ಈಶ್ವರ್ ಶೆಟ್ಟರ್
ಸ್ವಾತಂತ್ರ್ಯ ನಂತರದಲ್ಲಿ ನಡೆದ ಎಲ್ಲ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲವಿನ ನಾಗಾಲೋಟ ಮುಂದುವರಿಸಿತ್ತು. 9ನೇ ಲೋಕಸಭೆ ಚುನಾವಣೆಯಲ್ಲಿಯೂ ಕಾಂಗ್ರೆಸ್ ಬಾಗಲಕೋಟೆ ಮತಕ್ಷೇತ್ರದಲ್ಲಿ ಗೆಲವಿನ ನಗೆ ಬೀರುವಲ್ಲಿ ಯಶಸ್ವಿಯಾಗಿತ್ತು, ಆದರೆ, ಪಕ್ಷವು ಮತಗಳಿಕೆಯ ಪ್ರಮಾಣದಲ್ಲಿ ಹಿನ್ನಡೆಯನ್ನು ಅನುಭವಿಸುತ್ತಿರುವ ಸೂಕ್ಷ್ಮತೆ ಈ ಚುನಾವಣೆಯಲ್ಲಿ ಮತದಾರ ಪ್ರಭು ಮತ್ತೊಮ್ಮೆ ಎಚ್ಚರಿಕೆ ನೀಡಿದ್ದರು.
ಚುನಾವಣೆ ವೇಳೆ ರಾಷ್ಟ್ರ ಮಟ್ಟದ ರಾಜಕೀಯದಲ್ಲಿ ಅನೇಕ ಬದಲಾವಣೆಗಳಾದವು. ಆಡಳಿತ ನಡೆಸುತ್ತಿದ್ದ ಜನತಾ ಪಕ್ಷ ಎರಡು ಹೋಳಾಯಿತು. ಒಂದು ಬಣ ರಾಷ್ಟ್ರೀಯ ಮಟ್ಟದಲ್ಲಿ ಜನತಾದಳ ಸೇರಿದರೆ, ಇನ್ನೊಂದು ಬಣ ಜನತಾ ಪಕ್ಷವಾಗಿಯೇ ಮುಂದುವರೆಯಿತು. ರಾಷ್ಟ್ರ ಮಟ್ಟದಲ್ಲಿ ವಿ.ಪಿ.ಸಿಂಗ್ ಹಾಗೂ ಚಂದ್ರಶೇಖರ ಕ್ರಮವಾಗಿ ಆಯಾ ಪಕ್ಷದ ನಾಯಕರಾದರುರಾಜೀವ ಗಾಂಧಿ ನಾಯಕತ್ವ: ಇಂದಿರಾಗಾಂಧಿಯ ಹತ್ಯೆಯ ನಂತರ ರಾಷ್ಟ್ರ ರಾಜಕಾರಣದಲ್ಲಿ ರಾಜೀವ ಗಾಂಧಿಯವರ ನಾಯಕತ್ವದಲ್ಲಿ ಪಕ್ಷ ಮುನ್ನಡೆಯುತ್ತಿದ್ದ ಕಾಲವದು. ರಾಜ್ಯ ಕಾಂಗ್ರೆಸ್‌ನಲ್ಲಿ ಮಹತ್ವದ ಬದಲಾವಣೆಗಳಾದವು. ಲಿಂಗಾಯತ ಸಮುದಾಯದ ವಿರೇಂದ್ರ ಪಾಟೀಲ ಅವರಿಗೆ 1988ರ ಲೋಕಸಭೆ ಚುನಾವಣೆಗೆ ಮುನ್ನ ಪ್ರದೇಶ ಕಾಂಗ್ರೆಸ್ ಪಕ್ಷದ ಅಧ್ಯಕ್ಷತೆಯ ಜವಾಬ್ದಾರಿಯನ್ನು ರಾಜೀವ ಗಾಂಧಿಯವರು ನೀಡಿದರು. ನಂತರ ರಾಜ್ಯದ ರಾಜಕಾರಣದ ಚಿತ್ರಣವೇ ಬದಲಾಯಿತಲ್ಲದೆ ಬಾಗಲಕೋಟೆ ಲೋಕಸಭೆಗೆ ಅಂದು ಸಂಸದರಾಗಿದ್ದ ಎಚ್.ಬಿ.ಪಾಟೀಲ ಅವರಿಗೆ ಟಿಕೆಟ್ ನೀಡದೆ ತಮ್ಮ ಒಡನಾಡಿಯಾಗಿದ್ದ ಮುಧೋಳದ ಎಸ್.ಟಿ.ಪಾಟೀಲರಿಗೆ ಟಿಕೆಟ್ ನೀಡಿದ್ದು ವಿರೇಂದ್ರ ಪಾಟೀಲ.
ಪ್ರಥಮ ಪ್ರವೇಶ: ಲೋಕಸಭೆ ಜೊತೆಗೆ ವಿಧಾನಸಭೆ ಚುನಾವಣೆ ನಡೆದಿದ್ದರಿಂದ 1989ರಲ್ಲಿ ಬಾಗಲಕೋಟೆ ಲೋಕಸಭೆಯ 8 ವಿಧಾನಸಭೆಗೆ ಆಯ್ಕೆಯಾದವರು ಪ್ರಥಮ ಬಾರಿಗೆ ವಿಧಾನಸೌಧದ ಮೆಟ್ಟಿಲು ಎರಿದ್ದು ವಿಶೇಷವೇ ಸರಿ. ಬಾಗಲಕೋಟೆಯಿಂದ ಅಜಯಕುಮಾರ ಸರನಾಯಕ, ಬೀಳಗಿಯಿಂದ ಜಿ.ಜಿ.ಯಳ್ಳಿಗುತ್ತಿ, ಜಮಖಂಡಿಯಿಂದ ಆರ್.ಎಂ.ಕಲೂತಿ, ಮುಧೋಳದಿಂದ ಆರ್.ಬಿ.ತಿಮ್ಮಾಪುರ, ಹುನಗುಂದದಿಂದ ಎಸ್.ಆರ್.ಕಾಶಪ್ಪನವರ, ಬಾದಾಮಿಯಿಂದ ಎಂ.ಕೆ.ಪಟ್ಟಣಶೆಟ್ಟರ, ಗುಳೇದಗುಡ್ಡದಿಂದ ಎಚ್.ವೈ.ಮೇಟಿ, ರೋಣದಿಂದ ಜಿ.ಎಸ್.ಪಾಟೀಲ ಆಯ್ಕೆಯಾಗುವ ಮೂಲಕ ರಾಜಕೀಯ ಮುನ್ನೆಲೆಗೆ ಬಂದು ಇಂದಿಗೂ ವಿವಿಧ ಪಕ್ಷಗಳಲ್ಲಿ ಸಕ್ರಿಯ ರಾಜಕಾರಣದಲ್ಲಿ ಇದ್ದಾರೆ, ಇವರಲ್ಲಿ ಆರ್.ಎಂ.ಕಲೂತಿ ಮತ್ತು ಎಸ್.ಆರ್.ಕಾಶಪ್ಪನವರ ನಿಧನ ಹೊಂದಿದ್ದಾರೆ.
ಇಬ್ಬರೂ ಒಂದೇ ಗ್ರಾಮದವರು: 1989ರ ಚುನಾವಣೆಯ ವಿಶೇಷವೆಂದರೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಎಸ್.ಟಿ.ಪಾಟೀಲ ಹಾಗೂ ಜನತಾದಳದಿಂದ ಸ್ಪರ್ಧಿಸಿದ್ದ ಎಸ್.ಎಸ್.ಮಲಘಾಣ ಅವರು ಮುಧೋಳ ತಾಲೂಕಿನ ಮಂಟೂರು ಗ್ರಾಮದವರು. ನಂತರ ಇಬ್ಬರೂ ಸಹ ಮುಧೋಳವನ್ನು ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡು ಅಲ್ಲಿಯೇ ನೆಲೆಸಿದ್ದರು.
ಬಿ.ಇ.ಪದವೀಧರರಾಗಿದ್ದ ಎಸ್.ಟಿ.ಪಾಟೀಲ ನೇರವಾದಿಯಾಗಿದ್ದರು. ಎಸ್.ಎಸ್.ಮಲಘಾಣ ಸೌಮ್ಯವಾದಿ, ರಾಜಕಾರಣದ ವಿಷಯದಲ್ಲಿ ಇಬ್ಬರು ಸಹ ಚಾಣಾಕ್ಷರೆ, ಇಬ್ಬರು ರೆಡ್ಡಿ ಸಮುದಾಯದವರಾಗಿದ್ದು ಸಹ ಚುನಾವಣೆಯ ವಿಶೇಷವಾಗಿತ್ತು.
ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಎಸ್.ಟಿ.ಪಾಟೀಲರವರು 3,06,990 ಮತಗಳನ್ನು ಪಡೆದು ಆಯ್ಕೆಯಾದರೆ, ಜನತಾ ಪಕ್ಷದಿಂದ ಸ್ಪರ್ಧಿಸಿದ್ದ ಅವರ ಸಮೀಪದ ಪ್ರತಿ ಸ್ಪರ್ಧಿ ಎಸ್.ಎಸ್.ಮಲಘಾಣ 2,74,752 ಮತಗಳನ್ನು ಪಡೆದಿದ್ದರು. ಗೆಲವಿನ ಅಂತರ 32,238 ಇತ್ತು.