ಎಥೆನಾಲ್‌ ಮಿಶ್ರಣದ ಬಗ್ಗೆ ಕಾಂಗ್ರೆಸ್ ಅಪಪ್ರಚಾರ: ಜೋಶಿ

KannadaprabhaNewsNetwork |  
Published : Nov 08, 2026, 02:00 AM IST
ಪ್ರಹ್ಲಾದ ಜೋಶಿ | Kannada Prabha

ಸಾರಾಂಶ

ಪೆಟ್ರೋಲ್‌ನಲ್ಲಿ ಶೇ. 31ರಷ್ಟು ಎಥೆನಾಲ್ ಮಿಶ್ರಣ ಮಾಡಲಾಗುತ್ತಿದೆ ಎಂಬ ಕಾಂಗ್ರೆಸ್ ಆರೋಪ ಆಧಾರರಹಿತ. ದೇಶದಲ್ಲಿ ನಿಗದಿತ ನೀತಿಯಂತೆ ಶೇ. 20ರಷ್ಟು ಎಥೆನಾಲ್ ಮಿಶ್ರಣದ ಗುರಿ ಜಾರಿಯಲ್ಲಿದೆ.

ಹುಬ್ಬಳ್ಳಿ:

ಪೆಟ್ರೋಲ್‌ನಲ್ಲಿ ಶೇ. 31ರಷ್ಟು ಎಥೆನಾಲ್ ಮಿಶ್ರಣ ಮಾಡಲಾಗುತ್ತಿದೆ ಎಂಬ ಕಾಂಗ್ರೆಸ್ ಆರೋಪ ಆಧಾರರಹಿತ. ದೇಶದಲ್ಲಿ ನಿಗದಿತ ನೀತಿಯಂತೆ ಶೇ. 20ರಷ್ಟು ಎಥೆನಾಲ್ ಮಿಶ್ರಣದ ಗುರಿ ಜಾರಿಯಲ್ಲಿದೆ. ಕಬ್ಬು ಬೆಳೆಗಾರರಿಗೆ ಅನುಕೂಲ ಕಲ್ಪಿಸುವ ಜತೆಗೆ ದೇಶದ ಇಂಧನ ಆಮದು ಅವಲಂಬನೆ ತಗ್ಗಿಸುವ ಯೋಜನೆ ಬಗ್ಗೆ ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಿಡಿಕಾರಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಥೆನಾಲ್ ಮಿಶ್ರಣದ ಕುರಿತು ಸಂಗ್ರಹಿಸಿದ 63 ಮಾದರಿಗಳ ಪೈಕಿ ಪ್ರಕಟಿಸಿರುವ 14 ಫಲಿತಾಂಶಗಳಲ್ಲಿ 11 ಮಾದರಿಗಳು ನಿಗದಿತ ಶೇ. 20ರ ಮಿತಿಯಲ್ಲಿವೆ. ಪೆಟ್ರೋಲ್ ಗುಣಮಟ್ಟ ಪರಿಶೀಲನೆಗೆ ನಿಗದಿತ ವೈಜ್ಞಾನಿಕ ಪ್ರಕ್ರಿಯೆಗಳಿವೆ. ಅವುಗಳನ್ನು ಅನುಸರಿಸದೆ ಎಥೆನಾಲ್ ಕುರಿತು ಗೊಂದಲ ಸೃಷ್ಟಿಸುವುದು ಸರಿಯಲ್ಲ ಎಂದರು.

ದೇಶದ ಒಟ್ಟು ತೈಲ ಅಗತ್ಯದ ಶೇ. 85ರಿಂದ 90ರಷ್ಟು ಆಮದು ಮಾಡಿಕೊಳ್ಳಲಾಗುತ್ತಿದೆ. ಎಥೆನಾಲ್ ಬಳಕೆಯಿಂದ ವಿದೇಶಿ ಇಂಧನ ಅವಲಂಬನೆ ಕಡಿಮೆಯಾಗುವ ಜತೆಗೆ ಕಬ್ಬು ಬೆಳೆಗಾರರಿಗೆ ಆರ್ಥಿಕ ಅನುಕೂಲವಾಗಲಿದೆ. ಎಥೆನಾಲ್ ಖರೀದಿಯಿಂದ ಸಕ್ಕರೆ ಕಾರ್ಖಾನೆಗಳಿಗೆ ದೊರೆಯುವ ಹಣ ರೈತರಿಗೆ ತಲುಪುವಂತೆ ಆದ್ಯತೆ ನೀಡಬೇಕು. ಈ ಹಿಂದೆ ಕೇಂದ್ರದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರದಲ್ಲಿದ್ದ ವೇಳೆ 5 ವರ್ಷಕ್ಕೆ ಕಬ್ಬು ಬೆಳೆಗಾರರಿಗೆ ಬಿಲ್‌ ಆಗುತ್ತಿತ್ತು. ಈಗ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ನಿಗದಿತ ವೇಳೆಗೆ ಕಬ್ಬಿನ ಬಿಲ್‌ ಕೊಡಲಾಗುತ್ತಿದೆ. ರೈತರಿಗೆ ಅನುಕೂಲವಾಗುವ ಯೋಜನೆಯನ್ನು ವಿರೋಧಿಸುವ ಮೂಲಕ ಕಾಂಗ್ರೆಸ್ ರೈತವಿರೋಧಿ ನಿಲುವು ತಳೆದಿದೆ ಎಂದು ಟೀಕಿಸಿದರು.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ಪ್ರಬುದ್ಧರಾಗಿದ್ದಾರೆ. ರಾಹುಲ್‌ ಗಾಂಧಿ ಅವರಿಗೆ ಈ ರೀತಿಯಾಗಿ ಅಪ್ರಬುದ್ಧರಾಗಿ ನಡೆದುಕೊಳ್ಳದಂತೆ ಬುದ್ಧಿ ಹೇಳಲಿ ಎಂದು ಕುಟುಕಿದರು.

ದೀಪಾವಳಿ ಉಡುಗೊರೆ:

ರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಹೆಸರಿನಲ್ಲಿ ಒಂದು ಕೈಯಿಂದ ಕೊಟ್ಟು ಮತ್ತೊಂದು ಕೈಯಿಂದ ಜನರ ಜೇಬಿಗೆ ಕತ್ತರಿ ಹಾಕುತ್ತಿದೆ. ಕಳೆದ ಮೂರು ವರ್ಷಗಳಲ್ಲಿ ಪೆಟ್ರೋಲ್, ಡೀಸೆಲ್ ದರವನ್ನು ಮೂರು ಬಾರಿ, ಬಸ್ ಪ್ರಯಾಣ ದರವನ್ನು ಎರಡು ಬಾರಿ ಹೆಚ್ಚಿಸಿದೆ. ನೀರು, ವಿದ್ಯುತ್, ಮದ್ಯ ಹಾಗೂ ವಿವಿಧ ಸೇವೆಗಳ ಶುಲ್ಕವನ್ನೂ ಏರಿಸಿದೆ ಎಂದರು.

ವಿವಿಧ ತೆರಿಗೆ ಮತ್ತು ಶುಲ್ಕಗಳ ಹೆಚ್ಚಳದಿಂದ ವಾರ್ಷಿಕ ಸುಮಾರು ₹60 ಸಾವಿರ ಕೋಟಿ ಹೆಚ್ಚುವರಿ ಆದಾಯ ಸಂಗ್ರಹಿಸುವ ಅಂದಾಜಿದೆ. ಜನರ ಮೇಲೆ ಇಷ್ಟೊಂದು ಹೊರೆ ಹಾಕಿ ಕೇಂದ್ರದ ಮೇಲೆ ಬೆಲೆ ಏರಿಕೆಯ ಆರೋಪ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಹೊಸ ಪ್ರಕ್ರಿಯೆಯಲ್ಲ. ಹಲವು ದಶಕಗಳಿಂದ ದೇಶದಲ್ಲಿ ನಡೆಯುತ್ತಿದೆ. ಚುನಾವಣಾ ಸೋಲಿಗೆ ಎಸ್‌ಐಆರ್‌ ಅಥವಾ ಇವಿಎಂ ಕಾರಣವೆಂದು ಕಾಂಗ್ರೆಸ್ ಆರೋಪಿಸುವುದು ಸರಿಯಲ್ಲ. 2028ರ ಬಳಿಕ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಲ್ಲಿ ರಾಜ್ಯ ಸರ್ಕಾರ ವಿಧಿಸಿರುವ ಹೆಚ್ಚುವರಿ ತೆರಿಗೆ ಮತ್ತು ಶುಲ್ಕಗಳನ್ನು ಆದ್ಯತೆಯ ಮೇರೆಗೆ ಸರಿಪಡಿಸಲಾಗುವುದು ಎಂದು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕವಿ ಹೃದಯದ ಡಾ.ಚೆನ್ನಬಸವ ಶ್ರೀಗಳು: ತೋಂಟದಾರ್ಯ ಶ್ರೀ
ಶಿರಗುಪ್ಪಿ ಕಾರ್ಖಾನೆಯಿಂದ ₹4,000 ದರ ಘೋಷಣೆ