ಶೇಷಮೂರ್ತಿ ಅವಧಾನಿ
ಕಲಬುರಗಿ : ರಾಜ್ಯದ ಈಶಾನ್ಯ ಭಾಗದಲ್ಲಿರುವ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿನ ಎಲ್ಲಾ ಐದು ಲೋಕಸಭಾ ಮತಕ್ಷೇತ್ರಗಳು ಕಾಂಗ್ರೆಸ್ ವಶವಾಗಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಆನೆ ಬಲ ತಂದುಕೊಟ್ಟಿದೆ.
ಕಲಬುರಗಿ ಸೇರಿ ಈ ಭೂಭಾಗದಲ್ಲಿನ ರಾಯಚೂರು, ಬಳ್ಳಾರಿ, ಕೊಪ್ಪಳ ಹಾಗೂ ಬೀದರ್ ಲೋಕಸಭಾ ಕ್ಷೇತ್ರಗಳಲ್ಲಿ ಭಾರಿ ತುರುಸಿನ ಸ್ಪರ್ಧೆ ಏರ್ಪಟ್ಟಿದ್ದರೂ ಇಲ್ಲಿನ ಮತದಾರ ದೊಡ್ಡ ಪ್ರಮಾಣದಲ್ಲಿ ಕೈ ಹಿಡಿದಿರೋದು ರಾಜಕೀಯವಾಗಿ ಗಮನ ಸೆಳೆದಿದೆ. ಕಲ್ಯಾಣ ಕರ್ನಾಟಕದಲ್ಲಿನ ಕಾಂಗ್ರೆಸ್ ಭರ್ಜರಿ ಜಯಭೇರಿ ಹಿಂದೆ ಡಾ. ಖರ್ಗೆ ಕಮಾಲ್ ಅಡಗಿದೆ ಎಂದೂ ಹೇಳಲಾಗುತ್ತಿದೆ.
ರಾಜ್ಯದ ದಕ್ಷಿಣ ಭಾಗ, ಕಿತ್ತೂರು ಕರ್ನಾಟಕ , ಕರಾವಳಿಯಲ್ಲಿ ಕಾಂಗ್ರೆಸ್ ಪಕ್ಷದ ಸಾಧನೆಗೆ ಹೋಲಿಕೆ ಮಾಡಿದರೆ ಕಲ್ಯಾಣ ಕರ್ನಾಟಕದಲ್ಲಿ ಮಾತ್ರ ಎಲ್ಲಾ ಪಂಚ ಕ್ಷೇತ್ರಗಳು ಕೈವಶವಾಗುವುದರೊಂದಿಗೆ ಪಕ್ಷಕ್ಕೆ ದೊಡ್ಡ ಮಟ್ಟದ ಚೈತನ್ಯ ತಂದಿದೆ.
ಕಲ್ಯಾಣದಲ್ಲಿ ಖರ್ಗೆ ರಾಜಕೀಯ ಲೆಕ್ಕಾಚಾರ:
ಕಲ್ಯಾಣ ನಾಡಲ್ಲಿನ ಕಾಂಗ್ರೆಸ್ ಭರ್ಜರಿ ಜಯಕ್ಕೆ ಎಐಸಿಸಿ ಅಧ್ಯಕ್ಷರಾಗಿರುವ ಡಾ.ಮಲ್ಲಿಕಾರ್ಜನ ಖರ್ಗೆಯವರ ವರ್ಚಸ್ಸೇ ಕಾರಣ. ಈ ಬಾರಿ ಕಲ್ಯಾಣದ ಎಲ್ಲಾ 5 ಕ್ಷೇತ್ರಗಳಲ್ಲಿನ ಟಿಕೆಟ್ ಹಂಚಿಕೆಯಲ್ಲಿ ಖರ್ಗೆಯವರೇ ಅಳೆದು ತೂಗಿ ಹಂಚಿಕೆ ಮಾಡಿ ಹೊಸಬರಿಗೆ ಕೈ ಹಿಡಿದು ಕಣಕ್ಕಿಳಿಸಿದ್ದಾರೆ. ಅವರ ರಾಜಕೀಯ ತಂತ್ರಗಾರಿಕೆ ಕಲ್ಯಾಣ ಕೈವಶವಾಗಿರುವುದರ ಹಿಂದಿನ ಪ್ರಮುಖ ಕಾರಣಗಳಲ್ಲಿ ಒಂದು ಎನ್ನಲಾಗುತ್ತಿದೆ.
ಬೀದರ್‌ನಲ್ಲಿ ಅತಿ ಚಿಕ್ಕ ವಯಸ್ಸಿನ ಸಾಗರ್ ಖಂಡ್ರೆಯನ್ನು (ಸಚಿವ ಈಶ್ವರ ಖಂಡ್ರೆ ಪುತ್ರ) ಕಣಕ್ಕೆ ಇಳಿಸಿರುವುದು, ರಾಯಚೂರಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಜಿ.ಕುಮಾರ್ ನಾಯಕ್‌ಗೆ ಮಣೆ ಹಾಕಿದ್ದು, ಕೊಪ್ಪಳದಲ್ಲಿನ ಬಿಜೆಪಿ ಗುಂಪುಗಾರಿಕೆಯ ಲಾಭ ಪಡೆಯಲು ಬಸವರಾಜ ಹಿಟ್ನಾಳ್ ಅವರನ್ನೇ ಕಣಕ್ಕಿಳಿಸಿ ಯಶ ಕಂಡಿರೋದು, ತಮ್ಮ ಸೋಲಿನ ಸೇಡು ತೀರಿಸಿಕೊಳ್ಳಲು ಕಲಬುರಗಿ ಕಣದಲ್ಲಿ ತಾವು ನಿಲ್ಲದೆ ಅಳಿಯ ರಾಧಾಕೃಷ್ಣರನ್ನು ಅಖಾಡಕ್ಕಿಳಿಸಿದ್ದು, ಬೇರು ಮಟ್ಟದ ಕೆಲಸಗಾರ ಎಂದೇ ಗುರುತಿಸಿಕೊಂಡಿರುವ ಮಾಜಿ ಸಚಿವ ತುಕಾರಾಮ್ ಅವರಿಗೆ ಬಳ್ಳಾರಿಯಿಂದ ಟಿಕೆಟ್ ಕೊಟ್ಟು ಬಿಜೆಪಿಯ ರಾಮುಲುಗೆ ಸೆಡ್ಡು ಹೊಡೆದಿದ್ದು ... ಹೀಗೆ ಖರ್ಗೆಯವರು ಉರುಳಿಸಿದ ರಾಜಕೀಯ ದಾಳಗಳೆಲ್ಲವು ನಿಖರ ಗುರಿ ತಲುಪಿವೆ.
ಕಲ್ಯಾಣ ಕರ್ನಾಟಕದಲ್ಲಿ ಕಾಂಗ್ರೆಸ್ ನಡೆಸಿದ ಬಹಿರಂಗ ರ್‍ಯಾಲಿಗಳಲ್ಲಿ ಪಾಲ್ಗೊಂಡ ಮುಖಂಡರು, ಖರ್ಗೆಯವರು ಅಭಿವೃದ್ಧಿ ಮಂತ್ರ ಜಪಿಸಿದರೆ ಹೊರತು ಉಳಿದ್ಯಾವ ಸಂಗತಿಗಳಿಗೂ ಮಹತ್ವ ನೀಡಿರಲಿಲ್ಲ. ಕಲ್ಯಾಣಕ್ಕೆ ಅಡಚಣೆ ಒಡ್ಡಿರುವ ಯುವಕರಲ್ಲಿನ ನಿರುದ್ಯೋಗ, ಮೂಲ ಸವಲತ್ತಿನ ಅಭಿವೃದ್ಧಿ, ಕಲ್ಯಾಣದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಬೇಕೆಂಬ ಸಂಗತಿಗಳನ್ನೇ ಹೋದಲ್ಲೆಲ್ಲಾ ಪುನರುಚ್ಚರಿಸಿದ್ದು ಜನಮನಕ್ಕೆ ನಾಟಿದ್ದರಿಂದ ಇಲ್ಲಿನ ಜನ ಕೈ ಪರ ಬೆಂಬಲ ಸೂಚಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಇದಲ್ಲದೆ ರಾಜ್ಯ ಸರಕಾರದ ಪಂಚ ಗ್ಯಾರಂಟಿಗಳೂ ಕಲ್ಯಾಣ ಭಾಗದಲ್ಲಿ ಪರಿಣಾಮ ಬೀರಿವೆ. ಇದಲ್ಲದೆ, ಕೆಕೆಆರ್‌ಡಿಬಿ ಕಲ್ಯಾಣವನ್ನೇ ಗುರಿಯಾಗಿಸಿಕೊಂಡು ಘೋಷಿಸಿರುವ ಯುವ ಕೌಶಲ್ಯಾಭಿವೃದ್ಧಿ ತರಬೇತಿ ಯೋಜನೆಗಳೂ ಇಲ್ಲಿ ಕಾಂಗ್ರೆಸ್ ಗೆಲುವಿಗೆ ಕಾರಣವಾದವು ಎನ್ನಬಹುದು.