ಬುದ್ಧಿವಂತ ಮತದಾರರು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತಗಳನ್ನು ನೀಡಿ, ನಮ್ಮ ಅಭ್ಯರ್ಥಿಗಳ ಗೆಲುವಿಗೆ ಸಹಕಾರಿ ಆಗುವುದು ನಿಶ್ಚಿತ ಎಂದು ಶಾಸಕ ಬಸವರಾಜ ವಿ. ಶಿವಗಂಗಾ ಹೇಳಿದ್ದಾರೆ.
ಚನ್ನಗಿರಿ : ರಾಜ್ಯದಲ್ಲಿ ಕಾಂಗ್ರೆಸ್ ಜನಪರ ಆಡಳಿತ ನೀಡುತ್ತಿದೆ. ಜೂನ್ 3ರಂದು ಪದವೀಧರರು ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆ ಮತದಾನ ನಡೆಯಲಿದೆ. ಬುದ್ಧಿವಂತ ಮತದಾರರು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತಗಳನ್ನು ನೀಡಿ, ನಮ್ಮ ಅಭ್ಯರ್ಥಿಗಳ ಗೆಲುವಿಗೆ ಸಹಕಾರಿ ಆಗುವುದು ನಿಶ್ಚಿತ ಎಂದು ಶಾಸಕ ಬಸವರಾಜ ವಿ. ಶಿವಗಂಗಾ ಹೇಳಿದರು.
ಪಟ್ಟಣದ ರುಕ್ಕುಮ್ಮಾಯಿ ಸಮುದಾಯ ಭವನದಲ್ಲಿ ನೈರುತ್ಯ ಪದವೀಧರರು ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಚುನಾಯಿತ ಪ್ರತಿನಿಧಿಗಳು ಮತ್ತು ಕಾರ್ಯಕರ್ತರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ವಿಧಾನ ಪರಿಷತ್ತು ಬುದ್ಧಿವಂತರ ಛಾವಡಿಯಾಗಿದೆ. ಈ ಚುನಾವಣೆಗೆ ಪದವೀಧರರು ಮತ್ತು ಶಿಕ್ಷಕರು ಮತದಾನ ಮಾಡಲಿದ್ದು, ಕಾಂಗ್ರೆಸ್ ಸರ್ಕಾರವು ಕಳೆದೊಂದು ವರ್ಷದಿಂದ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿದೆ. ಬಡವರು, ದುರ್ಬಲರು, ಕೂಲಿ ಕಾರ್ಮಿಕರ ಪರವಾಗಿ ಆಡಳಿತ ನೀಡುತ್ತಿದೆ. ಶಾಸನ ಸಭೆಗಳಲ್ಲಿ ನಾವುಗಳು ಮಾಡುವ ಕಾಯ್ದೆಗಳನ್ನು ಅಂಗೀಕರಿಸಲು ವಿಧಾನಪರಿಷತ್‌ನಲ್ಲಿ ಪಕ್ಷದ ಸದಸ್ಯರ ಸಂಖ್ಯಾಬಲ ಕಡಿಮೆ ಇದೆ. ಈಗ ನಡೆಯುವ ವಿಧಾನ ಪರಿಷತ್ತು ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿ, ವಿಜೇತ ಅಭ್ಯರ್ಥಿಗಳ ಸಂಖ್ಯಾಬಲ ವೃದ್ಧಿಸಿದರೆ ಪಕ್ಷದ ಎಲ್ಲ ಹೊಸ ಯೋಜನೆಗಳ ಬಿಲ್ ಪಾಸಾಗಲು ಸಾಧ್ಯವಿದೆ ಎಂದರು.
ಪದವೀಧರರ ಕ್ಷೇತ್ರ ಅಭ್ಯರ್ಥಿ ಆಯನೂರು ಮಂಜುನಾಥ್ ಮಾತನಾಡಿ, ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಓ.ಪಿ.ಎಸ್ ರದ್ದುಗೊಳಿಸಿ ಸರ್ಕಾರಿ ನೌಕರರಿಗೆ ಅನ್ಯಾಯ ಮಾಡಿದೆ. ಸುಮಾರು 35ರಿಂದ 40 ವರ್ಷಗಳ ಕಾಲ ಸುದೀರ್ಘವಾಗಿ ಸಾರ್ವಜನಿಕರ ಸೇವೆ ಸಲ್ಲಿಸಿದ ಸರ್ಕಾರಿ ನೌಕರರಿಗೆ ಸಂಧ್ಯಾಕಾಲದಲ್ಲಿ ಪಿಂಚಣಿ ನೀಡದೇ ಇದ್ದರೆ ಅವರು ಜೀವನ ನಡೆಸುವುದು ಹೇಗೆ? ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಎನ್.ಪಿ.ಎಸ್. ರದ್ದುಗೊಳಿಸುವುದಾಗಿ ಹೇಳಿದೆ. ಶೀಘ್ರದಲ್ಲಿಯೇ ಎನ್.ಪಿ.ಎಸ್. ರದ್ದುಗೊಳಿಸಲು ಬದ್ಧರಿದ್ದೇವೆ ಎಂದರು.
ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಡಾ. ಕೆ.ಕೆ. ಮಂಜುನಾಥ್ ಮಾತನಾಡಿ. ರಾಜ್ಯದಲ್ಲಿ ನುಡಿದಂತೆ ನಡೆದ ಯಾವುದಾದರೂ ಸರ್ಕಾರ ವಿದ್ದರೆ ಅದು ಕಾಂಗ್ರೆಸ್ ಸರ್ಕಾರವಾಗಿದೆ. ಸರ್ಕಾರಿ ನೌಕರರಿಗೆ ನ್ಯಾಯ ಸಮ್ಮತವಾಗಿ ಸಿಗಬೇಕಾದ ಪಿಂಚಣಿ ಸೌಲಭ್ಯಗಳನ್ನು ಕೊಡಿಸುವುದು ನಮ್ಮ ಸರ್ಕಾರದ ಮುಂದೆ ಇರುವ ಗುರಿಯಾಗಿದೆ ಎಂದರು.
ಚನ್ನಗಿರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಎಚ್. ಶ್ರೀನಿವಾಸ್, ಜಬೀಉಲ್ಲಾ, ಸಿ.ನಾಗರಾಜ್, ವೀರೇಶ್ ನಾಯ್ಕ್, ಹೊದಿಗೆರೆ ರಮೇಶ್, ಅಮಾನುಲ್ಲಾ, ವಡ್ನಾಳ್ ಜಗದೀಶ್, ಪಿ.ಆರ್. ಮಂಜುನಾಥ್, ಸವಿತಾ, ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.
ಬಿಜೆಪಿ ಕ್ಷೇತ್ರದಲ್ಲಿ ಕಾಂಗ್ರೆಸ್ ಬಾವುಟ ಹಾರಾಡಲಿ ವಿಪ ಚುನಾವಣೆ ಮತದಾನಕ್ಕೆ ಇನ್ನು ಕೆಲವೇ ದಿನ ಬಾಕಿ ಉಳಿದಿವೆ. ಮತದಾರರನ್ನು ಅಭ್ಯರ್ಥಿಗಳಾದ ನಾವುಗಳು ನೇರವಾಗಿ ಭೇಟಿಯಾಗಲು ಸಾಧ್ಯವಾಗುತ್ತಿಲ್ಲ. ಕಾರ್ಯಕರ್ತರಾದ ನೀವುಗಳೇ ಅಭ್ಯರ್ಥಿಗಳೆಂದು ಭಾವಿಸಿ ಮತಗಳನ್ನು ಹಾಕಿಸಬೇಕು ಎಂದು ಆಯನೂರು ಮಂಜುನಾಥ್ ಹೇಳಿದರು. 42 ವರ್ಷಗಳಿಂದ ಈ ಕ್ಷೇತ್ರವು ಬಿಜೆಪಿ ಹಿಡಿತದಲ್ಲಿದೆ. ಈ ಬಾರಿಯ ಚುನಾವಣೆಯಲ್ಲಿ ನಾವು ಗೆದ್ದು, ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಬಾವುಟ ಹಾರಿಸಬೇಕಾಗಿದೆ. ಈ ಕೆಲಸಕ್ಕೆ ಕಾರ್ಯಕರ್ತರಾದ ನಿಮ್ಮಗಳ ಸಹಕಾರ ತುಂಬ ಮುಖ್ಯವಾಗಿದೆ ಎಂದರು.