೆ. ಕಾಂಗ್ರೆಸ್‌ನವರು ಪಾಪ ಕಾಣೆ ಆಗಿದ್ದಾರೆ ಅಂತ ಮಂಡ್ಯದಲ್ಲಿ ಅಪಪ್ರಚಾರ ಮಾಡಿದ್ದಾರೆ. ಆದರೆ ನಾನು ಕಾಣೆ ಆಗಿಲ್ಲ 28ಕ್ಕೆ 28 ಸ್ಥಾನ ಗೆಲ್ಲಿಸೋಕೆ ಬಿಜೆಪಿ ಜೊತೆ ಸೇರಿ 50 ಸಭೆಯಲ್ಲಿ ಭಾಗಿ ಆಗ್ತಿದ್ದೇನೆ. ನೆನ್ನೆ ನಮ್ಮ ತೋಟದಲ್ಲಿ ಏನೊ ನಡೆದಿದೆ ಅನ್ಕೊಂಡಿದ್ರು. ನನಗೆ ಅಷ್ಟು ಜ್ಞಾನ ಇಲ್ವ’ ಎಂದು ಹೇಳಿದರು.ಅರಕಲಗೂಡು ರಾಮನಾಥಪುರದ ಕಾಲೇಜು ಮೈದಾನದಲ್ಲಿ ಆಯೊಜಿಸಿದ್ದ ಜೆಡಿಎಸ್ ಬಿಜೆಪಿ ಚುನಾವಣಾ ಪ್ರಚಾರ ಕಾರ್ಯಕ್ರಮವನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಉದ್ಘಾಟಿಸಿದರು.