ದಶಕದವರೆಗೆ ಕೈ ಆಡಳಿತ, ಗ್ಯಾರಂಟಿ ನಿರಂತರ: ಈಶ್ವರ ಖಂಡ್ರೆ

KannadaprabhaNewsNetwork |  
Published : Mar 14, 2024, 02:02 AM IST
ಚಿತ್ರ 13ಬಿಡಿಆರ್‌1ಬೀದರ್‌ ಜಿಲ್ಲಾ ಗ್ಯಾರಂಟಿ ಸಮಾವೇಶ ಮತ್ತು ತಾಲೂಕಿನ ಜನಸ್ಪಂದನ ಕಾರ್ಯಕ್ರಮದಲ್ಲಿ ಜನರ ಅಹವಾಲುಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಆಲಿಸಿದರು. | Kannada Prabha

ಸಾರಾಂಶ

ಜನ ಪರ ಕಾರ್ಯಕ್ರಮ ನೀಡಿದವರನ್ನು ಮರೆಯದಿರಿ ಎಂದು ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಕರೆ ನೀಡಿದರು. ಬೀದರ್‌ನಲ್ಲಿ ಜಿಲ್ಲಾ ಗ್ಯಾರಂಟಿ ಸಮಾವೇಶ ಮತ್ತು ತಾಲೂಕಿನ ಜನಸ್ಪಂದನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕನ್ನಡಪ್ರಭ ‍ವಾರ್ತೆ ಬೀದರ್‌

ಮುಂದಿನ 10 ವರ್ಷಗಳ ಕಾಲ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿರುತ್ತದೆ. ಹಾಗಾಗಿ ನಮ್ಮ ಕಾಂಗ್ರೆಸ್‌ ಸರ್ಕಾರ ಘೋಷಿಸಿರುವ 5 ಗ್ಯಾರಂಟಿಗಳು ಬರುವ ಲೋಕಸಭೆ ಚುನಾವಣೆ ಏಕೆ ಮುಂದಿನ 10 ವರ್ಷಗಳ ಕಾಲವೂ ಮುಂದುವರಿಯುತ್ತವೆ, ಬಡವರ ಪರ ಪಕ್ಷ ಎಂಬುವದನ್ನು ಮರೆಯದಿರಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ನುಡಿದರು.

ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜಿಲ್ಲಾ ಗ್ಯಾರಂಟಿ ಸಮಾವೇಶ ಮತ್ತು ತಾಲೂಕಿನ ಜನಸ್ಪಂದನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಮಗೆ ಸಹಕಾರ ನೀಡಿ ರಾಜ್ಯದ ಜನರ ಅಭಿವೃದ್ಧಿಗೆ ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತೇವೆ ಎಂದರು.

ಎನ್‌ಆರ್‌ಎಲ್‌ಎಂ ಯೋಜನೆಯಡಿ ಪ್ರತಿಯೊಂದು ಮಹಿಳಾ ಸ್ವಸಹಾಯ ಸಂಘಗಳಿಗೆ 5 ಲಕ್ಷ ರು. ವರೆಗೆ ಬಡ್ಡಿ ರಹಿತ ಸಾಲ ಮಂಜೂರಿಗೆ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ಗೆ ಸೂಚಿಸಲಾಗಿದೆ. ಯೋಜನೆ ಶೀಘ್ರದಲ್ಲಿ ಜಾರಿಗೆ ಬರಲಿದೆ ಎಂದು ತಿಳಿಸಿದರು.

ಗೃಹಲಕ್ಷೀ ಯೋಜನೆ ಅಡಿಯಲ್ಲಿ ಮನೆಯ ಯಜಮಾನಿಗೆ ಪ್ರತಿ ತಿಂಗಳು ಎರಡು ಸಾವಿರ ರು.ಗಳನ್ನು ಯಾವುದೇ ಜಾತಿ ಭೇದವನ್ನದೆ ಎಲ್ಲರಿಗೂ ನೀಡುತ್ತಿದ್ದೇವೆ. ಅನ್ನಭಾಗ್ಯ ಯೋಜನೆ ಅಡಿಯಲ್ಲಿ 10 ಕೆ.ಜಿ ಅಕ್ಕಿ ನೀಡಲಾಗುತ್ತಿದೆ. ಹಾಗೆಯೇ ಯುವನಿಧಿ ಯೋಜನೆಯಲ್ಲಿ ಪದವಿ ಹಾಗೂ ಡಿಪ್ಲೊಮಾ ಪದವಿ ಪಡೆದ ನಿರುದ್ಯೋಗಿ ಯುವಕ ಯುವತಿಯರಿಗೆ 2 ವರ್ಷಗಳವರೆಗೆ ನಿರುದ್ಯೋಗ ಭತ್ಯೆಯನ್ನು ನಮ್ಮ ಸರ್ಕಾರ ನೀಡುತ್ತಿದೆ. ಶಕ್ತಿ ಯೋಜನೆ ಅಡಿಯಲ್ಲಿ ಮಹಿಳೆಯರು ರಾಜ್ಯದಾದ್ಯಂತ ಸರ್ಕಾರಿ ಬಸ್‌ನಲ್ಲಿ ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ. ಗೃಹ ಜ್ಯೋತಿ ಯೋಜನೆ ಅಡಿಯಲ್ಲಿ ಎಲ್ಲರ ಮನೆಗಳಿಗೆ 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುತ್ತಿದೆ ಎಂದರು.

ಜನರ ಸಣ್ಣಪುಟ್ಟ ಸಮಸ್ಯೆಗಳಾದ ಮಾಶಾಸನ, ಮನಸ್ವಿನಿ, ಮೈತ್ರಿ, ಪಹಣಿ ತಿದ್ದುಪಡಿ ಸೇರಿದಂತೆ ಇತರೆ ಸಮಸ್ಯೆಗಳಿಗೆ ಪರಿಹಾರ ನೀಡಲು ಜನಸ್ಪಂದನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಜನರು ಕಚೇರಿಗಳಿಗೆ ಅಲೆದಾಡುವ ಅವಶ್ಯಕತೆ ಇಲ್ಲ. ಸರ್ಕಾರವೆ ನಿಮ್ಮ ಮನೆಬಾಗಿಲಿಗೆ ಬರುತ್ತಿದೆ ಎಂದು ಹೇಳಿದರು.

ಬೀದರ್‌ ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾ ಸಂಕೀರ್ಣ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಇದನ್ನು ಮಾದರಿಯಾಗಿ ಜಿಲ್ಲೆಯಲ್ಲಿ ಮಾಡಲಾಗುವುದು. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದಲೂ ಹೆಚ್ಚಿನ ಅನುದಾನವನ್ನು ಪಡೆದು ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದರು.

ಪೌರಾಡಳಿತ ಮತ್ತು ಹಜ್ ಸಚಿವರಾದ ರಹೀಮ್‌ ಖಾನ್‌ ಮಾತನಾಡಿ, ಜನರ ಸಮಸ್ಯೆಗಳಿಗೆ ಪರಿಹಾರ ನೀಡಲು ಜನಸ್ಪಂದನ ಕಾರ್ಯಕ್ರಮ ಅತ್ಯಂತ ಉಪಯುಕ್ತವಾಗಿದೆ ಎಂದರು.

ಜಿಲ್ಲಾಧಿಕಾರಿ ಗೋವಿಂದರೆಡ್ಡಿಯವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಸಚಿವರು ಮಹಿಳೆಯರಿಗೆ ಉಚಿತವಾಗಿ ಹೊಲಿಗೆ ಯಂತ್ರ. ಮಡಿವಾಳ ಸಮಾಜದವರಿಗೆ ಇಸ್ತ್ರಿ ಪೆಟ್ಟಿಗೆ ಮತ್ತು ಟೇಬಲ್‌ ಮತ್ತಿತರ ಸಮಾಜದ ಕುಶಲಕರ್ಮಿಗಳಿಗೆ ಸಾಮಗ್ರಿ ನೀಡಲಾಯಿತು.

ಅಂಗವಿಕಲರ ಮಾಶಾಸನ ಆದೇಶವಾದರೂ ಹಣ ಬಂದಿಲ್ಲ. ರೇಷನ್‌ ಕಾರ್ಡ್‌ನಲ್ಲಿ ಹೆಸರಿದ್ದರೂ ಹಣ ಬರುತ್ತಿಲ್ಲ. ಸಂಧ್ಯಾ ಸುರಕ್ಷಾ ಸೇರಿದಂತೆ ಇತರೆ 74ಕ್ಕೂ ಹೆಚ್ಚು ಅಹವಾಲುಗಳನ್ನು ಸಾರ್ವಜನಿಕರು ಸಚಿವರಿಗೆ ಸಲ್ಲಿಸಿದರು. ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ನೀಡಲಾಯಿತು ಮತ್ತು ಹಲವು ಸಮಸ್ಯೆಗಳ ಇತ್ಯರ್ಥಕ್ಕೆ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.

ಕಾರ್ಯಕ್ರಮದಲ್ಲಿ ಬೀದರ್‌ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಬಸವರಾಜ ಜಾಬಶೆಟ್ಟಿ, ನಗರ ಸಭೆ ಅಧ್ಯಕ್ಷರಾದ ಮೊಹ್ಮದ ಗೌಸ್‌, ಜಿಲ್ಲಾ ಪಂಚಾಯಿತಿ ಸಿಇಒ ಡಾ. ಗಿರೀಶ್ ಬದೊಲೆ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್‌ಎಲ್‌, ಸಹಾಯಕ ಆಯುಕ್ತರಾದ ಲವೀಶ ಓರ್ಡಿಯಾ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಉಪ ಅರಣ್ಯ ಸಂರಕ್ಷಣಾಧಿಕಾರಿ ವಾನತಿ ಎಂಎಂ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ವಿವಿಧ ಅಹವಾಲುಗಳೊಂದಿಗೆ ಆಗಮಿಸಿದ ಸಾರ್ವಜನಿಕರು ಭಾಗವಹಿಸಿದ್ದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ